ಪ್ರಚಲಿತ

ಮೀನುಗಾರರ ರಕ್ಷಣೆಗೆ ಇಸ್ರೋ ಅಭಿವೃದ್ಧಿ ಪಡಿಸಿದೆ ವಿನೂತನ ತಂತ್ರಜ್ಞಾನ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಭಾರತದ ಹಿರಿಮೆಯನ್ನು ಆಕಾಶದೆತ್ತರಕ್ಕೆ ಈಗಾಗಲೇ ಏರಿಸಿದೆ. ಚಂದ್ರಯಾನದ ಮೂಲಕ ಚಂದ್ರನಂಗಳಕ್ಕೆ ತಲುಪಿ, ಆದಿತ್ಯ ಎಲ್-1 ಮೂಲಕ ಸೂರ್ಯನನ್ನು ತಲುಪಿ ಭಾರತದ ಸಾಧನೆಯನ್ನು ಜಗತ್ತಿಗೆ ಸಾರಿದ ಹಿರಿಮೆ ಇಸ್ರೋ ಸಂಸ್ಥೆಯದ್ದು.

ಇದೀಗ ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ಅಥವಾ ಇನ್ಯಾವುದೇ ಅಪಾಯಕಾರಿ ಸಂದರ್ಭದಲ್ಲಿ ಸಮುದ್ರದಲ್ಲಿ ಸಿಲುಕಿಕೊಂಡ ಮೀನುಗಾರರನ್ನು ರಕ್ಷಣೆ ಮಾಡಲು ಇಸ್ರೋ ಉಪಕರಣವೊಂದನ್ನು ಅಭಿವೃದ್ಧಿ ಮಾಡಿದೆ.

ಅಪಾಯಕಾರಿ ಸನ್ನಿವೇಶದಲ್ಲಿ ಭಾರತೀಯ ಮೀನುಗಾರರ ರಕ್ಷಣೆಗೆ ಎರಡನೇ ತಲೆಮಾರಿನ ಡಿಸ್ಟ್ರೆಸ್ ಅಲರ್ಟ್ ಟ್ರಾನ್ಸ್‌ಮಿಟರ್(ಡಾಟ್) ಎಂಬ ಉಪಕರಣವನ್ನು ಅಭಿವೃದ್ಧಿ ಮಾಡಿದೆ. ಈ ಉಪಕರಣವನ್ನು ಬಳಸಿ ಮೀನುಗಾರರು ಅಪಾಯಕಾರಿ ಸಂದರ್ಭದಲ್ಲಿ ಸಮುದ್ರದಿಂದ ತುರ್ತು ಸಂದೇಶ ರವಾನೆ ಮಾಡಲು ಸಾಧ್ಯವಿದ್ದು, ಈ ಸಂದರ್ಭದಲ್ಲಿ ಅವರಿಗೆ ತಕ್ಷಣವೇ ಪ್ರತಿಕ್ರಿಯೆ ದೊರೆಯುವಂತೆ ಈ ಉಪಕರಣವನ್ನು ವಿನ್ಯಾಸಗೊಳಿಸಲಾಗಿದೆ.

ಇಂತಹ ವ್ಯವಸ್ಥೆ ಈಗಾಗಲೇ ಇದ್ದು, ಇದನ್ನು ಅಭಿವೃದ್ಧಿ ಮಾಡುವ ಕೆಲಸವನ್ನು ಇಸ್ರೋ‌ ಮಾಡಿದೆ. ಈ ಸೌಲಭ್ಯವನ್ನು ಮೀನುಗಾರರು ತಮ್ಮ ಮೊಬೈಲ್ ಮೂಲಕವೇ ಬಳಕೆ ಮಾಡಬಹುದಾಗಿದೆ.

ಆಪತ್ತಿನಲ್ಲಿರುವ ಮೀನುಗಾರರು ಕಳುಹಿಸಿದ ಸಂದೇಶವು ಇಂಡಿಯನ್ ಮಿಷನ್ ಕಂಟ್ರೋಲ್ ಸೆಂಟರ್‌ಗೆ ಬರುತ್ತದೆ. ಅಲ್ಲಿಂದ ಆ ಸಂದೇಶವನ್ನು ಕರಾವಳಿ ರಕ್ಷಣಾ ಪಡೆಗೆ ರವಾನಿಸಲಾಗುತ್ತದೆ. ಅವರಿಗೆ ಮೀನುಗಾರರಿರುವ‌ ಸ್ಥಳ ತಕ್ಷಣವೇ ತಿಳಿಯುತ್ತದೆ. ಅವರು ತಕ್ಷಣ ಆಪತ್ತಿನಲ್ಲಿ ಸಿಲುಕಿರುವ ‌ಮೀನುಗಾರರ ರಕ್ಷಣೆಗೆ ಧಾವಿಸುತ್ತಾರೆ. ಈ ವ್ಯವಸ್ಥೆ ಬಳಸಿ ಮೀನುಗಾರರು ತಾವೇ ಸುರಕ್ಷಿತ ತಾಣಕ್ಕೆ ತೆರಳುವ ಅಥವಾ ತಮ್ಮ ಸ್ಥಳಕ್ಕೆ ಧಾವಿಸುವುದಕ್ಕೂ ಅವಕಾಶ ಇದೆ.

Tags

Related Articles

Close