ಪ್ರಚಲಿತ

ಪ್ರಧಾನಿ ಮೋದಿ ಜನರಿಗೆ ಹೆಚ್ಚು ಪ್ರಿಯರಾಗೋದು ಇದೇ ಕಾರಣಕ್ಕೆ

ಭಾರತ ದೇಶವನ್ನು ಪ್ರಪಂಚಕ್ಕೆ ಸಕಾರಾತ್ಮಕವಾಗಿ ಪರಿಚಯಿಸಿದ ಕೀರ್ತಿ ಪ್ರಧಾನಿ ಮೋದಿ ಅವರದ್ದು. ಅವರು ತೆಗೆದುಕೊಳ್ಳುವ ಸಮಯೋಚಿತ ನಿರ್ಣಯಗಳು ಭಾರತವನ್ನು ಅಭೂತಪೂರ್ವ ಎಂಬಂತೆ ಬದಲಾಯಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ.‌ ಈ ಕಾರಣದಿಂದಲೇ ಭಾರತೀಯರಿಗಷ್ಟೇ ಅಲ್ಲದೆ ಇಡೀ ವಿಶ್ವಕ್ಕೆ ಪ್ರಧಾನಿ ಮೋದಿ ಅವರು ಒಂದು ವ್ಯಕ್ತಿ ಶಕ್ತಿಯಾಗಿ ಗೋಚರಿಸುತ್ತಿರುವುದು ಎನ್ನುವುದು ಸತ್ಯ ಸಂಗತಿ.

ಪ್ರಧಾನಿ ಮೋದಿ ಅವರು ಜನರಿಗೆ ಆಪ್ತವಾಗಲು ಅವರು ತೆಗೆದುಕೊಳ್ಳುತ್ತಿರುವ ನಿಲುವುಗಳೇ ಕಾರಣ ಎನ್ನುವುದು ಸ್ಪಷ್ಟ. ಯಾವ ಜನರನ್ನು ಹೇಗೆ ತಲುಪಬೇಕು, ಜನರನ್ನು ತಮ್ಮತ್ತ ಗಮನ ನೀಡುವಂತೆ ಹೇಗೆ ಮಾಡಬಹುದು ಅಥವಾ ಹೇಗೆ ಜನರಿಗೆ ತಾವೂ ಸಹ ಅವರ ಮನೆಯ ಓರ್ವ ಸದಸ್ಯ ಎನ್ನುವ ಹಾಗೆ ಭಾಸವಾಗುವ ಹಾಗೆ ಮಾಡುವುದಾದರೂ ಹೇಗೆ ಎನ್ನುವುದರ ಸ್ವಷ್ಟ ಅರಿವು ಅವರಿಗಿದೆ. ಈ ಅರಿವೇ ಅವರನ್ನು ವಿಶ್ವಮಾನ್ಯರನ್ನಾಗಿ ಮಾಡಿರುವುದು, ತಳ ಮಟ್ಟದ ಜನರ ಹೃದಯದ ಒಳಗೂ ಇಳಿಯುವ ಹಾಗೆ ಮಾಡಿರುವುದು ಎನ್ನಬಹುದು.

ಪ್ರಧಾನಿ ಮೋದಿ ಅವರು ಭಾರತೀಯರನ್ನು ಆಯಾ ಪ್ರದೇಶದ ಭಾಷೆಗಳ ಮೂಲಕ, ಅಲ್ಲಿನ ಸಂಸ್ಕೃತಿಗಳನ್ನು ಆಚರಿಸುವ ಮೂಲಕ ತಲುಪುತ್ತಾರೆ‌‌. ಯಾವುದೇ ಹಬ್ಬ ಹರಿದಿನಗಳಿರಲಿ, ಅವರು ಪ್ರಾದೇಶಿಕ ಭಾಷೆಗಳ ಮೂಲಕ ಶುಭಾಷಯ ಕೋರಿ ಜನರಿಗೆ ಮತ್ತಷ್ಟು ಆಪ್ತರಾಗುತ್ತಾರೆ. ಕರ್ನಾಟಕದ ಜನರಿಗೆ ಕನ್ನಡದಲ್ಲಿ, ಕೇರಳಕ್ಕೆ ಸಂಬಂಧಿಸಿದ ಹಾಗೆ ಮಲಯಾಳಂ, ಮಹಾರಾಷ್ಟ್ರದ ಜನರಿಗೆ ಹಿಂದಿಯಲ್ಲಿ, ಗುಜರಾತಿಗರಿಗೆ ಗುಜರಾತಿ ಭಾಷೆಯಲ್ಲಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾರೆ. ಇದು ಜನರಿಗೆ ಅವರು ಮತ್ತಷ್ಟು ಹತ್ತಿರವಾಗುವಲ್ಲಿ ಸಹಾಯ ಮಾಡುತ್ತಿದೆ.

ಮಕರ ಸಂಕ್ರಮಣದ ಪ್ರಯುಕ್ತ ಕನ್ನಡಿಗರಿಗೆ ಪ್ರಧಾನಿ ಮೋದಿ ಅವರು ಶುಭಾಶಯಗಳನ್ನು ಕನ್ನಡದಲ್ಲೇ ತಿಳಿಸಿದ್ದಾರೆ. ಇಡೀ ನಾಡಿಗೆ ನಾಡೇ ಮಕರ ಸಂಕ್ರಮಣ ಹಬ್ಬದ ಸಂತೋಷದಲ್ಲಿ ಮಿಂದೇಳುತ್ತಿದ್ದು, ಜನರ ಈ ಸಂಭ್ರಮಕ್ಕೆ ಪ್ರಧಾನಿ ಮೋದಿ ಅವರೂ ಸಾಥ್ ನೀಡಿದ್ದಾರೆ.

ಕನ್ನಡಿಗರಿಗೆ ನಮ್ಮ ರಾಜ್ಯ ಭಾಷೆ ಕನ್ನಡದಲ್ಲಿಯೇ ಅವರು ಶುಭಕಾಮನೆಗಳನ್ನು ತಿಳಿಸಿದ್ದಾರೆ. ದೇಶದ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಪವಿತ್ರ ಸಂಕ್ರಾಂತಿ ಹಬ್ಬವು ಪ್ರತಿಯೋರ್ವರ ಜೀವನದಲ್ಲೂ ಸಂತಸ ಮತ್ತು ಸಮೃದ್ಧಿ ತರಲಿ. ಸುಗ್ಗಿ ಕಾಲವು ಸಮೃದ್ಧಿ ಮತ್ತು ಸಂತೋಷದಿಂದ ತುಂಬಲಿ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಎಲ್ಲಾ ಆಕಾಂಕ್ಷೆಗಳು ನೆರವೇರಲಿ ಎಂದೂ ಅವರು ಹಾರೈಸಿದ್ದಾರೆ.

ಪ್ರಧಾನಿ ಮೋದಿ ಅವರು ಯಾವುದೇ ರಾಜ್ಯಕ್ಕೆ ತೆರಳಲಿ, ಆ ರಾಜ್ಯದ ಭಾಷೆಯಲ್ಲಿಯೇ ತಮ್ಮ ಭಾಷಣವನ್ನು ಆರಂಭ ಮಾಡುತ್ತಾರೆ. ಆ ಮೂಲಕ ಆ ರಾಜ್ಯದ ಜನರಿಗೆ ಮತ್ತಷ್ಟು ಆಪ್ತರಾಗುತ್ತಾರೆ. ಅದೇ ರೀತಿಯಲ್ಲಿ ಶುಭಾಶಯ ಕೋರುವ ಸಂದರ್ಭದಲ್ಲಿ ‌ಸಹ ಆಯಾಯ ರಾಜ್ಯಗಳ ಭಾಷೆಗಳಿಗೆ ಪ್ರಾಶಸ್ತ್ಯ ನೀಡುವ ಮೂಲಕ ಆ ರಾಜ್ಯದ ಜನರಲ್ಲಿ ತಾನೂ ಒಬ್ಬನಾಗಲು ಪ್ರಯತ್ನ ನಡೆಸುತ್ತಾರೆ ಎನ್ನುವುದು ಸಂತಸದ ವಿಚಾರ ಮತ್ತು ಮಾದರಿ ನಡೆ ಎನ್ನಬಹುದು.

Tags

Related Articles

Close