ಅಂಕಣಇತಿಹಾಸದೇಶಪ್ರಚಲಿತ

ದೇಶಪ್ರೇಮ ಕಲಿಸಿದ ಗಣಪತಿ ಎತ್ತ ಮಾಯವಾದ ?? ವಿಪರ್ಯಾಸವೇನು ಗೊತ್ತಾ??

ಗಣೇಶೋತ್ಸವ ಬಂತೆಂದರೆ ನಮ್ಮ ಮನ-ಮನಗಳಲ್ಲಿ ಅದೇನೋ ಸಂತೋಷ, ಸಂಭ್ರಮ. ಆದರೆ ವಿಪರ್ಯಾಸವೇನು ಗೊತ್ತಾ?? ನಾವು ದೇವರ ಹೆಸರಿನಲ್ಲಿ ಈಗ ಮಾಡುತ್ತಿರುವುದು ಭಕ್ತಿಯ ಭಜನೆಯಾಗಲೀ ಪೂಜೆಯಾಗಲೀ ಅಲ್ಲ ಅಕ್ಷರಶ: ದಂದೆಯ‌ ಚಟುವಟಿಕೆ. ದಂಗಾಗಬೇಡಿ. ಉದಾಹರಣೆಯನ್ನು ಗಮನಿಸಿ.

“ಸಾರ್, ಈ ಸಲದ ಚಂದಾ ಹಣದ ರಶೀದಿ ಪಡೆಯಿರಿ.”
” ಎಷ್ಟು ಬರೆದಿದ್ದೀರಿ?”
“ಏನಿಲ್ಲ ಸರ್, ಪ್ರತೀ ವರ್ಷದಂತೆ 500 ಬರೆದಿದ್ದೇವೆ.”
“ಯಾಕ್ರಯ್ಯ? ಹೋದ ಸಲ ನಾನು ನೂರೇ ಕೊಟ್ಟಿದ್ನಲ್ಲಾ?”
“ಅದೇನೇ ಇರ್ಲಿ ಸರ್, ಈ ಸಲ ಮಾತ್ರ 500 ಕೊಡ್ಲೇಬೇಕು.”
” ಇಲ್ಲಾಂದ್ರೆ ಏನು ಮಾಡ್ತೀರಾ ? ಒಂದಿ ಪೈಸೆನೂ ಕೊಡಲ್ಲಾ ನಾನು.ನೋಡೇ ಬಿಡ್ತೀನಿ.”
“ಅಷ್ಟು ದುರಹಂಕಾರ ಇದ್ಯಲ್ಲಾ ನಿಮಗೆ. ನೋಡೋಣ.”

ಹಾಗಂತ ಮನೆ ಮುಂದೆ ನಿಂತಿದ್ದ ಹುಡುಗರ ದಂಡು ಚಿಕ್ಕದೊಂದು ಧಮಕಿ ಹಾಕಿದ. ತಕ್ಷಣ ಮನೆಯ‌ ಯಜಮಾನ ಮರುಮಾತಾಡದೇ 500 ರೂ ಗಳನ್ನು ಕೊಡುತ್ತಾನೆ. ಚಂದಾಗಿರಾಕಿಗಳು ಮುಂದಿನ ಮನೆಯತ್ತ ಸಾಗುತ್ತಾರೆ.ಇದು ಇತ್ತೀಚೆಗೆ ನಾವು ಗಣೇಶೋತ್ಸವ ಆಚರಿಸುವ ರೀತಿ.

ಯಾವ ಘನ ಉದ್ದೇಶವನ್ನಿಟ್ಟು ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭಿಸಲಾಯಿತೋ, ಆ ಉದ್ದೇಶಗಳು, ಒಳ ಕಲ್ಪನೆ ಎಲ್ಲೂ ಛಿದ್ರಛಿದ್ರವಾಗಿವೆ. ದುರಂತವೆಂದರೆ ಇದೇ ಅಲ್ವಾ?? ಭಕ್ತಿಯಿರಬೇಕಾದ‌ ಜಾಗದಲ್ಲಿ ಒಂದು ರೀತಿಯಾದ ಹಿಂಸೆ, ವಿಕೃತಿಗಳು ಬಂದು ಕುಳಿತಿವೆ. ಇಷ್ಟಕ್ಕೂ ಗಣೇಶನ ಹಬ್ಬವನ್ನು ಯಾರು ಪ್ರಾರಂಭಿಸಿದರೋ ಅರಿಯದು, ಅದು ಪುರಾತನವಾದುದು. ಆದರೆ ಬೀದಿ ಗಣೇಶೋತ್ಸವ ಪ್ರಾರಂಭಿಸಿದ್ದು ಮಾತ್ರ ಓರ್ವ ಸ್ವಾತಂತ್ರ್ಯ ‌ಹೋರಾಟಗಾರ !!!

ಇಡೀ ಜಂಬೂದ್ವೀಪ, ಭರತಖಂಡ ಶತ್ರುಗಳ ಕೈಯಲ್ಲಿ ನಲುಗಿ ಹೋಗುತ್ತಿದ್ದ ಕಾಲವದು.. ಒಂದು ಶತಮಾನದ ಹಿಂದಿನ ವಿಚಾರವಿದು. ಅವರ ಕಾನೂನುಗಳೂ ಭೀಕರವಾಗಿದ್ದವು. 4 ಜನ ಒಟ್ಟಾದರೆ ಸಾಕು ಅವರನ್ನು ಜೈಲಿಗೆ ತಳ್ಳುನ ಯೋಜನೆ, ಕಾನೂನುಗಳೆಲ್ಲಾ ಇದ್ದ ಸಮಯಗಳವು. ಭಾರತೀಯರಲ್ಲಿ ಭಯದ ವಾತಾವರನವನ್ನೇ ಸೃಷ್ಟಿಸಿದ ಪರ್ವವದು. ಆದರೆ ಈ ಎಲ್ಲಾ ವಿಚಾರಗಳು‌ ಒಬ್ಬನನ್ನು ಮಾತ್ರ‌ ಬಿಡದೇ ಕಾಡುತ್ತಿತ್ತು. “ಈ ಜನರಲ್ಲಿರುವ ಭಯವನ್ನು ಕಿತ್ತೆಸೆಯುವುದು ಹೇಗೆ?”

ಅದಕ್ಕಾಗಿ ಆತ ‌ಒಂದು ಉಪಾಯವನ್ನು ಹೂಡಿದ. ನೆಟ್ಟಗೆ ಅದೊಂದು ಹಳ್ಳಿಗೆ ಹೋದ. ಅಲ್ಲಿನ ಜನರಿಗೆ , “ನೋಡ್ರಯ್ಯಾ, ಈ ಸಲ ನಾವೆಲ್ಲಾ ಸೇರಿಕೊಂಡು ಬೀದಿಯಲ್ಲಿ ಗಣೇಶನ ಪೂಜೆ‌ ಮಾಡೋಣ. ಆತ ವಿಘ್ನ ನಿವಾರಕ.‌ನಮ್ಮೆಲ್ಲರ ಕಷ್ಟಗಳನ್ನು ಪರಿಹರಿಸುತ್ತಾನೆ. ಏನಂತೀರಿ?” ಪೀಠಿಕೆ ಹಾಕಿದ. ಈ ಯೋಜನೆ, ಚಿಂತನೆ, ಮಾತುಗಳೆಲ್ಲವೂ ಹೊಸತರಂತೆ, ವಿಚಿತ್ರದಂತೆ ಕಂಡವು ಆ ಊರಿನ ಜನತೆಗೆ. ಇಷ್ಟೂ ದಿನ ತಮ್ಮ ಮನೆಗಳಲ್ಲೇ ಗಣೇಶನ ಪೂಜೆ ಮಾಡುತ್ತಿದ್ದವರಿಗೆ , ಅದೇ ಗಣೇಶನನ್ನು ಬೀದಿಯಲ್ಲಿಟ್ಟು ಪೂಜೆ‌ ಮಾಡೋಣವೆಂದರೆ ಹೇಗಾಗಬೇಡ??ಆದರೂ ಈ ಒಂದು ಪ್ರಯತ್ನ ನೋಡೇ ಬಿಡೋಣ.ವಿಘ್ನ ನಿವಾರಣೆಯಾದರೆ ಊರಿಗೇ ಒಳಿತಲ್ಲವೇ ಎಂದರು ಊರಿನ ಸಹೃದಯರು. ಸರಿ, ಅದಕ್ಕೋಸ್ಕರ ಒಂದು ಸಮಿತಿ ರಚನೆಯಾಯಿತು. ಇದು ಒಂದು ಪಕ್ಕಾ ಧಾರ್ಮಿಕ ಕಾರ್ಯಕ್ರಮವಾದ್ದರಿಂದ ವಿಪರೀತ ಜನ ಸೇರಿದರು. ಭಾಗವಹಿಸಪ್ರಾರಂಭಿಸಿದರು..

ಇದನ್ನೆಲ್ಲಾ ಗಮನಿಸಿದ ಬ್ರಿಟಿಷರು ಮಿಸುಕಾಡಿದರು!!!!

ಊರಿನವರು ಗೊಂದಲಕ್ಕೆ ಬಿದ್ದರು. ಬ್ರಿಟಿಷರು ನಮ್ಮನ್ನು ಹತ್ಯೆಗೈಯ್ಯುತ್ತಾರೆಂಬ ಚಿಂತೆ ‌ಒಂದು ಕಡೆ, ಇನ್ನೊಂದು ಕಡೆ ಗಣೇಶನ ಪೂಜೆಯಾಗುತ್ತಿದೆ, ಪೂಜೆಯನ್ನು ಅರ್ಧಕ್ಕೇ ನಿಲ್ಲಿಸಿದರೆ ಮತ್ತೆ ಹೆಚ್ಚು ವಿಘ್ನಗಳು ಬರಲು ಪ್ರಾರಂಭವಾದರೆ ನಮ್ಮ ಗತಿಯೇನು ಎಂಬ ಭಯವೂ ಅವರಲ್ಲಿ ಉದ್ಭವವಾಯಿತು. ಈ ಧಾರ್ಮಿಕ ಭಯವೇ ಬ್ರಿಟಿಷರ ವಿರುದ್ಧ ಊರಜನರು ಸಿಡಿದೇಳುವಂತೆ ಮಾಡಿತ್ತು. ಉಪಾಯ‌ ಫಲಿಸಿದ ಖುಷಿಗೆ ಆ ತೀವ್ರಗಾಮಿ ಮನದ ಒಳಗೆ ನಕ್ಕ!!!

ಆತ‌ ಯಾರು ಗೊತ್ತಾ?? ಹೆಸರು ಲೋಕಮಾನ್ಯ ಬಾಲಗಂಗಾಧರ ತಿಲಕ್ !!

ಪ್ರಥಮ ಬಾರಿಗೆ ಇಂತಹದ್ದೊಂದು ಧಾರ್ಮಿಕ ನಂಬಿಕೆಯನ್ನು ಉಳಿಸುವ ನೆಪದಲ್ಲಿ ಶತ್ರಗಳ ವಿರುದ್ಧ ಮುಖಾಮುಖಿ ಹೋರಾಟವಾದುದು 1893ರಲ್ಲಿ.

ಆವತ್ತು ಗಣೇಶನ ಪೂಜೆಯನ್ನು ಅರ್ಧಕ್ಕೆ ನಿಲ್ಲಿಸಲು ಬಂದಿದ್ದ‌ ಬ್ರಿಟಿಷ್ ಸಿಪಾಯಿಗಳನ್ನು ಪುಣೆಯ ಹತ್ತಿರದ ಹಳ್ಳಿ‌ಒಂದರ ಜನತೆ‌ ಮುಖಮೂತಿ‌ ನೋಡದೇ ಕತ್ತರಿಸಿ ಹಾಕಿತ್ತು. ನಿಮಗೆ ನೆನಪಿರಲಿಯೆಂದು ಒಂದು ವಿಚಾರವನ್ನು ಹೇಳುತ್ತೇನೆ. ಆ ಸಮಯದಲ್ಲಿ ಭಾರತೀಯರು ಗಾಂಧಿಯ ಹೆಸರನ್ನೂ ಕೇಳಿರಲಿಲ್ಲ. ಖುದ್ದು ಗಾಂಧಿಯೇ ಆಗ ಆಫ್ರಿಕೆಯಲ್ಲಿ ವಕೀಲೆ ವೃತ್ತಿಯನ್ನು ಮಾಡುತ್ತಿದ್ದರು. ಈ ಕಡೆ ತಿಲಕರೂ ವಕೀಲೆ ವೃತ್ತಿ ಮಾಡಿಕೊಂಡೇ ಹಳ್ಳಿ ಹಳ್ಳಿಗೆ ಹೋಗಿ ಜಾಗೃತಿಯನ್ನು ಮೂಡಿಸುತ್ತಿದ್ದರು. ಗಣೇಶೋತ್ಸವಗಳ ಮೂಲಕ!! ಅವರ ಪತ್ರಿಕೆಯಾದ “ಕೇಸರಿ” ಯಲ್ಲಿ ಬೆಂಕಿಯಂತಹ ಲೇಖನಗಳು ಪ್ರಕಟವಾಗುತ್ತಿದ್ದವು.

ಇದೇ ಪರಿಸ್ಥಿತಿಯಲ್ಲಿ ಒಂದು ಗೊಂದಲ ಅವರನ್ನು ಕಾಡಲು ಪ್ರಾರಂಭಿಸಿತ್ತು. ಒಂದು ಕಡೆ‌ ಬ್ರಿಟಿಷರ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಬೇಕೆಂಬ ಸಂಕಲ್ಪ, ಇನ್ನೊಂದು ವಕೀಲ ವೃತ್ತಿ.. ಹೇಗೆ ನಿಭಾಯಿಸೋದು?? ಯಾವುದಕ್ಕೆ ಪ್ರಾಮುಖ್ಯತೆಯನ್ನೀಯುವುದು ಎಂಬ ಪ್ರಶ್ನೆ ಮೂಡಿತ್ತು. ಆದರೆ ಗೆದ್ದದ್ದು‌ ಮಾತ್ರ‌ ಅವರ ದೇಶಪ್ರೇಮ !!! ವಕೀಲೆ ವೃತ್ತಿಯನ್ನು ತ್ಯಜಿಸಿ ತನ್ನನ್ನು ತಾನು ಸಂಪೂರ್ಣವಾಗಿ ಹೋರಾಟದಲ್ಲಿಯೇ ತೊಡಗಿಸಿದರು.

ಇದೆಲ್ಲಾ‌ ಆಗುತ್ತಿರುವಾಗಲೇ ಇತ್ತ‌ ಕಡೆ ಕರ್ಜನ್ ಬಂಗಾಳಗ ವಿಭಜನೆಯನ್ನು ಮಾಡಿದ. ತನ್ನ”ಕೇಸರಿ” ಪತ್ರಿಕೆಯಲ್ಲಿ‌ ಕರ್ಜನ್ ನ ಸರ್ವ ರೀತಿಯಿಂದಲೂ ಬೆತ್ತಲೆ ಮಾಡಿದ. ತಕ್ಷಣ ಬ್ರಿಟಿಷ್‌ ಆ ಪತ್ರಿಕೆಯನ್ನು ನಿಷೇಧಿಸಿತ್ತು.. ಈಗ ಇದರ ವಿರುದ್ಧವೂ ಚಳುವಳಿಗಳೂ ಪ್ರಾರಂಭವಾದವು. ಕೆಲವು ದಿನಗಳ ನಂತರ ಅದೂ ಕಡಿಮೆಯಾಯಿತು. ಹಾಗಂತ ತಿಳಿದು ಬ್ರಿಟಿಷ್ ನಿಟ್ಟುಸಿರು ಬಿಟ್ಟಿಟು. ಅದೇ ಸಮಯಕ್ಕೆ ಬ್ರಿಟಿಷ್ ಅಧಿಕಾರಿಗಳು ಸಾಲುಸಾಲಾಗಿ ಹತ್ಯೆಯಾಗತೊಡಗಿದರು. ಕಾರಣ, ಅವರ ಕೈಗೆ ಸೇರಿತ್ತು “ಕೇಸರಿ”.

ಆ ಸಮಯದಲ್ಲಿ ತಿಲಕರೇ ಹಳ್ಳಿ ಹಳ್ಳಿಗಳಲ್ಲಿ ಸ್ಥಾಪಿಸಿದ್ದ ಗಣೇಶ ಸಮಿತಿಗಳು ಕೇಸರಿಯನ್ನು ಚಳವಳಿಗಾರರಿಗೆಲ್ಲಾ ನಿಗೂಢವಾಗಿ ತಲುಪಿಸಿದ್ದರೆಂದು ಬ್ರಿಟಿಷರಿಗೆ‌ ಅರಿವೇ ಆಗಿರಲಿಲ್ಲ. ಕೊನೆಯವರೆಗೂ !!

ಸ್ವಾತಂತ್ರ್ಯ‌ ಸಂಗ್ರಾಮದಲ್ಲಿ ಗಣೇಶನ ಹಬ್ಬ‌ ಮಾಡಿದ ಕ್ರಾಂತಿಯಿದು.. ಆದರೆ ಇವತ್ತು ಇದು ಬೇರೆಯ ಅರ್ಥವನ್ನೇ ಹುಟ್ಟುಹಾಕಿವೆ. ಬೇರೆ ದಾರಿಯಲ್ಲೇ ಸಾಗುತ್ತಿವೆ.ಅವತ್ತಿನ ಗಣೇಶ ಸಮಿತಿಗಳಲ್ಲಿ, ನಾವೆಷ್ಟು ಜನ ಬ್ರಿಟಿಷರನ್ನು ಹೊಡೆಯುತ್ತೇವೆಂಬ ಆರೋಗ್ಯಕರ ಪೈಪೋಟಿಯಿದ್ದರೆ, ಇವತ್ತಿನ ಸಮಿತಿಗಳು ನಾವೆಷ್ಟು ಪ್ರಮಾಣದ ಪಟಾಕಿಗಳನ್ನು ಹೊಡೆಯುತ್ತೇವೆಂಬ ಅರ್ಥಹೀನ ಪೈಪೋಟಿಗಿಳಿದಿವೆ.. ಎಂತಹ ದುರಂತವಿದು!!

ಆವತ್ತಿನ ಗಣೇಶ ದೇಶಪ್ರೇಮದ ಬೀಜವನ್ನು ಬಿತ್ತರೆ, ಇವತ್ತಿನ ಗಣೇಶ ತನ್ನ ದರ್ಶನಕ್ಕಾಗಿ ಬರುವ ಚೆಲುವೆಯರಿಗಾಗಿ ಕಾದು ಕುಳಿತಿರುವ ಪಡ್ಡೆಗಳಿಗಾಗಿ ಬರೀ ‘ಪ್ರೇಮದ ಪಾಠ’ ಹೇಳುತ್ತಿದ್ದಾನೆ. ಇದು ಹಾಸ್ಯವಲ್ಲ. ವಾಸ್ತವ ಸಂಗತಿ. ಈ ಗಣಪ ಕಾರ್ಗಿಲ್ ಘಟನೆಗೆ ಸಂಬಂಧಪಟ್ಟಂತೆ ರೈಫಲ್ ಹಿಡಿಯುತ್ತಾನೆ. ಒಲಿಂಪಿಕ್ಸ್ ಬಂದರೆ ಹೈ ಜಂಪ್ ಮಾಡುತ್ತಾನೆ. ಕ್ರಿಕೆಟ್ ವಿಶ್ವಕಪ್ ಬಂದರೆ ಬ್ಯಾಟ್‌ ಹಿಡಿದು ಕ್ರೀಸಿಗೂ ಇಳಿದು ಬಿಡುತ್ತಾನೆ.. ಗಣೇಶನನ್ನು ಯಾವ ಮಟ್ಟಕ್ಕೂ ‌ಇಳಿಸಲು ನಾವು ತಯಾರು!!! ಅಲ್ಲವೇ?? ಭಕ್ತಿಯಿಂದ ಪ್ರಾರ್ಥಿಸಿ, ವಿದ್ಯೆ , ಬುದ್ಧಿ ದಯಪಾಲಿಸು ದೇವರೇ, ನಮ್ಮೆಲ್ಲರ ವಿಘ್ನಗಳನ್ನು ಹೋಗಲಾಡಿಸು ಗಣಪ ಎಂದು ಪ್ರಾರ್ಥಿಸಬೇಕಾದ ಸಮಯದಲ್ಲಿ, ಭಕ್ತಿಗಾನವನ್ನು ಕೇಳಬೇಕಾದ ಸಮಯದಲ್ಲಿ ನಾವು ಕೇಳುವ, ಹಾಕುವ ಹಾಡು “ಹೊಡಿ ಮಗ, ಹೊಡಿ ಮಗ ಬಿಡಬೇಡ ‌ಅವನನ್ನು ” ಎಂದು. ನಮಗೆ ಅಭಯವನ್ನು ನೀಡಲು ಬಂದಿರುವ ಗಣಪ ಓಡಿಹೋದರೂ ಅಚ್ಚರಿಯಿಲ್ಲ. ಪ್ರಸ್ತುತ ನಾವು ಗಣೇಶನ ಹಬ್ಬದ ಆಚರಣೆಯ‌ ನೆಪದಲ್ಲಿ ಮಾಡುತ್ತಿರುವುದು ಅಕ್ಷರಶ: ಶಬ್ದಮಾಲಿನ್ಯ, ಪ್ರಕೃತಿ ಮಾಲಿನ್ಯ!!!

ದುರಂತವೆಂದರೆ, ಇದನ್ನೆಲ್ಲಾ ನೋಡಿ ಮೌನವಾಗಿಯೇ ರೋದಿಸುತ್ತಿರುವ ತಿಲಕ್ ರ ಆತ್ಮ ನಮಗೆ‌ ಯಾರಿಗೂ ಗೋಚರಿಸುತ್ತಿಲ್ಲ..

– ವಸಿಷ್ಠ

Tags

Related Articles

Close