ಪ್ರಚಲಿತ

ಮಾರಿಷಸ್‌ನಲ್ಲೂ ಹಿಂದೂಗಳ ಭಾವನೆಗೆ ಬೆಲೆ: ಕರ್ನಾಟಕದ ಕೈ ಸರ್ಕಾರಕ್ಕಿಲ್ಲ ಹಿಂದೂಗಳ ಮೇಲೆ ದಯೆ

ಪ್ರಭು ಶ್ರೀರಾಮನ ಭವ್ಯ ಮಂದಿರ ಲೋಕಾರ್ಪಣೆ, ಪ್ರಭುವಿನ ಪ್ರಾಣ ಪ್ರತಿಷ್ಠೆಯ ದಿನದಂದು ಮಾರಿಷಸ್ ದೇಶ ಹಿಂದೂಗಳಿಗೆ ಎರಡು ತಾಸುಗಳ‌ ವಿರಾಮ ಘೋಷಣೆ ಮಾಡಿದೆ. ಆ ಮೂಲಕ ಹಿಂದೂಗಳಿಗೆ ಈ ಪುಣ್ಯ ಕಾರ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಿದೆ.

ಮಾರಿಷಸ್‌ನ ಹಿಂದೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳು ಅಲ್ಲಿನ ಸರ್ಕಾರದ ಬಳಿ 22 ಜನವರಿ 2024 ರಂದು ಶ್ರೀರಾಮ ಮಂದಿರ ಲೋಕಾರ್ಪಣೆ ಮತ್ತು ವಿಗ್ರಹ ಪ್ರಾಣ ಪ್ರತಿಷ್ಠಾ‌‌ ಸಲುವಾಗಿ ಎರಡು ಗಂಟೆಗಳ ಕಾಲ ವಿರಾಮ ನೀಡಬೇಕು ಎಂದು ಮನವಿ ಮಾಡಿತ್ತು. ಈ ಮನವಿಯನ್ನು ಪುರಸ್ಕರಿಸಿರುವ ಅಲ್ಲಿನ ಸರ್ಕಾರ ಹಿಂದೂಗಳ ಭಾವನೆಗೆ ಗೌರವ ನೀಡಿ, ಪ್ರಾಣ ಪ್ರತಿಷ್ಠೆಯ ದಿನ ಎರಡು ಗಂಟೆಗಳ ಕಾಲ ವಿರಾಮವನ್ನು ಹಿಂದೂ ಕೆಲಸಗಾರರಿಗೆ ನೀಡಿದೆ. 

ಭಾರತದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೂತನ ರಾಮ ಮಂದಿರ ಲೋಕಾರ್ಪಣೆ ನಡೆಯಲಿದೆ. ಈ ಸಂದರ್ಭದಲ್ಲಿ ಆಯೋಜನೆ ಮಾಡಲಾದ ಪ್ರಾರ್ಥನೆ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಅನುಕೂಲವಾಗುವಂತೆ, ಹಿಂದೂ ಭಕ್ತರ ಹೇಡಿಕೆಗೆ ಮಾರಿಷಸ್ ಸರ್ಕಾರ ಅಸ್ತು ಎಂದಿರುವುದಾಗಿದೆ. ಉದ್ಘಾಟನೆಯ ದಿನ ಸಾರ್ವಜನಿಕ ಸಿಬ್ಬಂದಿಗಳಿಗೆ ವಿಶೇಷವಾಗಿ 2 ಗಂಟೆಗಳ ವಿರಾಮ ನೀಡಲು ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಆ ದಿನ ಅಯೋಧ್ಯೆಗೆ ಪ್ರಭು ಶ್ರೀರಾಮನ ಪುನರಾಗಮನವನ್ನು ಸೂಚಿಸುವ ಹೆಗ್ಗುರುತಿನ ಸೂಚಕವಾಗಿದೆ ಎಂದು ಅಲ್ಲಿನ ಸರ್ಕಾರದ ಮೂಲಗಳು ಹೇಳಿವೆ.

ಆದರೆ, ಇತ್ತ ಕರ್ನಾಟಕ ಭಾರತದೊಳಗೇ ಇದ್ದರೂ ಇಲ್ಲಿನ ಕಾಂಗ್ರೆಸ್ ಸರ್ಕಾರ ಮಾತ್ರ ಅಂದು ರಜೆ ಘೋಷಣೆ ಮಾಡಲು ಮುಂದಾಗದೇ ಇರುವುದು ವಿಪರ್ಯಾಸವೇ ಸರಿ. ರಾಮನ ಬಂಟ ಹನುಮನೂ ಕರ್ನಾಟಕಕ್ಕೆ ಸೇರಿದವನು. ಭಗವಂತನ ಸನ್ನಿದಾನದಲ್ಲಿ ಕರ್ನಾಟಕದ ಗುರುತಿಗಾಗಿ ಹಲವಾರು ಸಂಗತಿಗಳಿವೆ. ಆದರೂ ಕೈ ಸರ್ಕಾರ ಇಂತಹ ಒಂದು ಮಹತ್ಕಾರ್ಯದಲ್ಲಿ ರಾಜಕೀಯ ಬೆರೆಸುತ್ತಿರುವುದು ಬೇಸರದ ವಿಚಾರ. 

ಪ್ರಭು ಶ್ರೀರಾಮನ ಮಂದಿರ ನಿರ್ಮಾಣ ಕಾರ್ಯ ಬಿಜೆಪಿಯಿಂದಲೇ ಆಗಿದ್ದರೂ, ಭಾರತೀಯ ಜನತಾ ಪಕ್ಷ ಇದನ್ನು ರಾಜಕೀಯೇತರವಾಗಿಯೇ ನೀಡುತ್ತಿದೆ. ಈ ಮಂದಿರದ ಉದ್ಘಾಟನೆಗೂ ಕೈ ನಾಯಕರನ್ನು ಆಹ್ವಾನ ಮಾಡಲಾಗಿದೆ. ಆ ಮೂಲಕ ಇದು ಬಿಜೆಪಿ‌ಗೆ ಸಂಬಂಧಿತವಾದದ್ದಲ್ಲ‌. ಬದಲಾಗಿ ಇದು ಸಂಪೂರ್ಣ ದೇಶಕ್ಕೆ ಪಕ್ಷಾತೀತ, ಧರ್ಮಾತೀತವಾಗಿ ಸಂಬಂಧಿಸಿದ್ದು ಎಂಬುದನ್ನು ಸಾರಿ ಹೇಳಿದೆ.

ಆದರೂ ಕೈ ಸರ್ಕಾರ ಮಾತ್ರ ಇದನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಿದ್ದು, ಕರ್ನಾಟಕದ ಹಿಂದೂಗಳಿಗೆ, ರಾಮ ಭಕ್ತರಿಗೆ ಈ ಸಂಭ್ರಮವನ್ನು ಆನಂದಿಸಲು ಉದ್ಘಾಟನಾ ದಿನದಂದು ರಜೆ ನೀಡದೇ ಇರುವುದು ದುಃಖದ ವಿಚಾರ. ದೇಶದ ಹಲವು ರಾಜ್ಯಗಳು ರಾಮ ಮಂದಿರ ಲೋಕಾರ್ಪಣೆ ದಿನದಂದು ಸಾರ್ವತ್ರಿಕ ರಜೆ ಘೋಷಣೆ ಮಾಡಿದ್ದು, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದೂಗಳ ಭಾವನೆಗಳಿಗೆ ಬೆಲೆ ನೀಡಿ, ಅಂದು ರಜೆ ಘೋಷಣೆ ಮಾಡುವುದೋ ಎಂಬುದನ್ನು ಕಾದು ನೋಡಬೇಕಿದೆ.

Tags

Related Articles

Close