ಪ್ರಚಲಿತ

ಮದರಸಾಗಳಲ್ಲಿ ಶ್ರೀರಾಮನ ಕುರಿತ ಪಠ್ಯ ಬೋಧನೆ ಆರಂಭ

ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ಹಿಂದೂಗಳಿಗೆ ಮಾತ್ರ ಆದರ್ಶನಲ್ಲ. ಬದಲಾಗಿ ಪ್ರತಿಯೊಬ್ಬ ವ್ಯಕ್ತಿಗೂ ಬದುಕಿದರೆ ಹೇಗೆ ಬದುಕಬೇಕು ಎನ್ನುವುದನ್ನು ತನ್ನ ಜೀವನದ ಮೂಲಕವೇ ನಿದರ್ಶನಕ್ಕೆ ‌ಇಟ್ಟ ಮಹಾ ಪುರುಷ. ಆತನನ್ನು ಎಲ್ಲಾ ಧರ್ಮದವರೂ ಪೂಜನೀಯ ಭಾವದಿಂದ, ಮಾದರಿ ಎನ್ನುವಂತೆ ಕಾಣುತ್ತಾರೆ.

ಪ್ರಭು ಶ್ರೀರಾಮ ಮತ್ತು ಆತನ ಆದರ್ಶಗಳನ್ನು ಉತ್ತರಾಖಂಡದ ಮದರಸಾಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಹೇಳಿ ಕೊಡುವುದಕ್ಕಾಗಿ ಆ ರಾಜ್ಯ ಮಹತ್ವದ ಹೆಜ್ಜೆ ಇರಿಸಿದೆ.

ಉತ್ತರಾಖಂಡದ ವಕ್ಫ್ ಮಂಡಳಿಗೆ ಸಂಬಂಧಿಸಿದ ಮದರಸಾಗಳಲ್ಲಿ ‘ಮದರಸಾ ಆಧುನೀಕರಣ ಕಾರ್ಯಕ್ರಮ’ದ ಭಾಗವಾಗಿ ಮುಂದಿನ ಮಾರ್ಚ್ ತಿಂಗಳಿನಿಂದ ಆರಂಭವಾಗುವ ಸೆಷನ್‌ನಿಂದ ಮದರಸಾ ಮಕ್ಕಳಿಗೆ ಶ್ರೀರಾಮನನ್ನು ಹೊಸ ಪಠ್ಯಕ್ರಮದಲ್ಲಿ ಅಳವಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಅಲ್ಲಿನ ಬಿಜೆಪಿ ನಾಯಕ ಮತ್ತು ವಕ್ಫ್ ಬೋರ್ಡ್ ಅಧ್ಯಕ್ಷ ಅನುಭವಿ ಧರ್ಮಗುರು ಶಾದಾಬ್ ಶಾಮ್ಸ್ ಮಾಹಿತಿ ನೀಡಿರುವುದಾಗಿದೆ. ಧರ್ಮ ಮತ್ತು ನಂಬಿಕೆಗಿಂತ ಮಿಗಿಲಾಗಿ ಪ್ರತಿಯೋರ್ವರೂ ಶ್ರೀರಾಮನ ಆದರ್ಶಗಳನ್ನು ಪಾಲನೆ ಮಾಡಬೇಕಿದೆ. ಅವುಗಳನ್ನು ತಿಳಿದುಕೊಳ್ಳಬೇಕಾಗಿದೆ. ಆತನ ಜೀವನ ಅನುಸರಣ ಯೋಗ್ಯ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರವಾದಿ ಮಹಮ್ಮದ್ ಪೈಗಂಬರನ ಪಠ್ಯದ ಜೊತೆಗೆ ಪ್ರಭು ಶ್ರೀರಾಮನ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಉತ್ತರಾಖಂಡದ ವಕ್ಫ್ ಬೋರ್ಡ್ ಅಡಿಯಲ್ಲಿ 117 ಮದರಸಾಗಳಿವೆ. ಆರಂಭದಲ್ಲಿ ಶ್ರೀರಾಮನ ಪಠ್ಯವನ್ನು ನೈನಿತಾಲ್, ಉಧಮ್ ಸಿಂಗ್ ನಗರ, ಡೆಹ್ರಾಡೂನ್, ಹರಿದ್ವಾರ್‌ಗಳಲ್ಲಿರುವ ಮದರಸಾಗಳಲ್ಲಿ ಅಳವಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಸಿಂಹಾಸನವನ್ನು ತ್ಯಜಿಸಿ ತಂದೆಯ ಮಾತಿನಂತೆ ಕಾಡಿಗೆ ಹೋದ ಶ್ರೀ ರಾಮ ನಂತಹ ಮಗನನ್ನು ಯಾರು ತಾನೇ ಬಯಸುವುದಿಲ್ಲ. ಆತನಂತಹ ಆದರ್ಶ ಗಳನ್ನು ಮಕ್ಕಳಲ್ಲಿ ಬಿತ್ತುವ ಸಲುವಾಗಿ ಶ್ರೀರಾಮನ ಪಠ್ಯಗಳನ್ನು ಮದರಸಾಗಳಲ್ಲಿ ಬೋಧಿಸಲಾಗುವುದು ಎಂದು ಅವರು ನುಡಿದಿದ್ದಾರೆ.

Tags

Related Articles

Close