ಪ್ರಚಲಿತ

ಪಾಕ್‌ನಲ್ಲಿ 150 ವರ್ಷ ಹಳೆಯ ಹಿಂದೂ ದೇವಾಲಯ ನೆಲಸಮ

ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತೆ ಮುಂದುವರೆದಿದೆ. ಅಲ್ಲಿನ ಕರಾಚಿ ಸೋಲ್ಜರ್ ಬಜಾರ್‌ನಲ್ಲಿದ್ದ ಹಿಂದೂ ದೇವಾಲಯವೊಂದನ್ನು ಕೆಡಹುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಕೇಡು ಬಗೆಯುವ, ಘಾಸಿಗೊಳಿಸುವ ಕೆಲಸವನ್ನು ಪಾಕಿಸ್ತಾನ ಮಾಡಿರುವುದು ದುರಂತ.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಧಾರ್ಮಿಕ ಭಾವನೆಗೆ, ನಂಬಿಕೆಗಳಿಗೆ ಆಗಾಗ ಪೆಟ್ಟು ಬೀಳುತ್ತಲೇ ಇರುತ್ತದೆ.‌ ಪಾತಕಿಗಳೇ ತುಂಬಿರುವ ಪಾಕಿಸ್ತಾನದಲ್ಲಿ ಹಿಂದೂಗಳು ಉಸಿರಾಡುವುದೇ ಕಷ್ಟ ಎಂಬ ಪರಿಸ್ಥಿತಿ ಬಹಳ ಹಿಂದಿನಿಂದಲೂ ಇದೆ. ಅಲ್ಲಿ ಹಿಂದೂಗಳ ಧಾರ್ಮಿಕ ಸ್ವಾತಂತ್ರವನ್ನು ಸಹ ಹತ್ತಿಕ್ಕಲಾಗುತ್ತಿದೆ. ಇದಕ್ಕೆ ಈಗ ದೇವಾಲಯ ಕೆಡಹಿರುವ ವಿಷಯ ಮತ್ತೊಂದು ಸಾಕ್ಷಿಯಾಗಿದೆ.

ಸೋಲ್ಜರ್ ನಗರದಲ್ಲಿರುವ ಸುಮಾರು 150 ವರ್ಷಕ್ಕೂ ಹಳೆಯದಾದ ಪುರಾತನ ಮಾರಿ ಮಾತಾ ದೇವಾಲಯವನ್ನು ಬುಲ್ಡೋಸರ್ ಮೂಲಕ ಕೆಡಹಲಾಗಿದೆ. ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಸಮಯದಲ್ಲಿ, ಈ ದೇಗುಲವನ್ನು ನೆಲಸಮಗೊಳಿಸುವ ಕಾರ್ಯ ನಡೆದಿದ್ದು, ಆ ಮೂಲಕ ಹಿಂದೂಗಳ ಧಾರ್ಮಿಕ ನಂಬಿಕೆಗೆ ನೋವುಂಟು ಮಾಡಲಾಗಿದೆ.‌

ಈ ದೇವಾಲಯದ ಗೋಡೆಗಳು ಶಿಥಿಲಗೊಂಡಿದ್ದು, ಅವುಗಳನ್ನು ನವೀಕರಣ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ದೇಗುಲವನ್ನು ‌ಸ್ಥಳಾಂತರ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಸ್ಥಳದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ತೆರೆಯುವ ಉದ್ದೇಶದಿಂದ, ಈ ದೇಗುಲಕ್ಕೆ ಸಂಬಂಧಪಟ್ಟ ಕೆಲವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ದೇಗುಲವಿದ್ದ ‌ಸ್ಥಳವನ್ನು ಮಾರಾಟ ಮಾಡಿದ್ದಾರೆ ಎಂದು ಸ್ಥಳೀಯ ಹಿಂದೂಗಳು ಆರೋಪಿಸಿದ್ದಾರೆ.

ಭಾರತದಲ್ಲಿರುವ ಮುಸ್ಲಿಮರಿಗೆ ಯಾವುದೇ ಸಮಸ್ಯೆ ಇರದೇ ಹೋದರೂ ‘ಭಾರತದಲ್ಲಿ ಮುಸಲ್ಮಾನರಿಗೆ ಉಸಿರಾಡುವುದಕ್ಕೂ ಕಷ್ಟ ಇದೆ’, ಭಾರತೀಯ ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದೆಲ್ಲಾ ಕೆಲ ಬುದ್ಧಿಜೀವಿಗಳು ಅಬ್ಬರಿಸಿ, ಬೊಬ್ಬಿಡುತ್ತಾರೆ. ಭಾರತದಲ್ಲಿ ಸಹಿಷ್ಣುತೆ ಇಲ್ಲ ಎಂಬುದಾಗಿಯೂ ಭಾರತದ ಕೆಲ ಬುದ್ಧಿಜೀವಿಗಳ ಜೊತೆಗೆ ವಿದೇಶಗಳ ಕೆಲ ಬುದ್ಧಿ ಜೀವಿಗಳೂ ಅರಚಿಕೊಳ್ಳುವುದು ಸಾಮಾನ್ಯ. ಅಂತಹವರಿಗೆ ಪಾಕಿಸ್ತಾನದಲ್ಲಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ಅಪಾಯ ಎದುರಾಗುತ್ತಿರುವುದು, ಅವರ ಧಾರ್ಮಿಕ ನಂಬಿಕೆಗಳಿಗೆ ಅಪಚಾರವಾಗುತ್ತಿರುವ ವಿಷಯ ಕಾಣಿಸದೇ ಇರುವುದು ನಿಜಕ್ಕೂ ದುರಂತ.

ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರೂ, ಇಲ್ಲಿ ಅಲ್ಪಸಂಖ್ಯಾತ ಮುಸಲ್ಮಾನರಿಗೆ ಯಾವುದೇ ಸಮಸ್ಯೆ ಉಂಟಾಗುತ್ತಿಲ್ಲ. ಅವರ ಧಾರ್ಮಿಕ ಸ್ವಾತಂತ್ರ್ಯಕ್ಕೂ ಯಾವುದೇ ರೀತಿಯಲ್ಲಿ ನೋವುಂಟು ಮಾಡುವ ಕೆಲಸವನ್ನು ಇಲ್ಲಿನ ಬಹುಸಂಖ್ಯಾತರು, ಸರ್ಕಾರ ಮಾಡುತ್ತಿಲ್ಲ. ಆದರೂ ಇಲ್ಲಿನ ಕೆಲ ಮುಸಲ್ಮಾನರಿಗೆ ಭಾರತವೆಂದರೆ ಅದೇನೋ ಅಲರ್ಜಿ. ಹಾಗೆಯೇ ಭಾರತ ವಿರೋಧಿ ಮನಸ್ಥಿತಿಯ ಕೆಲ ಬಹುಸಂಖ್ಯಾತರು ಸಹ ತಮ್ಮ ಹೇಳಿಕೆಗಳ ಮೂಲಕವೇ ಮುಸಲ್ಮಾನರನ್ನು ಹಿಂದೂಗಳ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿರುತ್ತಾರೆ.

ಭಾರತದಲ್ಲಿ ಇರುವ ಸಾವಿರಾರು ಮಸೀದಿಗಳಿಗೆ ಯಾವುದೇ ಸಮಸ್ಯೆ ಸರ್ಕಾರ ಅಥವಾ ಹಿಂದೂಗಳಿಂದ ಆಗುವುದಿಲ್ಲ. ಆದರೆ ಇಲ್ಲಿನ ಹಲವಾರು ಮಸೀದಿ ಗಳ ಅಡಿಯಲ್ಲಿ ಹಿಂದೂ ಧರ್ಮದ, ದೇವಾಲಯಗಳ ಕುರುಹು ಪತ್ತೆಯಾಗುತ್ತದೆ. ಹೀಗಿದ್ದರೂ ಅವರಿಗೆ ಇಲ್ಲಿ ಯಾವುದೇ ಸಮಸ್ಯೆ ಆಗುತ್ತಿಲ್ಲ.‌ಆದರೆ ಪಾಕ್‌ನಲ್ಲಿ ‌ಮಾತ್ರ ಹಿಂದೂ ಸಮುದಾಯದ ಮೇಲೆ ನಡೆಯುತ್ತಿರುವ ಇಂತಹ ದೌರ್ಜನ್ಯಗಳು ಅಕ್ಷಮ್ಯ. ಇನ್ನಾದರೂ ಪಾಕ್ ಹಿಂದೂಗಳ ಮೇಲೆ, ಅವರ ಧಾರ್ಮಿಕ ನಂಬಿಕೆಗಳ ಮೇಲೆ ಅಲ್ಲಿನ ಸರ್ಕಾರ, ಅಲ್ಲಿನ ಬಹುಸಂಖ್ಯಾತ ಮುಸಲ್ಮಾನರು ಕೊಂಚ ಕರುಣೆ ತೋರುವಂತಾಗಲಿ ಎಂಬುದೇ ನಮ್ಮ ಆಶಯ.

Tags

Related Articles

Close