ಪ್ರಚಲಿತ

ಭಾರತೀಯ ಸೇನೆಯ ದ್ವಿಶತಕ ಸಾಧನೆಗೆ ಸೆಹ್ವಾಗ್ ಅಭಿನಂದಿಸಿದ್ದು ಹೀಗೆ!! ದೇಶಪ್ರೇಮಿಗಳ ಹೃದಯದಲ್ಲಿ ವೀರೂ ಸ್ಥಾನ ಪಡೆಯಲು ಕಾರಣವೇನು?

ಸೆಹವಾಗ್ ಎಂಬ ರಾಷ್ಟ್ರಪ್ರೇಮಿ!

ಅದು ಪಾಕಿಸ್ತಾನದ ವಿರುದ್ಧ ಮುಲ್ತಾನ್‍ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ.. ಇಡೀ ಭಾರತವೇ ತದೇಕಚಿತ್ತದಿಂದ ಮ್ಯಾಚನ್ನೇ ನೋಡುತ್ತಿತ್ತು. ಅಷ್ಟರಲ್ಲಿ ಕ್ರೀಸ್‍ಗಿಳಿದ ವೀರೇಂದ್ರ ಸೆಹ್ವಾಗ್ ಒಮ್ಮೆ ಅಭಿಮಾನಿಗಳತ್ತ ಬ್ಯಾಟ್ ತೋರಿಸಿ ಬ್ಯಾಟಿಂಗ್ ಮಾಡಲಾರಂಭಿಸಿದರು.. ಆಮೇಲೆ ಹಿಂದೆ ಮುಂದೆ ನೋಡದ ಸೆಹ್ವಾಗ್ ಪಾಕಿಗಳ ಬಾಲ್‍ಗಳನ್ನು ಒಂದೇ ಸಮನೆ ಚಚ್ಚುತ್ತಿದ್ದರು. ಭಾರತದ ಮೇಲೆ ಭಯೋತ್ಪಾದನೆ ದಾಳಿ ನಡೆಸುತ್ತಿರುವ ಪಾಕಿಸ್ತಾನದ ವಿರುದ್ಧ ತೊಡೆ ತಟ್ಟಿದಂತೆ ತನ್ನ ಕೋಪವನ್ನು ಬ್ಯಾಟಿಂಗ್‍ನಲ್ಲಿ ತೋರಿಸುತ್ತಿದ್ದರು ಸೆಹ್ವಾಗ್. ಕೇವಲ 375 ಎಸೆತಗಳಲ್ಲಿ 309 ರನ್ ಚಚ್ಚಿದ್ದರು. ಈ ಅಮೋಘ ಇನ್ನಿಂಗ್ಸ್‍ನಲ್ಲಿ ಸೆಹ್ವಾಗ್ 39 ಬೌಂಡರಿ, 6 ಸಿಕ್ಸರ್ ಹೊಡೆದಿದ್ದರು. ಈ ಪಂದ್ಯವನ್ನು ಒಂದು ಇನ್ನಿಂಗ್ಸ್ ಮತ್ತು 52 ರನ್‍ಗಳಿಂದ ಭಾರತ ಗೆದ್ದುಕೊಂಡಿತ್ತು.

ಇದೀಗ ಕ್ರಿಕೆಟ್ ಜಗತ್ತಿನಿಂದ ನಿವೃತ್ತರಾಗಿರುವ ವೀರೇಂದ್ರ ಸೆಹ್ವಾಗ್ ತನ್ನ ಟ್ವೀಟ್‍ಗಳ ಮೂಲಕವೇ ಸಾಮಾಜಿಕ ಕಳಕಳಿ ಮೆರೆಯುತ್ತಿದ್ದಾರೆ. ಇವರು ಒಮ್ಮೆ ಟ್ವೀಟ್ ಮಾಡಿದರೆ ಅದು ಸಾಕಷ್ಟು ಸದ್ದು ಮಾಡುತ್ತದೆ. ಇವರು ಹೆಚ್ಚಾಗಿ ದೇಶಪ್ರೇಮವನ್ನು ಬಡಿದೆಬ್ಬಿಸುವ ರೀತಿಯಲ್ಲಿ ಟ್ವೀಟ್ ಮಾಡಿ ದೇಶಪ್ರೇಮಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಇದೀಗ ಅವರು ಮಾಡಿರುವ ಮತ್ತೊಂದು ಟ್ವೀಟ್ ಇಡೀ ಭಾರತೀಯರ ಹೃದಯವನ್ನು ಗೆದ್ದಿದೆ. ಇವರ ಈ ಕಾರ್ಯಕ್ಕೆ ಇಡೀ ದೇಶದೆಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ನಜಾಫ್‍ಗಢದ ನವಾಬನೆಂದೇ ಪ್ರಖ್ಯಾತಿ ಹೊಂದಿರುವ ಟೀಂ ಇಂಡಿಯಾದ ವೀರೂ ಭಾರತೀಯ ಸೇನಾ ಸಾಮರ್ಥ್ಯಕ್ಕೆ ತಲೆ ಎತ್ತಿ, ಎದೆ ಉಬ್ಬಿಸಿ, ಹೆಮ್ಮೆಯಿಂದ ಸೆಲ್ಯೂಟ್ ಹೊಡೆದಿದ್ದಾರೆ. ಜಗತ್ತಿಗೂ ಹಾಗೂ ದೇಶಕ್ಕೂ ಕಂಟಕಪ್ರಾಯವಾಗಿರುವ ಉಗ್ರರ ಅಟ್ಟಹಾಸವನ್ನು ಮಟ್ಟಹಾಕುತ್ತಿರುವ ಭಾರತೀಯ ಯೋಧರ ದಿಟ್ಟತನವನ್ನು ಕೊಂಡಾಡಿರುವ ವೀರೂ ತಮ್ಮ ಟ್ವಿಟ್ಟರ್‍ನಲ್ಲಿ ದೇಶದ ರಕ್ಷಣಾ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ. ಒಂದೇ ವರ್ಷದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸುಮಾರು 200 ಕ್ಕೂ ಹೆಚ್ಚು ಉಗ್ರರರನ್ನು ಸೆದೆಬಡಿದಿರುವ ನಮ್ಮ ಸೇನೆಗೆ ಧನ್ಯವಾದ ತಿಳಿಸಿರುವ ವೀರೂ ಈ ಸಾಧನೆಯಲ್ಲಿ ಭಾಗಿಯಾದ ಜಮ್ಮು ಮತ್ತು ಕಾಶ್ಮೀರ ಪೆÇಲೀಸ್, ಭದ್ರತಾ ಪಡೆ ಹಾಗೂ ಭಾರತೀಯ ಸೇನೆ ಮತ್ತು ಭಾರತೀಯ ಸೇನೆಯ ಮಾಹಿತಿ ಹೆಚ್ಚುವರಿ ನಿರ್ದೇಶನಾಲಯಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. 2010ರ ನಂತರ 2017ರ ಒಂದೇ ವರ್ಷದಲ್ಲಿ ಸುಮಾರು 200ಕ್ಕೂ ಹೆಚ್ಚು ಉಗ್ರರನ್ನು ಸೇನೆ ಮಟ್ಟಹಾಕಿದೆ. ಹತ್ಯೆಗೀಡಾದ ಉಗ್ರರೆಲ್ಲಾ ಮೋಸ್ಟ್ ವಾಂಟೆಡ್ ಉಗ್ರ ಕಮಾಂಡರ್‍ಗಳಾಗಿದ್ದರು.

ಅಂದಹಾಗೆ ವೀರೂ ಇದೇ ಮೊದಲ ಬಾರಿಯಲ್ಲ ಈ ಹಿಂದೆಯೂ ಸೇನಾ ಸಾಮರ್ಥ್ಯವನ್ನು ಪ್ರಶಂಸಿಸುತ್ತಲೇ ಬರುತ್ತಿದ್ದಾರೆ.

ಇದಕ್ಕಿಂತ ಮುಂಚೆ ವೀರೂ, ದೇಶವನ್ನು ಕಾಯುವ ಯೋಧರು ಹೆತ್ತ ತಾಯಿಗಿಂತಲೂ ಮಿಗಿಲು ಎಂದು ಟ್ವೀಟ್ ಮಾಡಿದ್ದರು. “ಗಡಿಯಲ್ಲಿ ಯಾವುದೇ ಸ್ವಾರ್ಥವಿಲ್ಲದೆ ವೈರಿಗಳಿಂದ ಇಡೀ ದೇಶವನ್ನು ಕಾಯುತ್ತಿರುವ ಸೈನಿಕರು ಎಲ್ಲಿ ಕಂಡರೂ ಅವರಿಗೆ ಗೌರವನ್ನು ಸೂಚಿಸುವುದು ಎಲ್ಲರ ಕರ್ತವ್ಯ. ನಮಗೆ ಜನ್ಮ ನೀಡಿ ಯಾವುದೇ ಸ್ವಾರ್ಥವಿಲ್ಲದೆ ಲಾಲನೆ ಪಾಲನೆ ಮಾಡುವ ತಾಯಿಯ ರೀತಿಯಂತೆ ಯೋಧರು ದೇಶದ ಜನರನ್ನು ಯಾವುದೇ ಸ್ವಾರ್ಥವಿಲ್ಲದೆ ಕಾಪಾಡುತ್ತಾ ಬಂದಿದ್ದಾರೆ. ಯೋಧರು ತಾಯಿಗಿಂತ ಮಿಗಿಲು” ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ದೇಶದಲ್ಲಿ ಎಷ್ಟು ಅಲೆ ಎಬ್ಬಿಸಿತ್ತೆಂದರೆ ಸೇನಾ ಯೋಧರೊಮ್ಮೆ ವಿಮಾನ ನಿಲ್ದಾಣದ ಸಮೀಪ ಅಡ್ಡಾಡುತ್ತಿದ್ದಾಗ ಜನರೆಲ್ಲಾ ಎದ್ದುನಿಂತು ರಾಷ್ಟ್ರಗೀತೆ ಹಾಡಿ ಧನ್ಯವಾದ ಸಮರ್ಪಿಸಿದ್ದರು.

ಇದಕ್ಕಿಂತ ಮುಂಚೆ ಕಾರ್ಗಿಲ್ ಹುತಾತ್ಮ ಯೋಧನ ಮಗಳು ಹಾಗು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಗುರ್ಮೆಹರ್ ಕೌರ್ ಅವರ ಫೇಸ್‍ಬುಕ್‍ನಲ್ಲಿ
ವೀಡಿಯೋವೊಂದರಲ್ಲಿ ಪಾಕಿಸ್ತಾನ ನನ್ನ ತಂದೆಯನ್ನು ಕೊಲ್ಲಲಿಲ್ಲ, ಯುದ್ಧ ಅವರನ್ನು ಕೊಂದಿದ್ದು ಎಂಬ ಭಿತ್ತಿಪತ್ರ ಹಿಡಿದಿದ್ದರು. ಇದು ಸಾಕಷ್ಟು ವೈರಲ್ ಆಗಿತ್ತಲ್ಲದೆ ಟೀಕೆಗಳು ವ್ಯಕ್ತವಾಗಿತ್ತು.

ಇದೇ ವಿಷಯವನ್ನು ತೆಗೆದುಕೊಂಡ ವೀರೇಂದ್ರ ಸೆಹ್ವಾಗ್ ಗುರುಮೆಹರ್ ಅವರ ಶೈಲಿಯಲ್ಲೇ, ಎರಡು ತ್ರಿಶತಕ ಬಾರಿಸಿದ್ದು ನಾನಲ್ಲ, ನನ್ನ ಬ್ಯಾಟ್ ಬಾರಿಸಿದ್ದು ಎಂಬ ಭಿತ್ತಿಪತ್ರ ಹಿಡಿದ ಫೆÇೀಟೋವೊಂದನ್ನ ಹಾಕಿದ್ದರು. ಜೊತೆಗೆ ಬಾತ್ ಮೆ ಹೈ ದಮ್ ಭಾರತ್ ಜೈಸಿ ಜಗಾ ನಹೀ ಅಂತ ಟ್ವೀಟ್ ಮಾಡಿದ್ದರು. ಸೆಹ್ವಾಗ್ ಅವರ ಈ ಟ್ವೀಟ್‍ಗೆ ನಟ ರಂದೀಪ್ ಹೂಡಾ ಚಪ್ಪಾಳೆ ತಟ್ಟೋ ಎಮೋಜಿ ಹಾಕಿ ಪ್ರತಿಕ್ರಿಯಿಸಿದ್ದರು. ಇದಾದ ಬಳಿಕ ಅನೇಕ ಮಂದಿ ಟ್ವಿಟರ್ ಬಳಕೆದಾರರು ಇದೇ ಶೈಲಿಯಲ್ಲಿ ಟ್ವೀಟಿಸಿ ಒಂದು ಅಲೆಯನ್ನೇ ಸೃಷ್ಟಿಸಿದ್ದರು.

ವೀರೇಂದ್ರ ಸೆಹ್ವಾಗ್‍ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಎಷ್ಟು ಫಿದಾ ಆಗಿದ್ದರೆಂದರೆ, ಸೆಹ್ವಾಗ್ ಹುಟ್ಟುಹಬ್ಬದ ನಿಮಿತ್ತ ಉಲ್ಟಾ ಸಂದೇಶ ಕಳಿಸಿ ಟ್ವಿಟರ್‍ನಲ್ಲಿ ಶುಭಹಾರೈಸಿದ್ದರು. ಜೊತೆಗೆ ದುಬಾರಿ ಗಿಫ್ಟ್ ಕೂಡಾ ನೀಡಿದ್ದರು. ಇದು ಕೂಡಾ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ಇದಾದ ಬಳಿಕ ಅನೇಕ ಮಂದಿ ಸೆಹ್ವಾಗ್ ವಿಭಿನ್ನವಾಗಿ ಶುಭ ಕೋರಿದ್ದರು. ಇದಕ್ಕೆ ಸೆಹ್ವಾಗ್ ಕೂಡಾ ವಿಭಿನ್ನ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು.

ಬಾಂಗ್ಲಾದೇಶ ಸೋತ ಸಂದರ್ಭ ವೀರೂ ಟ್ವೀಟ್ ಸಾಕಷ್ಟು ಸದ್ದು ಮಾಡಿತ್ತು. `ನಿನ್ನ ಪ್ರಯತ್ನ ಚೆನ್ನಾಗಿತ್ತು ಮೊಮ್ಮಗನೇ (ಬಾಂಗ್ಲಾ). ಆಗಿದ್ದು ಆಗಿಹೋಯ್ತು. ಬೇಜಾರು ಮಾಡಿಕೋಬೇಡ. ಅಂದಹಾಗೆ, ಅಪ್ಪಂದಿರ ದಿನದಂದು ನಾವು ಮಗನ(ಪಾಕ್) ಜೊತೆ ಫೈನಲ್ ಆಡಲಿದ್ದೇವೆ!’ ಎಂದು ಬಾಂಗ್ಲಾದ ಕಾಲೆಳೆದ್ದಿದ್ದರು.

ಕ್ರಿಕೆಟ್‍ನಿಂದ ನಿವೃತ್ತಿ ಪಡೆದಿರುವ ಸೆಹ್ವಾಗ್ ತಮ್ಮ 14 ವರ್ಷಗಳ ವೃತ್ತಿ ಬದುಕಿನಲ್ಲಿ 104 ಪಂದ್ಯಗಳಲ್ಲಿ 8586 ಟೆಸ್ಟ್ ರನ್‍ಗಳು ಹಾಗೂ 251 ಏಕದಿನ
ಪಂದ್ಯಗಳಲ್ಲಿ 8273 ರನ್‍ಗಳನ್ನು ಚೆಚ್ಚಿದ್ದಾರೆ. ಅಲ್ಲದೆ ಎರಡು ತ್ರಿಶತಕ ಬಾರಿಸಿರುವ ಭಾರತದ ಏಕೈಕ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

ಕ್ರಿಕೆಟ್ ಜಗತ್ತಿನಲ್ಲಿ ವೀರೇಂದ್ರ ಸೆಹ್ವಾಗ್ ಅದ್ಭುತ ಆಟಗಾರ. ಇವರು ನಿವೃತ್ತಿಯಾದ ಬಳಿಕ ಸುಮ್ಮನೆ ಕೂರದೆ ದೇಶಪ್ರೇಮಿಗಳಲ್ಲಿ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸುವ ಕೆಲಸವನ್ನು ಮಾಡುತ್ತಲೇ ಬರುತ್ತಿದ್ದಾರೆ. ಇವರ ಈ ನಡೆಯಿಂದಾಗಿ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

-ಚೇಕಿತಾನ

Tags

Related Articles

Close