ಪ್ರಚಲಿತ

ಪಾಕಿಸ್ತಾನದಿಂದ ಬಂದ 90 ಹಿಂದೂ ನಾಗರಿಕರಿಗೆ ದೊರಕಿತು ಭಾರತದ ನಾಗರಿಕತ್ವ! ವಿಶ್ವದಾದ್ಯಂತದ ನಿರಾಶ್ರಿತ ಹಿಂದೂಗಳ ಪಾಲಿಗೆ ಆಪ್ತ ರಕ್ಷಕನಾದ ಮೋದಿ ಸರಕಾರ!!

ವಿಶ್ವದಾದ್ಯಂತದ ನಿರಾಶ್ರಿತ ಹಿಂದೂ-ಸಿಖ್ ಅಲ್ಪಸಂಖ್ಯಾತರ ಪಾಲಿಗೆ ಮೋದಿ ಸರಕಾರ ಆಪ್ತ ರಕ್ಷಕನಾಗಿದೆ ಎಂದರೆ ತಪ್ಪಾಗಲಾರದು. ಇಸ್ಲಾಮಿಕ್ ದೇಶಗಳಲ್ಲಿ ಮತಾಂಧರ ಕೈಯಲ್ಲಿ ನಲುಗುತ್ತಿದ್ದ ಹಲವಾರು ನಿರಾಶ್ರಿತ ಹಿಂದೂ-ಸಿಖ್ ಪರಿವಾರಗಳು ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಅನಾಥರಂತೆ ನೆಲೆಸಿದ್ದಾರೆ. ಈ ಹಿಂದೂ-ಸಿಖ್ ಪರಿವಾರಗಳ ಗೋಳು ಕಳೆದ ಎಪ್ಪತ್ತು ವರ್ಷಗಳಲ್ಲಿ ನಮ್ಮನ್ನಾಳಿದ್ದ ಯಾವ ಸರಕಾರಕ್ಕೂ ಕೇಳಿರಲಿಲ್ಲ. ಬರೋಬ್ಬರಿ 69 ವರ್ಷಗಳ ಬಳಿಕ, ಓಬೀರಾಯನ ಕಾಲದ ಕಾನೂನಿಗೆ ತಿಲಾಂಜಲಿ ಇತ್ತಿತ್ತು ಮೋದಿ ಸರಕಾರ. ಅದರ ಪರಿಣಾಮವಾಗಿ ಇಂದು ನಿರಾಶ್ರಿತ ಹಿಂದೂಗಳು ಭಾರತದಲ್ಲಿ ನೆಮ್ಮದಿಯ ಜೀವನ ಮಾಡುವಂತಾಗಿದೆ.

ಹಿಂದೆಲ್ಲ ಅನ್ಯ ದೇಶದಿಂದ ಬಂದ ನಿರಾಶ್ರಿತ ಹಿಂದೂಗಳು ಭಾರತೀಯ ನಾಗರಿಕತ್ವ ಪಡೆಯಬೇಕೆಂದಿದ್ದರೆ ಕೇಂದ್ರ ಸರಕಾರದ ಒಪ್ಪಿಗೆ ಪಡೆಯಬೇಕಾಗುತ್ತಿತ್ತು. ಕೇಂದ್ರ ಸರಕಾರಗಳು ಈ ನಿಟ್ಟಿನಲ್ಲಿ ಯಾವುದೇ ಆಸಕ್ತಿ ತೋರುತ್ತಿರಲಿಲ್ಲವಾದ್ದರಿಂದ ದಶಕಗಳಿಂದ ಹಲವಾರು ಪರಿವಾರಗಳು ಅರ್ಜಿ ಗುಜರಾಯಿಸಿ ಕಾಯುತ್ತಿದ್ದವು. ಕೆಲವರಂತೂ ಕನಿಷ್ಟ ಮೂವತ್ತೈದು ವರ್ಷಗಳಿಂದ ಭಾರತದ ಪೌರತ್ವಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗುತ್ತದೆ. 2016 ರ ಡಿಸೆಂಬರ್ 23 ರಂದು ಅಧಿಸೂಚನೆಯ ಮೂಲಕ ನರೇಂದ್ರ ಮೋದಿ ಸರ್ಕಾರ ಈ ಪ್ರಕ್ರಿಯೆಯನ್ನು ವಿಕೇಂದ್ರೀಕರಿಸಿತು ಮತ್ತು ಅನ್ಯ ದೇಶಗಳಿಂದ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುವ ಕಿರುಕುಳದಿಂದ ತಪ್ಪಿಸಿಕೊಂಡು ಬಂದಿರುವವರಿಗೆ ಭಾರತೀಯ ಪೌರತ್ವವನ್ನು ನೀಡುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿತ್ತು.

ಮೋದಿ ಅವರ ಈ ನಿರ್ಧಾರದಿಂದಾಗಿ ಇಂದು ಹಲವಾರು ನಿರಾಶ್ರಿತ ಹಿಂದೂ ಪರಿವಾರಗಳು ಭಾರತದ ಪೌರತ್ವ ಪಡೆದು ಧನ್ಯತಾ ಭಾವ ವ್ಯಕ್ತ ಪಡಿಸುತ್ತಿವೆ. ಈ ಹಿಂದೆ ಛತ್ತಿಸ್ ಗಢ ದ ರಮಣ್ ಸಿಂಗ್ ಸರಕಾರ ಮೊತ್ತ ಮೊದಲ ಬಾರಿಗೆ ಪಾಕಿಸ್ತಾನದಿಂದ ಬಂದ 51 ಹಿಂದೂ ಪರಿವಾರಗಳಿಗೆ ಭಾರತೀಯ ಪೌರತ್ವ ನೀಡುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಈಗ ಗುಜರಾತಿನ ಸರದಿ. ಗುಜರಾತಿನ ಅಹಮದಾಬಾದ್ ಜಿಲ್ಲೆಯ ಡಿಸಿ ವಿಕ್ರಂ ಪಾಂಡೆ 90 ಪಾಕಿಸ್ತಾನಿ ಹಿಂದೂಗಳಿಗೆ ಪೌರತ್ವ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದಾಗ ಅವರ ಕಣ್ಣುಗಳು ತುಂಬಿ ಬಂದಿದ್ದವು.ಇದು ಅತ್ಯಂತ ಗೌರವದ ಮತ್ತು ಅತ್ಯಂತ ಸಂತೋಷದಾಯಕ ಘಳಿಗೆ ಎಂದು ಭಾರತದ ಪೌರತ್ವ ಪಡೆದ ನಾಗರಿಕರು ಬಣ್ಣಿಸಿದರು

ವಿಕ್ರಂ ಪಾಂಡೆಯ ಪ್ರಕಾರ ಈ ಜಿಲ್ಲೆಯೊಂದರಲ್ಲೆ ಇನ್ನೂ ಸುಮಾರು 120-150 ಪಾಕಿಸ್ತಾನದಿಂದ ಹಿಂದೂ ನಿರಾಶ್ರಿತರ ಅರ್ಜಿಗಳು ಬಾಕಿ ಉಳಿದಿವೆ. ವಿಕೇಂದ್ರೀಕರಣದ ನಂತರ, ಒಂದೂವರೆ ವರ್ಷಗಳಲ್ಲಿ ಅಹ್ಮದಾಬಾದ್ ಜಿಲ್ಲೆಯಲ್ಲಿ 320 ಅಲ್ಪಸಂಖ್ಯಾತರ ನಿರಾಶ್ರಿತರಿಗೆ ಪೌರತ್ವ ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಿ ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್ಖರ ಮೇಲೆ ಧಾರ್ಮಿಕ ಕಿರುಕುಳ ನಡೆಯುತ್ತದೆ. ಅವರ ಮೇಲೆ ಹಲ್ಲೆ ನಡೆಸಲಾಗುತ್ತದೆ, ಹೆಂಗಸರ ಬಲಾತ್ಕಾರ ನಡೆಸಲಾಗುತ್ತದೆ, ಅವರ ಸ್ವತ್ತುಗಳನ್ನು ಕಿತ್ತುಕೊಳ್ಳಲಾಗುತ್ತದೆ ಮತ್ತು ಇಸ್ಲಾಂಗೆ ಮತಾಂತರ ಹೊಂದುವಂತೆ ಬಲವಂತ ಮಾಡಲಾಗುತ್ತದೆ.

ತಮ್ಮ ಪ್ರಾಣ ರಕ್ಷಣೆಗಾಗಿ ಹಿಂದೂ-ಸಿಖ್ ಪರಿವಾರಗಳು ಅಲ್ಲಿಂದ ಪಲಾಯನಗೈದು ಭಾರತದ ಕದ ತಟ್ಟುತ್ತವೆ. ಇಲ್ಲಿ ಬಂದ ಮೇಲೂ ಕಾನೂನಾತ್ಮಕವಾಗಿ ಯಾವ ಸೌಕರ್ಯಗಳೂ ಇಲ್ಲದೆ ಅಬ್ಬೆಪಾರಿಗಳಂತೆ ಬದುಕುತ್ತಿದ್ದ ಈ ಪರಿವಾರಗಳ ಬಾಳಿನಲ್ಲಿ ಹೊಸ ಅರುಣೋದಯವನ್ನೆ ತಂದಿದೆ ಮೋದಿ ಸರಕಾರ. ಜಗತ್ತಿನಾದ್ಯಂತ ನರಕ ಅನುಭವಿಸುತ್ತಿರುವ ಹಿಂದೂಗಳಿಗೆ ಆಪ್ತ ರಕ್ಷನಾಗಿ ಹೊರ ಹೊಮ್ಮಿದ್ದಾರೆ ಪ್ರಧಾನ ಸೇವಕ ಮೋದಿ. ಮೋದಿ ಅವರ ಪ್ರಯತ್ನ ಸಾರ್ಥಕತೆ ಕಾಣಲಿ. ಭಾರತದಲ್ಲಿ ನೆಲೆಸಿರುವ ಅಷ್ಟೂ ನಿರಾಶ್ರಿತ ಹಿಂದೂ ಪರಿವಾರಗಳಿಗೆ ಶಾಶ್ವತ ನೆಲೆ ದೊರಕುವಂತಾಗಲಿ.

-ಶಾರ್ವರಿ

Tags

Related Articles

Close