ಪ್ರಚಲಿತ

ಉಗ್ರವಾದ, ಹಗೆತನ ಮುಕ್ತ ವಾತಾವರಣವಿದ್ದಲ್ಲಿ ‌ಮಾತ್ರ ಪಾಕ್ ಜೊತೆಗೆ ಮಾತುಕತೆ: ಭಾರತ

ಭಾರತ ಮತ್ತು ಪಾಕಿಸ್ತಾನ ಐತಿಹಾಸಿಕ ಶತ್ರುಗಳು ಎಂಬ ಸತ್ಯ ಸಂಪೂರ್ಣ ವಿಶ್ವಕ್ಕೆ ತಿಳಿದ ವಿಷಯ. ಪಾಕಿಸ್ತಾನದ ನರಿ ಬುದ್ಧಿಯಿಂದಲೇ ಅದು ಭಾರತವನ್ನೊಳಗೊಂಡ ಹಾಗೆ ವಿಶ್ವದ ಇನ್ನೂ ಕೆಲ ರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸಿದೆ. ಪಾಕಿಸ್ತಾನವನ್ನು ‌ನಂಬುವುದಕ್ಕೆ ಸಾಧ್ಯವೇ ಇಲ್ಲ, ಆ ರಾಷ್ಟ್ರದ ಗೆಳೆತನ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ಸತ್ಯ ಗೊತ್ತಿರುವ ದೇಶಗಳು, ಆ ರಾಷ್ಟ್ರದಿಂದ ಅಂತರ ಕಾಪಾಡಿಕೊಳ್ಳಲು ಬಯಸುತ್ತವೆ.

ಪಾಕಿಸ್ತಾನದ ಜೊತೆಗೆ ಭಾರತ ಒಳ್ಳೆಯ ಸಂಬಂಧ ಹೊಂದಿಲ್ಲ. ಆದರೆ ಇಂದು ಪ್ರಪಂಚದ ಹಲವು ರಾಷ್ಟ್ರಗಳು ಭಾರತದ ಜೊತೆಗೆ ಸ್ನೇಹ ಬಯಸುತ್ತಿವೆ. ಇದೀಗ ಪಾಕಿಸ್ತಾನ ಸಹ ಭಾರತದ ಜೊತೆಗೆ ಉತ್ತಮ ಸಂಬಂಧ ಬೆಳೆಸುವ ಇಚ್ಛೆ ವ್ಯಕ್ತಪಡಿಸಿದ್ದು, ಪಾಕ್ ಪ್ರಧಾನಿ ಷೆಹಬಾಜ್ ಷರೀಫ್ ಭಾರತದ ಜೊತೆಗೆ ಮಾತುಕತೆ ನಡೆಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಭಾರತ ಪ್ರತಿಕ್ರಿಯೆ ನೀಡಿದ್ದು, ಭಾರತವು ಪಾಕಿಸ್ತಾನದ ಜೊತೆಗೆ ಸೌಹಾರ್ದ ಸಂಬಂಧ ಬೆಳೆಸಬೇಕಾದರೆ ಆ ರಾಷ್ಟ್ರ ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ‌ತ್ಯಜಿಸಬೇಕು. ಉಗ್ರ ವಾದ ಮತ್ತು ಹಿಂಸೆಯಿಂದ ಪಾಕಿಸ್ತಾನ ಮುಕ್ತವಾದಲ್ಲಿ ಮಾತ್ರ ಭಾರತ ಮತ್ತು ಪಾಕಿಸ್ತಾನದ ನಡುವೆ ಸೌಹಾರ್ದಯುತ ಸಂಬಂಧ ಏರ್ಪಡಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಭಾರತದ ಪರ ಈ ಮಾತುಗಳನ್ನು ಪಾಕಿಸ್ತಾನಕ್ಕೆ ತಿಳಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಅವರು ಭಾರತದ ಜೊತೆಗೆ ಸಂಬಂಧ ಬೆಳೆಸುವ ಬಗ್ಗೆ ನೀಡಿದ ಹೇಳಿಕೆಯನ್ನು ನಾವು ಗಮನಿಸಿದ್ದೇವೆ. ಭಾರತವು ಪಾಕಿಸ್ತಾನವನ್ನೊಳಗೊಂಡಂತೆ ಇತರ ಎಲ್ಲಾ ನೆರೆಯ ದೇಶಗಳ ಜೊತೆಗೆ ಸಾಮಾನ್ಯ ಸಂಬಂಧವನ್ನು ಹೊಂದಲು ಬಯಸುತ್ತೇನೆ. ಇದು ಭಾರತದ ಸ್ಪಷ್ಟ ಮತ್ತು ಸ್ಥಿರವಾದ ನಿಲುವಾಗಿದೆ. ಆದರೆ ಇಂತಹ ಸಂಬಂಧ ಸ್ಥಾಪಿಸಲು ಉಗ್ರ ವಾದ, ಹಿಂಸಾಚಾರ ರಹಿತವಾದ, ಹಗೆತನದಿಂದ ಮುಕ್ತವಾದ ವಾತಾವರಣವನ್ನು ನಾವು ಬಯಸುವುದಾಗಿಯೂ ಅವರು ನುಡಿದಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಷೆಹಬಾಜ್ ಷರೀಫ್ ಅವರು, ಯುದ್ಧ ಪಾಕಿಸ್ತಾನದ ಆಯ್ಕೆಯಲ್ಲ. ಭಾರತದ ಜೊತೆಗೆ ಮಾತುಕತೆ ನಡೆಸಲು ಸಿದ್ಧ‌. ನಾವು ರಾಷ್ಟ್ರ ನಿರ್ಮಾಣ ಮಾಡಲು ನೆರೆಹೊರೆಯ ದೇಶಗಳ ಜೊತೆಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ ಎಂದು ಹೇಳಿದ್ದು, ಇದಕ್ಕೆ ಭಾರತ ಪ್ರತಿಕ್ರಿಯೆ ನೀಡಿರುವುದಾಗಿದೆ.

ಭಾರತವು ಪಾಕಿಸ್ತಾನ ಮಾತ್ರವಲ್ಲದೆ ವಿಶ್ವದ ಎಲ್ಲಾ ರಾಷ್ಟ್ರಗಳ ಜೊತೆಗೂ ಉತ್ತಮ ಸಂಬಂಧವನ್ನೇ ಬಯಸುತ್ತದೆ. ಆದರೆ ಅದಕ್ಕೆ ಆ ರಾಷ್ಟ್ರವು ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರದಿಂದ ಮುಕ್ತವಾಗಿರಬೇಕು ಎಂಬ ನಿಲುವನ್ನು ಭಾರತ ಸ್ಪಷ್ಟ ಪಡಿಸಿದೆ. ಒಟ್ಟಿನಲ್ಲಿ ಭಾರತದ ಸ್ನೇಹವನ್ನು ಪ್ರಸ್ತುತ ಎಲ್ಲಾ ರಾಷ್ಟ್ರಗಳು ಸಹ ಬಯಸುತ್ತಿದ್ದು, ಭಾರತ ವಿಶ್ವದಲ್ಲಿ ತನ್ನ ಪ್ರಾಮುಖ್ಯತೆ, ಸ್ಥಾನಮಾನವನ್ನು ಮತ್ತಷ್ಟು ಉನ್ನತಿಗೆ ಬೆಳೆಸಿದೆ. ಅಮೆರಿಕ ಸೇರಿದಂತೆ ವಿಶ್ವದ ಹಲವು ಪ್ರಮುಖ ರಾಷ್ಟ್ರಗಳು ಭಾರತದ ಜೊತೆಗೆ ಉತ್ತಮ ಸಂಬಂಧ ಸಾಧಿಸಿಕೊಂಡಿವೆ. ಈ ಎಲ್ಲಾ ವಿದ್ಯಮಾನಗಳು ಪಾಕಿಸ್ತಾನದ ನಿದ್ದೆಗೆಡಿಸಿದ್ದು, ಭಾರತದ ಜೊತೆಗೆ ವೈರತ್ವ ಹೆಚ್ಚು ಮಾಡಿಕೊಂಡಲ್ಲಿ ಅಪಾಯ ಖಚಿತ ಎಂಬುದನ್ನು ಮನಗಂಡಂತಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದ ಆಪತ್ತನ್ನು ಅರಿತು ಅದರಿಂದ ಪಾರಾಗಲು ಭಾರತದ ಸ್ನೇಹವನ್ನು ಬಯಸಿದಂತಿದೆ.

ಒಟ್ಟಾರೆಯಾಗಿ ಭಾರತದ ಶಕ್ತಿಯನ್ನು ಅರಿತ ಪಾಕಿಸ್ತಾನ, ಭಾರತದ ಜೊತೆಗೆ ಸಂಬಂಧ ಸಾಧಿಸಲು ಹಾತೊರೆಯುತ್ತಿದೆ ಎಂದರೂ ತಪ್ಪಾಗಲಾರದು.

Tags

Related Articles

Close