ಪ್ರಚಲಿತ

ಅಯೋಧ್ಯೆಯ ಬಾಲರಾಮನ ಅಲಂಕಾರ ಹೇಗಿದೆ ಗೊತ್ತಾ?

ಅಯೋಧ್ಯೆಯ ನಿಜವಾದ ವಾರಸ್ದಾರ ಶ್ರೀರಾಮಲಲ್ಲಾ ಸುಮಾರು ಐನೂರು ವರ್ಷಗಳ ಕಾಯುವಿಕೆಯ ಬಳಿಕ ಕೊನೆಗೂ ತನ್ನ ಜನ್ಮಭೂಮಿಯಲ್ಲಿಯೇ ವಿರಾಜಮಾನನಾಗಿದ್ದಾನೆ. ಪ್ರಧಾನಿ ಮೋದಿ ಮತ್ತು ಅವರ ಸರ್ಕಾರದ ಇಚ್ಛಾಶಕ್ತಿಯ ಕಾರಣದಿಂದಲೇ ಪ್ರಭು ಶ್ರೀರಾಮ ಇಂದು ಟೆಂಟ್‌ನಿಂದ ಸುಂದರ ಮಂದಿರದೊಳಕ್ಕೆ ಆಗಮಿಸಿದ್ದಾನೆ ಎನ್ನಬಹುದು.

ಸದ್ಯ ಅಯೋಧ್ಯೆಯ ರಾಷ್ಟ್ರ ಮಂದಿರದ ಒಳಗೆ ರಾಮಲಲ್ಲಾ ಮಂದಸ್ಮಿತ ವದನನಾಗಿ ಭಕ್ತ ಜನರನ್ನು ಆಶೀರ್ವದಿಸುತ್ತಿದ್ದಾನೆ. ಪುರಾಣಗಳಲ್ಲಿ ನೀಡಲಾದ ಶ್ರೀರಾಮನ ವಿವರಣೆಗಳನ್ನು ಆಧರಿಸಿ, ಈ‌ ಸುಂದರ ವಿಗ್ರಹದ ಸಿಂಗಾರ ಮಾಡಲಾಗಿದೆ. ಭಗವಂತ ಐದು ವರ್ಷದ ಪುಟ್ಟ ಬಾಲಕನ ರೂಪದಲ್ಲಿದ್ದು, ಅದಕ್ಕೆ ಅನುಗುಣವಾಗಿ ವಸ್ತ್ರಾಭರಣಗಳಿಂದ ಆತನನ್ನು ಶೃಂಗಾರ ಮಾಡಲಾಗಿದೆ,.

ಈ ಶೃಂಗಾರವನ್ನು, ಅದಕ್ಕೆ ಬಳಕೆ ಮಾಡಲಾದ ವಸ್ತುಗಳನ್ನು ಆಧ್ಯಾತ್ಮ ರಾಮಾಯಣ, ಶ್ರೀಮದ್ವಾಲ್ಮೀಕಿ ರಾಮಾಯಣ, ರಾಮ ಚರಿತ ಮಾನಸಂ, ಆಳವಂದರ ಸ್ತೋತ್ರಗಳನ್ನು ಆಧರಿಸಿ, ಸಂಶೋಧನೆ ಮತ್ತು ಅಧ್ಯಯನ ನಡೆಸಿ ಈ ವಸ್ತ್ರಾಭರಣಗಳ ವಿನ್ಯಾಸ ನಡೆದಿದೆ. ಗ್ರಂಥಾಧಾರಿತವಾದ ರೀತಿಯಲ್ಲೇ ಅಲಂಕಾರ ನಡೆಸಲಾಗಿದ್ದು, ಕಣ್ಣಿಗೆ ಮದ ನೀಡುವಂತೆ ಬಾಲ ರಾಮ ವಿಜೃಂಭಿಸುತ್ತಿದ್ದಾನೆ.

ಆಭರಣ: ಪುರಾಣಗಳಲ್ಲಿ ವಿವರಿಸಿರುವ ಹಾಗೆ ರಾಮನ ತಲೆಗೆ ಕಿರೀಟ, ಕತ್ತಿನಲ್ಲಿ ಹಾರ, ಕೌಸ್ತುಭಮಣಿ, ವೈಜಯಂತಿ ಅಥವಾ ವಿಜಯ ಮಾಲೆ ಯನ್ನು ಹೃದಯಕ್ಕೆ ಸಮೀಪವಿರುವ ಹಾಗೆ ತೊಡಿಸಲಾಗಿದೆ. ಸೊಂಟಕ್ಕೆ ಕಂಚಿ ಅಥವಾ ಕವಚವನ್ನು ತೊಡಿಸಲಾಗಿದೆ. ಶ್ರೀರಾಮನಿಗೆ ತೊಡಿಸಲಾದ ಎಲ್ಲಾ ಆಭರಣಗಳೂ ಸಹ ವಿಶೇಷವಾಗಿವೆ ಎಂದೇ ಹೇಳಬಹುದು.

ಶ್ರೀರಾಮನ ವಸ್ತ್ರ: ಶ್ರೀರಾಮನಿಗೆ ಬನಾರಸ್ ಬಟ್ಟೆಯನ್ನು ಉಪಯೋಗಿಸಿ ಮಾಡಲಾದ ಹಳದಿ ಧೋತಿ ಮತ್ತು ಕೆಂಪು ಬಣ್ಣದ ಅಂಗವಸ್ತ್ರವನ್ನು ತೊಡಿಸಲಾಗಿದೆ. ಇದಕ್ಕೆ ಶುದ್ಧ ಚಿನ್ನದ ಝರಿ ಮತ್ತು ನಕ್ಷತ್ರಗಳ ಕುಸುರಿ ಕೆಲಸಗಳನ್ನು ಮಾಡಲಾಗಿದೆ. ಈ ಬಟ್ಟೆಯ ಮೇಲೆ ವೈಷ್ಣವ ಪಂಥಕ್ಕೆ ಸಂಬಂಧಿಸಿದ ಶಂಕ, ಚಕ್ರ, ಗಧಾ, ನವಿಲುಗಳ ಕೆತ್ತನೆ ಮಾಡಲಾಗಿದೆ.

ಕಿರೀಟ: ಚಿನ್ನವನ್ನು ಬಳಸಿ ಉತ್ತರ ಭಾರತದ ಸಂಪ್ರದಾಯದ ಹಾಗೆ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಪಚ್ಚೆ, ಮಾಣಿಕ್ಯ, ವಜ್ರಗಳ ಅಳವಡಿಸಲಾಗಿದೆ. ಕಿರೀಟ ಮಧ್ಯ ಭಾಗದಲ್ಲಿ ಸೂರ್ಯನನ್ನು ಚಿತ್ರಿಸಲಾಗಿದೆ. ‌ಕಿರೀಟದ ಬಲಭಾಗದಲ್ಲಿ ಚಿನ್ನದ ತಂತಿಗಳ ಮೂಲಕ ಮುತ್ತುಗಳನ್ನು ಪೋಣಿಸಿ ಇಳಿಯಬಿಡಲಾಗಿದೆ.

ಕುಂಡಲಿ: ಪ್ರಭುವಿನ ಕಿವಿಯಾಭರಣಗಳನ್ನು ಮುಕುಟ ಅಥವಾ ಕಿರೀಟದ ‌ಪ್ರಕಾರ, ಅದೇ ವಿನ್ಯಾಸದಲ್ಲಿ ರಚಿಸಲಾಗಿದೆ. ನವಿಲಿನಾಕೃತಿಯಲ್ಲಿ ಇರುವ ಈ ಕುಂಡಲಿಗಳಿಗೆ ಚಿನ್ನ, ಪಚ್ಚೆ, ವಜ್ರ, ಮಾಣಿಕ್ಯ ಇತ್ಯಾದಿಗಳನ್ನು ಅಳವಡಿಸಲಾಗಿದೆ.

ಹಾರ: ಅರ್ಧ ಚಂದ್ರಾಕೃತಿಯಲ್ಲಿ ರತ್ನ ಗಳನ್ನು ಪೋಣಿಸಲಾದ ಹಾರವನ್ನು ರಾಮ ಲಲ್ಲಾನಿಗೆ ತೊಡಿಸಲಾಗಿದೆ. ಮಂಗಳಕರ ಪುಷ್ಪಗಳು, ಸೂರ್ಯನ ಚಿತ್ರವನ್ನು ಈ ಹಾರ ಒಳಗೊಂಡಿದೆ. ಇದಕ್ಕೆ ಚಿನ್ನ, ವಜ್ರ, ಪಚ್ಚೆ, ಮಾಣಿಕ್ಯ ಪೋಣಿಸಲಾಗಿದೆ. ಇದರ ಕೆಳಭಾಗದಲ್ಲಿ ಮತ್ತೊಂದು ಸರವನ್ನು ತೊಡಿಸಲಾಗಿದ್ದು ಇದು ಪಚ್ಚೆಯನ್ನು ಬಳಸಿ ತಯಾರು ಮಾಡಿರುವುದಾಗಿದೆ.

ಕೌಸ್ತುಭಮಣಿ: ಇದನ್ನು ಪ್ರಭುವಿನ ಹೃದಯಕ್ಕೆ ಸಮೀಪ ತೊಡಿಸಲಾಗಿದೆ. ದೊಡ್ಡ ದೊಡ್ಡ ಮಾಣಿಕ್ಯಗಳು, ವಜ್ರಗಳಿಂದ ಇದನ್ನು ಅಲಂಕಾರ ಮಾಡಲಾಗಿದೆ. ಭಗವಾನ್ ವಿಷ್ಣು ಮತ್ತು ಆತನ ಅವತಾರಗಳು ಹೃದಯ ಭಾಗದಲ್ಲಿ ಕೌಸ್ತುಭಮಣಿ ಧರಿಸುತ್ತಿದ್ದ ಬಗ್ಗೆ ಪುರಾಣಗಳು ಮಾಹಿತಿ ನೀಡುತ್ತವೆ.

ವಿಜಯ ಮಾಲೆ: ಇದು ರಾಮ ಲಲ್ಲಾ ಧರಿಸಿದ ಮೂರನೇ ಹಾರವಾಗಿದ್ದು, ಚಿನ್ನದಿಂದ ತಯಾರಿಸಲ್ಪಟ್ಟಿದೆ. ಇದು ಉದ್ದವಾಗಿದ್ದು ಅಲ್ಲಲ್ಲಿ ಪಚ್ಚೆಯನ್ನು ಇದಕ್ಕೆ ಪೋಣಿಸಲಾಗಿದೆ. ವಿಜಯದ ಸಂಕೇತವಾಗಿ ಇದನ್ನು ಧರಿಸಲಾಗುತ್ತದೆ. ಇದರಲ್ಲಿ ವೈಷ್ಣವ ಸಂಪ್ರದಾಯದ ಶಂಖ, ಸುದರ್ಶನ ಚಕ್ರ, ಗಧಾ, ಪದ್ಮ, ಮಂಗಳ ಕಲಶಗಳನ್ನು ಚಿತ್ರಿಸಲಾಗಿದೆ. ಈ ಹಾರ ಕಮಲ, ಚಂಪಾ, ಪಾರಿಜಾತ, ಕುಂಡ, ತುಳಸಿ ಎಂಬ ಪಂಚ ವಿಧ ಪುಷ್ಪಗಳಿಂದ ಅಲಂಕೃತವಾಗಿದೆ.

ಸೊಂಟ ಪಟ್ಟಿ: ರತ್ನ ಖಚಿತ ಸೊಂಟದ ಕವಚ ಇದಾಗಿದೆ. ಚಿನ್ನ ದಿಂದ ಇದನ್ನು ಮಾಡಲಾಗಿದ್ದು, ವಜ್ರ, ಮಾಣಿಕ್ಯ, ಪಚ್ಚೆ, ಮುತ್ತುಗಳನ್ನು ಬಳಕೆ ಮಾಡಲಾಗಿದೆ. ಶುದ್ಧತೆಯ ಸಂಕೇತವಾಗಿ ಐದು ಸಣ್ಣ ಗಂಟೆಗಳನ್ನು ಪೋಣಿಸಲಾಗಿದೆ. ಮುತ್ತು, ಮಾಣಿಕ್ಯ, ಪಚ್ಚೆಗಳನ್ನು ಅಳವಡಿಸಲಾದ ಸರಗಳನ್ನು ಇದರಲ್ಲಿ ನೇತು ಬಿಡಲಾಗಿದೆ‌.

ಭುಜಬಂಧ: ಚಿನ್ನ, ರತ್ನ ಖಚಿತ ಭುಜಬಂಧಗಳನ್ನು ಎರಡೂ ತೋಳುಗಳಿಗೆ ತೊಡಿಸಲಾಗಿದೆ.

ಬಳೆಗಳು: ರತ್ನಾವೃತವಾದ ಸುಂದರ ಬಳೆಗಳನ್ನು ಪ್ರಭುವಿಗೆ ಹಾಕಲಾಗಿದೆ.

ಉಂಗುರಗಳು: ರತ್ನ ಖಚಿತ, ಮುತ್ತಿನ ಸರಗಳನ್ನು ಇಳಿಯ ಬಿಡಲಾದ ಸುಂದರ ಉಂಗುರಗಳು ಶ್ರೀರಾಮನ ಕೈ ಬೆರಳುಗಳನ್ನು ಅಲಂಕರಿಸಿವೆ‌

ಚಿನ್ನದ ಕಾಲು ಗೆಜ್ಜೆ, ಚಿನ್ನದ ಓಲೆಗಳನ್ನು ಪ್ರಭು ರಾಮಚಂದ್ರನಿಗೆ ತೊಡಿಸಲಾಗಿದೆ. ಎಡಗೈಯಲ್ಲಿ ಚಿನ್ನದ ಬಿಲ್ಲನ್ನು ರಾಮ ಹಿಡಿದಿದ್ದಾನೆ‌. ಅದಕ್ಕೆ ರತ್ನ, ಪಚ್ಚೆ, ಮುತ್ತು, ಮಾಣಿಕ್ಯಗಳ ಅಲಂಕಾರವಿದೆ. ಬಲಗೈಯಲ್ಲಿ ಚಿನ್ನದ ಬಾಣ ಇದೆ. ಬಣ್ಣ ಬಣ್ಣದ ಹೂಮಾಲೆಗಳು ಪ್ರಭುವಿನ ಕೊರಳಲ್ಲಿದ್ದು, ಅವುಗಳು ಶ್ರೀರಾಮನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.

ಹಣೆಯ ಮೇಲೆ ಸಾಂಪ್ರದಾಯಿಕ ಮಂಗಳ ತಿಲಕವನ್ನು ವಜ್ರ, ಮಾಣಿಕ್ಯಗಳನ್ನು ಬಳಸಿ ಇರಿಸಲಾಗಿದೆ. ಶ್ರೀರಾಮನ ಪಾದದ ಕೆಳಗಿನ ಕಮಲದಲ್ಲಿ ಚಿನ್ನದ ಹಾರವನ್ನು ಇರಿಸಲಾಗಿದೆ.

ಒಟ್ಟಿನಲ್ಲಿ ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವ, ನೋಡುವಂಕೆ ಕಾಡುವ, ಮಾಡುವ ರೀತಿಯಲ್ಲಿ ಪ್ರಭು ಶ್ರೀರಾಮಲಲ್ಲಾನನ್ನು ಅಲಂಕಾರ ಮಾಡಲಾಗಿದೆ.

Tags

Related Articles

Close