ಪ್ರಚಲಿತ

ಮೆಕ್ಕಾ – ವ್ಯಾಟಿಕನ್ ಸಿಟಿಯನ್ನೇ ಮೀರಿಸಲಿದೆ ಅಯೋಧ್ಯಾ ಧಾಮ: ಎರಡೇ ದಿನಕ್ಕೆ‌ ಹೊರಬಿತ್ತು ಸಮೀಕ್ಷೆ!

ಶ್ರೀರಾಮನಾಗಮನಕ್ಕೆ ಕಾಯುತ್ತಿದ್ದ ಅಯೋಧ್ಯೆ ಕೊನೆಗೂ ರಾಮಲಲ್ಲಾನ ಆಗಮನದೊಂದಿಗೆ ಶಾಪ ಮುಕ್ತವಾಗಿದೆ. ಅಯೋಧ್ಯೆಯಲ್ಲಿ ಮೊನ್ನೆಯಷ್ಟೇ ಪ್ರಭು ಶ್ರೀರಾಮಲಲ್ಲಾ ತನ್ನದೇ ಜನ್ಮಭೂಮಿಯಲ್ಲಿ ನಿರ್ಮಾಣ ಮಾಡಲಾದ ಸುಂದರ ಮಂದಿರದ ಒಳಗೆ ಮಂದಸ್ಮಿತನಾಗಿ ವಿರಾಜಮಾನನಾಗಿದ್ದಾನೆ. ಒಂದರ್ಥದಲ್ಲಿ ಪ್ರಭುವಿನ ಆಗಮನದ ಜೊತೆಗೆ ಆಯೋಧ್ಯೆಯ ಅದೃಷ್ಟವೇ ಸಕಾರಾತ್ಮಕವಾಗಿ ಬದಲಾಗಿದೆ ಎಂದರೂ ತಪ್ಪಾಗಲಾರದೇನೋ.

ಮಂದಿರ ಲೋಕಾರ್ಪಣೆಯಾದ ಮರುದಿನದಿಂದಲೇ ಅಯೋಧ್ಯೆಯ ರಾಮನನ್ನು ಕಾಣಲು ಸಾಗರೋಪಾದಿಯಾಗಿ ಭಕ್ತರು ದೇಶ, ವಿದೇಶಗಳಿಂದ ಆಗಮಿಸುತ್ತಿದ್ದಾರೆ. ವರದಿಗಳ ಪ್ರಕಾರ ಮುಂದಿನ ದಿನಗಳಲ್ಲಿ ಅಯೋಧ್ಯೆಗೆ ಆಗಮಿಸುವ ರಾತ್ರಿ ಗಳ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ. ಹಾಗೆಯೇ ಉತ್ತರ ಪ್ರದೇಶದ ಆರ್ಥಿಕತೆ ಸಹ ಒಂದು ಹೊಸ ಎತ್ತರವನ್ನು ಏರಲಿದೆ ಎಂದು ವರದಿಗಳು ಹೇಳಿವೆ. ಮುಖ್ಯವಾಗಿ ಅಯೋಧ್ಯೆಯು ಉತ್ತರ ಪ್ರದೇಶವನ್ನು ಒಂದು ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ ಎಂದೂ ನಂಬಲಾಗಿದೆ.

ಎಸ್‌ಬಿ‌ಐ ರಿಸರ್ಚ್ ಹೇಳುವಂತೆ 2024 – 25 ನೇ ಆರ್ಥಿಕ ವರ್ಷದಲ್ಲಿ ಪ್ರವಾಸೋದ್ಯಮ ಉಪಕ್ರಮಗಳು, ಅಯೋಧ್ಯೆಯ ಕಾರಣಕ್ಕಾಗಿ ಇಪ್ಪತೈದು ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಿಸುವ ಸಾಧ್ಯತೆ ಇದೆ. ಅಯೋಧ್ಯೆಯೇ ಇದರಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಶ್ರೀರಾಮ ಮಂದಿರಕ್ಕೆ ಭಾರತದಿಂದ ಮಾತ್ರವಲ್ಲ ಇಡೀ ವಿಶ್ವದಿಂದ ದಾಖಲೆಯ ಪ್ರಮಾಣದಲ್ಲಿ ಯಾತ್ರಿಗಳು ಬರುವ ಸಾಧ್ಯತೆ ಇದೆ‌. ಇದು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚು ಸಹಕಾರಿಯಾಗಲಿದೆ. ಇದರಿಂದ ರಾಜ್ಯ ನಾಲ್ಕು ಲಕ್ಷ ಕೋಟಿ ರೂ. ಗಳಷ್ಟು ಶ್ರೀಮಂತವಾಗಲಿದೆ ಎಂದೂ ವರದಿಗಳು ಅಭಿಪ್ರಾಯ ವ್ಯಕ್ತಪಡಿಸಿವೆ.

ರಾಮ ಮಂದಿರ ಪ್ರವಾಸಿಗರ ಹಾಟ್ ಸ್ಪಾಟ್ ಆಗಲಿದೆ‌‌. ಪ್ರತಿ ವರ್ಷ ಇಲ್ಲಿಗೆ ಸುಮಾರು ಐದು ಕೋಟಿ ಯಾತ್ರಿಗಳು ಆಗಮಿಸುವ ನಿರೀಕ್ಷೆ ಇದೆ. ಅಯೋಧ್ಯೆಯಲ್ಲಿ ಹೊಸ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಟೌನ್ ಶಿಪ್ ಮತ್ತು ರಸ್ತೆ ಸಂಪರ್ಕ, ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಹಲವಾರು ಹೊಟೇಲ್‌ಗಳು ರಾಜ್ಯದ ಅಭಿವೃದ್ಧಿಯ ಮುಖವನ್ನೇ ಬದಲಾಯಿಸಿವೆ ಎನ್ನಬಹುದು. ಮುಸಲ್ಮಾನರ ಮೆಕ್ಕಾ ಮತ್ತು ಕ್ರೈಸ್ತರ ವ್ಯಾಟಿಕನ್ ಸಿಟಿಯನ್ನು ಭಾರತದ ಹಿಂದೂಗಳ ಪೂಜ್ಯ ಸ್ಥಳ ಅಯೋಧ್ಯೆ ಭಕ್ತರ ಸಂಖ್ಯೆಯಲ್ಲಿ ಮೀರಿಸಲಿದೆ ಎಂದೂ ವರದಿಗಳು ತಿಳಿಸಿವೆ.

ಯಾತ್ರಿಗಗಳ ಸಂಖ್ಯೆ ಅಯೋಧ್ಯೆಗೆ ಬರುವಲ್ಲಿ ಹೊಸ ದಾಖಲೆ ಬರೆಯಲಿದ್ದು, ವಾರ್ಷಿಕ ಆದಾಯದ ಮೇಲೆಯೂ ಹೊಸ ದಾಖಲೆ ನಿರ್ಮಾಣವಾಗಲಿದೆ. ತಿರುಪತಿಯ ವೆಂಕಟರಮಣ ಕಾರಣಕ್ಕೆ ಆಂಧ್ರಪ್ರದೇಶ ರಾಜ್ಯವು ಸಾವಿರದ ಇನ್ನೂರು ಕೋಟಿ ರೂ. ಗಳ ಆದಾಯ ಗಳಿಸುತ್ತದೆ. ವೈಷ್ಣೋದೇವಿ ಯಾತ್ರೆಯಿಂದ ಆ ರಾಜ್ಯಕ್ಕೆ ಐನೂರು ಕೋಟಿ ರೂ. ಆದಾಯ ಬರುತ್ತದೆ. ಆಗ್ರಾ ತಾಜ್ ಮಹಲ್ ನೂರು ಕೋಟಿ ರೂ. ವಾರ್ಷಿಕ ಆದಾಯವನ್ನು ರಾಜ್ಯಕ್ಕೆ ನೀಡಿದರೆ, ಆಗ್ರಾ ಕೋಟೆ ಇಪ್ಪತ್ತೇಳು ಕೋಟಿ ರೂ. ವಾರ್ಷಿಕ ಆದಾಯ ನೀಡುತ್ತಿದೆ.

ಇನ್ನು ಮೆಕ್ಕಾಗೆ ಪ್ರತಿ ವರ್ಷ ಸುಮಾರು ಇಪ್ಪತ್ತು ಮಿಲಿಯನ್ ಜನರು ಭೇಟಿ ನೀಡುತ್ತಿದ್ದು, ಇದರಿಂದ ಸೌದಿ ಅರೇಬಿಯಾ ವಾರ್ಷಿಕ ಹನ್ನೆರಡು ಬಿಲಿಯನ್ ಡಾಲರ್ ಆದಾಯವನ್ನು ಗಳಿಸುತ್ತಿದೆ. ವ್ಯಾಟಿಕನ್‌ಸಿಟಿ ವಾರ್ಷಿಕವಾಗಿ ಒಂಬತ್ತು ಮಿಲಿಯನ್‌ ಜನರನ್ನು ಆಕರ್ಷಿಸಿ ಸುಮಾರು ಮುನ್ನೂರ ಹದಿನೈದು ಮಿಲಿಯನ್ ಆದಾಯ ಸಂಪಾದನೆ ಮಾಡುತ್ತದೆ.

ಅಯೋಧ್ಯೆಗೆ ಸಂಬಂಧಿಸಿದ ಹಾಗೆ ಮಾತನಾಡುವುದಾದರೆ ಪ್ರತಿ ವರ್ಷ ಹತ್ತು ಕೋಟಿಗೂ ಅಧಿಕ ಭಕ್ತರು ಭೇಟಿ ನೀಡುವ ಸಾಧ್ಯತೆ ಇದೆ. ಒಂದು ಅಂದಾಜಿನಂತೆ ಪ್ರಸ್ತುತ ದಿನಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಅಯೋಧ್ಯೆಗೆ ಆಗಮಿಸುತ್ತಿದ್ದು, ಇದು ಶೀಘ್ರದಲ್ಲೇ ಮೂರು ಲಕ್ಷಕ್ಕೆ ಏರಿಕೆಯಾಗುವ‌ ಸಾಧ್ಯತೆ ಇದೆ. ಅಯೋಧ್ಯೆಯಲ್ಲಿ ಪ್ರತಿಯೋರ್ವ‌ ಸುಮಾರು ಎರಡು ಸಾವಿರದ ಐನೂರು ರೂ. ಗಳನ್ನು ವ್ಯಯ ಮಾಡಿದರೂ ಸ್ಥಳೀಯ ಆರ್ಥಿಕತೆ ಇಪ್ಪತೈದು ಸಾವಿರ ಕೋಟಿ ಆಗಲಿದೆ.

ಹಾಗೆಯೇ ಅಯೋಧ್ಯೆಯ‌ ಹಾದಿಯಲ್ಲಿ ಕಾಶಿ ವಿಶ್ವನಾಥನ ಸನ್ನಿಧಾನ, ಮಥುರೆಯ ಬಂಕೆ ಬಿಹಾರಿ ದೇವಾಲಯಕ್ಕೂ ಭೇಟಿ ನೀಡಿದಲ್ಲಿ ವಾರಣಾಸಿ ಮತ್ತು ಮಥುರೆಯ ಆದಾಯ‌ ಸಹ‌ ವೃದ್ಧಿಯಾಗಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಅಯೋಧ್ಯೆ ಉತ್ತರ ಪ್ರದೇಶದ ಆರ್ಥಿಕ ಅಭಿವೃದ್ಧಿಯ ವಿಚಾರದಲ್ಲಿ ದೊಡ್ಡ ಮಟ್ಟದ ಕೊಡುಗೆ ನೀಡಲಿದೆ ಎನ್ನುವುದು ಸತ್ಯ. ಇದರಿಂದ ವಾರ್ಷಿಕವಾಗಿ ರಾಜ್ಯ ಸರಿ ಸುಮಾರು ಒಂದು ಲಕ್ಷ ಕೋಟಿ ರೂಪ ಆದಾಯವನ್ನು ಹೆಚ್ಚುವರಿಯಾಗಿ ಪಡೆಯಬಹುದು ಎನ್ನುವುದರಲ್ಲಿ ಸಂದೇಹವಿಲ್ಲ.

Tags

Related Articles

Close