ಪ್ರಚಲಿತ

ವಿಶ್ವಸಂಸ್ಥೆಯಲ್ಲಿ ಉಗ್ರವಾದದ ಪರ ಪಾಕಿಸ್ತಾನ ಬ್ಯಾಟಿಂಗ್

ಪಾಕಿಸ್ತಾನ ಮತ್ತು ಉಗ್ರವಾದ ಎರಡೂ ಸಹ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪಾಕಿಸ್ತಾನ ಉಗ್ರವಾದವನ್ನು, ಭಯೋತ್ಪಾದಕರನ್ನು ಸಾಕುವುದರಲ್ಲಿ ಎತ್ತಿದ ಕೈ ಎಂಬುದು ಸಂಪೂರ್ಣ ವಿಶ್ವವೇ ಅರಿತಿರುವ ವಿಷಯ. ಇಂತಹ ಪಾಕಿಸ್ತಾನ ಕೆಲ ದಿನಗಳ ಹಿಂದೆ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಈ ಎಡವಟ್ಟು ಸಹ ಉಗ್ರವಾದಕ್ಕೆ ಸಂಬಂಧಿಸಿದ್ದೇ ಆಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಪಾಕಿಸ್ತಾನವು ಭಯೋತ್ಪಾದನೆಯನ್ನು ಸಮರ್ಥನೆ ಮಾಡುವ ಮೂಲಕ ಮತ್ತೊಮ್ಮೆ ವಿಶ್ವದ ಕೆಂಗಣ್ಣಿಗೆ ಗುರಿಯಾಗಿದೆ.

ವಿದೇಶಿ ಆಕ್ರಮಣದಡಿ ವಾಸಿಸುವ ಜನರಿಗೆ ಭಯೋತ್ಪಾದನೆ ಕಾನೂನುಬದ್ಧ ಎಂದು ಪ್ರತಿಪಾದಿಸುವ ಮೂಲಕ ಪಾಕಿಸ್ತಾನ ಎಡವಟ್ಟು ಮಾಡಿಕೊಂಡಿದೆ. ಹಾಗೆಯೇ ಭಾರತದ ಜಮ್ಮು ಕಾಶ್ಮೀರವನ್ನು, ಇಸ್ರೇಲಿನ ಪ್ಯಾಲೆಸ್ಟೈನ್ ಜೊತೆಗೆ ಸಮೀಕರಿಸುವ ಮೂಲಕ ಭಾರತದ ರೋಷಕ್ಕೂ ಗುರಿಯಾಗಿದೆ. ಪಾಕಿಸ್ತಾನದ ಈ ರೀತಿಯ ಉಗ್ರ ಪರವಾದ ನಿಲುವನ್ನು ಭಾರತ‌ ಖಂಡಿಸಿದೆ.

ಪಾಕ್‌ನ ಭಯೋತ್ಪಾದನೆಯ ಪರ ಅಲ್ಲಿನ ಖಾಯಂ ಪ್ರತಿನಿಧಿ ಮುನೀರ್ ಅಕ್ರಂ ಅವರು ಈ ಸಂಬಂಧ ಮಾತನಾಡಿದ್ದು, ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ಭಯೋತ್ಪಾದನೆಯನ್ನು ಖಂಡಿಸುತ್ತೇವೆ. ಆದರೆ, ಅಂತರಾಷ್ಟ್ರೀಯ ಕಾನೂನಡಿಯಲ್ಲಿ ಸ್ವ ನಿರ್ಣಯ ಮತ್ತು ರಾಷ್ಟ್ರೀಯ ವಿಮೋಚನೆಗಾಗಿ ವಿದೇಶಿ ಆಕ್ರಮಣದ ಅಡಿಯಲ್ಲಿ ವಾಸಿಸುವ ಜನರ ಹೋರಾಟ‌ ನ್ಯಾಯಯುತವಾದದ್ದೇ. ಇದನ್ನು ಭಯೋತ್ಪಾದನೆಯ ಜೊತೆಗೆ ಸಮೀಕರಣ ಮಾಡಲಾಗದು ಎಂದಿದ್ದಾರೆ.

ಪಾಕಿಸ್ತಾನ ನೀಡಿರುವ ಈ ಹೇಳಿಕೆಯನ್ನು ತಿರಸ್ಕರಿಸಿದೆ. ಅವುಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ತಿಳಿಸಿದೆ. ಭಾರತದ ಉಪ ಖಾಯಂ ಪ್ರತಿನಿಧಿ ಆರ್. ರವೀಂದ್ರ ಅವರು ಮಾತನಾಡಿ, ನನ್ನ ದೇಶದ ಅವಿಭಾಜ್ಯ ಅಂಗಗಳಾಗಿರುವ ಕೇಂದ್ರಾಡಳಿತ ಪ್ರದೇಶಗಳನ್ನು ಉಲ್ಲೇಖಿಸಿ ಒಂದು ನಿಯೋಗವು ತನ್ನ ನಿತ್ಯದ ಹೇಳಿಕೆಯನ್ನು ನೀಡಿದೆ. ಭಾರತವು ಈ ಹೇಳಿಕೆಯನ್ನು ತಿರಸ್ಕಾರದಿಂದ ನೋಡುವುದಾಗಿ ಹೇಳಿದ್ದಾರೆ. ಸಮಯದ ಹಿತಾಸಕ್ತಿಯ ಕಾರಣಕ್ಕೆ ಪಾಕಿಸ್ತಾನದ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

ಹಾಗೆಯೇ ಪಾಕಿಸ್ತಾನ ಕಾಶ್ಮೀರದ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಪ್ರತಿ ಬಾರಿಯೂ ಪ್ರಸ್ತಾಪ ಮಾಡುತ್ತದೆ. ಆದರೆ ಪಾಕ್ ನೀಡುವ ಹೇಳಿಕೆಗಳಿಗೆ ಯಾವುದೇ ಬೆಂಬಲ ವ್ಯಕ್ತವಾಗುವುದಿಲ್ಲ ಎಂದೂ ತಿಳಿಸಿದ್ದಾರೆ.

Tags

Related Articles

Close