ಪ್ರಚಲಿತ

ಅಜಾತಶತ್ರುಗೆ ನಮೋ ಎಂದ ದೇವೇಗೌಡರು..! ರಾಜಕೀಯ ದಿಗ್ಗಜರ ನಡುವಿನ ಒಂದು ನೋಟ..!

ರಾಜಕೀಯ ಎಂದರೆ ಕೇವಲ ಒಬ್ಬರಿಗೊಬ್ಬರು ದೂರಿಕೊಂಡು, ದ್ವೇಷದಿಂದಲೇ ಇರಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅಂದುಕೊಂಡರೆ ಅದು ನಮ್ಮ ತಪ್ಪು ಕಲ್ಪನೆ. ಯಾಕೆಂದರೆ ರಾಜಕೀಯ ಪಕ್ಷಗಳು ನೂರಾರಿರಬಹುದು, ಆದರೆ ಮಾನವೀಯತೆಯ ನೆಲೆಯಲ್ಲಿ ಸಾಗಿದರೆ ಪ್ರತಿಯೊಬ್ಬರೂ ಪರಸ್ಪರ ಸ್ನೇಹ ಸಂಬಂಧ ಬೆಳೆಸುವಂತಾಗುತ್ತದೆ. ಎಲ್ಲವನ್ನೂ ರಾಜಕೀಯವಾಗಿಯೇ ನೋಡಿದರೆ ದ್ವೇಷವೇ ಹುಟ್ಟಿಕೊಳ್ಳುತ್ತದೆ, ಆದರೆ ಮನುಷ್ಯತ್ವ ಒಂದಿದ್ದರೆ ರಾಜಕೀಯ ದ್ವೇಷ ಮರೆಯಾಗಿ ಒಳ್ಳೆಯ ಒಂದು ಸಂಬಂಧ ಹುಟ್ಟಿಕೊಳ್ಳುತ್ತದೆ. ಇದಿಷ್ಟೂ ಈಗೇಕೆ ಹೇಳುತ್ತಿದ್ದೇನೆ ಎಂದರೆ ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಎಂದರೆ ಕಚ್ಚಾಟವೇ ಕಣ್ಣೆದುರು ಬರುತ್ತದೆ. ಇಂತಹ ಸ್ಥಿತಿಯಲ್ಲೂ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಮತ್ತು ಜೆಡಿಎಸ್‌ ವರಿಷ್ಠ ದೇವೇಗೌಡರ ನಡುವಿನ ಸಂಬಂಧ ಯಾವ ರೀತಿ ಗಟ್ಟಿಯಾಗಿದೆ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ.!

ಅಟಲ್ ಬಿಹಾರಿ ವಾಜಪೇಯಿ ಅವರು ಸದ್ಯ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಡೀ ದೇಶವೇ ವಾಜಪೇಯಿ ಅವರ ಚೇತರಿಕೆಗಾಗಿ ಪ್ರಾರ್ಥಿಸುವಂತಾಗಿದೆ. ಯಾಕೆಂದರೆ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಯಾವುದೇ ದ್ವೇಷದ ರಾಜಕಾರಣ ಮಾಡಿದವರಲ್ಲ. ತನ್ನ ಅಧಿಕಾರದ ಅವಧಿಯಲ್ಲಿ ಇಡೀ ದೇಶವೇ ಮೆಚ್ಚುವಂತಹ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಆದ್ದರಿಂದಲೇ ಎಲ್ಲಾ ಪಕ್ಷಗಳು ವಾಜಪೇಯಿ ಅವರಿಗೆ ವಿಶೇಷ ಗೌರವ ಇಂದಿಗೂ ನೀಡುತ್ತದೆ. ಆದರೆ ೯೩ ವಯಸ್ಸಿನ ವಾಜಪೇಯಿ ಅನಾರೋಗ್ಯದ ಕಾರಣದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ದೇಶದ ರಾಜಕೀಯ ಮುಖಂಡರು, ಗಣ್ಯರೆಲ್ಲಾ ಸಾಲು ಸಾಲಾಗಿ ವಾಜಪೇಯಿ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ತೆರಳಿದ್ದರು. ಎಲ್ಲರ ಮಧ್ಯೆ ವಿಶೇಷವಾಗಿ ಕಂಡುಬಂದವರು ಮಾಜಿ ಪ್ರಧಾನಿ ,ಜೆಡಿಎಸ್‌ ವರಿಷ್ಠ ಎಚ್ ಡಿ ದೇವೇಗೌಡರು.!

Related image

ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆ ನಿಕಟ ಸಂಪರ್ಕ..!

ದೇವೇಗೌಡರು ಮಾಜಿ ಪ್ರಧಾನಿಯಾಗಿದ್ದು, ಈಗಲೂ ರಾಷ್ಟ್ರೀಯ ನಾಯಕರ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾರೆ. ಯಾಕೆಂದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇವೇಗೌಡರು ದೆಹಲಿಗೆ ತೆರಳಿ ಭೇಟಿ ಮಾಡಿ , ಮಾತುಕತೆ ನಡೆಸಿದ್ದರು. ಇದಾದ ನಂತರ ರಾಜ್ಯಕ್ಕೆ ಬಂದ ದೇವೇಗೌಡರು ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದರು‌. ಇದರಿಂದ ಸ್ವತಃ ಜೆಡಿಎಸ್‌‌ಗೆ ಇರಿಸು ಮುನಿಸು ಉಂಟಾಗಿತ್ತು, ಆದರೂ ದೇವೇಗೌಡರ ವಿರುದ್ಧ ಯಾರೂ ಧ್ವನಿಎತ್ತಲಿಲ್ಲ. ಇದೀಗ ಅನಾರೋಗ್ಯದಿಂದ ಇರುವ ವಾಜಪೇಯಿ ಅವರನ್ನೂ ಭೇಟಿಯಾಗಲು ದೆಹಲಿಗೆ ತೆರಳಿದ ದೇವೇಗೌಡರು ಮತ್ತೊಮ್ಮೆ ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ಪ್ರದರ್ಶಿಸಿದ್ದಾರೆ.!

ಅಟಲ್ ಬಿಹಾರಿ ವಾಜಪೇಯಿ ಅವರನ್ನು ದ್ವೇಶಿಸುವವರು ಯಾರೂ ಇಲ್ಲ, ಯಾಕೆಂದರೆ ಎಲ್ಲಾ ಪಕ್ಷಗಳು ಹಾಡಿಹೊಗಳುವಂತೆ ಕೆಲಸ ಮಾಡಿದ್ದರು ಈ ಅಜಾತಶತ್ರು. ಆದ್ದರಿಂದಲೇ ರಾಜಕೀಯದಲ್ಲಿ ವಾಜಪೇಯಿ ರೀತಿ ಬೆಳೆಯಲು ಎಲ್ಲರೂ ಪ್ರಯತ್ನಿಸುತ್ತಾರೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಾಜಪೇಯಿ ಅವರ ಆರೋಗ್ಯ ವಿಚಾರಿಸಲು ತೆರಳಿದ ದೇವೇಗೌಡರು ಮತ್ತೊಮ್ಮೆ ತಮಗೂ ಬಿಜೆಪಿ ನಾಯಕರಿಗೂ ಇರುವ ಬಾಂಧವ್ಯವನ್ನು ಗಟ್ಟಿಗೊಳಿಸಲು ಪ್ರಯತ್ನಿಸಿದ್ದಾರೆ.!

ಆಸ್ಪತ್ರೆಗೆ ಬಂತು ಗಣ್ಯರ ದಂಡು..!

ವಾಜಪೇಯಿ ಅವರು ಆಸ್ಪತ್ರೆ ಸೇರುತ್ತಿದ್ದಂತೆ ದೇಶಾದ್ಯಂತ ಆತಂಕ ವ್ಯಕ್ತವಾಗಿತ್ತು. ಯಾಕೆಂದರೆ ವಾಜಪೇಯಿ ಅಂದರೆ ಯಾರೂ ದ್ವೇಷಿಸುವ ವ್ಯಕ್ತಿಯಲ್ಲ. ಆದ್ದರಿಂದಲೇ ವಾಜಪೇಯಿ ಅವರ ಆರೋಗ್ಯ ವಿಚಾರಿಸಲು ಇಡೀ ದೇಶದ ಗಣ್ಯರ ದಂಡೇ ಆಸ್ಪತ್ರೆಗೆ ಬಂದಿದೆ. ಬಿಜೆಪಿ ಮಾತ್ರವಲ್ಲದೆ, ಕಾಂಗ್ರೆಸ್ ,ಶಿವಸೇನೆ ಮತ್ತು ಇನ್ನಿತರ ಎಲ್ಲಾ ಪಕ್ಷಗಳ ಮುಖಂಡರೂ ಕೂಡ ಆಸ್ಪತ್ರೆಗೆ ಬೇಟಿ ನೀಡಿದ್ದಾರೆ. ದೇವೇಗೌಡರು ಕೂಡ ವಾಜಪೇಯಿ ಅವರನ್ನು ನೋಡುವುದಕ್ಕಾಗಿ ದೆಹಲಿಗೆ ತೆರಳಿದ್ದು, ವಾಜಪೇಯಿ ಅವರ ಆರೋಗ್ಯ ವಿಚಾರಿಸಿದ್ದಾರೆ.!

ಆದ್ದರಿಂದ ರಾಜಕೀಯದಲ್ಲಿ ಕೇವಲ ದ್ವೇಷ ಮಾತ್ರವಲ್ಲ, ಉತ್ತಮ ರೀತಿಯ ಸ್ನೇಹ ಸಂಬಂಧ ಕೂಡ ಬೆಳೆಸಬಹುದು ಎಂಬುದು ವಾಜಪೇಯಿ ಅವರನ್ನು ಬೇಟಿ ಮಾಡಲು ಹೋದ ದೇವೇಗೌಡರಿಂದ ಪ್ರದರ್ಶನವಾಗಿದೆ..!

–ಅರ್ಜುನ್

Tags

Related Articles

Close