ಪ್ರಚಲಿತ

ಪ್ರಧಾನಿ ಮೋದಿ ವಿರೋಧಿಗಳಿಂದ ಸಿಎಎ ವಿರೋಧ: ಕಾರಣ ಇಲ್ಲಿದೆ

ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಲೋಕಸಭಾ ಚುನಾವಣೆಯ ಯಾವುದೇ ಭಯ ಇಲ್ಲದೆ ಸಿಎಎ ಜಾರಿ ಮಾಡುವ ಮೂಲಕ ದೊಡ್ಡ ಮಟ್ಟದ ರಿಸ್ಕ್ ತೆಗೆದುಕೊಂಡಿದೆ. ಭಾರತೀಯರಿಗೆ ಮತ್ತು ಇತರ ದೇಶಗಳಿಂದ ನೊಂದು, ಭಾರತವನ್ನು ನಂಬಿ ಬಂದವರಿಗೆ ಆಶಾದಾಯಕವಾಗಿರುವ ಈ ಕಾಯ್ದೆಯ ವಿರುದ್ಧ ವಿರೋಧಿಗಳು ಮಾತ್ರ ಬಾಯಿ ಬಡಿದುಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕರಂತೂ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮುಸಲ್ಮಾನರ ವಿರುದ್ಧ ಈ ಕಾಯ್ದೆ ಜಾರಿಗೆ ತಂದಿದೆ ಎನ್ನುವ ಸುಳ್ಳು ಹಬ್ಬಿಸಿ, ಇಂತಹ ಮಹತ್ವದ ಮತ್ತು ಸೂಕ್ಷ್ಮ ವಿಚಾರವನ್ನು ಹೊಲಸು ರಾಜಕೀಯಕ್ಕೆ ಬಳಸಿಕೊಳ್ಳುವ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳಲು ಹೊರಟಿದೆ. ಜೊತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಹಿಡಿದಲ್ಲಿ ಈ‌ ಕಾಯ್ದೆಯನ್ನು ರದ್ದು ಮಾಡುವುದಾಗಿಯೂ ಹೇಳಿಕೊಂಡು ಓಟು ಗಿಟ್ಟಿಸಿಕೊಳ್ಳುವ ವ್ಯರ್ಥ‌ ಪ್ರಯತ್ನ ನಡೆಸುತ್ತಿದೆ ಎನ್ನುವುದು ನಾಚಿಕೆಯ ವಿಷಯ.

ದೇಶದ ಜನರನ್ನು ಒಡೆದು, ಅವರ ಮನಸ್ಸನ್ನು ಕೆಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ‌ ಕಲೆ ಕಾಂಗ್ರೆಸ್ ಪಕ್ಷಕ್ಕೆ ಹೊಸತೇನಲ್ಲ. ಸ್ವಾತಂತ್ರ್ಯ ಸಿಕ್ಕ ಇಷ್ಟು ವರ್ಷಗಳ ವರೆಗೂ ಕಾಂಗ್ರೆಸ್ ತನ್ನ ಈ ನರಿ ಬುದ್ಧಿಯನ್ನು ಬಿಟ್ಟಿಲ್ಲ ಎನ್ನುವುದು ದುರಂತ. ಸ್ವಾತಂತ್ರ್ಯದ ಸಮಯದಲ್ಲಿ ಅಖಂಡ ಭಾರತವನ್ನು ಖಂಡ ತುಂಡವನ್ನಾಗಿಸಿ ವಿಭಜನೆ ಮಾಡುವ ಮೂಲಕ ಒಡೆದಾಳುವ ನೀತಿಯನ್ನು ಅಳವಡಿಸಿಕೊಂಡಿರುವ ಕಾಂಗ್ರೆಸ್ ಪಕ್ಷ ಈ ವರೆಗೂ ಅದನ್ನು ಅಳವಡಿಸಿಕೊಂಡೇ ಬಂದಿದೆ. ಈಗ ಕಾಂಗ್ರೆಸ್ ಪಕ್ಷದ ಈ ವಿಭಜನೆಯ ಬುದ್ಧಿ ‘ಹುಟ್ಟು ಗುಣ, ಸುಟ್ಟರೂ ಹೋಗದು’ ಎಂಬಂತಾಗಿದೆ.

ಸಿಎಎ ಇಂದ ಭಾರತೀಯ ಮುಸಲ್ಮಾನರಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ಜೊತೆಗೆ ಅವರ ಪೌರತ್ವವನ್ನು ಕಿತ್ತುಕೊಳ್ಳುವುದೂ ಇಲ್ಲ. ಅವರು ಭಾರತೀಯರೇ ಆಗಿರುವಾಗ ಭಾರತಕ್ಕೆ ಪೂರಕವಾಗಿರುವ ಈ ಕಾನೂನು ಭಾರತದ ಮುಸಲ್ಮಾನರಿಗೆ ತೊಂದರೆ ನೀಡುವುದಿಲ್ಲ ಎನ್ನುವುದು ಸಾಮಾನ್ಯ ಜ್ಞಾನ. ಆದರೆ ಕಾಂಗ್ರೆಸ್ ಮಾತ್ರ ಅದಕ್ಕೆ ಕಾಮನ್ ಸೆನ್ಸ್ ಎಂಬ ಅಂಶ ಇಲ್ಲವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದು, ಇದು ಭಾರತದ ಮುಸಲ್ಮಾನರ ಪೌರತ್ವವನ್ನು ಕಿತ್ತು ಕೊಲ್ಲುತ್ತದೆ. ಕೇಂದ್ರ ಸರ್ಕಾರ ದೇಶದ ಅಲ್ಪಸಂಖ್ಯಾತ ಮುಸಲ್ಮಾನರಿಗೆ ಅನ್ಯಾಯ ಎಸಗುತ್ತಿದೆ ಎಂದೆಲ್ಲಾ ಬೊಬ್ಬೆ ಹೊಡೆಯುತ್ತಿರುವುದು ಹಾಸ್ಯಾಸ್ಪದ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ‌ ಸಿಎಎ ಕಾಯ್ದೆ ಪಾಕಿಸ್ತಾನ, ಅಫ್ಘನಿಸ್ತಾನ, ಬಾಂಗ್ಲಾ ದೇಶಗಳಿಂದ ಭಾರತಕ್ಕೆ ಬಂದು, ಇಲ್ಲಿ ಅಕ್ರಮವಾಗಿ ನೆಲೆಸಿ, ಈ ದೇಶದ ಜನರಿಗೆ ದೊರೆಯಹೇಕಾದ ಹಕ್ಕುಗಳನ್ನು ಅನುಭವಿಸುತ್ತಿರುವ ವಿದೇಶಿ ಮುಸಲ್ಮಾನರಿಗೆ ಸಮಸ್ಯೆ ಮಾಡಲಿದೆ. ಅಕ್ರಮವಾಗಿ ಇಲ್ಲಿ ನೆಲೆಸಿರುವವರಿಗೆ ನೆರವು ನೀಡುವ ದೇಶದ್ರೋಹಿಗಳಿಗೂ ಈ ಕಾನೂನು ತಲೆನೋವಾಗಿ ಪರಿಣಮಿಸಲಿದೆ ಎನ್ನುವುದು ಸತ್ಯ.

ಓಟ್ ಬ್ಯಾಂಕ್ ರಾಜಕಾರಣಕ್ಕೆ ಸಿಎಎ ಕಾಯ್ದೆ ಸಮಸ್ಯೆ ಮಾಡುತ್ತದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸಿಎಎ ಯನ್ನು ವಿರೋಧಿಸುತ್ತಿದ್ದಾರೆ. ಜೊತೆಗೆ ಇದರ ಬಗ್ಗೆ ಸಮಾಜದಲ್ಲಿ ಸುಳ್ಳು ಬಿತ್ತಿ, ಜನರನ್ನು ರೊಚ್ಚಿಗೇಳಿಸುವ ಕಾರ್ಯ ಮಾಡುತ್ತಿರುವ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಮುಂದಿನ ದಿನಗಳಲ್ಲಿ ಸಮಸ್ಯೆ ಅನುಭವಿಸುತ್ತವೆ‌ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close