ಪ್ರಚಲಿತ

ಸದ್ದಿಲ್ಲದೆ ನಡೆಯುತ್ತಿದೆ ಭಾರತಕ್ಕೆ ಬೇಕಾದ ಉಗ್ರರ ಮಾರಣ ಹೋಮ: ಅನಾಮಿಕ ಇನ್ ಆಕ್ಷನ್ ಮೋಡ್

ಭಾರತದ ವಿರುದ್ಧ ಉಗ್ರವಾದ ನಡೆಸುವುದು, ಮಸಲತ್ತು ಮಾಡುವವರಿಗೆ ನಮ್ಮ ನೆರೆಯ ರಾಷ್ಟ್ರ, ಆದರೆ ಶತ್ರು ರಾಷ್ಟ್ರ ಪಾಕಿಸ್ತಾನ ಆಶ್ರಯ ನೀಡುವುದು, ಅವರನ್ನು ಪೋಷಿಸುವುದು ಸಾಮಾನ್ಯ ಸಂಗತಿ. ಪಾಕಿಸ್ತಾನ ಎಂದರೆಯೇ ‌ಉಗ್ರವಾದ ಎನ್ನುವಷ್ಟರ ಮಟ್ಟಿಗೆ ವಿಶ್ವದೆಲ್ಲೆಡೆ ಪಾಕ್‌ನ ಕುಖ್ಯಾತಿ ಹಬ್ಬಿದೆ‌‌.

ಆದರೆ ಈಗ ಕಾಲ ಸ್ವಲ್ಪ ಬದಲಾಗಿದೆ. ಭಾರತಕ್ಕೆ ಬೇಕಾದ ಉಗ್ರರಿಗೆ ಸುರಕ್ಷಿತ ಅಡಗುದಾಣವಾಗಿದ್ದ ಪಾಕಿಸ್ತಾನದಲ್ಲಿಯೂ ಅಂತಹ ಉಗ್ರರನ್ನು ಯಮರಾಜನ ಬಳಿಗೆ ಕಳುಹಿಸುವ ಕೆಲಸವನ್ನು ಯಾವುದೋ ಕಾಣದ ಕೈಗಳು ಮಾಡುತ್ತಿದ್ದು, ಆ ಮೂಲಕ ಪಾಕಿಸ್ತಾನ ಮತ್ತು ಇತರ ಭಯೋತ್ಪಾದಕರ ನಿದ್ದೆಗೆಡಿಸುತ್ತಿದೆ ಎನ್ನುವುದು ಸತ್ಯ. ಹೇಳುವುದಾದರೆ ಭಾರತಕ್ಕೆ ಮೋಸ್ಟ್ ವಾಂಟೆಡ್, ವಾಂಟೆಡ್ ಲಿಸ್ಟ್‌ನಲ್ಲಿರುವ ಉಗ್ರರನ್ನು ಯಾರು, ಯಾವಾಗ, ಹೇಗೆ ಅಪಹರಣ ಮಾಡುತ್ತಾರೆ, ಎಲ್ಲಿ, ಹೇಗೆ ಕೊಂದು ಹಾಕುತ್ತಾರೆ ಎನ್ನುವುದೇ ಗೊತ್ತಾಗುತ್ತಿಲ್ಲ. ಇದನ್ನು ಪತ್ತೆ ಮಾಡುವುದೇ ದೊಡ್ಡ ಸವಾಲಾಗಿದ್ದು, ಇಂತಹ ಘಟನೆಗಳ ಬಗ್ಗೆ ಭಾರತ‌ ವಿರೋಧಿ ಕೆಲಸ ಮಾಡುವ ನೀಚರಿಗೆ ಆಶ್ರಯ ಕರುಣಿಸುವ ರಾಷ್ಟ್ರಗಳಿಗೆ ಇದು ದೊಡ್ಡ ತಲೆನೋವಾಗಿದೆ.

ಅಪರಿಚಿತರು ಪಾಕ್‌ನ ಬೇಹುಗಾರಿಕೆ ಸಂಸ್ಥೆಗೂ ಯಾವುದೇ ಜಾಡು ಹತ್ತದ ಹಾಗೆ ಉಗ್ರರನ್ನು ಕೊಂದು ಬಿಸಾಕುವ ಕೆಲಸ ನಡೆಸುತ್ತಿದ್ದಾರೆ. ಹೀಗೆ ಸಾವಿಗೆ ತುತ್ತಾಗುವವರಲ್ಲಿ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಭಖೋತ್ಪಾದಕರೇ ಹೆಚ್ಚು ಎನ್ನುವುದು ಇನ್ನೊಂದು ವಿಶೇಷ. ಈ ರಹಸ್ಯ ಬೇಧಿಸಲು ಪಾಕಿಸ್ತಾನ ಮತ್ತು ಅಂತಹ ಉಗ್ರರಿಗೆ ಬೆಂಬಲ ನೀಡುವ ಇತರರು ಪ್ರಯತ್ನ ನಡೆಸುತ್ತಿದ್ದರೂ, ಈ ಬಗ್ಗೆ ಯಾವುದೇ ಸುಳಿವು ಸಿಗದಿರುವುದು ಅವುಗಳ ನಿದ್ದೆಗೆಡಿಸಿದೆ. ಈ ಹತ್ಯೆಗಳ ಹಿಂದೆ ವೈರಿ ಬೇಹುಗಾರಿಕೆ ಸಂಸ್ಥೆ ಕೆಲಸ ಮಾಡಲು ಆರಂಭಿಸಿದೆ.

ಭಾರತಕ್ಕೆ ಬೇಕಾಗಿದ್ದ ಲಷ್ಕರ್ ಇ ತೈಬಾ ಉಗ್ರ ಸಂಘಟನೆಯ ಮುಖ್ಯಸ್ಥ ಖವಾಜಾ ಶಾಹಿದ್‌ನನ್ನು ಕೆಲವೇ ದಿನಗಳ ಹಿಂದೆ ಕಿಡ್ನಾಪ್ ಮಾಡಿ, ರುಂಡ ಕತ್ತರಿಸಿ ಹತ್ಯೆ ಮಾಡಲಾಗಿದೆ. ಈತ 2018 ರಲ್ಲಿ ಸುಂಜ್ವಾನ್ ಸೇನಾ ಶಿಬಿರದ ಮೇಲೆ ನಡೆದ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ಈ ಸೇನಾ ಶಿಬಿರದ ಮೇಲಿನ ದಾಳಿಯಲ್ಲಿ ಐವರು ಭಾರತೀಯ ಯೋಧರು ಹಪತಾತ್ಮರಾಗಿದ್ದರು. ಈ ಹತ್ಯೆ ನಡೆಸಿದವರು ಯಾರು?, ಇದರ ಹಿಂದೆ ಯಾರು ಕೆಲಸ ಮಾಡಿದ್ದಾರೆ ಎನ್ನುವ ವಿಷಯ ಇನ್ನೂ ನಿಗೂಢವಾಗಿಯೇ ಇದೆ. ಈತ ಎಲ್‌ಇಟಿಗೆ ಕಾಶ್ಮೀರ ಭಾಗದ ಯುವಕರ ನೇಮಕಾತಿ, ತರಬೇತಿ ಕೆಲಸಗಳನ್ನು ಮಾಡುವ ಮೂಲಕ ಭಾರತದ ವಿರುದ್ಧ ಕಾರ್ಯ ನಿರ್ವಹಿಸಿದ್ದ.

ಈತನ ಹತ್ಯೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದಿದ್ದು, ಹತ್ಯೆಗೂ ಮುನ್ನ ಈತನಿಗೆ ಸಾಕಷ್ಟು ಚಿತ್ರಹಿಂಸೆ ನೀಡಿದ ಕುರುಹುಗಳೂ ಪತ್ತೆಯಾಗಿವೆ. ಆತ‌ ಪಿಒಕೆಯ ಕಣಿವೆಯಲ್ಲಿ ವಾಸ್ತವ್ಯ ಇದ್ದು, ಯಾರು ಆತನನ್ನು ಅಪಹರಿಸಿ, ಕೊಂದಿದ್ದಾರೆ ಎನ್ನುವುದಕ್ಕೆ ಉತ್ತರವಿಲ್ಲ. ಈ ಸ್ಪಷ್ಟತೆ ಪಾಕಿಸ್ತಾನಕ್ಕೂ ಇಲ್ಲವಾಗಿದ್ದು, ಯಾವುದೇ ಸಂಘಟನೆ ಸಹ ಈ ಹತ್ಯೆಯ ಹೊಣೆ ಹೊತ್ತುಕೊಂಡಿಲ್ಲ.

ಅಂದ ಹಾಗೆ ಈತ ಭಾರತಕ್ಕೆ ಬೇಕಾದ ಉಗ್ರರ ಹತ್ಯೆಯ ಪಟ್ಚಿಯಲ್ಲಿ ಹದಿನೆಂಟನೆಯವ. ಭಾರತದ ವಿರುದ್ಧ ಇರುವ ಭಯೋತ್ಪಾದಕರನ್ನು ಕೊಲೆ ಮಾಡಲಾಗುತ್ತಿದ್ದು, ಇದರ ಹಿಂದೆ ಕಾರಿದ್ದಾರೆ ಎನ್ನುವುದೇ‌ ಯಕ್ಷ ಪ್ರಶ್ನೆಯಾಗಿದೆ. ಖಲೀಸ್ತಾನಿ ಭಯೋತ್ಪಾದಕರ ಹತ್ಯೆಯೂ ಬೇರೆ ದೇಶಗಳಲ್ಲಿ ಅಪರಿಚಿತರಿಂದ ನಡೆಯುತ್ತಿದೆ. ಈ ವರ್ಷದಲ್ಲಿ ಪಾಕಿಸ್ತಾನದ ನೆಲದಲ್ಲಿ ಭಾರತಕ್ಕೆ ಬೇಕಾದ 18 ಮಂದಿ ಭಯೋತ್ಪಾದಕರ ಹತ್ಯೆ ನಡೆದಿದೆ. ಈ ಹತ್ಯೆಯ ಹಿಂದಿನ ಕಾಣದ ಕೈಗಳ ಸುಳಿವು ಮಾತ್ರ ಈ ವರೆಗೂ ಅಲಭ್ಯ.

ಒಟ್ಟಿನಲ್ಲಿ ಭಾರತ ವಿರೋಧಿ ಚಟುವಟಿಕೆ ನಡೆಸಿ, ಪಾಕ್‌ನಲ್ಲಿ ಅಡಗಿಕೊಂಡಿದ್ದ ಉಗ್ರ ರಿಗೆ ತಕ್ಕ ಶಿಕ್ಷೆಯನ್ನು ಈ ಅಪರಿಚಿತ ಉಗ್ರ ಹಂತಕರು ಮಾಡುತ್ತಿದ್ದಾರೆ. ಇದರ ಹಿಂದೆ ಭಾರತದ ಯಾವುದೋ ಕಾಣದ ಶಕ್ತಿ ಕೆಲಸ ಮಾಡುತ್ತಿದೆಯೋ ಅಥವಾ ಪಾಕ್‌ನವರಿಂದಲೇ ಈ ಹತ್ಯೆ ನಡೆಯುತ್ತಿದೆಯೋ ಎನ್ನುವ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ. ಹತ್ಯೆ ಮಾಡುತ್ತಿರುವವರು ಯಾರೇ ಆಗಲಿ, ಅವರು ಒಳ್ಳೆಯ ಕೆಲಸಗಳನ್ನೇ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ಭಾರತದೆಲ್ಲೆಡೆ ವ್ಯಕ್ತವಾಗುತ್ತಿದೆ ಎನ್ನುವುದು ಸ್ಪಷ್ಟ. ಹಾಗೆಯೇ ಭಾರತದ ಮೋಸ್ಟ್ ವಾಂಟೆಡ್ ಉಗ್ರರು ಮತ್ತು ಅವರ ಸೇಫ್ ಝೋನ್ ಪಾಕಿಸ್ತಾನಕ್ಕೆ ಈ ಘಟನೆಗಳು ಚಳಿ ಹಿಡಿಸಿರುವುದಂತೂ ಸತ್ಯ.

Tags

Related Articles

Close