ಪ್ರಚಲಿತ

ರಷ್ಯಾದಲ್ಲಿಯೂ ‘ಮೇಕ್ ಇನ್ ಇಂಡಿಯಾ’ ಸದ್ದು

ಕೊರೋನಾ ನಂತರದಲ್ಲಿ ವಿಶ್ವದ ಹೆಚ್ಚಿನ ಎಲ್ಲಾ ದೇಶಗಳ ಆರ್ಥಿಕತೆ ನೆಲಕ್ಕಚ್ಚಿವೆ. ಆದರೆ ಪ್ರಧಾನಿ ಮೋದಿ ಅವರ ಕೇಂದ್ರ ಸರ್ಕಾರದ ಮುಂದಾಲೋಚನೆ, ದೂರದೃಷ್ಟಿಯ ಫಲ ಎಂಬಂತೆ ಭಾರತದ ಆರ್ಥಿಕತೆ ಮಾತ್ರ ಬೆಳವಣಿಗೆ ಕಂಡಿದೆ. ಭಾರತದ ಈ ಸಾಧನೆಯನ್ನು ಜಗತ್ತಿನ ಹೆಚ್ಚಿನ ದೇಶಗಳು ಮೆಚ್ಚಿ ತಲೆದೂಗಿವೆ.

ಭಾರತದ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ರಷ್ಯಾದ ಅಧ್ಯಕ್ಷ ಪುಟಿನ್ ಶ್ಲಾಘಿಸಿದ್ದು, ಸ್ನೇಹಿತ ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ ಚಿಂತನೆಯಿಂದ ಭಾರತದಲ್ಲಿ ಆರ್ಥಿಕತೆ ಅಭಿವೃದ್ಧಿ ಹೊಂದಿದೆ. ಈ ಕ್ರಮವನ್ನು ನಾವೆಲ್ಲರೂ ಅನುಸರಿಸಬೇಕು ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ ಉಪಕ್ರಮವು ಭಾರತದ ಆರ್ಥಿಕತೆಯ ಮೇಲೆ ಪ್ರಭಾವಶಾಲಿಯಾದ ಪರಿಣಾಮವನ್ನು ಬೀರಿರುವುದಾಗಿಯೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತವು ಸ್ಥಳೀಯವಾಗಿ ಉತ್ಪನ್ನಗಳನ್ನು ತಯಾರು ಮಾಡುವುದು, ಅವುಗಳ ಅಭಿವೃದ್ಧಿ, ಅವುಗಳನ್ನು ಜೋಡಿಸುವುದು ಮೊದಲಾದ ವಿಚಾರಗಳಿಗೆ ಸಂಬಂಧಿಸಿದ ಹಾಗೆ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಹುರಿದುಂಬಿಸುವ ಕೆಲಸಕ್ಕೆ ಭಾರತ ಉದಾಹರಣೆಯಾಗಿದೆ ಜೊತೆಗೆ ವಿಶ್ವಕ್ಕೆ ಮಾದರಿಯಾಗಿದೆ ಎಂಬುದಾಗಿಯೂ ಅವರು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ನೆಚ್ಚಿನ ಗೆಳೆಯ. ಅವರು ಮತ್ತು ಭಾರತದ ನಮ್ಮ ಇತರ ಸ್ನೇಹಿತರ ಮೇಕ್ ಇನ್ ಇಂಡಿಯಾ ಉಪಕ್ರಮ ವರ್ಷಗಳ ಹಿಂದೆ ಆರಂಭವಾಗಿದ್ದು, ಇದರಿಂದಾಗಿ ಭಾರತ ಎಲ್ಲಾ ವಲಯಗಳಲ್ಲಿಯೂ ಅಭಿವೃದ್ಧಿ ಸಾಧಿಸಿದೆ. ಇಂತಹ ಮಾದರಿ ಉಪಕ್ರಮವನ್ನು ನಾವೆಲ್ಲರೂ ಅನುಸರಿಸಬೇಕಿದೆ ಎಂದು ಪುಟಿನ್ ನುಡಿದಿದ್ದಾರೆ.

ರಷ್ಯಾದಲ್ಲಿಯೂ ಸ್ವದೇಶಿ ನಿರ್ಮಿತ ಬ್ರ್ಯಾಂಡ್ ಗಳು ಮತ್ತು ಉತ್ಪನ್ನಗಳನ್ನು ಉತ್ತೇಜಿಸಲು ಅಲ್ಲಿನ ಜನರಿಗೆ ಭಾರತದ ಮೇಕ್ ಇನ್ ಇಂಡಿಯಾ ಉಪಕ್ರಮದ ಉದಾಹರಣೆಯನ್ನೇ ಪುಟಿನ್ ನೀಡಿದ್ದಾರೆ.

ರಷ್ಯಾದ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು, ಮಾರಾಟ ಮಾಡಲು, ಹೆಚ್ಚು ಉತ್ಪಾದನೆ ಮಾಡಲು, ಸ್ಥಳೀಯ ಉತ್ಪಾದನಾ ಸಾಮರ್ಥ್ಯ ಅಭಿವೃದ್ಧಿ‌ಗೆ, ವಿದೇಶಿ ಹೂಡಿಕೆಗಳನ್ನು ಸೆಳೆಯುವುದಕ್ಕೂ ಭಾರತೀಯ ಮಾದರಿಯ ಮೇಕ್ ಇನ್ ಇಂಡಿಯಾ ಪೂರಕ ಎಂಬುದಾಗಿ ಪುಟಿನ್ ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ಭಾರತದ ಒಳಗಿದ್ದುಕೊಂಡೇ ಪ್ರಧಾನಿ ಮೋದಿ ಅವರ ಯೋಜನೆಗಳು, ದೂರದೃಷ್ಟಿತ್ವವನ್ನು ವಿರೋಧಿಸುವವರಿಗೆ, ವಿದೇಶಿಗರಿಂದಲೇ ತಕ್ಕ ಪ್ರತ್ಯುತ್ತರ ದೊರೆಯುವಂತಾಗಿದೆ. ಭಾರತದಲ್ಲಿದ್ದುಕೊಂಡೇ ಇಲ್ಲಿನ ಯೋಜನೆಗಳನ್ನು ದೂಷಿಸುವವರಿಗೆ, ಭಾರತವನ್ನು ಅವಹೇಳನ ಮಾಡುವವರಿಗೆ ರಷ್ಯಾ ಅಧ್ಯಕ್ಷ ಪುಟಿನ್ ಅವರ ಈ ಮಾತು ಉರಿವಲ್ಲಿಗೆ ಉಪ್ಪಿಟ್ಟಂತಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close