ಪ್ರಚಲಿತ

ದೇವಳಗಳ ನಗರಿ ಉಡುಪಿಯಲ್ಲಿ “ಹಿಂದೂ ಧರ್ಮ ಸಂಸದ್” ಆರಂಭ!! ಏನಿದು ಈ “ಹಿಂದೂ ಧರ್ಮ ಸಂಸದ್”?

ಇಡೀ ದೇಶವೇ ಕುತೂಹಲದ ಕಣ್ಣುಗಳಿಂದ ನೋಡುತ್ತಿರುವ “ಹಿಂದೂ ಧರ್ಮ ಸಂಸದ್”ಗೆ ಇಂದು ಚಾಲನೆ ಸಿಗಲಿದ್ದು, ದೇವಳಗಳ ನಗರಿ ಉಡುಪಿ ಪ್ರಖರ ಹಿಂದುತ್ವವಾದದ ಅನುಭೂತಿಗೆ ತೆರೆದುಕೊಳ್ಳಲಿದೆ. ಅಷ್ಟೇ ಅಲ್ಲದೇ, ದೇಶದ ಮೂಲೆಮೂಲೆಗಳ ಎರಡು ಸಾವಿರಕ್ಕೂ ಅಧಿಕ ಸಾಧುಗಳು, ಸಂತರು, ಮಠಾಧೀಶರು, ಪೀಠಾಧೀಶರು, ಮಂಡಲೇಶ್ವರರು ಉಡುಪಿಯಲ್ಲಿ ನಡೆಯಲಿರುವ ಧರ್ಮ ಸಂಸದ್‍ನಲ್ಲಿ ಸೇರಲಿದ್ದಾರೆ.

ಹೌದು… ಮೂರು ದಶಕಗಳ ಬಳಿಕ ಇಲ್ಲಿ ನಡೆಯುತ್ತಿರುವ ಈ ಮೂರು ದಿನಗಳ ಸಮ್ಮೇಳನದಲ್ಲಿ ರಾಮಮಂದಿರ ನಿರ್ಮಾಣ ವಿಚಾರವೇ ಪ್ರಮುಖವಾಗಿ ಚರ್ಚೆಗೆ ಬರುವ ನಿರೀಕ್ಷೆಯಿದ್ದು, ಕೇಂದ್ರ ಹಾಗೂ ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಈ ಹೊತ್ತಿನಲ್ಲೇ ದೇಶದ ಮೂಲೆ ಮೂಲೆಯ ಸಾಧು-ಸಂತರು ಸೇರಿರುವುದು ರಾಮಮಂದಿರದ ವಿಚಾರದಲ್ಲಿ ಧರ್ಮ ಸಂಸದ್’ನ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಇದಕ್ಕೆ ಪೂರಕವಾಗಿ ಸಮ್ಮೇಳನದ ಮೊದಲ ದಿನದ ಗೋಷ್ಠಿಯಲ್ಲೇ ರಾಮಮಂದಿರ ವಿಚಾರ ಚರ್ಚೆಗೆ ಬರುತ್ತಲಿರುವುದು, ಜತೆಗೆ ವಿಶ್ವಹಿಂದೂ ಪರಿಷತ್’ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾ ಕೂಡ ರಾಮಜನ್ಮಭೂಮಿ ಸಮಸ್ಯೆಯನ್ನು ಪ್ರಮುಖವಾಗಿ ಚರ್ಚಿಸುವ ಸುಳಿವು ನೀಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ರಾಮಮಂದಿರ ನಿರ್ಮಾಣಕ್ಕೆ ಪೂರಕ ವಾತಾವರಣ ಇದೆ. ಆದರೆ ಅಯೋಧ್ಯೆ ರಾಮಮಂದಿರ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದೆ. ಕೋರ್ಟಿನಿಂದ ವ್ಯತಿರಿಕ್ತ ತೀರ್ಪು ಬಂದರೂ ಬರಬಹುದು. ಆದ್ದರಿಂದ ಕೇಂದ್ರ ಸರ್ಕಾರ ಕೋರ್ಟಿನ ತೀರ್ಪಿಗೆ ಕಾಯದೆ, ರಾಮಮಂದಿರ ನಿರ್ಮಾಣ ಸಾಧ್ಯವಾಗುವಂಥ ವಿಧೇಯಕವೊಂದನ್ನು ಜಾರಿಗೆ ತರಲು ಸಾಧ್ಯವಿದೆ. ಅಥವಾ ಕೇಂದ್ರ ಸರ್ಕಾರವೇ ಆಸಕ್ತಿ ವಹಿಸಿ ಆಯೋಧ್ಯೆ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಸಂಧಾನದ ಮೂಲಕ ಇತ್ಯರ್ಥಗೊಳಿಸಬೇಕು. ಹಾಗಾಗಿ ರಾಮಮಂದಿರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ವಿಶೇಷ ವಿಧೆಯಕ ರಚಿಸಬೇಕೆನ್ನುವ ಚಿಂತನೆಯನ್ನು ಸಾಧು-ಸಂತರ ಮುಂದಿಡುವುದಾಗಿ ವಿಹಂಪದ ಮಾರ್ಗದರ್ಶಕರೂ ಆಗಿರುವ ಪೇಜಾವರ ಶ್ರೀಗಳೂ ಹೇಳಿದ್ದಾರೆ.
ಧರ್ಮ ಸಂಸದ್ ಅಂದರೆ ಏನು??

ರಾಷ್ಟ್ರಮಟ್ಟದ ರಾಜಕೀಯ ವಿಚಾರಗಳು ಹೇಗೆ ಸಂಸತ್ತಿನಲ್ಲಿ ಚರ್ಚೆಯಾಗುತ್ತದೋ ಅದೇ ರೀತಿಯಾಗಿ ಹಿಂದೂ ಧರ್ಮದ ವಿಚಾರಗಳನ್ನು ದೇಶದ ಸಾಧು, ಸಂತರು, ಧಾರ್ಮಿಕ ನಾಯಕರು, ಚರ್ಚೆ ಮಾಡಲೆಂದು ಸ್ಥಾಪಿತವಾಗಿರುವ ವೇದಿಕೆಯೇ ಧರ್ಮ ಸಂಸದ್. ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಇತರ ಹಿಂದೂ ಸಂಘಟಗಳ ಸಹಕಾರದೊಂದಿಗೆ ಧರ್ಮಸಂಸದ್ ನಡೆಯುತ್ತದೆ. ಶೈವ, ವೈಷ್ಣವ, ಜೈನ, ಬೌದ್ಧ, ಸಿಖ್ ಧರ್ಮದ ನಾಯಕರು ಈ ಸಂಸದ್ ನಲ್ಲಿ ಭಾಗವಹಿಸುತ್ತಾರೆ.

ವಿಶ್ವ ಹಿಂದೂ ಪರಿಷತ್ತು 1964ರಲ್ಲಿ ಸ್ಥಾಪನೆಯಾಗಿದ್ದರೆ, 1984ರಲ್ಲಿ ಧರ್ಮ ಸಂಸದ್ ಸ್ಥಾಪನೆಯಾಗಿದೆ. ಮೊದಲ ಸಂಸದ್ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದಿತ್ತು. ಅಷ್ಟೇ ಅಲ್ಲದೇ, ಮೊದಲ ಸಂಸದ್‍ನಲ್ಲಿ ಹಿಂದೂ ಧರ್ಮದ ಒಳಗಡೆ ಇರುವ ಮೌಢ್ಯಾಚರಣೆ ವಿರುದ್ಧ ನಿರ್ಣಯ ಕೈಗೊಳ್ಳಲಾಗಿತ್ತು. ಧರ್ಮ ಸಂಸದ್ ಈ ಹಿಂದೆ ಉಡುಪಿ(1985), ಪ್ರಯಾಗ(1989), ನವದೆಹಲಿಯ ತಾಲ್‍ಕಟೋರಾ ಸ್ಟೇಡಿಯಂ(1991), ದೆಹಲಿಯ ಕೇಶವಪುರ(1992), ದೆಹಲಿಯ ಪಂವಟ್ಟಿ ಚೌಕ್(1996), ಗುಜರಾತ್(1999), ಪ್ರಯಾಗ(2001), ರಾಮಲೀಲಾ ಮೈದಾನ(2003)ದಲ್ಲಿ ನಡೆದಿದ್ದು ಈ ಬಾರಿ ಮೂರು ದಶಕಗಳ ನಂತರ ಮತ್ತೊಮ್ಮೆ ಉಡುಪಿಯಲ್ಲಿ ನಡೆಯಲಿದೆ!!
ಯಾವೆಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತೆ ಗೊತ್ತೇ???

ಹಿಂದೂ ಧರ್ಮದೊಳಗಿನ ವಿವಿಧ ಸಮಸ್ಯೆ, ಆಗುಹೋಗುಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ. ಈ ಸಂಸದ್ ಪ್ರತಿವರ್ಷ ನಡೆಯುವುದಿಲ್ಲ. ಯಾವಾಗ ಹಿಂದೂ ಧರ್ಮದ ಕೆಲ ವಿಚಾರದಲ್ಲಿ ಗೊಂದಲ, ಸಮಸ್ಯೆ ಕಂಡುಬಂದ ಸಮಯದಲ್ಲಿ ಅದನ್ನು ಪರಿಹಾರ ಮಾಡುವ ಉದ್ದೇಶದಿಂದ ಚರ್ಚೆ ನಡೆಸಲಾಗುತ್ತದೆ. ಚರ್ಚೆಯ ಬಳಿಕ ಅಂತಿಮವಾಗಿ ಒಂದು ನಿರ್ಣಯಕ್ಕೆ ಬರಲಾಗುತ್ತದೆ. ಬಂದಿರುವ ನಿರ್ಣಯವನ್ನು ಜನರ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ.

“ಹಿಂದೂ ಧರ್ಮ ಸಂಸದ್”ನಲ್ಲಿ ಗೋ ರಕ್ಷಣೆ, ಮತಾಂತರ, ಜಾತಿ, ಲಿಂಗ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನ ಧಾರ್ಮಿಕ ಸ್ವಾತಂತ್ರ್ಯ, ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ.

ಇನ್ನು ಈ ಮೂರು ದಿನಗಳ ಧರ್ಮ ಸಂಸದ್’ನಲ್ಲಿ ರಾಮಮಂದಿರವಲ್ಲದೆ ಗೋಸಂರಕ್ಷಣೆ, ಮತಾಂತರ, ಅಸ್ಪಶ್ಯತೆ, ಸಾಮಾಜಿಕ ಸುಧಾರಣೆಯಂಥ ಮಹತ್ವದ ವಿಚಾರಗಳೂ ಚರ್ಚೆಗೆ ಬರಲಿವೆ. ಮೊದಲ ದಿನವಾದ ಇಂದು ಸಂಜೆ 3.30ರಿಂದ 6 ಗಂಟೆವರೆಗೆ ಮಹತ್ವದ ಸಭಾ ಗೋಷ್ಠಿ ನಡೆಯಲಿದ್ದು, ಇದರಲ್ಲಿ ರಾಮಮಂದಿರ ನಿರ್ಮಾಣ, ಗೋಸಂರಕ್ಷಣೆ, ಗೋಸಂವರ್ಧನೆ ಯೋಜನೆಗಳ ಬಗ್ಗೆ ಸಾಧು, ಸಂತರು ಚರ್ಚಿಸಲಿದ್ದಾರೆ. ಎರಡನೇ ದಿನ ಶನಿವಾರ ಬೆಳಗ್ಗೆ 10ರಿಂದ 12.30ರವರೆಗೆ ವಿವಿಧ ಗುಂಪುಗಳಲ್ಲಿ ಗೋಷ್ಠಿ ನಡೆಯಲಿದೆ. ಸಾಮಾಜಿಕ ಸಾಮರಸ್ಯ ನಿರ್ಮಾಣಕ್ಕೆ ಮಾಡಬೇಕಾದ ಪ್ರಯತ್ನಗಳು ವಿಚಾರದಲ್ಲಿ ಸಾಧು, ಸಂತರು ಅಭಿಪ್ರಾಯ ಮಂಡಿಸಲಿದ್ದಾರೆ. ಸಂಜೆ 3.30ರಿಂದ 6 ಗಂಟೆವರೆಗೆ ಮತಾಂತರ ತಡೆ ಹಾಗೂ ಪರಾವರ್ತನದ ಪ್ರಯತ್ನಗಳು, ನಮ್ಮ ಸಂಸ್ಕೃತಿಯ ರಕ್ಷಣೆಗೆ ಯೋಜನೆ ಬಗ್ಗೆ ಅಭಿಪ್ರಾಯ ಮಂಡನೆ ನಡೆಯಲಿದೆ.

ಧರ್ಮಸಂಸದ್’ನಲ್ಲಿ ಪಾಲ್ಗೊಳ್ಳಲು ದೇಶದ ವಿವಿಧ ಕಡೆಗಳಿಂದ 2000ಕ್ಕೂ ಅಧಿಕ ಸಾಧು, ಸಂತರು ಗುರುವಾರದಿಂದಲೇ ಆಗಮಿಸುತ್ತಿದ್ದಾರೆ. ಮುಖ್ಯವಾಗಿ ಈ ಸಾಧು ಸಂತರಿಗೆ ಉಡುಪಿಯ ಮನೆಮನೆಗಳಲ್ಲಿ, ವಸತಿಗೃಹ ಹಾಗೂ ಛತ್ರಗಳಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೇ, “ಈ ಧರ್ಮ ಸಂಸದ್ ಗೆ ಲಿಂಗಾಯತ-ವೀರಶೈವ ಮತಗಳ ಮಠಾಧೀಶರನ್ನೂ ಆಹ್ವಾನಿಸಲಾಗಿದೆ. ಯಾರೆಲ್ಲಾ ಬರುತ್ತಾರೆ ಗೊತ್ತಿಲ್ಲ. ಆದರೆ, ಅವರೂ ಹಿಂದುಗಳೇ ಆಗಿರುವುದರಿಂದ ಈ ಧರ್ಮಸಂಸದ್‍ನಲ್ಲಿ ಭಾಗವಹಿಸಬೇಕು ಎಂದು ಅಭಿಪ್ರಾಯಪಟ್ಟಿರುವ ಶ್ರೀಗಳು, ಹಿಂದು ಪ್ರವಾದಿ-ಸಂತರಿಂದ ಪ್ರವರ್ತಿತ ಎಲ್ಲಾ ಮತಗಳು ಹಿಂದೂ ಧರ್ಮಕ್ಕೆ ಸೇರಿವೆ. ಹಾಗಾಗಿ ಜೈನ, ಬೌದ್ಧ, ಸಿಖ್ ಮತಗಳನ್ನು ಸಂವಿಧಾನ ಪ್ರತ್ಯೇಕ ಧರ್ಮಗಳೆಂದು ಗುರುತಿಸಿದ್ದರೂ, ಅವು ಹಿಂದೂ ಸಂತರಿಂದಲೇ ಹುಟ್ಟಿಕೊಂಡಿವೆ ಮತ್ತು ವಿಶ್ವ ಹಿಂದು ಪರಿಷತ್ ಅವುಗಳನ್ನು ಹಿಂದೂ ಧರ್ಮದ ಭಾಗವೆಂತಲೇ ಪರಿಗಣಿಸುತ್ತದೆ. ಆದ್ದರಿಂದ ಈ ಮತಗಳ ಧಾರ್ಮಿಕ ನಾಯಕರು ಈ ಸಂಸದ್‍ನಲ್ಲಿ ಭಾಗವಹಿಸುತ್ತಾರೆ ಎಂದ ಅವರು, ಬೌದ್ಧರ ದಲಾಯಿ ಲಾಮ ಅವರೇ “ಧರ್ಮ ಸಂಸದ್” ಅನ್ನು ಉದ್ಘಾಟಿಸಿದ್ದನ್ನು ಶ್ರೀಗಳು ಈಗಾಗಲೇ ಉದಾಹರಿಸಿದ್ದಾರೆ!!

ಡಿಸೆಂಬರ್ 6ಕ್ಕೆ ಮುಹೂರ್ತ ಫಿಕ್ಸ್?

ಡಿಸೆಂಬರ್ ಆರು ಎನ್ನುವ ದಿನ ಈಡೀ ದೇಶಾದ್ಯಂತ ಸಂಚಲನ ಮೂಡಿಸಿದ್ದು, ಡಿಸೆಂಬರ್ ಆರಕ್ಕೆ ಬಾಬ್ರಿ ಮಸೀದಿ ದ್ವಂಸವಾಗಿ 25 ವರ್ಷ ತುಂಬಲಿದೆ. ಅದೇ ದಿನಾಂಕದಂದು ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಲಿದೆ ಎಂಬ ಮಾಹಿತಿಯಿದೆ. ಉಡುಪಿಯ ಧರ್ಮಸಂಸತ್ತೇ ರಾಮಮಂದಿರಕ್ಕೆ ಗಟ್ಟಿ ಧನಿ. ಈ ಎಲ್ಲಾ ಲೆಕ್ಕಾಚಾರಗಳು ಧರ್ಮಸಂಸದ್ ಚಾವಡಿಯಲ್ಲಿ ನಡೆಯುತ್ತಿದ್ದು, ಹೀಗಾಗಿ ರಾಮಮಂದಿರ ನಿರ್ಮಾಣಕ್ಕೆ ಉಡುಪಿಯಲ್ಲಿ ಮುಹೂರ್ತ ದಿನಾಂಕ ಪ್ರಕಟವಾಗಲಿದೆ ಎನ್ನುವ ಸುದ್ದಿ ಹರಿದಾಡಲು ಆರಂಭಿಸಿದೆ.

ಇಂದು ದೇವಳಗಳ ನಗರಿ ಉಡುಪಿ ಪ್ರದರ್ಶಿನಿಯ ಆಕರ್ಷಣೆಯನ್ನು ಹೆಚ್ಚಿಸಲು ಗುಹೆಯಾಕಾರದ ನಿರ್ಮಾಣ ನಡೆದಿದ್ದು, ಪ್ರವೇಶ ದ್ವಾರದ ಮೂಲಕ ಒಳಪ್ರವೇಶಿಸಿದಾಗ ಭಾರತ ಮಾತೆ, ಉಡುಪಿ ಶ್ರೀಕೃಷ್ಣನ ಭವ್ಯ, ಆಕರ್ಷಕ ಚಿತ್ರಗಳು ಸೆಳೆಯಲಿವೆ. ಮುಂದೆ ಗುಹೆಯಾಕಾರದ ನಿರ್ಮಾಣವನ್ನು ಪ್ರವೇಶಿಸುತ್ತಿದ್ದಂತೆ ಓಂಕಾರ ನಾದ ಮೈಮನಗಳನ್ನು ಪುಳಕಿತಗೊಳಿಸಲಿದೆಯಲ್ಲದೇ, ಆಕಾಶ ಮಂಡಲ ರಾರಾಜಿಸಲಿವೆ!!

 

– ಅಲೋಖಾ

 

Tags

Related Articles

Close