ಪ್ರಚಲಿತ

ಕೈ ನಾಯಕರಿಗೆ ಕಮಲದ ಮೇಲೆ ಒಲವು?

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಸರಿಯಾಗಿಲ್ಲ. ಅನೇಕ ನಾಯಕರಿಗೆ ಕಾಂಗ್ರೆಸ್ ಮೇಲೆ ಅಸಮಾಧಾನ ಇದೆ ಎಂಬುದು ಆಗಾಗ್ಗೆ ಸಾಬೀತಾಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕಾಂಗ್ರೆಸ್ ಪಕ್ಷಕ್ಕೆ ಶಟರ್ ಎಳೆದು, ಮತ್ತೆ ಬಿಜೆಪಿಯತ್ತ ವಾಲಿದ್ದು ಎಲ್ಲರಿಗೂ ಗೊತ್ತು. ಜೊತೆಗೆ ಕಾಂಗ್ರೆಸ್‌ನ ಸಿದ್ದರಾಮಯ್ಯ ಬಣ ಮತ್ತು ಡಿಕೆಶಿ ಬಣದ ನಡುವಿನ ಮುಸುಕಿನ ಗುದ್ದಾಟ ಸಹ ಕರ್ನಾಟಕದ ಜನತೆ ಬಲ್ಲರು.

ಬಿಟ್ಟಿ ಭಾಗ್ಯ ಗಳನ್ನು ಘೋಷಿಸಿ, ಜನರಿಂದಲೇ ಹಣ ಪಡೆದು ಬಳಿಕ ಜನರಿಗೆಯೇ ಮಕ್ಮಲ್ ಟೋಪಿ ಹಾಕಿದ ಕಾಂಗ್ರೆಸ್ ಮೇಲೆ ಸಾರ್ವಜನಿಕರು ಬಿಡಿ ಸ್ವ ಪಕ್ಷೀಯರೇ ಗರಂ ಆಗಿದ್ದಾರೆ ಎನ್ನುವುದು ಸತ್ಯ. ಕಾಂಗ್ರೆಸ್ ಪಕ್ಷದ ಈ ಬೂಟಾಟಿಕೆ ಅತ್ತ ಉಗುಳಲೂ ಆಗದ, ಇತ್ತ ನುಂಗಲೂ ಆಗದ ಸ್ಥಿತಿಗೆ ಅದೇ ಪಕ್ಷದ ನಾಯಕರನ್ನು ತಂದು ನಿಲ್ಲಿಸಿರುವುದು ದುರಂತ.

ಇದೆಲ್ಲದರ ಬಳಿಕ ಈಗ ಮತ್ತೊಂದು ಬೆಳವಣಿಗೆ ನಡೆದಿದೆ. ಕಾಂಗ್ರೆಸ್ ನಾಯಕರು ತಮ್ಮ ಕಟ್ಟರ್ ವಿರೋಧ ಪಕ್ಷ ಬಿಜೆಪಿಯ ಅಭ್ಯರ್ಥಿಗೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಒಳಗೆ ಎಲ್ಲವೂ ಸರಿಯಾಗಿಲ್ಲ. ಹಲವು ಕೈ ನಾಯಕರಿಗೆ ಬಿಜೆಪಿಯ ಮೇಲೆ ಒಲವು ಮೂಡಿದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತಿದೆ‌.

ಹೌದು, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಂಸದ ಬಿ ವೈ ರಾಘವೇಂದ್ರ ಅವರಿಗೆ ಮತ ನೀಡಿ, ಅವರನ್ನು ಗೆಲ್ಲಿಸುವಂತೆ ಮತದಾರರಿಗೆ ಕರೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಶಾಮನೂರು ಶಿವಶಂಕರಪ್ಪ ಅವರು ಈ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆದಿದ್ದನ್ನು ಗಮನಿಸಿದ್ದೇನೆ. ಜಿಲ್ಲೆಗೆ ಉತ್ತಮ ಸಂಸದರನ್ನು ಆಯ್ಕೆ ಮಾಡಿದ್ದೀರಿ. ಮುಂದೆಯೂ ಇವರನ್ನೇ ಆಯ್ಕೆ ಮಾಡಬೇಕಿರುವುದು ಜನರ ಕರ್ತವ್ಯ. ಶಿವಮೊಗ್ಗದ ಇನ್ನಷ್ಟು ಅಭಿವೃದ್ಧಿಗಾಗಿ ಇವರನ್ನೇ ಮತ್ತೆ ಗೆಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಜನರು ಭಾಗ್ಯವಂತರು. ಬಿ ವೈ‌ ವಿಜಯೇಂದ್ರ ಅವರಂತಹ ಲೋಕಸಭಾ ಸದಸ್ಯರನ್ನು ಪಡೆದ ನೀವೇ ಧನ್ಯರು. ಜಿಲ್ಲೆಯ ಆಗಬೇಕಾದ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುವತ್ತ ಅವರು ಚಿತ್ತ ನೆಟ್ಟಿದ್ದಾರೆ. ಜನರಿಗೆ ಆಗಬೇಕಾಗಿರುವುದು ಅಭಿವೃದ್ಧಿ ಕಾರ್ಯ. ಜನರ ಆಶಯಕ್ಕೆ ಅನುಗುಣವಾಗಿ ಕಾರ್ಯ ನಡೆಯಬೇಕು. ಅದಕ್ಕಾಗಿ ಇಂತಹ ಸಂಸದನ ಆಯ್ಕೆಯಾಗಬೇಕು ಎಂದು ಅವರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ನಾಯಕರೇ‌ ತಮ್ಮ ಪಕ್ಷದವರನ್ನು ಬದಿಗೆ ತಳ್ಳಿ ಬಿಜೆಪಿ ಪರ ಪ್ರಚಾರ ಮಾಡುತ್ತಿರುವುದು, ಕೈ ಪಕ್ಷದೊಳಗಿನ ಆಂತರಿಕ ಸಮಸ್ಯೆಗೆ ಹಿಡಿದ ಕೈಗನ್ನಡಿಯಾಗಿದೆ.

Tags

Related Articles

Close