ಪ್ರಚಲಿತ

ನಾರಿಶಕ್ತಿ ಅನಾವರಣಗೊಳಿಸಿದ ದೆಹಲಿಯ ಕರ್ತವ್ಯ ಪಥದ ಗಣರಾಜ್ಯೋತ್ಸವ ಪರೇಡ್

ದೇಶದ 75 ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ದೆಹಲಿಯ ಕರ್ತವ್ಯ ಪಥ್‌ನಲ್ಲಿ ನಾರೀ ಶಕ್ತಿಯ ಅನಾವರಣವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ನೇತೃತ್ವದಲ್ಲಿ ಈ ಗಣರಾಜ್ಯೋತ್ಸವ ಆಚರಣೆ ನಡೆದಿದ್ದು, ಫ್ರೆಂಚ್‌ನ ಅಧ್ಯಕ್ಷ ಎಮ್ಯಾನ್ಯುಯಲ್ ಮ್ಯಾಕ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಮಿಲಿಟರಿ ಸಾಮರ್ಥ್ಯದ ಪ್ರದರ್ಶನ ಸಹ ನಡೆಯಿತು.

ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಹದಿಮೂರು ಸಾವಿರ ವಿಶೇಷ ಅತಿಥಿಗಳು ಭಾಗವಹಿಸಿದ್ದರು. ವಿಕಸಿತ ಭಾರತ ಮತ್ತು ಭಾರತ-ಲೋಕತಂತ್ರದ ಮಾತೆ ಎಂಬ ಧ್ಯೇಯವನ್ನಿರಿಸಿಕೊಂಡು ಈ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಇದೇ ಪ್ರಪ್ರಥಮ ಬಾರಿಗೆ ನೂರಕ್ಕಿಂತಲೂ ಅಧಿಕ ಮಹಿಳಾ ಕಲಾವಿದರು ನಾದ ಸ್ವರ, ಶಂಖ, ನಾಗಾದಂತಹ ಭಾರತೀಯ ವಾದ್ಯಗಳನ್ನು ಬಳಕೆ ಮಾಡುವ ಮೂಲಕ ಮೆರವಣಿಗೆ ಪ್ರಾರಂಭ ಮಾಡಿದರು.

ಕರ್ತವ್ಯ ಪಥದಲ್ಲಿ ಇದೇ ಪ್ರಪ್ರಥಮ ಬಾರಿಗೆ ಸಂಪೂರ್ಣ ಮಹಿಳಾ ತ್ರಿಪಥ ತುಕಡಿಯು ಭಾಗವಹಿಸಿತು. ಮಹಿಳಾ ಪೈಲಟ್‌ಗಳು ನಾನಾ ಶಕ್ತಿ‌ಪ್ರದರ್ಶ ಮಾಡುವ ಪ್ಲೈ ಪಾಸ್ಟ್ ಮೂಲಕ ಜನರನ್ನು ರಂಜಿಸಿದರು. ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ತುಕಡಿಗಳು ಕೇವಲ ಮಹಿಳೆಯರನ್ನೇ
ಒಳಗೊಂಡಿತ್ತು.

ಹಾಗೆಯೇ ಈ ಪರೇಡ್ ನಲ್ಲಿ ಫ್ರೆಂಚ್ ಸಶಸ್ತ್ರ ಪಡೆಗಳ ಸಂಯೋಜಿತ ಬ್ಯಾಂಡ್ ಮತ್ತು ಮಾರ್ಚಿಂಗ್ ತುಕಡಿ ಎಲ್ಲರ ಗಮನ ಸೆಳೆಯಿತು. ಟ್ಯಾಂಕರ್ ವಿಮಾನ ಮತ್ತು ಫರೇಂಚ್ ವಾಯು ಮತ್ತು ಬಾಹ್ಯಾಕಾಶ ಪಡೆಯ ಎರಡು ರಫೇಲ್ ಫೈಟರ್ ಜೆಟ್‌ಗಳು ತುಕಡಿಗಳ ಮೇಲೆ ಹಾರಿ ಪರೇಡ್‌ನ ಪ್ರದರ್ಶನಕ್ಕೆ ಮತ್ತಷ್ಟು ಮೆರುಗು ನೀಡಿತು.

ಭಾರತೀಯ ನೌಕಾಪಡೆಯ ತುಕಡಿ 144 ಪುರುಷ ಮತ್ತು ಮಹಿಳಾ ಅಗ್ನಿವೀರರನ್ನು ಒಳಗೊಂಡಿದೆ. ನಾರಿಶಕ್ತಿ ಮತ್ತು ಸ್ವದೇಶಿಕರಣ ಮೂಲಕ‌ ಸಾಗರದಾದ್ಯಂತ ಸಮುದ್ರ ಶಕ್ತಿ ಎಂಬ ಚಿತ್ರಣ ನೀಡುವ ನೌಕಾದಳದ ಸ್ತಬ್ಧಚಿತ್ರ ಗಮನ ಸೆಳೆಯಿತು.

Tags

Related Articles

Close