ಪ್ರಚಲಿತ

ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ: ಇಂದಿನಿಂದಲೇ ಧಾರ್ಮಿಕ ಕಾರ್ಯಕ್ರಮಗಳ ಆರಂಭ

ಇನ್ನೊಂದು ವಾರದಲ್ಲಿ ಅಯೋಧ್ಯೆಯ ಶ್ರೀರಾಮನ ರಾಷ್ಟ್ರ ಮಂದಿರ ಲೋಕಾರ್ಪಣೆಯಾಗಲಿದೆ. ಈ ಹಿನ್ನಲೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ವಿಧಿವಿಧಾನ ಇಂದಿನಿಂದ ಆರಂಭವಾಗಲಿದೆ. 

ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾಹಿತಿ ನೀಡಿದ್ದು, ಇಂದಿನಿಂದಲೇ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಜನವರಿ 22 ರಂದು ನಡೆಯುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ವರೆಗೆ ನಡೆಯಲಿದೆ ಎಂದು ಹೇಳಿದ್ದಾರೆ.

ಜನವರಿ 22 ರಂದು ನಾಲ್ಕು ಮಂದಿ ಗಣ್ಯರ ಸಮ್ಮುಖದಲ್ಲಿ ಮಧ್ಯಾಹ್ನ 12.20 ಕ್ಕೆ ಆರಂಭವಾಗಲಿರುವ ಪ್ರಾಣ ಪ್ರತಿಷ್ಠೆ ಕ್ರಿಯೆ ಮಧ್ಯಾಹ್ನ 1 ಗಂಟೆಯ ವೇಳೆಗೆ ಸಮಾಪನಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನ ನೆರವೇರಬೇಕಾದ ಧಾರ್ಮಿಕ ಕಾರ್ಯಕ್ರಮಗಳು ಮಂಗಳವಾರದಿಂದ ಆರಂಭವಾಗಲಿರುವುದಾಗಿಯೂ ಅವರು ಮಾಹಿತಿಯಲ್ಲಿ ತಿಳಿಸಿದ್ದಾರೆ. 

ಭವ್ಯ ಶ್ರೀರಾಮ ಮಂದಿರದಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್, ರಾಜ್ಯಪಾಲರಾದ ಆನಂದ್ ಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್, ಟ್ರಸ್ಟ್‌ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರು ಭಾಗವಹಿಸಲಿದ್ದಾರೆ ಎಂದು ರಾಯ್ ಹೇಳಿಕೆ ನೀಡಿದ್ದಾರೆ. 

ಈ ಕಾರ್ಯಕ್ರಮದ ಸಂದರ್ಭದಲ್ಲಿ ಯಾವುದೇ ತೊಂದರೆಗಳಿಗೆ ಆಸ್ಪದ ನೀಡದಂತೆ ಗಣ್ಯರಿಗೆ ಮತ್ತು ಸಂತರಿಗೆ ಸಮಯಕ್ಕೆ ಮುಂಚಿತವಾಗಿ ಆಗಮಿಸುವ ಹಾಗೆ ವಿನಂತಿ ಮಾಡಲಾಗಿದೆ. ಕಾರ್ಯಕ್ರಮದ ಆಹ್ವಾನ ಪತ್ರಿಕೆ ವೈಯಕ್ತಿಕವಾಗಿದ್ದು, ಒಂದು ಆಹ್ವಾನ ಪತ್ರಿಕೆಯಲ್ಲಿ ಒಬ್ಬರಿಗೆ ಮಾತ್ರವೇ ಪ್ರವೇಶಕ್ಕೆ ಅವಕಾಶ ನೀಡಲಾಗಿರುವುದಾಗಿ ತಿಳಿಸಿದ್ದಾರೆ. ಗಣ್ಯರ ಶಿಷ್ಯರು ಅಥವಾ ಸಹಾಯಕರು, ಅವರ ಜೊತೆಗೆ ಬಂದವರು ಹೊರಗೆ ಇರಬೇಕಾಗುತ್ತದೆ ಎಂದು ಹೇಳಿದ್ದಾರೆ. ಸ್ಥಳದಲ್ಲಿ ಆಸನ ಸಂಖ್ಯೆ ಸೀಮಿತವಾಗಿದ್ದು, ಇದರಿಂದಾಗಿ ಆಹ್ವಾನಿತರಿಗಷ್ಟೇ ಕಾರ್ಯಕ್ರಮದಲ್ಲಿ ನೇರ ಭಾಗಿಯಾಗಲು ಅವಕಾಶ ನೀಡಿರುವುದಾಗಿ ಅವರು ನುಡಿದಿದ್ದಾರೆ.

ಸುಮಾರು ಏಳು ಸಾವಿರಕ್ಕೂ ಅಧಿಕ ಗಣ್ಯರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಸಂತರಿಗೂ ಆಹ್ವಾನ ಪತ್ರಿಕೆ ನೀಡುವ ಮುನ್ನ ಅಂಚೆ ಮೂಲಕ ಈ ವಿಚಾರವನ್ನು ಸಹ ತಲುಪಿಸಲಾಗಿದೆ. ಜೊತೆಗೆ ಕಾರ್ಯಕ್ರಮದ ಸಂದರ್ಭದಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗೆಗೂ ಮಾಹಿತಿ ನೀಡಲಾಗಿದೆ ಎಂದು ರಾಯ್ ಹೇಳಿದ್ದಾರೆ.

Tags

Related Articles

Close