ಪ್ರಚಲಿತ

ಶ್ರೀರಾಮಾಯಣದಲ್ಲಿ ಉಲ್ಲೇಖಗೊಂಡ ನಿಗೂಢ ಸ್ಥಳವಾದ `ಋಕ್ಷಬಿಲ’ ಇಂದಿಗೂ ಹಾಗೆಯೇ ಇದೆಯೇ? ಋಕ್ಷಬಿಲದೊಳಗಿನ ನಿಗೂಢ ರಹಸ್ಯವೇನು ಗೊತ್ತೇ?

ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋಗಿದ್ದ ಸುಳಿವು ಸುಗ್ರೀವನ ಕಪಿಸೇನೆಗೆ ಲಭಿಸಿದ್ದರೂ ಸೀತೆಯನ್ನು ಆತ ಎಲ್ಲಿ ಅಡಗಿಸಿದ್ದ ಎನ್ನುವುದು ಗೊತ್ತೇ ಇರಲಿಲ್ಲ. ಒಂದು ತಿಂಗಳ ಅವಧಿಯೊಳಗಡೆ ಸೀತೆ ಎಲ್ಲಿದ್ದಾಳೆ ಎಂಬುವುದನ್ನು ಪತ್ತೆಹಚ್ಚಿ ಕೊಡಬೇಕು ಎಂದು ವಾನರ ರಾಜ ಸುಗ್ರೀವನು ಆದೇಶ ನೀಡಿದ್ದನು. ಆದರೆ ಒಂದು ತಿಂಗಳ ಅವಧಿ ಹತ್ತಿರ ಬರುತ್ತಿವುದನ್ನು ಮನಗಂಡ ಕಪಿಸೇನೆ ತೀವ್ರವಾಗಿ ನೊಂದಿತು. ತಾವು ಸೀತೆ ಇರುವ ಜಾಗವನ್ನು ಹುಡುಕದೇ ಇದ್ದರೆ ಕೋಪಿಷ್ಟನಾದ ಸುಗ್ರೀವ ರಾಜನು ನಮಗೆ ದಂಡನೆ ವಿಧಿಸಬಹುದು, ಪ್ರಭಾವಶಾಲಿಯಾದ ಶ್ರೀರಾಮನಿಗೂ ಕಪಿಸೇನೆ ಹೆದರಿ, ಕೊನೆಗೆ ಹಠದಿಂದ ಬಿಡದೆ ಹುಡುಕೋಣ, ಗೆದ್ದರೂ ಗೆಲ್ಲಬಹುದು ಎಂದು ಇನ್ನೊಮ್ಮೆ ಹುಡುಕಲು ಆರಂಭಿಸಿದರು.

ಅವರು ರಜತಪರ್ವತದಲ್ಲಿ ಹುಡುಕಲಾರಂಭಿಸಿದರು. ಅದು ಬಿಳುಪಾದ ಪರ್ವತವಾಗಿದ್ದು ಅದರ ಬುಡದಿಂದ ತುದಿಯವರೆಗೆ ಹುಡುಕಲಾರಂಭಿಸಿದರು. ಆ ಬಳಿಕ ವಿಂಧ್ಯ ಪರ್ವತವನ್ನು ಜಾಲಾಡಿದರು. ಎಲ್ಲಾ ಮುಗಿದಾಗ ಸುಗ್ರೀವ ನೀಡಿದ್ದ ಒಂದು ತಿಂಗಳ ಗಡುವು ಮುಗಿದಾಗಿತ್ತು. ಆದರೂ ಮತ್ತೆ ಮತ್ತೆ ಇದ್ದಬಿದ್ದ ಎಲ್ಲಾ ಗುಹೆಗಳನ್ನು ಬಿಡದೆ ಹುಡುಕಲಾರಂಭಿಸಿದರು. ಹಸಿವು, ನೀರಡಿಕೆಗಳಿಂದ ಬಳಲಿದ ಕಪಿಸೇನೆ ಪ್ರಾಣ ಉಳಿಸಿಕೊಳ್ಳಲು ನೀರಾದರೂ ಸಿಗುವುದೇ ಎಂದು ಹುಡುಕಲಾರಂಭಿಸಿದರು. ಆದರೆ ಅಲ್ಲೊಂದು ಅಚ್ಚರಿ ಕಾದಿತ್ತು. ದೂರದಲ್ಲಿ ನೋಡಿದಾಗ ಒಂದು ನಿಗೂಢವಾಗಿರುವ ಬಿಲವೊಂದು ಕಾಣಿಸಿತು.

ಆ ಬಿಲದ ಹೆಸರು ಋಕ್ಷಬಿಲ!

ಅದರ ದ್ವಾರವು ಮರಬಳ್ಳಿಗಳಿಂದ ಮುಚ್ಚಿಹೋಗಿತ್ತು. ಅಲ್ಲೇ ನಿಂತು ಏನು ಮಾಡುವುದು ಎಂದು ಯೋಚಿಸಿದಾಗ ಕ್ರೌಂಚ, ಹಂಸ, ಸಾರಸ ಮುಂತಾದ ಪಕ್ಷಿಗಳು ಅಲ್ಲಿಂದ ಹಾರಿ ಹೊರಗಡೆ ಬರುತ್ತಿರುವುದನ್ನು ಕಂಡರು. ನೀರಿನ ಬಿಂದುಗಳು ತಾವರೆ ಹೂವಿನಲ್ಲಿ ಅಂಟಿಕೊಂಡು ಕೆಂಪಾಗಿ ಕಾಣುತ್ತಿತ್ತು. ಅದರಿಂದ ಮೋಹಕವಾದ ಪರಿಮಳವು ಎಲ್ಲೆಡೆ ಹರಡಿತ್ತು. ಆದರೆ ಆ ಬಿಲವು ನಿಗೂಢವೂ, ಘೋರವಾಗಿಯೂ ಇದ್ದುದರಿಂದ ಅದರ ಒಳಗಡೆ ಹೋಗುವಂತಿರಲಿಲ್ಲ. ಹಸಿವಿನಿಂದ ಬಳಲಿದ್ದ ಅವರಿಗೆ ಹನುಮಂತನು, `ವ್ಯರ್ಥವಾದ ಹುಡುಕಾಟದಿಂದ ನಾವೆಲ್ಲಾ ಬಳಲಿದ್ದೇವೆ. ಈ ಬಿಲದೊಳಗಡೆ ನೀರಿರುವುದು ಜಲಚರ ಪಕ್ಷಿಗಳಿಂದ ಗೊತ್ತಾಗುತ್ತದೆ. ಈ ಬಿಲದ ದ್ವಾರದಲ್ಲಿ ಹಚ್ಚಹಸುರಾದ ಮರಗಳು ಬೆಳೆದುನಿಂತಿರುವುದು ಕಾಣಿಸುತ್ತಿದೆ. ಆದ್ದರಿಂದ ಹೇಗಾದರೂ ಮಾಡಿ ಈ ಬಿಲದೊಳಗಡೆ ಪ್ರವೇಶಿಸೋಣ’ ಎಂದು ತಿಳಿಸಿದನು.

ಒಳಗಡೆ ಗವ್ ಎನ್ನುವ ಕತ್ತಲೆ. ಯಾರಿಗೂ ಏನೂ ಕಾಣಿಸುತ್ತಿರಲಿಲ್ಲ. ವಾನರೆಲ್ಲರೂ ಒಬ್ಬರನೊಬ್ಬರು ಕೈಯ್ಯನ್ನು ಸರಪಳಿಯಾಗಿ ಹಿಡಿದು ತಡಕಾಡುತ್ತಾ ಹೆಜ್ಜೆಯ ಮೇಲೆ ಹೆಜ್ಜೆನ್ನಿಟ್ಟು ಮುಂದುವರಿಯಲಾರಂಭಿಸಿದರು. ಸುಮಾರು ಒಂದು ಯೋಜನದಷ್ಟು ನಡೆದಾಗ ಆ ಪ್ರದೇಶ ರಮ್ಯರಮಣೀಯವಾಗಿರುವುದು, ದಿವ್ಯವಾದ ಬೆಳಕಿನಿಂದ ಹೊಳೆಯುತ್ತಿರುವುದು ಕಾಣಿಸಿತು. ವಿವರಿಸಲೂ ಸಾಧ್ಯವಾಗದ ರೀತಿಯ ಸ್ವರ್ಗೀಯ ರೀತಿಯಲ್ಲಿರುವ ಸುಂದರವಾದ ಉದ್ಯಾನವನ್ನು ಕಂಡು ಎಲ್ಲರೂ ಮೈಮರೆತರು. ಪುಷ್ಪಭರಿತವಾದ, ಫಲಭರಿತವಾದ ಸುಂದರವಾದ ವೃಕ್ಷಗಳು ಬಂಗಾರದ ಪ್ರಕಾಶದಿಂದ ಹೊಳೆಯುವ ಪ್ರದೇಶವು ಬೇರೊಂದು ಲೋಕವನ್ನೇ ನೆನಪಿಸುವಂತಿತ್ತು.

ಹವಳದ ಮಣಿಗಳಂತೆ ಹೊಳೆಯುವ ಪುಷ್ಫಗಳು ಮಕರಂದವನ್ನು ಹೀರುವ ಚಿನ್ನದಂತೆ ಹೊಳೆಯುವ ದುಂಬಿಗಳು, ರತ್ನಪ್ರಕಾಶವುಳ್ಳ ಹೊಳೆಯುವ ಶುಭ್ರನೀರಿನ ಕೊಳಗಳು, ಅದರಲ್ಲಿ ಕೆಂಪಾಗಿ ಹೊಳೆಯುವ ತಾವರೆಗಳು, ಸುವರ್ಣ ವರ್ಣದ ಮೀನುಗಳು, ಬೃಹದಾಕಾರದ ಆಮೆಗಳು, ಬೆಳ್ಳಿ ಬಂಗಾರದಿಂದ ನಿರ್ಮಿತವಾಗಿರುವಂಥಾ ಸುಂದರವಾದ ಗೃಹಗಳು, ಅವುಗಳಿಗೆ ಮುತ್ತಿನ ಗೊಂಚಲುಗಳಿಂದ ಅಲಂಕೃತವಾದ ಚಿನ್ನದ ಕಿಟಕಿಗಳು, ವಜ್ರ ವೈಢೂರ್ಯಗಳಿಂದ ಭೂಷಿತವಾದ ಬಾಗಿಲುಗಳು, ರತ್ನಖಚಿತವಾದ ಮಂಚಗಳು, ಪೀಠಗಳು, ಅವುಗಳ ಮೇಲೆ ಸುಗಂಧ ದ್ರವ್ಯಗಳು, ಶುಚಿರುಚಿಯಾದ ಖಾದ್ಯಗಳು, ಕಂದಮೂಲ ಫಲಗಳು, ಬಗೆಬಗೆಯ ಪರಿಮಳಯುಕ್ತ ಪೇಯಗಳು, ಹೊಚ್ಚಹೊಸ ಜೇನು ತುಂಬಿದ ಪಾತ್ರೆಗಳು, ಜೊತೆಗೆ ದಿವ್ಯವಾದ ವಸ್ತ್ರಗಳ ರಾಶಿ, ಬೆಂಕಿಯ ಜ್ವಾಲೆಯಂತೆ ಹೊಳೆಯುವ ಚಿನ್ನದ ಇಟ್ಟಿಗೆಗಳು ತುಂಬಿದ್ದವು. ಇದನ್ನು ನೋಡಿ ಕಪಿವೀರರೆಲ್ಲಾ ಅಚ್ಚರಿಯಿಂದ ಅವಲೋಕಿಸುತ್ತಿದ್ದರು.

ಇದರ ನಡುವೆ ನಾರುಮುಡಿ, ಕೃಷ್ಣಾಜಿನಗಳನ್ನು ಇಟ್ಟು ತಪೋನಿರತಳಾದ ಸ್ತ್ರೀಯೋರ್ವಳನ್ನು ಕಂಡರು. ಅವಳ ತೇಜಸ್ಸನ್ನು ನೋಡಿ ಎಲ್ಲರೋ ಒಮ್ಮೆಲೆ ಸ್ಥಬ್ದರಾಗಿ ನಿಂತಿದ್ದರು. ಇವರ ಪೈಕಿ ಹನುಮಂತನೊಬ್ಬನು ಧೈರ್ಯದಿಂದ ಮುಂದೆ ಬಂದು ಆಕೆಯ ಮುಂದೆ ಮಂಡಿಯೂರಿ ಕೈಮುಗಿದು ನಿಂತನು. `ದೇವಿ ನೀನ್ಯಾರು? ಈ ಭವನವೂ ಬಿಲವೂ ಯಾರದ್ದು? ಈ ಉತ್ತಮೋತ್ತವಾದ ವಸ್ತುಗಳು ಯಾರಿಗೆ ಸೇರಿದ್ದು? ನಾವೆಲ್ಲಿದ್ದೇವೆಂದೇ ತಿಳಿಯುತ್ತಿಲ್ಲ. ಹಸಿವು ಬಾಯಾರಿಕೆಗಳಿಂದ ಬಳಲಿರುವ ನಾವು, ಬಿಲದಿಂದ ಪಕ್ಷಿಗಳು ಹೊರಬರುತ್ತಿರುವುದನ್ನು ಕಂಡು ನೀರನ್ನು ಅರಸುತ್ತಾ ಇಲ್ಲಿಯವರೆಗೆ ಬಂದೆವು. ಯಾರ ತಪಸ್ಸಿನಿಂದ ಇದರ ಸೃಷ್ಟಿಯಾಯಿತು?’ ಎಂದು ಕುತೂಹಲದಿಂದ ಕೇಳಿಕೊಂಡನು.

ಅದಕ್ಕೆ ಆ ತಪಸ್ವಿಯು ಉತ್ತರಿಸಿ, `ಮಯನೆಂಬ ಅಸುರ ಶಿಲ್ಪಿಯು ತನ್ನ ದಿವ್ಯಪ್ರಭಾವದಿಂದ ಈ ಉದ್ಯಾನವನ್ನು ಸೃಷ್ಟಿಸಿದನು. ಸಾವಿರಾರು ವರ್ಷಗಳ ತಪಸ್ಸಿನಿಂದ ಬ್ರಹ್ಮನಿಂದ ಶಿಲ್ಪವಿದ್ಯೆಯನ್ನು ವರವಾಗಿ ಪಡೆದ ಆತನು ಈ ವನವನ್ನು ನಿರ್ಮಿಸಿ ಹೇಮೆ ಎಂಬ ಅಪ್ಸರ ಸ್ತ್ರೀಯೊಂದಿಗೆ ಇಲ್ಲಿ ಸುಖವಾಗಿ ವಾಸಿಸುತ್ತಿದ್ದನು. ಯುದ್ಧದಲ್ಲಿ ಇಂದ್ರನು ಮಯನನ್ನು ಸೋಲಿಸಿ ಕೊಂದ ಬಳಿಕ ಬ್ರಹ್ಮನು ಹೇಮೆಗೆ ಈ ವನವನ್ನು ಒಪ್ಪಿಸಿದನು. ನಾನು ಮೇರುಸಾವರ್ಣಿಯ ಮಗಳಾದ ಸ್ವಯಂಪ್ರಭೆ ಎಂದು ನನ್ನ ಹೆಸರು. ಹೇಮೆ ನನ್ನ ಗೆಳತಿಯಾಗಿದ್ದು, ಅವಳ ವನವನ್ನು ರಕ್ಷಿಸಿಕೊಂಡು ಬರುತ್ತಿದ್ದೇನೆ. ನೀವ್ಯಾರು? ಯಾಕಾಗಿ ಈ ವನವನ್ನು ಸುತ್ತಾಡುತ್ತಿದ್ದೀರಿ? ಇಲ್ಲಿನ ಫಲಮೂಲಗಳನ್ನು ತಿಂದು ವಿಶ್ರಮಿಸಿಕೊಳ್ಳಿರಿ, ಇಲ್ಲಿನ ನೀರನ್ನು ಕುಡಿದು ಬಾಯಾರಿಕೆಯನ್ನು ತಣಿಸಿಕೊಳ್ಳಿರಿ. ಆಮೇಲೆ ನಿಮ್ಮ ವೃತ್ತಾಂತವನ್ನು ತಿಳಿಸಿರಿ..’ ಎಂದಳು.

ಅವಳು ಹೇಳಿದಂತೆ ಅಲ್ಲಿನ ದಿವ್ಯಫಲಗಳನ್ನು ಭಕ್ಷಿಸಿ, ನೀರನ್ನು ಕುಡಿದು ಆಯಾಸವನ್ನು ಪರಿಹರಿಸಿಕೊಂಡರು. ಹನುಮಂತನೇ ಮುಂದಾಗಿ ನಿಂತು, ಭಗವಾನ್ ಶ್ರೀರಾಮನಿಗೆ ಒದಗಿದ ಸಂಕಷ್ಟ, ಶ್ರೀರಾಮನಿಗೆ ಅಗ್ನಿಸಾಕ್ಷಿಯಾಗಿ ಸುಗ್ರೀವನ ಜೊತೆ ಉಂಟಾದ ಸ್ನೇಹ, ಸುಗ್ರೀವನು ಸೀತೆಯನ್ನು ಹುಡುಕಾಡಲು ತಮಗೊಪ್ಪಿಸಿದ ಕರ್ತವ್ಯ, ಸೀತೆ ಎಲ್ಲಿರುವಳೆಂದು ತಾವು ನಡೆಸುವ ಹುಡುಕಾಟದ ಬಗ್ಗೆ ತಿಳಿಸಿದನು. ಆ ಬಳಿಕ ಹನುಮಂತನು, `ತಾಯಿ ಬಳಲಿದ್ದ ನಮಗೆ ಬಳಲಿದ್ದ ನಮಗೆ ಉಪಚಾರವನ್ನು ನೀಡಿದೆ. ಈ ಆತಿಥ್ಯಕ್ಕೆ ಪ್ರತಿಯಾಗಿ ನಾವು ಮಾಡಬಹುದಾದ ಕಾರ್ಯವೇನೇ ಇದ್ದರು ತಿಳಿಸು, ಸಂತೋಷವಾಗಿ ಮಾಡಿಕೊಡುವೆವು’ ಎಂದು ತಿಳಿಸಿದನು.

ಸ್ವಯಂಪ್ರಭೆಯು ಸ್ವಲ್ಪಹೊತ್ತು ಯೋಚಿಸಿಕೊಂಡು ಸುಮ್ಮನಾದಳು. ಕೊನೆಗೆ ಕೊಂಚ ಆಲೋಚಿಸಿದ ಹನುಮಂತನು, `ಸೀತಾನ್ವೇಷಣೆಗಾಗಿ ಮತ್ತೆ ನಾವು ಹಿಂತಿರುಗಬೇಕು. ಈ ಗವಿಯಿಂದ ಹೊರಗಡೆ ಹೋಗುವುದು ಹೇಗೆಂದು ತಿಳಿಸು’ ಎಂದು ಭಿನ್ನವಿಸಿಕೊಂಡನು. ಆಗ ಸ್ವಯಂಪ್ರಭೆಯು, `ಸಾಮಾನ್ಯವಾಗಿ ಇದನ್ನು ಪ್ರವೇಶಿಸಿದ ಯಾರಿಗೂ ಇಲ್ಲಿಂದ ಹೊರಗಡೆ ಹೋಗಲು ಸಾಧ್ಯವಿಲ್ಲ. ಆದರೆ ನನ್ನ ಯೋಗಶಕ್ತಿಯಿಂದ ನಿಮ್ಮನ್ನೆಲ್ಲಾ ಹೊರಗಡೆ ಬಿಡುತ್ತೇನೆ. ಈಗ ಎಲ್ಲರೂ ಕಣ್ಣುಮುಚ್ಚಿಕೊಳ್ಳಿ. ನಾನು ಹೇಳುವವರೆಗೆ ಯಾರೂ ಕಣ್ಣುಬಿಡಬೇಡಿ.’ ಎಂದಳು. ಅಂತೆಯೇ ಎಲ್ಲರೂ ತಮ್ಮ ಅಂಗೈಗಳಿಂದ ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ನಿಮಿಷಾರ್ಧದಲ್ಲಿ ಬಿಲದಿಂದ ಹೊರಗಡೆ ಬಿದ್ದಿದ್ದರು.

ಸ್ವಯಂ ಪ್ರಭೆಯು, `ನೋಡಿ ಅಲ್ಲಿ ವಿಸ್ತಾರವೂ, ಭೀಕರವೂ ಆಗಿರುವ ಸಮುದ್ರವೊಂದಿದೆ. ಈ ಭಾಗದಲ್ಲಿ ಪರ್ವತವಿದೆ. ನಿಮಗೆ ಇಷ್ಟಬಂದ ದಾರಿಯನ್ನು ಹುಡುಕಿಕೊಳ್ಳಿ’ ಎಂದು ಹೇಳಿ ಮತ್ತೆ ತನ್ನ ಬಿಲದೊಳಗಡೆ ಹೊರಟುಹೋದಳು. ಸ್ವಯಂಪ್ರಭೆ ಆ ಸಮುದ್ರವನ್ನು `ಮಹೋದಧಿ’ ಎಂದು ಕರೆದಿದ್ದಳು. ವರುಣದೇವನ ಆವಾಸಸ್ಥಾನವಾಗಿದ್ದ ಆ ಸಮುದ್ರವು ಭೀಕರವೂ, ರೌದ್ರವೂ ಆಗಿತ್ತು.

ಭೋರ್ಗರೆಯುವ ಸಮುದ್ರವನ್ನು ನೋಡಿ ಎಲ್ಲರೂ ಬೆಚ್ಚಿಬಿದ್ದರು. ಸೀತೆಯನ್ನು ಕಾಣದೆ ವಾಪಸ್ ಹೋಗುವಂತಿರಲಿಲ್ಲ. ತಮ್ಮೊಡೆಯ ಸುಗ್ರೀವನು ತಮಗೇನಾದರೂ ಅಪಾಯ ಮಾಡಿದರೆ ಎಂಬ ಭಯವೂ ಆಯಿತು. ಸುಗ್ರೀವನಲ್ಲಿ ಕ್ಷಮೆ ಕೇಳುವಂತೆಯೂ ಇರಲಿಲ್ಲ. ಹತಾಶೆಯಿಂದ ಕೆಲವರು ಮತ್ತೆ ಬಿಲದೊಳಗಡೆ ಪ್ರವೇಶಿಸಿ ಅಲ್ಲೇ ಇದ್ದುಬಿಡೋಣ ಎಂದರು. ಕೊನೆಗೆ ವಾಲಿಯ ಪುತ್ರ ಅಂಗದನು ಎಲ್ಲರಿಗೂ ಸಮಾಧಾನ ಹೇಳಿ ಪ್ರಯತ್ನವನ್ನು ಬಿಡುವುದು ಬೇಡ. ತಾಳ್ಮೆಯಿಂದ ಪ್ರಯತ್ನಿಸಿದರೆ ಸೀತೆಯ ಸುಳಿವು ಖಂಡಿತಾ ಸಿಗಬಹುದು. ಪ್ರಯತ್ನವನ್ನೂ ಮೀರಿಯೂ ಸೀತೆಯು ಸಿಗದಿದ್ದರೆ ಸುಗ್ರೀವನು ತಮ್ಮನ್ನು ಕ್ಷಮಿಸಿಯಾನು ಎಂದು ಧೈರ್ಯವನ್ನು ಹೇಳಿದನು. ಆದರೂ ಕೆಲವರಿಗೆ ಧೈರ್ಯ ಬರಲಿಲ್ಲ. ಮತ್ತೆ ಬಿಲದೊಳಗಡೆ ಹೋಗಿ ಅಲ್ಲೆ ಶಾಶ್ವತವಾಗಿ ಇದ್ದುಬಿಡೋಣ ಎಂದು ಹೇಳಿದರು.

ಆಗ ಹನುಮಂತನು ಕೊಂಚ ಆಲೋಚಿಸಿ,` ಮನುಷ್ಯಂತೆಯೇ ಕಪಿಗಳ ಮನಸ್ಸು ಇನ್ನೂ ಚಂಚಲ. ಋಕ್ಷಬಿಲಕ್ಕೆ ಹೋದ ಬಳಿಕ ಅಲ್ಲಿ ತನ್ನ ಹೆಂಡತಿ ಮಕ್ಕಳ ಯೋಚನೆ ಬರುತ್ತದೆ. ಆದ್ದರಿಂದ ಕಿಷ್ಮಿಂದೆಗೆ ಹೋಗಿ ಸುಗ್ರೀವನಲ್ಲಿ ಜೀವದಾನ ಬೇಡೋಣ’ ಎಂದನು. ಆದರೆ ಅದಕ್ಕೆ ಅಂಗದನು ಒಪ್ಪಲಿಲ್ಲ. `ಸುಗ್ರೀವನು ರಾಮನಲ್ಲಿ ಅಗ್ನಿಸಾಕ್ಷಿಯಾಗಿ ಸ್ನೇಹವನ್ನು ಒಪ್ಪಿಕೊಂಡ ಮೇಲೆ ಅದಕ್ಕೆ ಅವಕಾಶ ಕೊಡಲಾರನು. ನೀವು ಬೇಕಾದರೆ ಕಿಷ್ಕಿಂದೆಗೆ ವಾಪಸ್ ಹೋಗಿ ನಾನಿಲ್ಲೇ ಪ್ರಾಯಾಪವೇಶ ಮಾಡುತ್ತೇನೆ’ ಎಂದನು. ಅಂಗದನ ಮಾತು ಕೇಳಿ ಎಲ್ಲರಿಗೂ ಬೇಸರ ಮೂಡಿ ತಾವೂ ಆತನ ಜೊತೆ ಪ್ರಾಯಾಪವೇಶ ಮಾಡುವುದಾಗಿ ನಿರ್ಧಾರಕ್ಕೆ ಬಂದರು.

ಪರ್ವತದ ಗುಹೆಯಲ್ಲಿ ಸಂಪಾತಿ ಎನ್ನುವ ಹದ್ದು ವಾಸವಾಗಿತ್ತು. ವೃದ್ಧನಾಗಿದ್ದ ಸಂಪಾತಿ ಸೀತೆಗಾಗಿ ಪ್ರಾಣವನ್ನರ್ಪಿಸಿದ ಜಟಾಯುವಿನ ಅಣ್ಣ. ಸಂಪಾತಿಯು ಕಪಿಗಳನ್ನು ಕಂಡು ಅವುಗಳನ್ನು ತಿನ್ನಲೆಂದು ಬಂದಾಗ, ಅಂಗದನು, `ಜಟಾಯುವಿನಂಥಾ ಪಕ್ಷಿ ಪ್ರಾಣಿಗಳು ಶ್ರೀರಾಮನಿಗೆ ಸಹಾಯ ಮಾಡಿವೆ. ಜಟಾಯುವು ಸೀತೆಗಾಗಿ ಪ್ರಾಣವನ್ನೇ ಅರ್ಪಿಸಿತು. ಈಗ ಈ ಹದ್ದಿನಿಂದಾಗಿ ತಮ್ಮ ಪ್ರಾಣಕ್ಕೆ ಸಂಕಟ ಒದಗಿತು’ ಎಂದು ಹಲುಬಿದನು. ಸಂಪಾತಿಗೆ ಅಂಗದನ ಮಾತು ಕೇಳಿ ದುಃಖವಾಯಿತು. ತನ್ನ ಪ್ರೀತಿಯ ಸಹೋದರ ಸತ್ತನೇ ಎಂದು ಮರುಕಗೊಂಡನು ಅಂಗದನಿಂದ ಎಲ್ಲಾ ವಿಚಾರವನ್ನು ಅರಿತುಕೊಂಡ ಸಂಪಾತಿಯು, `ತಾನು ವೃದ್ಧನಾಗಿರುವುದರಿಂದ ಹಾರಲು ಸಾಧ್ಯವಾಗುತ್ತಿಲ್ಲ. ಹಾರಲು ಸಾಧ್ಯವಿದ್ದಾಗ ಮೂರು ಲೋಕ, ಸಪ್ತಸಾಗರಗಳನ್ನೂ ಕಂಡಿದ್ದೇನೆ. ರಾವಣನು ಸೀತೆಯನ್ನು ಹೊತ್ತುಕೊಂಡು ಹೋಗಿರುವುದನ್ನು ಕಂಡಿದ್ದೇನೆ. ಇಲ್ಲಿಂದ ನೂರು ಯೋಜನದಷ್ಟು ಲಂಕೆಯೆಂಬ ದ್ವೀಪವಿದ್ದು, ಅದರ ರಾಜ ರಾವಣನಾಗಿದ್ದಾನೆ. ಹದ್ದುಗಳ ಕಣ್ಣುಗಳು ಸೂಕ್ಷ್ಮವಾಗಿದ್ದು, ಸೀತೆಯು ಲಂಕೆಯಲ್ಲಿರುವುದು ನನ್ನ ಕಣ್ಣಿಗೆ ಗೋಚರವಾಗುತ್ತದೆ. ಸಾಗರವನ್ನು ಲಂಘಿಸಿದರೆ ಲಂಕೆಯು ದೊರಕುತ್ತದೆ. ಅಲ್ಲಿ ರಾಕ್ಷಸಿಯ ಕಾವಲಿನಲ್ಲಿ ಸೀತೆಯಿದ್ದಾಳೆ’ ಎಂದು ಉತ್ತರಿಸಿದನು. ಸಂಪಾತಿಯ ಮಾತು ಕೇಳಿ ಎಲ್ಲರೂ ಹರ್ಷಿತರಾದರು.

ಅದುವೇ ಹಿಂದೂ ಮಹಾಸಾಗರವಾಗಿದ್ದು, ಮುಂದೆ ವಾನರ ವೀರನಾದ ನಲನು ಅದಕ್ಕೆ ಶ್ರೀರಾಮನ ಕೃಪೆಯಿಂದ ಸೇತುವೆ ನಿರ್ಮಿಸಿದ್ದನು. ಅದುವೇ ನಲಸೇತು ಅಥವಾ ರಾಮಸೇತು ಎಂದು ಹೆಸರು ಪಡೆದಿದ್ದು, ಸಮುದ್ರದೊಳಗಡೆ ಹುದುಗಿಹೋಗಿದೆ. ಮಹಾಭಾರತ ಕಾಲವಾದ ದ್ವಾಪರಯುಗದವರೆಗೂ ಅದು ಕಾಣಿಸಿದ್ದು, ಲಂಕೆಯಿಂದ ಭಾರತಕ್ಕೆ ಅದರಿಂದಲೇ ನಡೆದುಕೊಂಡು ಬರುತ್ತಿದ್ದರು. ಆದರೆ ಮುಂದೆ ಪ್ರಕೃತಿಯಲ್ಲಿ ಆದ ಬದಲಾವಣೆಯಿಂದ ರಾಮಸೇತು ನೀರಲ್ಲಿ ಮುಳುಗಡೆಗೊಂಡಿದ್ದು, ಇಂದಿಗೂ ಅದರ ಸುಳಿವು ಲಭ್ಯವಿದೆ.

ಇಲ್ಲಿ ತಿಳಿಸಿದ ಋಕ್ಷಬಿಲ ಇಂದಿಗೂ ನಿಗೂಢವಾಗಿಯೇ ಉಳಿದಿದ್ದು, ದಕ್ಷಿಣ ಭಾರತದಲ್ಲಿ ಇಂದಿಗೂ ಹಾಗೆಯೇ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ. ಕೇರಳದ ಕಾಡಿನಿಂದಾವೃತವಾದ ಪ್ರದೇಶದಲ್ಲಿ ಋಷ್ಯಬಿಲವಿದ್ದು, ಇಂದಿಗೂ ಅದು ನಿಗೂಢವಾಗಿಯೇ ಉಳಿದಿದೆ. ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿಸಿದ ಪರ್ವತ, ಮರ, ಹಣ್ಣು, ಕಾಡಿನಲ್ಲಿರುವ ವಿವಿಧ ಪಕ್ಷಿ-ಪ್ರಾಣಿ ಸಂಕುಲ, ಕಪಿವೀರರು ಸಂದರ್ಶಿಸಿದ ಜಾಗ, ರಾಮನು ಅಯೋಧ್ಯೆಯಿಂದ ಲಂಕೆಯವರೆಗೆ ಬಂದಿರುವ ಜಾಗ, ಕಿಷ್ಕಿಂದೆ, ಚಿತ್ರಕೂಟ ಅರಣ್ಯ ಅಲ್ಲದೆ ಶ್ರೀರಾಮ ಸೀತೆಯೊಂದಿಗೆ ಪುಷ್ಪಕವಿಮಾನದಲ್ಲಿ ಬರುವಾಗ ಆಕಾಶ ಮಾರ್ಗದಲ್ಲಿ ಕಂಡುಬಂದ ಪ್ರದೇಶಗಳು ಇಂದಿಗೂ ಭೂಪಟದಲ್ಲಿ ನಕ್ಷೆಯನ್ನು ಗುರುತಿಸಿದಂತೆ ಸ್ಪಷ್ಟವಾಗಿ ಕಂಡುಬರುತ್ತಿದೆ. ರಾಮಾಯಣದಲ್ಲಿ ಉಲ್ಲೇಖಗೊಂಡ ಪ್ರತಿಯೊಂದೂ ಪ್ರದೇಶವೂ ಇಂದಿಗೂ ಇದ್ದು, ಆದರೆ ಋಷ್ಯಬಿಲ ಎಲ್ಲಿದೆ ಎಂದು ನಿಗೂಢವಾಗಿಯೇ ಉಳಿದಿದೆ.

ಚೇಕಿತಾನ

Tags

Related Articles

Close