ಪ್ರಚಲಿತ

ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬಿಜೆಪಿಗೆ ಬಲ ತುಂಬಿದ ಕೈ ನಾಯಕರು..! ಹೈ.ಕರ್ನಾಟಕದ ಕಾಂಗ್ರೆಸ್ ಕೋಟೆ ಧ್ವಂಸ.?!

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ‌. ಎಲ್ಲಾ ರಾಜಕೀಯ ಪಕ್ಷಗಳು ಭಾರೀ ಪೈಪೋಟಿಗೆ ಇಳಿದಿದ್ದು, ಕರ್ನಾಟಕವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ರಾಜ್ಯಭಾರ ನಡೆಸುವ ಕಾತರದಲ್ಲಿದ್ದಾರೆ. ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ನಲ್ಲಿ ಭಾರೀ ಕೋಲಾಹಲ ಎದ್ದಿದೆ. ಟಿಕೆಟ್ ಹಂಚಿಕೆ ವಿಚಾರವಾಗಿ ಸಿದ್ದರಾಮಯ್ಯನವರ ವಿರುದ್ಧ ಮುನಿಸಿಕೊಂಡಿರುವ ಕಾಂಗ್ರೆಸ್ ಪ್ರಭಾವಿ ನಾಯಕರ ದಂಡೇ ಪಕ್ಷ ತೊರೆದು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವದ ಹವಾ ಜೋರಾಗಿದ್ದು, ಕಾಂಗ್ರೆಸ್ ಗೆ ಸೋಲಿನ ಭೀತಿ ಮತ್ತಷ್ಟು ಹೆಚ್ಚಿದೆ.

ಕಮಲ ಹಿಡಿದ ಛಲವಾದಿ..!

ಒಂದೆಡೆ ಕಾಂಗ್ರೆಸ್ ನ ಆಡಳಿತಕ್ಕೆ ಬೇಸತ್ತ ರಾಜ್ಯದ ಜನತೆ ಹೊಸ ಸರಕಾರಕ್ಕಾಗಿ ಕಾಯುತ್ತಿದ್ದರೆ, ಇತ್ತ ಸ್ವತಃ ಕಾಂಗ್ರೆಸ್ ನಾಯಕರೇ ಪಕ್ಷ ತೊರೆದು ಬಿಜೆಪಿಯ ತೆಕ್ಕೆಗೆ ಜಾರುತ್ತಿದ್ದಾರೆ. ಕಾಂಗ್ರೆಸ್ ನ ಪ್ರಭಾವಿ ನಾಯಕ , ಈ ಬಾರಿಯ ಟಿಕೆಟ್ ಆಕಾಂಕ್ಷೆಯಾಗಿದ್ದ ಛಲವಾದಿ ನಾರಾಯಣ ಸ್ವಾಮಿ ಇಂದು ಯಡಿಯೂರಪ್ಪನವರ ಸಮ್ಮುಖದಲ್ಲೇ ಕಮಲ ಪಾಲಾಯಕ್ಕೆ ಸೇರ್ಪಡೆಯಾದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನವರ ಮನೆಯಲ್ಲಿ ಇಂದು ಕಾಂಗ್ರೆಸ್ ನ ಇಬ್ಬರು ಪ್ರಭಾವಿ ಮುಖಂಡರು ಬಿಜೆಪಿ ಸೇರ್ಪಡೆಯಾದರು. ಪಕ್ಷದ ಶಾಲು ಹೊದಿಸಿ ಬಿಜೆಪಿಗೆ ಬರಮಾಡಿಕೊಂಡ ಯಡಿಯೂರಪ್ಪ, ಕಾಂಗ್ರೆಸ್ ಗೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದೇ ಬಹಳ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದರು. ಯಾಕೆಂದರೆ ಕಾಂಗ್ರೆಸ್ ಈಗಾಗಲೇ ದೇಶಾದ್ಯಂತ ತನ್ನ ಬಲ ಕಳೆದುಕೊಂಡಿದ್ದು , ಕರ್ನಾಟಕದಲ್ಲಿ ಮತ್ತೆ ಅಧಿಕಾರ ಏರಲು ಪ್ರಯತ್ನಿಸುತ್ತಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಅಲೆ ಇರುವುದರಿಂದ ಸೋಲಿನ ಭೀತಿ ಹುಟ್ಟಿದೆ. ಇತ್ತ ಸ್ವತಃ ಪಕ್ಷದ ಮುಖಂಡರೇ ರಾಜೀನಾಮೆ ನೀಡಿ ಬೇರೆ ಪಕ್ಷದ ಕೈ ಹಿಡಿಯುತ್ತಿರುವುದರಿಂದ ಕಾಂಗ್ರೆಸ್ ಏನೂ ಮಾಡಲಾಗದ ಸ್ಥಿತಿಗೆ ಬಂದು ತಲುಪಿದೆ.!

ಕೋಟಿ ಕೋಟಿಗೆ ಟಿಕೆಟ್ ಸೇಲ್..!

ಟಿಕೆಟ್ ಗಾಗಿ ಆಕಾಂಕ್ಷೆಗಳು ಪೈಪೋಟಿ ನಡೆಸುವುದು ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಸಾಮಾನ್ಯ. ಆದರೆ ಕಾಂಗ್ರೆಸ್ ನಲ್ಲಿ ಕೋಟಿ ಕೋಟಿ ಹಣ ನೀಡಿದವರಿಗೆ ಟಿಕೆಟ್ ಸೇಲಾಗುತ್ತಿದೆ ಎಂದರೆ ಆಶ್ಚರ್ಯವಾಗಬಹುದು. ಆದರೆ ಇದನ್ನು ಒಪ್ಪಿಕೊಳ್ಳಲೇಬೇಕು. ಯಾಕೆಂದರೆ ಈ ವಿಚಾರ ಹೇಳಿಕೊಂಡಿರುವುದು ಸ್ವತಃ ಕಾಂಗ್ರೆಸ್ ನಿಂದ ಬಿಜೆಪಿ ಸೇರ್ಪಡೆಗೊಂಡ ಛಲವಾದಿ ನಾರಾಯಣ ಸ್ವಾಮಿ. ಕಾಂಗ್ರೆಸ್ ನಿಂದ ಟಿಕೆಟ್ ಪಡೆಯಬೇಕಾದರೆ ಐದು ಕೋಟಿ ಹಣ ನೀಡಬೇಕು. ಇಲ್ಲವಾದಲ್ಲಿ ಸಿಎಂ ರ ಆಪ್ತವಲಯದಲ್ಲಿ ಕಾಣಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ನ ನೀತಿಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಅದೇ ರೀತಿ ಕಾಂಗ್ರೆಸ್ ನ ಮತ್ತೊಬ್ಬ ನಾಯಕ ಗೋಪಾಲಕೃಷ್ಣ ಕೂಡಾ ಯಡಿಯೂರಪ್ಪ ನವರ ಸಮ್ಮುಖದಲ್ಲೇ ಬಿಜೆಪಿಗೆ ಸೇರ್ಪಡೆಯಾದರು. ಕಾಂಗ್ರೆಸ್ ನಿಂದ ಸತತ ೫ ಬಾರಿ ಗೆದ್ದು ಶಾಸಕರಾದ ಶ್ರೀ ಎನ್.ವೈ. ಗೋಪಾಲಕೃಷ್ಣ ಅವರು ಕೂಡಾ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದು, ಕಾಂಗ್ರೆಸ್ ನಿಂದ ಪ್ರಭಾವಿ ನಾಯಕರ ಸಾಲೇ ಹೊರಟು ನಿಂತಿದೆ.

ಮಾಜಿ ಮುಖ್ಯಮಂತ್ರಿ , ಚಿಕ್ಕಬಳ್ಳಾಪುರ ಜಿಲ್ಲೆಯ ಸಂಸದ ಎಂ ವೀರಪ್ಪ ಮೊಯ್ಲಿ ಅವರು ಈ ಟಿಕೆಟ್ ಸೇಲ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ನಾರಾಯಣ ಸ್ವಾಮಿ, ಕಾಂಗ್ರೆಸ್ ನಲ್ಲಿ ಪ್ರಾಮಾಣಿಕರಿಗೆ ಯಾವುದೇ ಬೆಲೆ ಇಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.!

ಈಗಾಗಲೇ ಕಾಂಗ್ರೆಸ್ ನಿಂದ ಮುಖಂಡರು, ಯುವ ನಾಯಕರು , ಸಚಿವರು , ಶಾಸಕರು ಸೇರಿದಂತೆ ಹಲವಾರು ಕಾಂಗ್ರೆಸಿಗರು ಬಿಜೆಪಿಗೆ ಸೇರ್ಪಡೆಯಾಗಿದ್ದು, ಪ್ರಭಾವಿ ನಾಯಕರ ದಂಢೇ ಬಿಜೆಪಿ ಪಾಲಾಗುತ್ತಿದೆ. ಇನ್ನೇನಿದ್ದರು ಕಾಂಗ್ರೆಸ್ ಗೆ ಸೋಲಿನ ಚಿತ್ರಣ ಕಣ್ಣ ಮುಂದೆ ಕಾಣಿಸುತ್ತಿರಬಹುದಲ್ಲವೇ..?!

–ಅರ್ಜುನ್

 

Tags

Related Articles

Close