ಪ್ರಚಲಿತ

ಕತ್ತಲಿನ ವಿರುದ್ಧ ಬೆಳಕಿನ ವಿಜಯೋತ್ಸವವೇ ದೀಪಾವಳಿ: ರಿಷಿ ಸುನಕ್

ನಮ್ಮ ದೇಶದಲ್ಲೇ ಇದ್ದುಕೊಂಡು ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರ, ಆಚರಣೆಗಳಿಗೆ ಬೆಲೆ ಕೊಡದೆ, ಹಿಂದೂ ಧರ್ಮವನ್ನು ಅವಹೇಳನ ಮಾಡಿಕೊಂಡು, ಹೀಯಾಳಿಸಿಕೊಂಡು ಬದುಕುವ ಜ್ಞಾನ ಕುರುಡು ಜನರು ನಮ್ಮ ನಡುವೆ ಇದ್ದಾರೆ. ಇನ್ನು ವಿದೇಶದಲ್ಲಿರುವ ಭಾರತೀಯರಿಗೆ ನಮ್ಮ ಧರ್ಮ, ಆಚರಣೆಗಳ ಮೇಲೆ ನಂಬಿಕೆ ಇದ್ದೀತೇ? ಈ ಪ್ರಶ್ನೆ ಹಲವರಲ್ಲಿ ಮೂಡಿದರೆ ಅದು ತಪ್ಪಲ್ಲ.

ಅಂತಹವರಿಗೆ ಇದ್ದರೆ ಹೀಗೆ ಇರಬೇಕು ಎನ್ನುವಂತೆ ಬ್ರಿಟನ್‌ನ ಅನಿವಾಸಿ ಭಾರತೀಯ ಕುಟುಂಬ, ಸದ್ಯ ಬ್ರಿಟನ್‌ನ ಪ್ರಧಾನಿಯಾಗಿ ಭಾರತದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿರುವ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಜೀವನ ಪಾಠ ಹೇಳುತ್ತದೆ.

ಅವರು ಬ್ರಿಟನ್‌ನಲ್ಲಿ ಅಷ್ಟು ದೊಡ್ಡ ಹುದ್ದೆ ಅಲಂಕರಿಸಿದ್ದರೂ ತಾವೊಬ್ಬ ಭಾರತೀಯ, ನಮ್ಮ ಧರ್ಮ, ಸಂಸ್ಕೃತಿ ಸಂಸ್ಕಾರಗಳನ್ನು ಮರೆತಿಲ್ಲ. ಈಗಲೂ ಅದನ್ನು ಮೈಗೂಡಿಸಿಕೊಂಡು, ರೂಢಿಸಿಕೊಂಡು, ಆಚರಿಸಿಕೊಂಡು ಬರುತ್ತಿದ್ದಾರೆ ಎನ್ನುವುದರಲ್ಲಿಯೇ ಅವರಿಗೆ ನಮ್ಮ ದೇಶದ ಮೇಲಿನ ಪ್ರೀತಿ, ನಮ್ಮ ಧರ್ಮ, ಆಚರಣೆಗಳ ಮೇಲಿನ ಪ್ರೀತಿ ಎದ್ದು ಕಾಣುತ್ತದೆ ಎನ್ನುವುದು ಸತ್ಯ.

ಹೌದು, ಬ್ರಿಟನ್ನಿನಲ್ಲಿಯೂ ದೀಪಾವಳಿ ಆಚರಣೆ ಮಾಡುವ ಮೂಲಕ ಭಾರತದ ನೆಲದ ಸಂಸ್ಕೃತಿಯ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ರಿಷಿ ಸುನಕ್ ಮಾಡಿದ್ದಾರೆ. ತಮ್ಮ ಕುಟುಂಬ ವರ್ಗದ ಜೊತೆಗೆ ಬ್ರಿಟನ್ನಿನಲ್ಲಿ ದೀಪಾವಳಿ ಆಚರಿಸಿ, ಸಂಭ್ರಮಿಸಿದ್ದಾರೆ. ಸುನಕ್ ಅವರ ಪತ್ನಿ, ಪುತ್ರಿಯರು ಸಹ ದೀಪಾವಳಿಯ ಹಣತೆಗಳ ಜೊತೆ ಸಂಭ್ರಮಿಸಿದ್ದಾರೆ.

ಜೊತೆಗೆ ದೀಪಾವಳಿಯ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಸಹ ಆಯೋಜಿಸಿದ್ದರು. ಸುನಕ್ ಪತ್ನಿ ಅಕ್ಷತಾ ಅವರು ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಹಿಂದೂ ಸಮುದಾಯದ ಸದಸ್ಯರ ಜೊತೆಗೆ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಸುನಕ್ ಮತ್ತು ಅವರ ಕುಟುಂಬದ ದೀಪಾವಳಿ ಹಬ್ಬ ಆಚರಣೆಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರೀ ವೈರಲ್ ಆಗಿವೆ.

ಈ ಬಗ್ಗೆ ಸ್ವತಃ ಸುನಕ್ ಅವರು ಎಕ್ಸ್‌ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದು, ಇದು ಕತ್ತಲೆಯ ವಿರುದ್ಧ ಬೆಳಕಿನ ವಿಜಯೋತ್ಸವದ ಆಚರಣೆಯಾಗಿದೆ ಎಂದು ತಿಳಿಸಿದ್ದಾರೆ. ನನ್ನ ಕುಟುಂಬದ ಜೊತೆಗೆ ದೀಪಾವಳಿ ಹಬ್ಬ ಆಚರಣೆ ಮಾಡುವುದು ನನಗೆ ವಿಶೇಷ ಕ್ಷಣವಾಗಿದೆ. ವಿಶ್ವದೆಲ್ಲೆಡೆ ದೀಪಾವಳಿ ಆಚರಣೆ ಮಾಡುತ್ತಿರುವ ಎಲ್ಲರಿಗೂ ಶುಭಾಶಯಗಳು ಎಂದು ತಿಳಿಸಿದ್ದಾರೆ.

Tags

Related Articles

Close