ಪ್ರಚಲಿತ

ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಜಮ್ಮು ಕಾಶ್ಮೀರದ ಮಾಜಿ ಸಿಎಂ ನಿಂದ ಶ್ರೀರಾಮನ ಗುಣಗಾನ!! ನಾನು ಶ್ರೀರಾಮನ ಭಕ್ತ ಎಂದ ಮಾಜಿ ಸಿಎಂ ಹೇಳಿದ್ದೇನು ಗೊತ್ತೇ?!

“ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ) ಭಾರತದ್ದು ಎನ್ನುವ ಮಾತು ಹಾಗಿರಲಿ; ಧೈರ್ಯವಿದ್ದರೆ ಮೊದಲು ನೀವು ಶ್ರೀನಗರದ ಲಾಲ್ ಚೌಕ್ ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ನೋಡೋಣ” ಎಂದು ಕೇಂದ್ರ ಸರಕಾರಕ್ಕೆ ಸವಾಲೊಡ್ಡುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಇದೀಗ ರಾಮಜಪ ಮಾಡಲು ಶುರು ಮಾಡಿದ್ದಾರೆ ಎಂದರೆ ನಂಬ್ತೀರಾ!!

ಹೌದು.. ಒಂದಲ್ಲ ಒಂದು ವಿವಾದಗಳನ್ನು ಸೃಷ್ಟಿ ಮಾಡುತ್ತಲೇ ಎಲ್ಲೆಡೆ ಸುದ್ದಿಯಾಗುತ್ತಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಸಮ್ಮೇಳನದ ಹಿರಿಯ ಮುಖಂಡರಾದ ಫಾರೂಕ್ ಅಬ್ದುಲ್ಲಾ ಅವರು ಈ ಹಿಂದೆ, 2014ರ ವೇಳೆ “ಮೋದಿಗೆ ಮತ ಹಾಕಿದವರು ಸಮುದ್ರಕ್ಕೆ ಬೀಳಬೇಕು” ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದವರು ಇದೀಗ ನಾನು ಮುಸ್ಲಿಂ, ಆದರೆ ನನಗೆ ರಾಮನ ಬಗ್ಗೆ ವ್ಯಾಮೋಹ ಎನ್ನುವ ಮೂಲಕ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ!!

ಇವರು ಅದು ಯಾವಾಗ ಶ್ರೀ ರಾಮನ ಭಕ್ತರಾದರೋ ಗೊತ್ತಿಲ್ಲ!! ಅದ್ಯಾವಾಗ ಅವರಿಗೆ ಶ್ರೀರಾಮನ ಬಗ್ಗೆ ಜ್ಞಾನೋದಯವಾಯಿತೋ ಅದೂ ಗೊತ್ತಿಲ್ಲ!! ಆದರೆ ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂದು ಹೇಳುವ ಮೂಲಕ ವಿವಾದಕ್ಕೆ ಕಿಡಿ ಹಚ್ಚಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲ ಇದೀಗ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದ್ದಾರಲ್ಲದೇ, ನಾನು ಮುಸ್ಲಿಮನಾಗಿಯೂ ರಾಮಭಕ್ತ ಎಂದು ಹೇಳಿಕೊಂಡಿದ್ದಾರೆ.

ಹೌದು… ನಾನು ಮುಸ್ಲಿಮನಾಗಿಯೂ ರಾಮಭಕ್ತ; ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ, ದೇಶದ ಅಭಿವೃದ್ಧಿ ಸಾಧಿಸಲು ಮಹಿಳೆಯರಿಗೂ ಅಧಿಕಾರ ಕೊಡಬೇಕು ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲ ಹೇಳಿದ್ದಾರಲ್ಲದೇ ಪಾಕಿಸ್ತಾನ ಮತ್ತು ರಾಷ್ಟ್ರೀಯವಾದ ವಿರೋಧಿಗಳು ಭಾರತಕ್ಕೆ ಬೆದರಿಕೆಗಳಾಗಿವೆ; ಆದರೆ ಎಲ್ಲಕ್ಕಿಂತ ದೊಡ್ಡದ್ದು ಆಂತರಿಕ ಬೆದರಿಕೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಅಮೆರಿಕ, ಚೀನ, ರಷ್ಯ ಮುಂತಾದ ಯಾವುದೇ ದೇಶವಿರಲಿ – ಅವು ಮೊತ್ತ ಮೊದಲಾಗಿ ನಿಭಾಯಿಸಬೇಕಾದದ್ದು ಆಂತರಿಕ ಬೆದರಿಕೆಯನ್ನು ಎಂದು ಅಬ್ದುಲ್ಲ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಝೀ ಮಾಧ್ಯಮ ನಡೆಸುತ್ತಿರುವ ಝೀ ಇಂಡಿಯಾ ಕಾನ್ಕ್ಲೇವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಸಮ್ಮೇಳನದ ಹಿರಿಯ ಮುಖಂಡರಾದ ಫಾರೂಕ್ ಅಬ್ದುಲ್ಲ ಭಾವನಾತ್ಮಕರಾಗಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ‘ನಾನು ಮುಸ್ಲಿಂ ಆಗಿದ್ದೇನೆ, ಆದರೆ ರಾಮನಲ್ಲಿ ನಾನು ಏಕೆ ಪ್ರೀತಿಯನ್ನು ಹೊಂದಿದ್ದೇನೆ ಎಂದು ನನಗೆ ಗೊತ್ತಿಲ್ಲ’ ಎಂದು ಭಾವುಕರಾಗಿರುವ ಇವರು ರಾಮಜಪ ಮಾಡಲು ಶುರು ಮಾಡಿದ್ದಾರೆ.

ಒಂದು ಕಡೆ ನರೇಂದ್ರ ಮೋದಿಯವರು ವಿಶ್ವದ ಯಾವುದೇ ಭಾಗಕ್ಕೆ ತೆರಳಿದರೂ ಕೂಡ ಆ ದೇಶದ ಪ್ರಧಾನಿಗಳಿಗೆ ಭಗವದ್ಗೀತೆಯನ್ನು ನೀಡುವ ಮೂಲಕ ಭಾರತದ ಸಂಸ್ಕøತಿಯ ಜೊತೆಗೆ ಹಿಂದೂ ಧರ್ಮವನ್ನು ವಿಶ್ವದೆಲ್ಲೆಡೆ ಪರಿಚಯಿಸುತ್ತಿದ್ದಾರೆ ಎನ್ನುವ ವಿಚಾರ ತಿಳಿದೇ ಇದೆ. ಆದರೆ ಇದೀಗ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲ ಅವರು ನಾನು ಮುಸ್ಲಿಮನಾಗಿಯೂ ಶ್ರೀರಾಮನೊಂದಿಗೆ ಬೆಸೆದುಕೊಂಡಿದ್ದೇನೆ ಎಂದು ಹೇಳುವ ಮೂಲಕ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿಗೆ ಇವರೂ ಕೂಡ ಮನಸೋತಿದ್ದಾರೋ ಏನೋ ಗೊತ್ತಿಲ್ಲ!! ಅಂತೂ ಶ್ರೀರಾಮನ ಬಗ್ಗೆ ಭಾವುಕರಾಗಿದ್ದು ಮಾತ್ರ ಅಕ್ಷರಶಃ ನಿಜ.

ಝೀ ಇಂಡಿಯಾ ಶೃಂಗದಲ್ಲಿ ಮಾತನಾಡುತ್ತಿದ್ದ ಅವರು “ನಮಗೆ ಶಾಂತಿ ಬೇಕು, ಕೇವಲ ನಮ್ಮ ಕಾಶ್ಮೀರದಲ್ಲಿ ಮಾತ್ರವಲ್ಲ; ಇಡಿಯ ದೇಶದ ಮೂಲೆ ಮೂಲೆಗಳಲ್ಲೂ ಶಾಂತಿ ನೆಲೆಸಿರುವುದು ಅಗತ್ಯ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಕಾಶ್ಮೀರೀ ಪಂಡಿತರನ್ನು ನಾವು ಪುನಃ ರಾಜ್ಯಕ್ಕೆ ಕರೆ ತರುತ್ತೇವೆ; ಜಾತಿ, ಮತ, ಧರ್ಮ, ವರ್ಣದ ಆಧಾರದಲ್ಲಿ ನಾವು ಪ್ರತ್ಯೇಕತೆಗಳನ್ನು ರೂಪಿಸಿಕೊಂಡಿದ್ದೇವೆ; ಈ ಮನೋಭಾವ ತೊಲಗಬೇಕು. ನಾನು ಮುಸ್ಲಿಮನಾಗಿಯೂ ಶ್ರೀರಾಮನೊಂದಿಗೆ ಬೆಸೆದುಕೊಂಡಿದ್ದೇನೆ” ಎಂದು ಹೇಳಿದ್ದಾರೆ.

‘ನಾನು ಮುಸ್ಲಿಂ ಆಗಿದ್ದೇನೆ, ಆದರೆ ರಾಮನಲ್ಲಿ ನಾನು ಏಕೆ ಪ್ರೀತಿಯನ್ನು ಹೊಂದಿದ್ದೇನೆ ಎಂದು ನನಗೆ ಗೊತ್ತಿಲ್ಲ’ ಎಂದು ಭಾವುಕರಾಗಿ ನುಡಿರುವ ಫಾರೂಕ್ ಝೀ ಇಂಡಿಯಾ ಕಾನ್ಕ್ಲೇವ್ ಕಾರ್ಯಕ್ರಮದಲ್ಲಿ, ಶ್ರೀರಾಮನ ಗುಣಗಾನವನ್ನು ಮಾಡಿದ್ದಾರೆ. ಅದು ಈ ಕೆಳಕಂಡಂತಿದೆ:

‘ಹೇ ನನ್ನ ರಾಮ… ಎಲ್ಲಿ ಹೋದೆಯೋ ನನ್ನ ರಾಮ, ಎಲ್ಲಿ ಹೋದೆಯೋ ನನ್ನ ರಾಮ,
ನನ್ನ ಕೂಗನ್ನು ಕೇಳಿ ಎಲ್ಲಿ ಹೋದೆ ನನ್ನ ರಾಮ,
ನನ್ನ ಶ್ಯಾಮ, ಎಲ್ಲಿ ಹೋದೆಯೋ ನನ್ನ ರಾಮ,
ಸಖಿ-ಸಖಿ ಹುಡುಕೇ ನನ್ನ ರಾಮನ”.. ಎಂದು!!

ಈ ಒಂದು ಸಂದರ್ಭದಲ್ಲಿ, ಕಾಶ್ಮೀರ ಭಾರತದ ಒಂದು ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿರುವ ಇವರು, ನಾವು ಧರ್ಮಗಳನ್ನು ಸೇರಿಸುವ ಬಗ್ಗೆ ಮಾತನಾಡಬೇಕು ಎಂದು ತಿಳಿಸಿದ್ದಾರೆ. ಫಾರೂಕ್ ಅಬ್ದುಲ್ಲಾ ತಮ್ಮ ಬಗ್ಗೆ ಮಾತನಾಡುತ್ತ, “ನಾನು ಕನಸು ಕಾಣುವುದಿಲ್ಲ, ಬಹುಶಃ ನಾನು ವಿಲಕ್ಷಣವಾಗಿರುತ್ತೇನೆ. ಮುಸ್ಲಿಮರು ನನ್ನನ್ನು ಹಿಂದೂ ಎಂದು ಪರಿಗಣಿಸುತ್ತಾರೆ, ಇತ್ತ ಹಿಂದೂಗಳು ನಾನು ಮುಸ್ಲಿಂ ಎಂದು ಭಾವಿಸುತ್ತಾರೆ” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ನಾವು ಭಾರತಕ್ಕೆ ಕಾಶ್ಮೀರಿ ಪಂಡಿತರನ್ನು ಕರೆತರುವಂತೆ ಪ್ರಯತ್ನಿಸಿದ್ದೇವೆಯಲ್ಲದೇ ನನ್ನ ಬದುಕಿನ ಮಂತ್ರವೆಂದರೆ ‘ಬದುಕು ಮತ್ತು ಬದುಕಲು ಬಿಡು’ ಎಂದು!!! ಎನ್ನುವುದನ್ನು ತಿಳಿಸಿದ್ದಾರೆ.

ಅಂತೂ ವಿವಾದಗಳಿಂದಲೇ ಎಲ್ಲೆಡೆ ಸುದ್ದಿಯಾಗುತ್ತಿದ್ದ ಫಾರೂಕ್ ಅಬ್ದುಲ್ಲಾ ಇದೀಗ ರಾಮ ಜಪ ಮಾಡುತ್ತಿರುವುದನ್ನು ನೋಡುತ್ತಿದ್ದರೆ ನಿಜಕ್ಕೂ ಅಚ್ಚರಿಯಾಗುತ್ತೆ!! ಅದೇನೆ ಇರಲಿ ಕಾಶ್ಮೀರವನ್ನು ಕೊನೆಗೂ ಭಾರತದ ಅವಿಭಾಜ್ಯ ಅಂಗವೆಂದು ಹೇಳಿರುವ ಇವರು ಶ್ರೀರಾಮನನ್ನು ಜಪಿಸುತ್ತಿರುವುದನ್ನು ನೋಡಿದರೆ ಇನ್ನಾದರೂ ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಇವರು ಮುಂದಾಗುತ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ.

source : udayavani

– ಅಲೋಖಾ

Tags

Related Articles

Close