ಪ್ರಚಲಿತ

ಜನರ ಮಾತು, ಹೃದಯದಲ್ಲಿ ಶ್ರೀರಾಮನಿದ್ದಾನೆ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಅಸಾಧ್ಯ ಎಂದೇ ನಂಬಲಾಗಿದ್ದ ಹಲವಾರು ಸಂಗತಿಗಳು ಸಾಧ್ಯವಾಗಿವೆ. ಅವುಗಳಲ್ಲಿ ಬಹು ಮುಖ್ಯವಾಗಿ ತ್ರಿವಳಿ ತಲಾಖ್ ರದ್ದು, ಕಾಶ್ಮೀರವನ್ನು ಭಾರತದೊಳಗಿದ್ದರೂ, ಹೊರಗಿಟ್ಟಿದ್ದ ಆರ್ಟಿಕಲ್ 370 ರದ್ದತಿ, ಬಹು ಕೋಟಿ ಜನರ ಕನಸು ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಗಳೂ ಯಾವುದೇ ಗೊಂದಲ, ಗಲಾಟೆ ಇಲ್ಲದೆ ಹೂ ಎತ್ತಿದ ರೀತಿಯಲ್ಲಿ ಸುಲಲಿತವಾಗಿ ನಡೆದಿರುವುದು ‌ಸಂತಸದ ಸಂಗತಿ.

ಇದಲ್ಲದೆ ಕೃಷಿಕರ ಬದುಕಿಗೆ ಆಧಾರವಾಗಲು, ಈ‌ ದೇಶದ ಬಡ ಜನರ ಜೀವನಕ್ಕೆ, ಸಾಮಾನ್ಯ ಜನರ ಜೀವನಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿಯೂ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಹಲವಾರು ಜನಾನುರಾಗಿ, ಜನೋಪಯೋಗಿ ಯೋಜನೆಗಳಿಗೆ ಜೀವ ನೀಡುವ ಮೂಲಕ ಭಾರತದ ಅಭಿವೃದ್ಧಿಯ ಓಟಕ್ಕೆ ಇನ್ನಷ್ಟು ವೇಗ ನೀಡಿದೆ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ, ಅಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠೆಯ ಮೂಲಕ ಬಹುಸಂಖ್ಯಾತರು ಮತ್ತು ನೈಜ ಭಾರತೀಯರ, ಶ್ರೀರಾಮ ಭಕ್ತರ ಹಾರೈಕೆಗೂ ಪ್ರಧಾನಿ ಮೋದಿ ಮತ್ತು ಅವರ ತಂಡ ಭಾಜನವಾಗಿದೆ ಎನ್ನುವುದು ಸಂತಸದ ವಿಷಯ.

ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಡೆದಿದ್ದು, ಇದರಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಬಗ್ಗೆ ಮನದುಂಬಿ ಮಾತನಾಡಿದ್ದಾರೆ. ಅಯೋಧ್ಯೆಯ ಶ್ರೀರಾಮನ ಪ್ರತಿಷ್ಠಾ ದಿನದಂದು ದೇಶದೆಲ್ಲೆಡೆ ರಾಮ ಭಕ್ತರು, ಹಿಂದೂಗಳು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದ್ದು ಮಾತ್ರವಲ್ಲದೆ, ಮನೆ ಮನೆಯಲ್ಲೂ ದೀಪಾವಳಿ ಆಚರಣೆ ಮಾಡಿದ್ದಾರೆ. ಆ ಮೂಲಕ ದೇಶದ ಎಲ್ಲಾ ಜನರ ಭಕ್ತಿ ಭಾವಗಳು ಒಂದೇ ಸಮನಾದದ್ದು ಎಂದು ಸಾಬೀತಾಗಿದೆ.‌ ಹಾಗೆಯೇ, ಎಲ್ಲರ ಮಾತಿನಲ್ಲಿ, ಹೃದಯದಲ್ಲಿ ಪ್ರಭು ಶ್ರೀರಾಮನಿದ್ದಾನೆ ಎನ್ನುವುದು ಜಗಜ್ಜಾಹೀರು ಆಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಸಂವಿಧಾನ ರಚನಾಕಾರರಿಗೂ ‌ಪ್ರಭು ಶ್ರೀರಾಮನ ಆಡಳಿತವೇ ಸ್ಪೂರ್ತಿ ಮತ್ತು ಮೂಲ. ಈ ಕಾರಣಕ್ಕಾಗಿಯೇ ನಾನು ಅಂದು ಅಯೋಧ್ಯೆಯಲ್ಲಿ ದೇವರಿಂದ ದೇಶ ಮತ್ತು ರಾಮ ನಿಂದ ರಾಷ್ಟ್ರ ಎಂಬ ಕುರಿತು ಮಾತನಾಡಿದ್ದಾಗಿ ಹೇಳಿದ್ದಾರೆ.

ಅಯೋಧ್ಯೆಯ ಭವ್ಯ ರಾಷ್ಟ್ರ ಮಂದಿರ ನಿರ್ಮಾಣ ದೇಶದ ಜನರನ್ನು ಒಗ್ಗೂಡಿಸಿದೆ. ದೇಶದ ಸಾಮೂಹಿಕ ಶಕ್ತಿಯ ಪ್ರದರ್ಶನ ವಾಗಿದೆ. ರಾಮನ ಪ್ರತಿಷ್ಠೆಯಂದು ದೇಶದ ಶಕ್ತಿಯ ಅನಾವರಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Tags

Related Articles

Close