ಪ್ರಚಲಿತ

ಶ್ರೀರಾಮ ಮಂದಿರಕ್ಕೆ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ವಿಗ್ರಹ ಫೈನಲ್: ಇದರ ವಿಶೇಷತೆ ಏನು ಗೊತ್ತಾ?

ರಾಮಾಯಣ ಕಾಲದಲ್ಲಿಯೇ ಅಯೋಧ್ಯಾಪತಿ ಶ್ರೀರಾಮಚಂದ್ರನಿಗೆ ಮತ್ತು ಕರ್ನಾಟಕಕ್ಕೆ ಒಂದು ನಂಟಿರುವುದನ್ನು ನಾವು ಮಹಾಕಾವ್ಯಗಳಲ್ಲಿ ಗಮನಿಸಿರಬಹುದು. ಪ್ರಸ್ತುತ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ದೇಗುಲ ನಿರ್ಮಾಣವಾಗಿದ್ದು, ಈ ದೇವಾಲಯದಲ್ಲಿಯೂ ಕರ್ನಾಟಕದೊಂದಿಗಿನ ಬಂಧ ಬಿಗಿಯಾಗಿರಲಿದೆ ಎನ್ನುವುದು ನಮ್ಮೆಲ್ಲರಿಗೂ ಸಂತಸದ ವಿಷಯ.

ಹೌದು, ಅಯೋಧ್ಯೆಯ ಪ್ರಭು ಶ್ರೀರಾಮನ ನೂತನ ರಾಷ್ಟ್ರ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಬಾಲ ರಾಮನ ವಿಗ್ರಹದ ಹಿಂದಿರುವ ಕೈಚಳಕ ನಮ್ಮ ಕರ್ನಾಟಕದ್ದೇ ಶಿಲ್ಪಿಯದ್ದು ಎನ್ನುವುದು, ಅಯೋಧ್ಯೆ ಮತ್ತು ಕರ್ನಾಟಕದ ನಂಟನ್ನು ಮತ್ತಷ್ಟು ಬಿಗಿ ಮಾಡುವ ವಿಷಯವೇ ಸರಿ.

ಈಗಾಗಲೇ ಮೂವರು ನುರಿತ ಶಿಲ್ಪಿಗಳಿಂದ ಕೆತ್ತಲ್ಪಟ್ಟ ಬಾಲ ರಾಮರ ಮೂರು ವಿಗ್ರಹದಳಲ್ಲಿ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆಗೆ ಒಳಪಡಲಿರುವ ಶ್ರೀರಾಮನ ಮೂರ್ತಿಯನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈಗಾಗಲೇ ಆಯ್ಕೆ ಮಾಡಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿ ರಾಜ್ ಅವರ ಕೈಯಲ್ಲಿ ಅರಳಿದ ಸುಂದರ ಮೂರ್ತಿಯನ್ನು ಪ್ರಾಣ ಪ್ರತಿಷ್ಠೆ ಗಾಗಿ, ಮಂದಿರದ ಒಳಗೆ ಪ್ರತಿಷ್ಠಾಪಿಸಲು ಆಯ್ಕೆ ಮಾಡಲಾಗಿದೆ.

ಈ ಸಂಬಂಧ ಟ್ರಸ್ಟ್ ಈಗಾಗಲೇ ಅಧಿಕೃತ ಪ್ರಕಟಣೆಯನ್ನು ಸಹ ನೀಡಿದ್ದು, ಇದು ಕರ್ನಾಟಕದ ಪಾಲಿಗೆ ಮತ್ತಷ್ಟು ಆನಂದದಾಯಕ ಸಂದರ್ಭ ಸೃಷ್ಟಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮೈಸೂರಿನ ಅರುಣ್ ಯೋಗಿ ರಾಜ್, ಕರ್ನಾಟಕದ ಇಡಗುಂಜಿಯ ಜಿ. ಎಲ್. ಭಟ್, ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಈ ಮೂವರು ಶಿಲ್ಪಿಗಳಿಗೆ ಪ್ರಭು ಶ್ರೀರಾಮನ ಬಾಲ ರಾಮನ ವಿಗ್ರಹ ಕೆತ್ತಲು ಜವಾಬ್ದಾರಿ ವಹಿಸಲಾಗಿತ್ತು. ಈ ಪೈಕಿ ಅರುಣ್ ಯೋಗಿ ರಾಜ್ ಅವರ ಕೈಯಲ್ಲಿ ಅರಳಿದ ಶ್ರೀರಾಮ ವಿಗ್ರಹವನ್ನು ಕೊನೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಮಾಹಿತಿ ನೀಡಿದೆ.

ಅರುಣ್ ಅವರು ಕೃಷ್ಣ ಶಿಲೆಯನ್ನು ಬಳಸಿ ಶ್ರೀರಾಮನ ಬಾಲ ರಾಮನ ಮೂರ್ತಿ ಕೆತ್ತಿದ್ದಾರೆ. ಆರು ತಿಂಗಳುಗಳಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಈ ಮೂರ್ತಿ 1.5 ಟನ್ ತೂಕವಿದ್ದು, 51 ಇಂಚು ಉದ್ದ (ಪಾದದಿಂದ – ಹಣೆಯ ವರೆಗೆ) ಇದೆ. ಮಂದಸ್ಮಿತ, ಮೃದು ವದನ, ಕಣ್ನೋಟ, ದೇಹ ಇತ್ಯಾದಿಗಳನ್ನು ಗಮನದಲ್ಲಿ ಇಟ್ಟುಕೊಂಡು ಅರುಣ್ ಅವರ ಕೆತ್ತನೆಯನ್ನು ಆಯ್ಕೆ ಮಾಡಲಾಗಿದೆ.

ಈ ವಿಗ್ರಹ ನಿರ್ಮಾಣಕ್ಕೆ ಬಳಕೆ ಮಾಡಿರುವ ಕಲ್ಲಿನ ಬಗ್ಗೆ ಹೇಳುವುದಾದರೆ, ನೀರು, ಪಂಚಾಮೃತ ಅಭಿಷೇಕಗಳನ್ನು ಮಾಡಿದರೂ ಈ ಕಲ್ಲಿನ ಮೇಲೆ ವ್ಯತಿರಿಕ್ತ ಪರಿಣಾಮ ಆಗುವುದಿಲ್ಲ. ಈ ಕಲ್ಲಿಗೆ ಸುರಿದ ನೀರು, ಇನ್ಯಾವುದೇ ವಸ್ತುವನ್ನು ಸೇವನೆ ಮಾಡಿದರೂ ಆರೋಗ್ಯದ ಮೇಲೆ ಯಾವ ದುಷ್ಪರಿಣಾಮ ಸಹ ಆಗುವುದಿಲ್ಲ.

Tags

Related Articles

Close