ಪ್ರಚಲಿತ

ನೀವು ದೇವರನ್ನು ನೋಡಿದ್ದೀರಾ? ಈ ಪ್ರಶ್ನೆಗೆ ಕೃಷ್ಣ ಭಟ್ಟರು ನೀಡಿದ ಅರ್ಥಗರ್ಭಿತ ಉತ್ತರವೇನು!

40 ವರ್ಷಗಳಿಗೂ ಹೆಚ್ಚು ಕಾಲ ಹಂಪಿಯಲ್ಲಿ ಪರಶಿವನನ್ನು ಪೂಜಿಸಿದ ಪರಮೇಶ್ವರನ ಮಹಾಭಕ್ತರಾಗಿದ್ದ ಶ್ರೀ ಕೃಷ್ಣ ಭಟ್ಟರು ದೇವರ ಕುರಿತಾದ ಪತ್ರಕರ್ತರ ಪ್ರಶ್ನೆ ಒಂದಕ್ಕೆ ಒಂದು ಸುಂದರವಾದ ಉತ್ತರ ನೀಡಿದ್ದರಂತೆ. ಅದು ಇಂದಿಗೂ ನಮ್ಮಲ್ಲಿ ದೇವರ ಇರುವಿಕೆಯನ್ನು ಪ್ರಶ್ನಿಸುವ ಅನೇಕರಿಗೆ ತಿಳಿಯಲೇ ಬೇಕಾದ ಉತ್ತರವಾಗಿದೆ ಎಂದರೆ ತಪ್ಪಾಗಲಾರದು.

ನೀವು ದೇವರನ್ನು ಎಂದಾದರೂ ನೋಡಿದ್ದೀರಾ? ಎಂದು ಆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಭಟ್ಟರು ಅತಿ ಸೂಕ್ಷ್ಮವಾಗಿ ಮತ್ತು ಅರ್ಥಗರ್ಭಿತವಾಗಿ ಉತ್ತರಿಸಿದ್ದರು.

“ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ನಾಯಿಗಳನ್ನು ಸಾಕುತ್ತಾರೆ. ನಮ್ಮ ಹಳ್ಳಿಗಳಲ್ಲಿ ಅದನ್ನು ಮನೆ ಮತ್ತು ಹೊಲಗಳ ರಕ್ಷಣೆಗೆಂದೇ ಸಾಕುತ್ತೇವೆ. ರಾತ್ರಿಯ ಹೊತ್ತು ಅದು ಮನೆಗಳನ್ನು ಕಾವಲು ಕಾಯುತ್ತದೆ. ಕಳ್ಳನನ್ನು ಕಂಡಾಗ ಒಂದು ನಾಯಿ ಬೊಗಳಲು ಶುರು ಮಾಡುತ್ತದೆ, ಮತ್ತು ಅದು ಬೊಗಳುವುದನ್ನು ಕೇಳಿದ ಸುತ್ತಲಿನ 99 ನಾಯಿಗಳು ಅದರ ಜೊತೆ ಬೊಗಳಲು ಪ್ರಾರಂಭಿಸುತ್ತವೆ. ಇಲ್ಲಿ ಒಂದು ನಾಯಿ ಅಷ್ಟೇ ಕಳ್ಳನನ್ನು ಕಂಡಿದ್ದು. ಆದರೆ ಇನ್ನುಳಿದ ನಾಯಿಗಳು ಆ ಒಂದು ನಾಯಿಯ ಮೇಲಿನ ನಂಬಿಕೆಯಿಂದ ಬೊಗಳಲು ಪ್ರಾರಂಭಿಸುತ್ತವೆ. ಒಂದು ಸಾಮಾನ್ಯ ನಾಯಿಯೇ ಮತ್ತೊಂದು ನಾಯಿಯ ಮೇಲೆ ಇಷ್ಟು ನಂಬಿಕೆ ಇಡುವಾಗ, ಬುದ್ಧಿವಂತರಾದ ನಾವು ಮನುಷ್ಯರು ಇತರೆ ಮನುಷ್ಯರ ಮೇಲೆ ನಂಬಿಕೆ ಇಡಬಾರದೆ? ನಮ್ಮ ಪೂರ್ವಜರು, ಅನೇಕ ಋಷಿಮುನಿಗಳು, ಸಾಧಕರು ಮತ್ತು ತಪಸ್ವಿಗಳು ದೇವರನ್ನು ಕಂಡಿದ್ದಾರೆ. ಅದೇ ದೇವರ ನಂಬಿಕೆಯ ಮೇಲೆ ನಾನೆಂದು ಬದುಕುತ್ತಿದ್ದೇನೆ” ಇದು ಭಟ್ಟರು ತಮ್ಮನ್ನು ಪ್ರಶ್ನಿಸಿದ ಪತ್ರಕರ್ತರಿಗೆ ನೀಡಿದ ಉತ್ತರ.

ಈಗ ಹೇಳಿ, ಪ್ರತಿ ನಂಬಿಕೆ ಮತ್ತು ಆಚರಣೆಗೂ ಸಾಕ್ಷಿ ಕೇಳುವ ಬುದ್ಧಿವಂತರಾದ ನಾವು, ನಮ್ಮವರನ್ನೇ ಅನುಮಾನಿಸುವುದು ಏಕೆ? ಆ ನಾಯಿಗಳಲ್ಲಿರುವ ಪರಸ್ಪರ ನಂಬಿಕೆ ಮನುಷ್ಯರಾದ ನಮ್ಮಲ್ಲೇಕ್ಕಿಲ್ಲ?

Tags

Related Articles

Close