ಪ್ರಚಲಿತ

ಇದುವರೆಗೆ ಪೆಟ್ರೋಲ್ ವಿಷಯದಲ್ಲಿ ಮೋದಿ ಕಡೆಗೆ ಬೆರಳು ತೋರಿಸುತ್ತಿದ್ದ ಸಿದ್ಧರಾಮಯ್ಯ ಇಂದು ತನ್ನ ನಿಜ ಬಣ್ಣ ಬಯಲುಗೊಳಿಸಿಬಿಟ್ಟರು!!

ಪೆಟ್ರೋಲ್, ಡೀಸೆಲ್ ವ್ಯಾಟ್ ಇಳಿಸೋಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಡ್ಡಿಮುರಿದಂತೆ ಹೇಳಿದ್ದಾರೆ. ಇದರಿಂದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಕಮ್ಮಿಯಾಗಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದ ಕರ್ನಾಟಕದ ಜನರಿಗೆ ಭಾರೀ ನಿರಾಸೆ ಉಂಟಾಗಿದೆ. ಕಳೆದ 3 ತಿಂಗಳಿಂದ ನಾಗಾಲೋಟದಲ್ಲಿ ಏರುತ್ತಿದ್ದ ತೈಲ ಬೆಲೆ ಇಳಿಕೆ ಕಂಡಿದ್ದು, ಅಬಕಾರಿ ಸುಂಕದಲ್ಲಿ ಕೇಂದ್ರ ಸರಕಾರ 2 ರೂಪಾಯಿ ಕಡಿತ ಮಾಡಿತ್ತು. ಇದೇ ರೀತಿ ರಾಜ್ಯಗಳೂ ಕೂಡ ಶೇ.5ರಷ್ಟು ಕಡಿತಗೊಳಿಸಿ ಎಂದು ಸೂಚಿಸಿತ್ತು. ಆದರೆ ಈ ಸೂಚನೆಗೆ ಸೊಪ್ಪು ಹಾಕದ ಸಿಎಂ ಸಿದ್ದರಾಮಯ್ಯ ತೈಲದ ವ್ಯಾಟ್ ಇಳಿಸೋಲ್ಲ ಎಂದು ಹೇಳಿದ್ದಾರೆ.

ತೈಲದರವನ್ನು ಕಡಿಮೆ ಮಾಡಬಹುದಾದ ಒಂದು ಉತ್ತಮ ಅವಕಾಶವನ್ನು ಸಿದ್ದರಾಮಯ್ಯ ಕೈಚೆಲ್ಲಿರುವುದರಿಂದ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ
ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಹಾಗಾದರೆ ತೈಲ ದರ ಇಳಿಸುವುದರಲ್ಲಿ ರಾಜ್ಯದ ಪಾತ್ರವೇನು ಎಂದು ಪ್ರಶ್ನೆಯೊಂದು ಮೂಡಿದ್ದು, ರಾಜ್ಯ ಸರಕಾರದ ಈ
ನಿರ್ಧಾರದ ವಿರುದ್ಧ ವ್ಯಾಪಕ ಆಕ್ರೋಶ ಕೇಳಿಬಂದಿದೆ. ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳ ಕಡೆ ಬೆರಳು ತೋರಿಸುತ್ತಿರುವುದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಖಡಕ್ಕಾಗಿ ಹೇಳಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ಸಿಎಂ ಕಚೇರಿಯಿಂದ ಮಾಧ್ಯಮ ಪ್ರಕಟಣೆಯನ್ನು ಬಿಡುಗಡೆಗೊಳಿಸಿದ ಸಿದ್ದರಾಮಯ್ಯ ವ್ಯಾಟ್ ಇಳಿಸುವುದಿಲ್ಲ ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯ ಪ್ರಕಾರ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿಯೇ ಪೆಟ್ರೋಲ್, ಡೀಸೆಲ್ ದರ ಅತೀ ಕಡಿಮೆ ಇದೆ. ರಾಜ್ಯ ಸರ್ಕಾರವು ಈಗಾಗಲೇ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಬ್ಯಾರಲ್‍ಗೆ 130 ಡಾಲರ್ ಇದ್ದಾಗ ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟಿತ್ತು? ಈಗ ಕಚ್ಚಾ ತೈಲ ಬೆಲೆ ಬ್ಯಾರೆಲ್‍ಗೆ 42 ಡಾಲರ್ ಇದೆ ಎಂಬುವುದನ್ನು ಕೇಂದ್ರ ಗಮನಿಸಬೇಕು ಎಂದಿದ್ದಾರೆ. ಈ ಮುಂಚೆ ಸಿದ್ದು, ಕೇಂದ್ರ ಸರಕಾರ ಸುಂಕ ಇಳಿಸಿದರೆ ರಾಜ್ಯದಲ್ಲೂ ತೈಲ ದರ ಇಳಿಸುತ್ತೇನೆ ಎಂದು ಹೇಳಿದ್ದರು. ಆದರೆ ಇದೀಗ ತನ್ನ ನಿರ್ಧಾರದಿಂದ ಹಿಂದೆ ಸರಿದಿರುವ ಸಿದ್ದರಾಮಯ್ಯ ಇಡೀ ರಾಜ್ಯದ ಜನರ ಕೋಪಕ್ಕೆ ತುತ್ತಾಗಿದ್ದಾರೆ.

ಸುಂಕ ಇಳಿಸುವಂತೆ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಪತ್ರ ಬರೆದಿತ್ತು. ಇದಕ್ಕುತ್ತರಿಸಿದ ಸಿದ್ದರಾಮಯ್ಯ ರಾಜ್ಯ ಸರಕಾರ ಪರೋಕ್ಷವಾಗಿ ಪೆಟ್ರೋಲ್ ಮತ್ತು
ಡೀಸಲ್ ಮೇಲಿನ ತೆರಿಗೆಯನ್ನು ರಾಜ್ಯ ಕಡಿತಗೊಳಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಮಂಗಳವಾರ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2 ರೂ. ಕಡಿತ ಗೊಳಿಸಿತ್ತು. ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರಿಗೆ ಆಗುತ್ತಿರುವ ಹೊರೆಯನ್ನು ತಪ್ಪಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿ(ಸಿಬಿಇಸಿ)ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು. ಇದಾದ ಬಳಿಕ ಬಿಜೆಪಿ ಸರ್ಕಾರಗಳು ವ್ಯಾಟ್ ಇಳಿಸಲು ಚಿಂತನೆ ನಡೆಸಿದ್ದು, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ವ್ಯಾಟ್ ಇಳಿಸಲಾಗುವುದು ಎಂದು ಗುರುವಾರ ಪ್ರತಿಕ್ರಿಯಿಸಿದ್ದರು. ಮುಂದಿನ ದಿನಗಳಲ್ಲಿ ಬಿಜೆಪಿ ಆಡಳಿತ ಇರುವ ಉತ್ತರಪ್ರದೇಶ, ಗೋವಾ, ರಾಜಸ್ಥಾನ, ಮಹಾರಾಷ್ಟ್ರಗಳಲ್ಲೂ ವ್ಯಾಟ್ ಇಳಿಕೆಯಾಗುವ ಸಾಧ್ಯತೆಯಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಈ ರೀತಿ ಇಲ್ಲ.

ಕರ್ನಾಟಕ ಸರಕಾರವು ಭ್ರಷ್ಟಾಚಾರದಿಂದ ನಲುಗಿ ಹೋಗಿದೆ. ಸರಕಾರಿ ಖಜಾನೆಯಲ್ಲಿ ಆರ್ಥಿಕ ಕೊರತೆ ಇದ್ದು, ಅದನ್ನು ಸರಿದೂಗಿಸಲು ಸಿದ್ದರಾಮಯ್ಯ ತೈಲ ಸುಂಕ ಇಳಿಸದೆ ಸರಿದೂಗಿಸಲು ನೋಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಒಟ್ಟಿನಲ್ಲಿ ಜನಪರ ನಿರ್ಧಾರ ಕೈಗೊಳ್ಳಬೇಕಾಗಿದ್ದ ಸಿದ್ದರಾಮಯ್ಯ ಜನವಿರೋಧಿ ನೀತಿ ತೋರಿಸಿ ಎಲ್ಲರ ಕೆಂಗಣ್ಣಿಗೆ ತುತ್ತಾಗಿದ್ದಾರೆ.

Source :Public Live

-ಚೇಕಿತಾನ

Tags

Related Articles

Close