ಪ್ರಚಲಿತ

ಬಯಲಾಯಿತು ಹೊಸ ಹಗರಣ!! ಪಿ.ಎನ್.ಬಿ ಬಳಿಕ ಮತ್ತೊಂದು ಸಾವಿರಾರು ಕೋಟಿ ಮೌಲ್ಯದ ಟಿಡಿಎಸ್ ವಂಚನೆ ಪ್ರಕರಣ ಬೆಳಕಿಗೆ!!

ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಹಿಡಿದಂದಿನಿಂದಲೂ ಭ್ರಷ್ಟಕುಳುಗಳನ್ನು ಮಟ್ಟಹಾಕುತ್ತಿದ್ದು, ಅದಕ್ಕೆ ಸಾಕ್ಷಿ ಎನ್ನುವಂತೆ ಶ್ರೀಮಂತರು ಬ್ಯಾಂಕುಗಳಿಗೆ ಟೋಪಿ ಹಾಕಿ ಓಡಿಹೋಗುತ್ತಿದ್ದಾರೆಂದು ಆರೋಪಿಸುತ್ತಿರುವ ಕಾಂಗ್ರೆಸ್‍ಗೆ ಮುಜುಗರ ತರುವಂತಹ ಬೆಳವಣಿಗೆಯೊಂದರಲ್ಲಿ ಪಂಜಾಬ್‍ನ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ಮುಖಂಡ ಅಮರೀಂದರ್ ಸಿಂಗ್ ಅವರ ಅಳಿಯನೇ ಸಿಕ್ಕಿಬಿದ್ದು ಬಾರೀ ಸುದ್ದಿಯಾಗಿದ್ದರು. ಆದರೆ ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮತ್ತೊಂದು ಬಹುಕೋಟಿ ತೆರಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ!!

ಈಗಾಗಲೇ ಐಎನ್ ಎಕ್ಸ್ ಮೀಡಿಯಾ ಹಣ ಅವ್ಯವಹಾರ ಹಗರಣ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ಬಂಧಿಸಿರುವ ವಿಚಾರ ತಿಳಿದೇ ಇದೆ!! ಆದರೆ ಇದೀಗ 3,200 ಕೋಟಿ ರೂಪಾಯಿಗಳ ಭಾರೀ ಟಿಡಿಎಸ್ ಹಗರಣವೊಂದನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಿದೆ. ಹಾಗಾಗಿ 447 ಕಂಪನಿಗಳ ತಮ್ಮ ನೌಕರರ ವೇತನದಿಂದ ತೆರಿಗೆ ಹಣ ಕಡಿತ ಮಾಡಿಕೊಂಡು ಇಲಾಖೆಗೆ ಪಾವತಿಸದೆ ತಮ್ಮ ಉದ್ಯಮ ಹಿತಾಸಕ್ತಿಗಳಿಗೆ ಬಳಸಿಕೊಂಡಿರುವುದು ಪತ್ತೆಯಾಗಿದೆ.

ಉದ್ಯೋಗಿಗಳ ವೇತನದ ಮೇಲಿನ ತೆರಿಗೆ ಹಣವನ್ನು ಕಡಿತ ಮಾಡಿಕೊಂಡ ಸಂಸ್ಥೆಗಳು ಅದನ್ನು ಇಲಾಖೆಗೆ ಪಾವತಿ ಮಾಡದೆ ವಂಚನೆ ಮಾಡಿವೆ ಎನ್ನಲಾಗಿದೆ. ಮೂಲಗಳ ಪ್ರಕಾರ ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಿರುವಂತೆ ಸುಮಾರು 447 ಕಂಪನಿಗಳು ತಮ್ಮ ನೌಕರರ ವೇತನದಿಂದ ತೆರಿಗೆ ಹಣ ಕಡಿತ ಮಾಡಿಕೊಂಡು ಅದನ್ನು ಇಲಾಖೆಗೆ ಪಾವತಿಸದೆ ತಮ್ಮ ಉದ್ಯಮ ಹಿತಾಸಕ್ತಿಗಳಿಗೆ ಬಳಸಿಕೊಂಡಿರುವುದು ಪತ್ತೆಯಾಗಿದೆ. ಈ ರೀತಿ ಬಳಸಿಕೊಂಡ ಹಣದ ಮೌಲ್ಯ ಸುಮಾರು 3200 ಕೋಟಿ ಗೂ ಅಧಿಕ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ತೆರಿಗೆ ಇಲಾಖೆಯ ಟಿಡಿಎಸ್ ವಿಭಾಗ ಈ ಕಂಪನಿಗಳ ವಿರುದ್ಧ ತನಿಖೆ ಆರಂಭಿಸಿವೆ ಎಂದು ತಿಳಿದುಬಂದಿದೆ.

ಅಷ್ಟಕ್ಕೂ ಟಿಡಿಎಸ್ ಎಂದರೇನು ?

ಟ್ಯಾಕ್ಸ್ ಡಿಡಕ್ಟೆಡ್ ಅಟ್ ಸೋರ್ಸ್(ಟಿಡಿಎಸ್) ಅಂದರೆ ಮೂಲದಲ್ಲಿಯೇ ತೆರಿಗೆ ಕಡಿತ… ಹೆಸರೇ ಸೂಚಿಸುವಂತೆ ಆದಾಯದ ಮೂಲದಲ್ಲಿಯೇ ತೆರಿಗೆ ಸಂಗ್ರಹದ ಉದ್ದೇಶವನ್ನು ಈ ವ್ಯವಸ್ಥೆ ಹೊಂದಿದೆ. ಆದಾಯ ತೆರಿಗೆ ಕಾಯ್ದೆ 1961ರ ಅನ್ವಯ ವೇತನಗಳು ಸಾಮಾನ್ಯವಾಗಿ ಟಿಡಿಎಸ್ ಅಡಿಯಲ್ಲಿ ಬರುತ್ತವೆ. ಹಾಗೆಯೇ ಬ್ಯಾಂಕ್ ಠೇವಣಿಗಳು ಮತ್ತು ಇತರ ಹೂಡಿಕೆಗಳ ಮೇಲಿನ ಬಡ್ಡಿ, ವಿಮಾ ಕಂಪನಿಗಳ ಏಜೆಂಟರ ಕಮಿಷನ್ ಇತ್ಯಾದಿಗಳೂ ಟಿಡಿಎಸ್ ವ್ಯಾಪ್ತಿಗೊಳಪಟ್ಟಿವೆ.

ತಮ್ಮ ನೌಕರರಿಗೆ ವೇತನಗಳನ್ನು ನೀಡುವ ಉದ್ಯೋಗದಾತರು ವೇತನ ಪಾವತಿಯ ಸಂದರ್ಭ ಆದಾಯ ತೆರಿಗೆಯನ್ನು ಕಡಿತಗೊಳಿಸುವುದು ಕಡ್ಡಾಯವಾಗಿದ್ದು, ಅದನ್ನು ಅವರು ನೇರವಾಗಿ ಕೇಂದ್ರ ಸರ್ಕಾರದ ಆದಾಯ ಇಲಾಖೆಗೆ ಪಾವತಿಸುತ್ತಾರೆ. ಇಂತಹ ತೆರಿಗೆ ಸಂಗ್ರಹ ವ್ಯವಸ್ಥೆಯನ್ನು ಕೇಂದ್ರ ವಿತ್ತ ಸಚಿವಾಲಯದ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ನಿರ್ವಹಣೆ ಮಾಡುತ್ತದೆ. ಈ ಸಿಬಿಡಿಟಿ ಕೇಂದ್ರ ಆದಾಯ ತೆರಿಗೆ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ, ಟಿಡಿಎಸ್ ಪ್ರಮುಖವಾಗಿ ಸಂಸ್ಥೆಗಳ ಲೆಕ್ಕಪತ್ರ ವಿಭಾಗವು ಉದ್ಯೋಗಿಯ ಅಂದಾಜು ತೆರಿಗೆ ಅರ್ಹ ವೇತನದ ಆಧಾರದಲ್ಲಿ ಆದಾಯ ತೆರಿಗೆಯನ್ನು ಲೆಕ್ಕ ಹಾಕಲು ನೆರವಾಗುತ್ತದೆ.

ವಂಚನೆ ಎಸಗಿರುವವರಿಗೆ ಆದಾಯ ತೆರಿಗೆ ಕಾಯ್ದೆಯಡಿ ದಂಡ!!

ಆದರೆ ಇದೀಗ ಬಹುಕೋಟಿ ತೆರಿಗೆ ವಂಚನೆ ಪ್ರಕರಣ ಬಯಲಾಗಿದ್ದು, ಐಟಿ ಇಲಾಖೆಯ ಟಿಡಿಎಸ್ ವಿಭಾಗ ಈ ಕಂಪನಿಗಳ ವಿರುದ್ಧ ತನಿಖೆ ಆರಂಭಿಸಿ ಕೆಲವು ಪ್ರಕರಣಗಳಲ್ಲಿ ವಾರಂಟ್ ಕೂಡ ಜಾರಿ ಮಾಡಿದೆ. ಆದಾಯ ತೆರಿಗೆ ಕಾಯ್ದೆಯಡಿ ದಂಡ ಸಹಿತ ಕನಿಷ್ಠ 3 ತಿಂಗಳಿನಿಂದ 7 ವರ್ಷಗಳ ವರೆಗೆ ಕಠಿಣ ಶಿಕ್ಷೆ ವಿಧಿಸಲು ಅವಕಾಶವಿದೆ. ಸೆಕ್ಷನ್ 276 ಬಿ ಅಡಿಯಲ್ಲಿ ವಿಚಾರಣೆ ಆರಂಭಿಸಲಾಗಿದೆ. ಇದರ ಜತೆಗೆ ಈ ಕಂಪನಿಗಳ ವಿರುದ್ಧ ವಂಚನೆ ಹಾಗೂ ವಿಶ್ವಾಸದ್ರೋಹದ ಪ್ರಕರಣಗಳನ್ನೂ ದಾಖಲಿಸಲು ಐಟಿ ಇಲಾಖೆ ಚಿಂತಿಸುತ್ತಿದೆ. ತಪ್ಪಿತಸ್ಥರಲ್ಲಿ ಗಣ್ಯ ರಾಜಕೀಯ ಮುಖಂಡರೊಬ್ಬರ ಜತೆಗೆ ಸಂಪರ್ಕವಿರುವ ಬಿಲ್ಡರ್‍ಗಳೂ ಇದ್ದಾರೆ. ಅಷ್ಟೇ ಅಲ್ಲದೇ, ಒಬ್ಬ ಬಿಲ್ಡರ್ ತನ್ನ ನೌಕರರಿಂದ ಟಿಡಿಎಸ್ ನೆಪದಲ್ಲಿ 100 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ಉದ್ಯಮದ ವ್ಯವಹಾರಕ್ಕೆ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಇಷ್ಟೇ ಅಲ್ಲದೆ ಚಿತ್ರ ನಿರ್ಮಾಣ ಸಂಸ್ಥೆಗಳು, ಮೂಲಸೌಲಭ್ಯ ನಿರ್ಮಾಣ ಕಂಪನಿಗಳು, ಸ್ಟಾರ್ಟಪ್‍ಗಳು ಮತ್ತು ರಾತ್ರಿ ವಿಮಾನ ಹಾರಾಟ ಸಂಸ್ಥೆಗಳೂ ಕೂಡ ಈ ವಂಚಕರ ಗುಂಪಿನಲ್ಲಿ ಸೇರಿವೆ ಎಂದು ತಿಳಿದು ಬಂದಿದೆ!! ಇನ್ನು, ಬಂದರು ಅಭಿವೃದ್ಧಿಯ ಭಾಗವಾಗಿರುವ ಮೂಲಸೌಕರ್ಯ ಕಂಪನಿಯೊಂದು 14 ಕೋಟಿ ರೂಪಾಯಿ ಗಳನ್ನು ದುರ್ಬಳಕೆ ಮಾಡಿಕೊಂಡಿದೆ. ಐಟಿ ಸೊಲ್ಯೂಷನ್ಸ್ ಪೂರೈಸುವ ಬಹುರಾಷ್ಟ್ರೀಯ ಕಂಪನಿಯೊಂದು 11 ಕೋಟಿ ರೂಪಾಯಿಗಳನ್ನು ವಂಚಿಸಿದೆ.

ಇತ್ತೀಚೆಗೆ ನಡೆಸಿದ ಪರಿಶೀಲನೆಯ ವೇಳೆ 447 ಕಂಪನಿಗಳು ಒಟ್ಟು 3,200 ಕೋಟಿ ರೂ.ಗಳನ್ನು ತಮ್ಮ ನೌಕರರ ವೇತನದಿಂದ ಟಿಡಿಎಸ್ ರೂಪದಲ್ಲಿ ಕಡಿತ ಮಾಡಿಕೊಂಡಿವೆ. ಆದರೆ ತೆರಿಗೆ ಇಲಾಖೆಗೆ ಪಾವತಿಸಿಲ್ಲ’ ಎಂದು ಐಟಿ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, 2017ರ ಏಪ್ರಿಲ್‍ನಿಂದ 2018ರ ಮಾರ್ಚ್ ವರೆಗಿನ ಅವಧಿಯ ಲೆಕ್ಕಾಚಾರದಂತೆ ಈ ವಂಚನೆ ಪತ್ತೆಯಾಗಿದ್ದು, ಶೀಘ್ರವೇ ಕೆಲವು ವಂಚಕರನ್ನು ಬಂಧಿಸಲಿದ್ದೇವೆ ಎಂದು ಅಧಿಕಾರಿ ವಿವರಿಸಿದ್ದಾರೆ.

ಇಲಾಖೆ ಈಗಾಗಲೇ ಕೆಲವು ಕಂಪನಿಗಳ ಬ್ಯಾಂಕ್ ಖಾತೆಗಳು ಮತ್ತು ಸ್ಥಿರಾಸ್ತಿಗಳ ಜಪ್ತಿ ಪ್ರಕ್ರಿಯೆ ಆರಂಭಿಸಿದೆ. ಹಲವು ಪ್ರಕರಣಗಳಲ್ಲಿ ಟಿಡಿಎಸ್ ಹಣವನ್ನು ಮರುಬಂಡವಾಳವಾಗಿ ಹೂಡಲಾಗಿದೆ. ಕೆಲವರು ಈಗಾಗಲೇ ಕ್ಷಮೆಯಾಚಿಸಿದ್ದು, ತೆರಿಗೆ ಹಣ ಪಾವತಿಸುವುದಾಗಿ ಭರವಸೆ ನೀಡಿವೆ. ಇನ್ನು ಕೆಲವರು ಪ್ರತಿಕೂಲ ಮಾರುಕಟ್ಟೆ ಸ್ಥಿತಿಯಿಂದಾಗಿ ತೆರಿಗೆ ಪಾವತಿಸಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಕೆಲವು ಪ್ರಕರಣಗಳಲ್ಲಿ ಸಂಗ್ರಹಿಸಲಾದ ಟಿಡಿಎಸ್‍ನಲ್ಲಿ ಶೇ 50ರಷ್ಟು ಮೊತ್ತವನ್ನು ಸರ್ಕಾರಕ್ಕೆ ಪಾವತಿಸಿದ್ದು, ಉಳಿದ ಮೊತ್ತವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ಅಧಿಕಾರಿ ವಿವರಿಸಿದ್ದಾರೆ.

ಒಟ್ಟಿನಲ್ಲಿ, ಈಗ ಪ್ರತಿಯೊಂದು ವ್ಯವಹಾರವೂ ಡಿಜಿಟಲೀಕರಣಗೊಂಡಿರುವುದರಿಂದ ವಂಚಕರು ಸುಲಭವಾಗಿ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ!! ಅದೇನೇ ಇದ್ದರೂ ಕೂಡ ನೌಕರರ ವೇತನದಿಂದ ತೆರಿಗೆ ಹಣ ಕಡಿತ ಮಾಡಿಕೊಂಡು ಇಲಾಖೆಗೆ ಪಾವತಿಸದೆ ತಮ್ಮ ಉದ್ಯಮ ಹಿತಾಸಕ್ತಿಗಳಿಗೆ ಬಳಸಿಕೊಂಡಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಬೇಸರದ ಸಂಗತಿ!! ಆದರೆ ಇದೀಗ ಈ ಎಲ್ಲಾ ಮೋಸಗಳಿಗೆ ತೆರೆಬೀಳಲಿದ್ದು, ಈ ಸಂಬಂಧ ತೆರಿಗೆ ಇಲಾಖೆಯ ಟಿಡಿಎಸ್ ವಿಭಾಗವು ಈ ಕಂಪನಿಗಳ ವಿರುದ್ಧ ತನಿಖೆ ಆರಂಭಿಸಿದ್ದು ಶೀಘ್ರದಲ್ಲೇ ಕೆಲ ಉದ್ಯಮಿಗಳು ಪೊಲೀಸರ ಅತಿಥಿಗಳಾಗಲಿರುವುದಂತೂ ಖಂಡಿತಾ……!!

– ಅಲೋಖಾ

Tags

Related Articles

Close