ಪ್ರಚಲಿತ

ವಿದೇಶಿ ಹಣ ಬಳಸಿ ಕಾರ್ಯಾಚರಿಸುವ ಮದರಸಾಗಳ ಮೇಲೆ ಸಿಎಂ ಯೋಗಿ ಸರ್ಕಾರದ ಹದ್ದಿನ ಕಣ್ಣು

ವಿದೇಶಿ ಹಣವನ್ನು ಬಳಕೆ ಮಾಡಿಕೊಂಡು ಇಸ್ಲಾಂ ಧರ್ಮದ ಧಾರ್ಮಿಕ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತವೆ ಎನ್ನುವ ವಿಚಾರವೊಂದು ಬಹಳ ಹಿಂದಿನಿಂದಲೇ ದೇಶದೆಲ್ಲೆಡೆ ಹರಿದಾಡುತ್ತಿದೆ. ವಿದೇಶದಿಂದ ಬಂದ ಹಣವನ್ನು ಬಳಕೆ ಮಾಡಿ, ಅದನ್ನು ಸಾರ್ವಜನಿಕ ಶಾಂತಿಭಂಗದ ಕೆಲಸಕ್ಕೂ ಬಳಸುವುದಾಗಿಯೂ ಹಲವಾರು ಸಂಶಯಗಳು ಜನರಲ್ಲಿವೆ.

ಇಂತಹ ಅನುಮಾನಗಳಿಗೆ ಪುಷ್ಟಿ ನೀಡುವಂತೆ ಮದರಸಾಗಳ ಮೂಲಕವೂ ಕೆಲವು ದೇಶದ್ರೋಹಿ ಅಶಾಂತಿದೂತರು ಸಾಮಾಜಿಕ ಸ್ವಾಸ್ಥ್ಯ ಕದಡುವ ಕೆಲಸಗಳನ್ನು ಮಾಡಿದ್ದಾರೆ‌. ಮಾಡಿಕೊಂಡೇ ಬರುತ್ತಿದ್ದಾರೆ. ಇಂತಹ ನೈತಿಕವಲ್ಲದ ಚಟುವಟಿಕೆಗಳ ಸದ್ದಡಗಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.

ಉತ್ತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಮದರಸಾಗಳ ಮೇಲೆ ಹದ್ದಿನ ಕಣ್ಣಿಡಲು ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಮದರಸಾಗಳು ವಿದೇಶಗಳಿಂದ ಹಣ ಪಡೆದು ಕೆಲಸ ಮಾಡುತ್ತಿದೆಯೇ ಎಂಬುದನ್ನು ತನಿಖೆ ಮಾಡಲು ಯೋಗಿ ಸರ್ಕಾರ ಹೆಚ್ಚುವರಿ ಮಹಾ ನಿರ್ದೇಶಕ ಶ್ರೇಣಿಯ ಅಧಿಕಾರಿಯ ಮುಂದಾಳತ್ವದಲ್ಲಿ ವಿಶೇಷ ತನಿಖಾ ತಂಡ ಅಥವಾ ಎಸ್‌ಐ‌ಟಿಯನ್ನು ರಚನೆ ಮಾಡಿದೆ.

ಸಿ ಎಂ ಯೋಗಿಜಿ ಅವರ ರಾಜ್ಯದಲ್ಲಿ ಶಿಕ್ಷಣ ಮಂಡಳಿಯಿಂದ ಗುರುತಿಸಲ್ಪಟ್ಟ 16,000 ಕ್ಕೂ ಅಧಿಕ ಸೇರಿದಂತೆ ಸುಮಾರು 25,000 ಕ್ಕೂ ಅಧಿಕ ಮದರಸಾಗಳಿದ್ದು, ಇದರ ಹಣದ ಮೂಲ ಯಾವುದು, ವಿದೇಶಿ ಹಣದ ಮೂಲಕ ಕಾರ್ಯ ನಿರ್ವಹಿಸುತ್ತಿವೆಯೇ ಎಂಬುದನ್ನು ಪತ್ತೆ ಮಾಡಲು ಈ ತಂಡವನ್ನು ರಚನೆ ಮಾಡಿದೆ. ಯೋಗಿ ಸರ್ಕಾರದ ಈ ನಡೆಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

ತನಿಖಾ ಸಂದರ್ಭದಲ್ಲಿ ವಿದೇಶದಿಂದ ಆರ್ಥಿಕ ಸಹಕಾರ ಪಡೆದು, ಕೆಲಸ ಮಾಡುತ್ತಿರುವ ಮದರಸಾಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತೇವೆ. ಹೀಗೆ ಪಡೆದ ಹಣವನ್ನು ಅವರು ಹೇಗೆ ಬಳಕೆ ಮಾಡುತ್ತಾರೆ. ಯಾವ ರೀತಿ ವಿನಿಯೋಗಿಸುತ್ತಾರೆ ಎನ್ನುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಇತರ ಸಮಾಜ ವಿರೋಧಿ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆಯೇ ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ ಇಂತಹ ಕ್ರಮಕ್ಕೆ ಮುಂದಾಗಿರುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ಯಾವುದೇ ನಿರ್ಧಿಷ್ಟ ಅವಧಿಯನ್ನು ತಂಡಕ್ಕೆ ನಿಗದಿ ಮಾಡಲಾಗಿಲ್ಲ. ಇಂಡೋ – ನೇಪಾಳ ಗಡಿಯುದ್ದಕ್ಕೂ ಇರುವ ಮದರಸಾಗಳ ಮೇಲೆ ಎಸ್‌ಐಟಿ ತಂಡ ಹೆಚ್ಚು ನಿಗಾ ವಹಿಸುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ವಿದೇಶದಿಂದ ಹಣ ಪಡೆದು, ಉತ್ತರ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳನ್ನು ಪೋಷಣೆ ಮಾಡುವ ಕೆಲಸ ಮಾಡುತ್ತಿರುವ ಮದರಸಾಗಳನ್ನು ಪತ್ತೆ ಮಾಡಲು ಅಲ್ಲಿನ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದ್ದು, ಇದು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರೆ ಅತಿಶಯವಾಗಲಾರದು.

Tags

Related Articles

Close