ಪ್ರಚಲಿತ

ವಾಹ್! ಏನ್ ಪಕ್ಕಾ ಟೈಮಿಂಗ್ಸ್ ಗುರೂ ನಿಂದೂ…!

ದೇಶಕ್ಕೆ ಸ್ವಾತಂತ್ರ್ಯ ದೊರೆತು 60 ವರ್ಷ ಗತಿಸಿದರೂ ಮಾದಿಗ ಸೇರಿದಂತೆ ಕೆಲವು ಸಮುದಾಯದವರು ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಬಹು ದೊಡ್ಡ ಶೋಷಿತ ಸಮುದಾಯವೊಂದು ಮೀಸಲಾತಿಯ ಪ್ರಯೋಜನಗಳಿಂದ ವಂಚಿತವಾಗಿದೆ.ಈಗಲಾದರೂ ನಮಗೆ ನ್ಯಾಯ ಕೊಡಿಸಿ ಎಂದು ಆ ಸಮುದಾಯದವರು ಬೀದಿಗಿಳಿದು ಹೋರಾಟ ನಡೆಸತೊಡಗಿದ ಮೇಲೆ ವಿಷಯದ ಗಂಭೀರತೆ ಅರಿತು ಆ ಬಗ್ಗೆ ಅಧ್ಯಯನ ನಡೆಸಿ ವರದಿ ಪಡೆಯಲು ನ್ಯಾಯಮೂರ್ತಿ.ಎ.ಜೆ.ಸದಾಶಿವ ಆಯೋಗ ರಚನೆಯಾಗಿದ್ದು 2005 ರಲ್ಲಿ.

ಆ ವಿಚಾರದ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿ ಸದಾಶಿವ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು 2012 ರಲ್ಲಿ.

ಅಂದಿನಿಂದಲೂ ‘ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕು’ ಎಂದು ಆಗ್ರಹಿಸಿ ರಾಜ್ಯದ ಮೂಲೆ ಮೂಲೆಯಲ್ಲೂ ನಿರಂತರವಾಗಿ ಧರಣಿ ನಡೆಸುತ್ತಲೇ ಇದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು ತಾವು ಅಹಿಂದ ನಾಯಕರೆಂದು ಕರೆದುಕೊಂಡರೂ ಆಯೋಗದ ವರದಿಯನ್ನು ಅಂಗೀಕರಿಸಲು ಏಕಿಷ್ಟು ಹಿಂಜರಿಯುತ್ತಿದ್ದಾರೆ ಎಂದು ಐದು ವರ್ಷಗಳಿಂದಲೂ ಪ್ರಶ್ನಿಸುತ್ತಲೇ ಬಂದಿದ್ದಾರೆ.

ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರು ವರದಿ ನೀಡಿ 6 ವರ್ಷ ಕಳೆಯುತ್ತಾ ಬಂದಿದ್ದರೂ ಇದುವರೆಗೂ ಸದನದಲ್ಲಿಯೂ ಚರ್ಚಿಸದಿದ್ದ ಸಿದ್ಧರಾಮಯ್ಯ ಸರ್ಕಾರ ಎರಡೂ ಬಣಗಳನ್ನೂ ಕರೆದು ಸಂಧಾನ ಪ್ರಾರಂಭಿಸಿ ಸದಾಶಿವ ಆಯೋಗದ ವರದಿ ಜಾರಿ ಕುರಿತು ಮುಂದಿನ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡುತ್ತಿರುವುದು ಕರ್ನಾಟಕದ ಚುನಾವಣೆಗೆ ಇನ್ನೇನು ಮೂರು ತಿಂಗಳು ಬಾಕಿ ಇದೆ ಎನ್ನುವಾಗ!

ವಾಹ್! ಏನ್ ಪಕ್ಕಾ ಟೈಮಿಂಗ್ಸ್ ಗುರೂ ನಿಂದೂ..

2002ರ ಮೇ 5ರಂದು ಅಂದಿನ ಗೋವಾ ಸರ್ಕಾರ ಮಹದಾಯಿ ಯೋಜನೆಗೆ ತಕರಾರು ಅರ್ಜಿಯನ್ನು ಕೇಂದ್ರಕ್ಕೆ ಸಲ್ಲಿಸಿತು ಮತ್ತು ನ್ಯಾಯಾಧಿಕರಣ ರಚಿಸಲು ಕೇಂದ್ರ ಜಲಸಂಪನ್ಮೂಲ ಸಚಿವರಿಗೆ 2002ರ ಜುಲೈ9ರಲ್ಲಿ ಗೋವಾ ಸರ್ಕಾರ ಪತ್ರ ಬರೆಯಿತು.

2002ರ ಸೆಪ್ಟೆಂಬರ್ 19ರಂದು ಯೋಜನೆ ಅನುಷ್ಠಾನಕ್ಕೆ ಕೇಂದ್ರ ಜಲ ಆಯೋಗ ನೀಡಿದ್ದ ತಾತ್ವಿಕ ಒಪ್ಪಿಗೆಗೆ, ಜಲ ಆಯೋಗದಿಂದಲೇ ತಡೆಯಾಜ್ಜ್ಞೆನೀಡಿತು. ಮಹದಾಯಿ ನೀರಿನ ವಿವಾದ ಕುರಿತು ರ್ಚಚಿಸಲು ದೆಹಲಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವರ ನೇತೃತ್ವದಲ್ಲಿ 2002ರ ಡಿಸೆಂಬರ್ 20ರಂದು ಗೋವಾ ಹಾಗೂ ಕರ್ನಾಟಕ ಸರ್ಕಾರಗಳ ಮಂತ್ರಿಗಳ ಸಭೆ ಕರೆಯಲಾಯಿತು.ಆದರೆ ಅದು ಒಪ್ಪಂದಕ್ಕೆ ಬರಲು ವಿಫಲವಾಯಿತು.

2006ರ ಸೆಪ್ಟೆಂಬರ್ 22ರಂದು ಕರ್ನಾಟಕದ ಅಂದಿನ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಜಲಸಂಪನ್ಮೂಲ ಸಚಿವ ಕೆ.ಎಸ್. ಈಶ್ವರಪ್ಪ ಅವರಿಂದ ಬೆಳಗಾವಿ ಜಿಲ್ಲೆ ಕಣಕುಂಬಿಯಲ್ಲಿ ಈ ಯೋಜನೆ ಆರಂಭಿಸಲು ಭೂಮಿಪೂಜೆಯನ್ನು ನೆರವೇರಿಸಲಾಯಿತು.

ಕರ್ನಾಟಕ ಸರ್ಕಾರದ ಯೋಜನೆಗೆ ತಡೆ ನೀಡುವಂತೆ 2006ರ ನವೆಂಬರ್ 15ರಲ್ಲಿ ಅಂದಿನ ಗೋವಾ ಸರ್ಕಾರವು ಸವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತು.

2007ರಲ್ಲಿ ಅಂದಿನ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು ಮಹದಾಯಿ ನೀರನ್ನು ಕರ್ನಾಟಕಕ್ಕೆ ಹರಿಸಲು ಬಿಡುವುದಿಲ್ಲ ಎಂದು ಗೋವಾ ನೆಲದಲ್ಲಿ ನಿಂತು ಕರ್ನಾಟಕದ ವಿರುದ್ಧ ಗುಡುಗಿದರು.

2010ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ‘ಮಹದಾಯಿ ಜಲ ವಿವಾದ ನ್ಯಾಯಧಿಕರಣ’ವನ್ನು ರಚಿಸಿತು.

ದಶಕಗಳ ಕಾಲ ಇಷ್ಟೆಲ್ಲಾ ಆಗುವಾಗ ಸುಮ್ಮನಿದ್ದ ಮಹದಾಯಿ ವಿರೋಧೀ ಸೋನಿಯಾ ಗಾಂಧಿಯವರ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಮಹದಾಯಿ
ಹೋರಾಟಗಾರರು ಗೋವಾ ಮುಖ್ಯಮಂತ್ರಿಯನ್ನು ಮಾತುಕತೆಗೆ ಒಪ್ಪಿಸಿದ್ದ ಯಡಿಯೂರಪ್ಪನವರ ಪಕ್ಷವಾದ ಬಿಜೆಪಿ ಯ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು ಕರ್ನಾಟಕದ ಚುನಾವಣೆಗೆ ಇನ್ನೇನು ಮೂರು ತಿಂಗಳು ಬಾಕಿ ಇದೆ ಎನ್ನುವಾಗ!

ವಾಹ್! ಏನ್ ಪಕ್ಕಾ ಟೈಮಿಂಗ್ಸ್ ಗುರೂ ನಿಂದೂ..

ಶ್ರೀ ಎಂ.ರಾಮಮೂರ್ತಿಯವರು ಅರಿಶಿಣ ಮತ್ತು ಕುಂಕುಮ ಬಣ್ಣದ ನಾಡಧ್ವಜವನ್ನು ಹುಟ್ಟುಹಾಕಿದ್ದು 1965ರಲ್ಲಿ.

1982ನೇ ಇಸವಿಯಲ್ಲಿ ತೀವ್ರಗೊಂಡ ಡಾ.ರಾಜ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಗೋಕಾಕ್ ಚಳುವಳಿಯಲ್ಲಿ ಕನ್ನಡಿಗರ ಐಕ್ಯತೆಯ ಸಂಕೇತವಾಗಿ ಬಳಸಿದ್ದು
ಕೂಡಾ ಇದೇ ಧ್ವಜವನ್ನೇ!

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಧ್ವಜವನ್ನು ರಾಜ್ಯ ಧ್ವಜವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿದ್ದು 1998ರಲ್ಲಿ.

ಕನ್ನಡ ರಾಜ್ಯೋತ್ಸವದಂದು ಎಲ್ಲ ಸರಕಾರಿ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಕನ್ನಡ ಧ್ವಜವನ್ನು ಹಾರಿಸಬೇಕೆಂದು ಸುತ್ತೋಲೆ ಹೊರಡಿಸಿದ್ದು ಡಿವಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ.

ಆದರೆ ಹೊಸ ನಾಡ ಧ್ವಜವೊಂದನ್ನು ರೂಪಿಸಲು ಸಮಿತಿ ರಚಿಸಿ ಆ ಸಮಿತಿಯಿಂದ ಅತ್ಯಂತ ತುರ್ತಾಗಿ ವರದಿ ಪಡೆದು,ಅದನ್ನು ಸಚಿವಸಂಪುಟದಲ್ಲಿ ಅನುಮೋದಿಸಿ ಅಂತಿಮ ಅನುಮೋದನೆಗಾಗಿ ಕೇಂದ್ರಕ್ಕೆ ಕಳಿಸಿ ಕೈ ತೊಳೆದುಕೊಳ್ಳುತ್ತಿರೋದು ಮಾತ್ರ ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಇನ್ನೇನು ಯಾವ ಕ್ಷಣದಲ್ಲಿ ಬೇಕಾದರೂ ಜಾರಿಯಾಗಿಬಿಡಬಹುದು ಎನ್ನುವ ಈ ಸಮಯದಲ್ಲಿ!

ವಾಹ್! ಏನ್ ಪಕ್ಕಾ ಟೈಮಿಂಗ್ಸ್ ಗುರೂ ನಿಂದೂ..

ಲಿಂಗಾಯತ ಎನ್ನುವುದು ಹುಟ್ಟಿದ್ದು ಬಸವಣ್ಣನವರ ಕಾಲವಾದ 12ನೇ ಶತಮಾನದಲ್ಲಿ.

ಪ್ರಪ್ರಥಮವಾಗಿ ಜನಗಣತಿ ನಡೆಸುವ ಮೂಲಕ ಅಂದಿನ ಮೈಸೂರು ರಾಜ್ಯದಲ್ಲಿರುವ ಲಿಂಗಾಯತರಲ್ಲಿ 22 ಪಂಗಡಗಳನ್ನು ಗುರುತಿಸಿದ್ದು 1871ರಲ್ಲಿ.

ವೀರಶೈವ– ಲಿಂಗಾಯತ ಸಮುದಾಯವು ಹಿಂದೂ ಧರ್ಮದ ಒಂದು ಪಂಗಡ ಎಂದು ಹೇಳಿ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲಾಗದು ಎಂದು ಪ್ರಸ್ತಾವನೆಯನ್ನು ಕಾಂಗ್ರೆಸ್‌ ನೇತೃತ್ವದ ಕೇಂದ್ರ ಸರ್ಕಾರ ತಿರಸ್ಕರಿಸಿದ್ದು 2013ರಲ್ಲಿ.

ಆದರೆ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ನೀಡಬೇಕೆನ್ನುವ ಪ್ರಸ್ತಾವನೆಯನ್ನು ಅಂಗೀಕರಿಸಿ ಅದನ್ನು ಮತ್ತೆ ಅನುಮೋದನೆಗಾಗಿ ಕೇಂದ್ರಕ್ಕೆ
ಕಳಿಸುತ್ತಿರೋದು ಮಾತ್ರ ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಇನ್ನೇನು ಯಾವ ಕ್ಷಣದಲ್ಲಿ ಬೇಕಾದರೂ ಜಾರಿಯಾಗಿಬಿಡಬಹುದು ಎನ್ನುವ ಈ ಸಮಯದಲ್ಲಿ!

ವಾಹ್! ಏನ್ ಪಕ್ಕಾ ಟೈಮಿಂಗ್ಸ್ ಗುರೂ ನಿಂದೂ..

ಇಂಥಾ ಪಕ್ಕಾ ಟೈಮಿಂಗ್ಸು,ಇಂಥಾ ಪಕ್ಕಾ ಬುದ್ದಿವಂತಿಕೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನು ತಿದ್ದಿ ಮಿನಿ ಸಂವಿಧಾನ ರಚಿಸಿದವಳ
ಪಾರ್ಟಿಯವರಿಗಲ್ಲದೆ ಇನ್ಯಾರಿಗೆ ಬರಲು ಸಾಧ್ಯ ಗುರೂ…

– Praveen Kumar Mavinakadu

Tags

Related Articles

Close