ಪ್ರಚಲಿತ

ಬಿಗ್ ಬ್ರೇಕಿಂಗ್: ಮಗನಿಗಾಗಿ ಯಡಿಯೂರಪ್ಪ ವಿರುದ್ಧವೇ ತಿರುಗಿ ಬಿದ್ದ ಬಿಜೆಪಿ ಕಾರ್ಯಕರ್ತರು.! ಕೊನೇ ಕ್ಷಣದಲ್ಲಿ ಬದಲಾಗಿದ್ಯಾಕೆ ಬಿಜೆಪಿ ನಿರ್ಧಾರ..?

ಚುನಾವಣೆ ಹೊತ್ತಿನಲ್ಲಿ ರಾಜಕೀಯ ಪಕ್ಷದ ನಾಯಕರಿಗೆ ಟಿಕೆಟ್ ಹಂಚಿಕೆಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿರುತ್ತದೆ. ಅದೇಗೋ ಸಮಸ್ಯೆಯನ್ನು ಸರಿದೂಗಿಸಿ ಹೊಂದಾಣಿಕೆಯಿಂದ ನಡೆಯುತ್ತೇವೆ ಎನ್ನುವಾಗಲೇ ಮತ್ತೊಂದು ಕಡೆ ರಾದ್ದಾಂತ ಶುರುವಾಗುತ್ತದೆ. ಇದು ಹೊಸದೇನಲ್ಲ. ಆದರೆ ಇದೀಗ ನಾಮ ಪತ್ರ ಸಲ್ಲಿಸಲು ಇನ್ನೊಂದೇ ದಿನ ಬಾಕಿ ಇರುವಾಗಲೇ ಮತ್ತೊಂದು ಅಚ್ಚರಿಯ ನಿರ್ಧಾರವೊಂದಕ್ಕೆ ರಾಜ್ಯ ಕಾರಣವಾಗಿದೆ. ಇದಕ್ಕೆ ಪ್ರಮುಖ ಕಾರಣ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಅಚ್ಚರಿಯ ಹೇಳಿಕೆ…

ವರುಣಾದಲ್ಲಿ ವಿಜಯೇಂದ್ರ ಸ್ಪರ್ಧಿಸಲ್ಲ ಎಂದ ಬಿಎಸ್‍ವೈ…!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಈ ಬಾರಿ ಕಾಂಗ್ರೆಸ್ ಪಕ್ಷದಿಂದ ವರುಣಾ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಯಾವಾಗ ಹೈಕಮಾಂಡ್‍ನಿಂದ ಅಂಕಿತ ಬಿತ್ತೋ ಅಂದೇ ರಾಜ್ಯ ರಾಜಕೀಯದಲ್ಲಿ ಹೊಸ ಶಕೆ ಆರಂಭವಾಗಿತ್ತು. ರಾಜ್ಯದಲ್ಲೇ ಕೇಂದ್ರಬಿಂದುವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸಿ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಿ ಕಮಲವನ್ನು ಅರಳಿಸುವ ಮೂಲಕ ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರ ಟಾಂಗ್ ನೀಡಬೇಕೆನ್ನುಬವುದು ರಾಜ್ಯ ಹಾಗೂ ರಾಷ್ಟ್ರೀಯ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಭಾರತೀಯ ಜನತಾ ಪಕ್ಷದ ನಾಯಕರ ಒಲವಾಗಿತ್ತು.

ಈ ಕಾರಣಕ್ಕಾಗಿಯೇ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯನವರ ಎದುರಾಳಿಯಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ವಿಜಯೇಂದ್ರರವರನ್ನು ಕಣಕ್ಕಿಳಿಸಲು ನಿರ್ಧರಿಸಿತ್ತು. ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದ ನಾಯಕರ ಮಕ್ಕಳಿಬ್ಬರ ರಾಜಕೀಯ ಕಣ ಜಿದ್ದಾ ಜಿದ್ದಿಗೆ ಕಾರಣವಾಗಿ ಇಡೀ ರಾಜ್ಯ ರಾಜಕೀಯಕ್ಕೆ ಆಕರ್ಷಣೀಯ ಕೇಂದ್ರಬಿಂದುವಾಗಿತ್ತು.

ಕಳೆದ 10 ದಿನಗಳಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಬೀಡು ಬಿಟ್ಟು ಯತೀಂದ್ರರನ್ನು ಸೋಲಿಸಲು ತಂತ್ರವನ್ನು ರೂಪಿಸಿದ್ದರು. ಭಾರತೀಯ ಜನತಾ ಪಕ್ಷವನ್ನು ವರುಣಾದಲ್ಲಿ ಗೆಲ್ಲಿಸಿಯೇ ತೀರುತ್ತೇವೆ ಎಂಬ ಪಣವನ್ನು ತೊಟ್ಟಿದ್ದರು. ಅಪಾರ ಸಂಖ್ಯೆಯ ಕಾರ್ಯಕರ್ತರನ್ನೂ ಅವರು ಹೊಂದಿದ್ದರು. ಚುನಾವಣಾ ಜಾಥಾ, ಮನೆ ಮನೆ ಭೇಟಿ ಪ್ರಚಾರ ಎಂದೆಲ್ಲಾ ಹೊಸ ಹೊಸ ತಂತ್ರಗಳನ್ನು ಹೂಡುತ್ತಾ ವಿಜಯೇಂದ್ರ ಸ್ಪರ್ಧೆಗೆ ಎಲ್ಲಾ ತಂತ್ರಗಳನ್ನು ಅನುಸರಿಸಿ ಸಿದ್ದರಾಗಿ ನಿಂತಿದ್ದರು. ಇಂದು ನಾಮ ಪತ್ರವನ್ನೂ ಸಲ್ಲಿಸಲೂ ಮುಂದಾಗಿದ್ದರು.

ನಿರಾಕರಿಸಿದ ಯಡಿಯೂರಪ್ಪ..!

ವಿಜಯೇಂದ್ರ ನಡೆಸಿದ ಇಷ್ಟೆಲ್ಲಾ ಪ್ರಚಾರದ ನಡುವೆಯೂ ಇಂದು ಒಂದು ಅಚ್ಚರಿಯ ಬೆಳವಣಿಗೆಗೆ ಯಡಿಯೂರಪ್ಪನವರು ಕಾರಣವಾಗಿದ್ದಾರೆ. ಇಂದು ನಂಜನಗೂಡಿನಲ್ಲಿ ಚುನಾವಣಾ ಜಾಥಾವನ್ನು ನಡೆಸುತ್ತಿದ್ದ ವೇಳೆ ಅಚ್ಚರಿಯ ಘೋಷಣೆಯನ್ನು ಮಾಡಿದ ಯಡಿಯೂರಪ್ಪ ತನ್ನ ಮಗ ವಿಜಯೇಂದ್ರನಿಗೆ ಟಿಕೆಟ್ ಇಲ್ಲ ಎಂದು ಘೋಷಿಸಿದರು. “ವರುಣಾ ವಿಧಾನ ಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಕಣಕ್ಕಿಳಿದಿದ್ದಾರೆ. ಆದರೆ ಅವರನ್ನು ಸೋಲಿಸಲು ವಿಜಯೇಂದ್ರ ಕಣಕ್ಕೆ ಇಳಿಯೋದಿಲ್ಲ. ಬದಲಾಗಿ ಭಾರತೀಯ ಜನತಾ ಪಕ್ಷದ ಓರ್ವ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ನಾವು ಗೆಲ್ಲಿಸಿ ತೋರಿಸುತ್ತೇವೆ. ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಚುನಾವಣೆಗೆ ಅಭ್ಯರ್ಥಿ ಅಲ್ಲ” ಎಂದು ಅಧಿಕೃತವಾಗಿ ಘೋಷಿಸಿದರು.

ಕೆಂಡಾಮಂಡಲವಾದ ಕಾರ್ಯಕರ್ತರು…

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅದ್ಯಾವಾಗ ಇಂತಹಾ ಘೋಷಣೆಯನ್ನು ಮಾಡಿದರೋ ಅದರ ಮರು ಕ್ಷಣವೇ ಭಾರತೀಯ ಜನತಾ ಪಕ್ಷದ ಸಭೆ ರಣರಂಗವಾಗಿತ್ತು. ಕಾರ್ಯಕರ್ತರು ಕುಳಿತಿದ್ದ ಕುರ್ಚಿಗಳು ಒಡೆದು ನುಚ್ಚು ನೂರಾದವು. ವೇದಿಕೆಯಲ್ಲಿದ್ದ ಕುರ್ಚಿಗಳೇ ಚೆಲ್ಲಾಪಿಲ್ಲಿಯಾಗಿದ್ದವು. ಕಾರ್ಯಕರ್ತರ ಆಕ್ರೋಶ ಮುಗಿಲು ಮುಟ್ಟಿತ್ತು.

ಈವರೆಗೂ ವಿಜಯೇಂದ್ರರೇ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಂದೇ ಹೇಳಿಕೊಂಡು ಅಲ್ಲಿನ ಕಾರ್ಯಕರ್ತರು ಫೀಲ್ಡಿಗಿಳಿದು ಸಂಭ್ರಮ ಪಟ್ಟಿದ್ದರು. ಆದರೆ ಕೊನೇ ಕ್ಷಣದಲ್ಲಿ ಅಚ್ಚರಿ ಮೂಡಿಸಿದ ಯಡಿಯೂರಪ್ಪನವರ ಹೇಳಿಕೆಯು ಕಾರ್ಯಕರ್ತರಲ್ಲಿ ಭಾರೀ ನಿರಾಸೆಯನ್ನೇ ಮೂಡಿಸಿತ್ತು. ಇಂತಹಾ ನಿರ್ಧಾರ ಧಿಡೀರ್ ಯಾಕೆ ಎಂಬ ಪ್ರಶ್ನೆಗೆ ಇನ್ನೂ ಉತ್ತ ಸಿಕ್ಕಿಲ್ಲ. ಹೈಕಮಾಂಡ್ ಒತ್ತಡಕ್ಕೆ ಯಡಿಯೂರಪ್ಪ ಮಣಿದರಾ ಎಂಬ ಪ್ರಶ್ನೆಯೂ ಮೂಡುತ್ತಿದೆ.

ಒಟ್ಟಾರೆ ನಾಮ ಪತ್ರಕ್ಕೆ ಇನ್ನೊಂದೇ ದಿನ ಇರುವಾಗಲೇ ವಿಜಯೇಂದ್ರ ಹಾಗೂ ವರುಣಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ಅತಿದೊಡ್ಡ ಶಾಕ್‍ನ್ನು ನೀಡಿದ್ದು ಅತಿದೊಡ್ಡ ಪ್ರಶ್ನೆಯನ್ನೇ ಮೂಡುವಂತಾಗಿದೆ. ಚುನಾವಣಾ ಸಮಯದಲ್ಲಿ ಈ ನಿರ್ಧಾರಕ್ಕೆ ಆಕ್ರೋಶ ಭುಗಿಲೆದ್ದಿದ್ದು ಇದು ಯಾವ ಧಿಕ್ಕಿಗೆ ಹೋಗುತ್ತದೆ ಕಾದುನೋಡಬೇಕಾಗಿದೆ.

-ಏಕಲವ್ಯ

Tags

Related Articles

Close