ಪ್ರಚಲಿತ

ಕಾಂಗ್ರೆಸ್ ಲೂಟಿ ಹೊಡೆಯುವುದರಲ್ಲಿ ಎತ್ತಿದ ಕೈ: ಯೋಗಿ ಆದಿತ್ಯನಾಥ್

ತಾಲೀಬಾನಿಗಳಿಗೆ ಬಜರಂಗ ಬಲಿ ಗದೆಯೇ ತಕ್ಕ ಪ್ರತ್ಯುತ್ತರ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಿಳಿಸಿದ್ದಾರೆ.

ಅವರು ರಾಜಸ್ಥಾನದ ಆಲ್ವಾರ್‌ನಲ್ಲಿ ನಡೆದ ಸಾರ್ವಜನಿಕ‌ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು, ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಗಾಜಾದ ತಾಲೀಬಾನಿ ಮನಸ್ಥಿತಿಯನ್ನು ಹೇಗೆ ಹತ್ತಿಕ್ಕಲಾಗುತ್ತಿದೆ ಎಂದು ನೋಡುತ್ತಿರುವುದಾಗಿ ಹೇಳಿದ್ದಾರೆ. ಹಾಗೆಯೇ, ಹೇಗೆ ಗುರಿಯನ್ನು ಸಾಧಿಸುವುದು ಎನ್ನುವುದಕ್ಕೂ ಇದು ಸ್ಪಷ್ಟ ನಿದರ್ಶನ ಎಂದು ಅವರು ತಿಳಿಸಿದ್ದಾರೆ. ನಮ್ಮ ಸಮಾಜಕ್ಕೆ ಅರಾಜಕತೆ, ಗೂಂಡಾಗಿರಿ, ಉಗ್ರವಾದ ಎನ್ನುವುದು ಬಲು ದೊಡ್ಡ ಶಾಪವಾಗಿದೆ. ಇದರೊಂದಿಗೆ ರಾಜಕೀಯ ಸಹ ಕೈಜೋಡಿಸಿದಾಗ ಸುಸಂಸ್ಕೃತ ಸಮಾಜದ ಮೇಲೆ ದುಷ್ಪರಿಣಾಮ ಬೀರುವುದಕ್ಕೆ ಕಾರಣವಾಗುತ್ತದೆ ಎಂದವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಬಗೆಗೂ ಮಾತನಾಡಿರುವ ಯೋಗೀಜಿ, ಪಟೇಲರು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ಜವಹರಲಾಲ್ ನೆಹರು ಅವರು ಅಲ್ಲಿಯೂ ಸಮಸ್ಯೆಗಳ ಸರಮಾಲೆ ಸೃಷ್ಟಿ ಮಾಡಿದರು. ಇದು ಉಗ್ರವಾದ ಹಬ್ಬುವುದಕ್ಕೆ ಕಾರಣವಾಯಿತು ಎಂದು ಕಿಡಿ ಕಾರಿದ್ದಾರೆ.

ಪ್ರಸ್ತುತ ಭಾರತದ ಆಡಳಿತ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮೀರದ ಸಮಸ್ಯೆಗೆ ಪರಿಹಾರ ಒದಗಿಸಿದರು. ಆ ಬಳಿಕ ಭಯೋತ್ಪಾದನೆ ನಿರ್ಮೂಲನೆಗೂ ಅಗತ್ಯ ಕ್ರಮ ತೆಗೆದುಕೊಳ್ಳಲಾಯಿತು ಎಂದು ಅವರು ಹೇಳಿದ್ದಾರೆ.

ರಾಜಸ್ಥಾನದಲ್ಲಿ ಮಹಿಳಾ ದೌರ್ಜನ್ಯ ಹೆಚ್ಚುತ್ತಿದ್ದು, ಈ ಬಗ್ಗೆ ಅಲ್ಲಿನ ಸರ್ಕಾರದ ವಿರುದ್ಧ ಯೋಗೀಜಿ ಕೆಂಡ ಕಾರಿದ್ದಾರೆ. ಕಾಂಗ್ರೆಸ್ ಆಡಳಿತಕ್ಕೆ ಬಂದರೆ ನಮ್ಮ ದೇಶದಲ್ಲಿಯೂ ತಾಲೀಬಾನ್ ಮನಸ್ಥಿತಿಯಿಂದಾಗಿ ಹೆಣ್ಣು ಮಕ್ಕಳು ಶೋಷಣೆಗೆ ಗುರಿಯಾಗುತ್ತಾರೆ ಎಂದು ಅವರು ತಿಳಿಸಿದರು. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು, ಅಪರಾಧಗಳ ಪಟ್ಟಿಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿ ಇದೆ. ಕಾಂಗ್ರೆಸ್ ಲೂಟಿ ಹೊಡೆಯುವುದರಲ್ಲಿ ಎತ್ತಿದ ಕೈ ಯಾಗಿದ್ದು, ಇದಕ್ಕಾಗಿ ನಾವು ಕಾಂಗ್ರೆಸ್ ‌ಗೆ ಮತ ಹಾಕಬೇಕೇ ಎಂದು ಪ್ರಶ್ನೆ ಮಾಡಿದರು.

Tags

Related Articles

Close