ಪ್ರಚಲಿತ

ರಾಮಲಲ್ಲಾ ವಿಗ್ರಹದ ಮೊದಲ ಚಿತ್ರ ಬಿಡುಗಡೆ

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ರಾಷ್ಟ್ರ ಮಂದಿರ ಉದ್ಘಾಟನೆಗೆ ಇನ್ನು ಮೂರೇ ದಿನ ಬಾಕಿ ಉಳಿದಿದೆ.‌ ಇಡೀ ದೇಶಕ್ಕೆ ದೇಶವೇ ಈ ಪುಣ್ಯ ಕಾರ್ಯವನ್ನು ತಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದೆ‌. ಪ್ರಭು ಶ್ರೀರಾಮನ ವಿಗ್ರಹವನ್ನು ಕಾಣಲು ಭಕ್ತ ಜನರು ಕಾಯುತ್ತಿದ್ದಾರೆ.

ಜನವರಿ 22, 2024 ರ ಸೋಮವಾರದಂದು ಪ್ರಭು ಶ್ರೀರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ಅನೇಕ ಗಣ್ಯರ ದಿವ್ಯ ಉಪಸ್ಥಿತಿಯಲ್ಲಿ ಈ ಮಂಗಳ ಕಾರ್ಯ ನಡೆಯಲಿದೆ. ಆ ಬಳಿಕ ಮರುದಿನದಿಂದ ಪ್ರಭು ಶ್ರೀರಾಮನನ್ನು ಮಂದಿರದೊಳಗೆ ನೋಡುವ ಅವಕಾಶ ನೀಡಿರುವುದಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಹಿತಿಯನ್ನು ನೀಡಿದೆ.

ರಾಮ ಮಂದಿರದ ಗರ್ಭ ಗುಡಿಯ ಒಳಗೆ ಪ್ರತಿಷ್ಠಾಪಿಸಲ್ಪಡುವ ವಿಗ್ರಹವನ್ನು ಎರಡು ದಿನಗಳ ಹಿಂದಷ್ಟೇ ಅಯೋಧ್ಯೆಯ ನೂತನ ಮಂದಿರಕ್ಕೆ ತರಲಾಗಿದೆ. ಇದನ್ನು ಮೈಸೂರಿನ ಅರುಣ್ ಯೋಗಿ ರಾಜ್ ಎಂಬ ಶಿಲ್ಪಿ ಕೆತ್ತನೆ ಮಾಡಿರುವುದಾಗಿದೆ. ಈ ಸುಂದರ ವಿಗ್ರಹದ ಮೊದಲ ಫೋಟೋ ಈಗ ಹೊರ ಬಿದ್ದಿದೆ. ಗರ್ಭಗುಡಿಯೊಳಗಿನ ರಾಮಲಲ್ಲಾನ ವಿಗ್ರಹದ ಮೊದಲ ಚಿತ್ರ ಇದಾಗಿದೆ.

ಈ ಶಿಲ್ಪವನ್ನು ಕೃಷ್ಣ ಶಿಲೆಯಿಂದ ಕೆತ್ತನೆ ಮಾಡಲಾಗಿದೆ. ಐದು ವರ್ಷದ ಮಗು ನಿಂತಿರುವ ಭಂಗಿಯಲ್ಲಿ ಈ ಶಿಲ್ಪ ವನ್ನು ಕೆತ್ತನೆ ಮಾಡಲಾಗಿದೆ. ಈ ವಿಗ್ರಹ ಐವತ್ತೊಂದು ಇಂಚುಗಳದ್ದಾಗಿದೆ. ಈ ಮೂರ್ತಿಯನ್ನು ಪ್ರತಿಷ್ಠಾಪನೆಗೂ ಮುನ್ನ ಗರ್ಭಗೃಹದಲ್ಲಿ ಕೂರಿಸಲಾಗಿದೆ. ಇದರ ಮುಖಕ್ಕೆ ಮುಸುಕು ಹೊದಿಸಲಾಗಿದ್ದು, ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಇದನ್ನು ತೆಗೆಯಲಾಗುತ್ತದೆ. ಪ್ರಾಣ ಪ್ರತಿಷ್ಠೆಯ ಬಳಿಕ ಈ ಮೂರ್ತಿಯನ್ನು ಸಂಪೂರ್ಣವಾಗಿ ಕಾಣಬಹುದಾಗಿದೆ.

ಪ್ರಾಣ ಪ್ರತಿಷ್ಠೆಯ ಮರುದಿನದಿಂದ ಈ ಮೂರ್ತಿಯನ್ನು ನೋಡಿ, ಪುನೀತರಾಗಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.‌ ವಿಗ್ರಹಕ್ಕೆ ದೈವಿಕ ಪ್ರಜ್ಞೆ ತುಂಬುವ ನಿಟ್ಟಿನಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಗಳು ನಡೆಯಲಿವೆ. ಪ್ರಾಣ ಪ್ರತಿಷ್ಠೆಯ ಬಳಿಕವೇ ಈ ಮೂರ್ತಿ ಪೂಜೆಗೆ ಅರ್ಹತೆ ಪಡೆಯಲಿದೆ ಎಂದು ಮೂಲಗಳು ಹೇಳಿವೆ.

Tags

Related Articles

Close