ಪ್ರಚಲಿತ

ಸೋಲಿನ ಗಾಯಕ್ಕೆ ಪ್ರಧಾನಿ ಮೋದಿ ಅವರ ಭರವಸೆಯ ನುಡಿಗಳೇ ಮುಲಾಮು

ಗೆಲುವಿಗೆ ಸಾವಿರಾರು ಅಪ್ಪಂದಿರು. ಆದರೆ ಸೋಲು ಅನಾಥ ಎಂಬ ಉಕ್ತಿ ಇದೆ. ಆದರೆ ನಮ್ಮ ದೇಶದ ವಿಚಾರಕ್ಕೆ ಸಂಬಂಧಿಸಿದ ಹಾಗೆ ಸೋಲು, ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ, ಗೆಲುವಿಗೆ ಹಿಗ್ಗದೆ, ಸೋಲಿಗೆ ಕುಗ್ಗದೆ, ಈಸಬೇಕು ಇದ್ದು ಜೈಸಬೇಕು ಎಂಬಂತೆ ಶಕ್ತಿ ತುಂಬುವ ಮಹಾನ್ ವ್ಯಕ್ತಿಯೊಬ್ಬರಿದ್ದಾರೆ. ಸೋಲು ಗೆಲುವಿನ ಮೆಟ್ಟಿಲಾಗಬೇಕೇ ಹೊರತು ಹತಾಶೆಯ ತೊಟ್ಟಿಲಾಗಬಾರದು ಎಂದು ಸೋಲಿನ ನೋವಿನಲ್ಲಿಯೂ ಮುಂದಿನ ಗೆಲುವಿನ ಭರವಸೆ ತುಂಬುವ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಅವರು.

ಮೊನ್ನೆಯಷ್ಟೇ ವಿಶ್ವಕಪ್ ಫೈನಲ್‌ ಪಂದ್ಯಾಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲಾಯಿತು. ಈ ಸೋಲಿನ ಸಂಕಟ ಆಟಗಾರರನ್ನು ಮಾತ್ರವಲ್ಲದೆ ದೇಶದ ಪ್ರತಿಯೋರ್ವ ಕ್ರಿಕೆಟ್ ಪ್ರೇಮಿಯನ್ನು ಕೂಡಾ ನೋವಿನ ಮನೆಗೆ ನೂಕಿತ್ತು. ಹತ್ತು ಪಂದ್ಯ ಗೆದ್ದ ಭಾರತ, ಫೈನಲ್ ಮ್ಯಾಚ್ ಸೋತು ಹೋಗಿತ್ತು. ಭಾರತದ ಕ್ರಿಕೆಟ್ ತಂಡ ಈ‌ ಸಮಯದಲ್ಲಿ ಕಣ್ಣೀರಾಗಿತ್ತು. ದೇಶದ ಜನರು ಸಹ ವಿಶ್ವಕಪ್ ಭಾರತದ ಕೈ ಜಾರಿ ಹೋದದ್ದಕ್ಕಾಗಿ ಸಂಕಟ ಪಟ್ಟಿದ್ದರು.

ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರದರ್ಶಿಸಿದ ನಡೆ ಎಲ್ಲರಿಗೂ ಮಾದರಿ ಎನ್ನು‌ವ ಹಾಗಿತ್ತು. ವಿಶ್ವಕಪ್ ಸೋತ ಬೇಜಾರಿನಲ್ಲಿ ಡ್ರೆಸ್ಸಿಂಗ್ ರೂಮ್‌ಗೆ ತೆರಳಿದ್ದ ಭಾರತೀಯ ಆಟಗಾರರನ್ನು, ಅವರಿದ್ದಲ್ಲಿಗೇ ಹೋಗಿ ತಬ್ಬಿ, ಬೆನ್ನು ತಟಟ್ಟಿ ಸಂತೈಸಿ, ಮತ್ತೆ ಪ್ರಯತ್ನ ಮಾಡೋಣ, ಮುಂದಿನ ಗೆಲುವಿಗಾಗಿ ಶ್ರಮ ಪಡೋಣ ಎಂದು ಹುರಿದುಂಬಿಸಿದ ಪರಿ ಎಲ್ಲರಿಗೂ ಮಾದರಿಯೇ ಸರಿ.

ಸತತ ಗೆಲುವಿನ ಮೂಲಕ ಫೈನಲ್ ಪ್ರವೇಶ ಮಾಡಿದ್ದ ಮತ್ತು ಕೋಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಗೆಲುವಿನ ಭರವಸೆ ಮೂಡಿಸಿದ್ದ ನನ್ನ ಕ್ರಿಕೆಟಿಗರು ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದ್ದು ಅರಗಿಸಿಕೊಳ್ಳಲಾದ ವಿಷಯವಾಗಿತ್ತು. ಈ ಕಠಿಣ ಸನ್ನಿವೇಶದಿಂದ‌ ನೊಂದಿದ್ದ ಭಾರತೀಯ ಆಟಗಾರರನ್ನು ಪ್ರಧಾನಿ ಮೋದಿ ಅವರು ಹುರಿದುಂಬಿಸಿದ್ದಾರೆ. ಡ್ರೆಸ್ಸಿಂಗ್ ರೂಮ್ ‌ಗೆ ತೆರಳಿ ನೀವು ಅತ್ಯುತ್ತಮ ಪ್ರದರ್ಶನ ನೀಡಿದ್ದೀರಿ. ಅತ್ಯುತ್ತಮವಾಗಿ ಆಟವಾಡಿದ್ದರೂ ಗೆಲುವು ಪಡೆಯಲಾಗಲಿಲ್ಲ. ಈ ಸಂದರ್ಭದಲ್ಲಿ ಎದೆಗುಂದಿದ್ದ ಭಾರತೀಯ ಆಟಗಾರರಿಗೆ ಪ್ರಧಾನಿ ಮೋದಿ ಅವರ ಮಾತುಗಳು ಮುಂದಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಲು‌ ಸ್ಪೂರ್ತಿ ತುಂಬಿವೆ.

ಪ್ರಧಾನಿ ಮೋದಿ ಅವರ ಈ ವ್ಯಕ್ತಿತ್ವ ಭಾರತೀಯ ಆಟಗಾರರ ಮನಸ್ಸಿನಲ್ಲಿದ್ದ ‌ನೋವಿನ ಗಾಯಕ್ಕೆ ಮುಲಾಮು ಹಚ್ಚಿದಂತಾಗಿದ್ದು ಸುಳ್ಳಲ್ಲ. ಹಾಗೆಯೇ ಭಾರತ‌ ಸೋತರೂ ಸಹ ನಾವೆಲ್ಲರೂ ಭಾರತೀಯ ಆಟಗಾರರ ಜೊತೆಗಿದ್ದೇವೆ ಎಂಬಂತೆ ಭಾರತೀಯ‌ ಕ್ರಿಕೆಟ್ ಅಭಿಮಾನಿಗಳು ಸಹ ತಂಡಕ್ಕೆ ಪ್ರೋತ್ಸಾಹ ನೀಡಿದ್ದು, ಮುಂದಿನ ದಿನಗಳಲ್ಲಿ ಗೆಲ್ಲುವ ಭರವಸೆಯನ್ನು ಹೆಚ್ಚಿಸಿವೆ ಎಂದರೂ ತಪ್ಪಾಗಲಾರದು.

Tags

Related Articles

Close