ಪ್ರಚಲಿತ

ನೇರವಾಗಿ ಎದುರಿಸಲಾಗದವರು AI ಬಳಸಿ ನಕಲಿ ವಿಡಿಯೋ ತಯಾರಿಸುತ್ತಿದ್ದಾರೆ: ವಿರೋಧಿಗಳಿಗೆ ಪಿಎಂ ಟಾಂಗ್

ಭಾರತಕ್ಕೆ ಬಿಜೆಪಿ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದೆ. ಪ್ರಧಾನಿ ಮಟ್ಟವನ್ನು ಬಿಜೆಪಿಯ ಮೋದಿ ಅವರು ವಹಿಸಿಕೊಂಡ ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಅಭಿವೃದ್ಧಿಯ ಹೊಸ ಶಖೆ ಆರಂಭವಾಗಿದೆ ಎಂದರೆ ಅದು ಸುಳ್ಳಲ್ಲ.

ಪ್ರಧಾನಿ ಮೋದಿ ಅವರು ಮಹಾರಾಷ್ಟ್ರದಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿ, ದೇಶದ ಅಭಿವೃದ್ಧಿ ಸಹಿಸದ ತಮ್ಮ ಪ್ರತಿಪಕ್ಷಗಳ ವಿರುದ್ಧ ಕೆಂಡ ಕಾರಿದ್ದಾರೆ. ಭಾರತೀಯ ಜನತಾ ಪಕ್ಷದ ಸರ್ಕಾರವನ್ನು ನೇರವಾಗಿ ಎದುರಿಸಲು ಸಾಧ್ಯವಾಗದ ಪ್ರತಿಪಕ್ಷಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ವಿಡಿಯೋಗಳನ್ನು ಹರಡಿ, ಉದ್ವಿಗ್ನತೆಯನ್ನು ಹಬ್ಬಿಸಲು ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ‌ ಸಂದರ್ಭದಲ್ಲಿ ಅವರು ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟದ ಬಗೆಗೂ ಮಾತನಾಡಿದ್ದು, ಈ ಒಕ್ಕೂಟದ ಸದಸ್ಯ ಪಕ್ಷಗಳು ಐದು ವರ್ಷಕ್ಕೆ ಐವರು ಪ್ರಧಾನಿಗಳು ಎನ್ನುವ ಸೂತ್ರವನ್ನು ಇಟ್ಟುಕೊಂಡು ಕನಸು ಕಾಣುತ್ತಿವೆ. ಇದರ ಬಹು ಮುಖ್ಯ ಮತ್ತು ಅಂತಿಮ ಉದ್ದೇಶ ದೇಶವನ್ನು ಕೊಳ್ಳೆ ಹೊಡೆಯುವುದೇ ಆಗಿದೆ ಎಂದು ಅವರು ನುಡಿದಿದ್ದಾರೆ‌‌.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ ಮಾಡಿಕೊಂಡು ನಕಲಿ ವಿಡಿಯೋಗಳನ್ನು ಸಾರ್ವಜನಿಕ ವಲಯದಲ್ಲಿ ಪ್ರಸಾರ ಮಾಡುವುದಕ್ಕೆ ಸಂಬಂಧಿಸಿದ ಹಾಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಅಮಿತ್‌ ಶಾ, ಜೆ. ಪಿ. ನಡ್ಡಾ ಅವರಂತಹ ನಾಯಕರ ವಿಡಿಯೋಗಳನ್ನು ತಿರುಚಿ ನಕಲಿ‌ ವಿಡಿಯೋ‌ ಸೃಷ್ಟಿ ಮಾಡಲು ವಿರೋಧಿಗಳು ಎಐ ತಂತ್ರಜ್ಞಾನ ಬಳಕೆ ಮಾಡುತ್ತಿದ್ದಾರೆ. ಇದು ಅಪಾಯಕ್ಕೆ ಕಾರಣವಾಗುತ್ತದೆ. ಹಾಗಾಗಿ ಇಂತಹ ನಕಲು ವಿಡಿಯೋಗಳು ಗಮನಕ್ಕೆ ಬಂದಲ್ಲಿ ಜನರು ಪೊಲೀಸ್‌ರ ಗಮನಕ್ಕೆ ತರುವಂತೆಯೂ ಅವರು ಹೇಳಿದ್ದಾರೆ.

ದೇಶದಲ್ಲಿ ಮುಂದಿನ ಕೆಲ‌ ದಿನಗಳಲ್ಲಿ ದೊಡ್ಡ ಘಟನೆಗಳು ನಡೆಯುವ ಬಗ್ಗೆ ಅಪಾಯದ ಮುನ್ಸೂಚನೆ ನೀಡಿರುವ ಅವರು, ಈ ಆರೋಪವನ್ನು ಬಹಳ ಗಂಭೀರತೆಯಿಂದ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಸಾಮಾಜಿಕ ಉದ್ವಿಗ್ನತೆ ಸೃಷ್ಟಿಸಲು ವಿರೋಧಿಗಳು ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Tags

Related Articles

Close