ಅಂಕಣ

ಜಗತ್ತಿನ ಅತೀ ಸುಂದರವಾದ ಈ ದ್ವೀಪ ಭಾರತದಿಂದ ಅದೆಷ್ಟೋ ದೂರವಿದ್ದರೂ ಇಂದಿಗೂ ಭಾರತದ ಪಾಲಾಗಿರುವ ಬಗ್ಗೆ ರೋಚಕ ಸತ್ಯ ಇಲ್ಲಿದೆ ನೋಡಿ.. ಗ್ರೇಟ್ ಇಂಡಿಯಾ!

ಅಂಡಮಾನ್ ನಿಕೋಬಾರ್. ಇದು ನಮ್ಮ ಭಾರತದ ಭೂಭಾಗ. ಸ್ವತಂತ್ರ್ಯ ಭಾರತದ ಮೊದಲ ಧ್ವಜ ಹಾರಾಡಿದ ಸ್ಥಳ ಅಂಡಮಾನ್ ನಿಕೋಬಾರ್. ಇದು ಭಾರತದ ಪ್ರಮುಖ ಪ್ರವಾಸಿ ಸ್ಥಳವೆಂದು ಪರಿಗಣಿಸಲ್ಪಟ್ಟಿದೆ. ಬ್ರಿಟಿಷರ ಹಿಡಿತದಲ್ಲಿದ್ದ ಈ ಅಂಡಮಾನ್ ನಿಕೋಬರ್‍ನ್ನು, ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ, ಅಂದರೆ 1943ರಲ್ಲೇ ಇದನ್ನು ಬ್ರಿಟಿಷರಿಂದ ಮುಕ್ತಿಗೊಳಿಸಲಾಗಿತ್ತು.

ಅಂಡಮಾನ್, ನಿಕೋಬಾರ್ ಗಳೆಂಬ ದ್ವೀಪಗಳು ಅತಿ ಸುಂದರವಾದ ದ್ವೀಪ. ಇಂದು ಆ ದ್ವೀಪಗಳು ಮಲೇಶಿಯಾ, ಥೈಲಾಂಡ್, ಸುಮತ್ರಾ ಮತ್ತು ಮಯನ್ಮಾರ್ ರಾಷ್ಟ್ರಗಳ ಪಕ್ಕದಲ್ಲೇ ಇದ್ದರೂ ಅದು ಭಾರತದ ಪಾಲಾಗಿ ಇಂದಿಗೂ ಉಳಿದುಕೊಂಡಿರುವುದು ವಿಶೇಷವೇ ಸರಿ. ಇದು ನಮ್ಮ ದೇಶದ ಸ್ವಾತಂತ್ರ್ಯದ ಸಾಮಥ್ರ್ಯವನ್ನು ಬಿಂಬಿಸುತ್ತದೆ.

ಅದು ಭಾರತದಲ್ಲಿ ಸ್ವಾತಂತ್ರ್ಯ ಕಹಳೆ ಮೊಳಗಿದ್ದ ಸಮಯ. ಒಂದೆಡೆ ಶಾಂತಿ ದೂತರು ಭಾರತದ ಸ್ವಾತಂತ್ರ್ಯಕ್ಕಾಗಿ ಉಪವಾಸಗಳು ಇತ್ಯಾದಿ ಚಳುವಳಿಗಳನ್ನು
ಕೈಗೊಂಡಿದ್ದರೆ ಮತ್ತೊಂದೆಡೆ ಲಕ್ಷ ಲಕ್ಷ ಕ್ರಾಂತಿಕಾರಿಗಳು ತಮ್ಮ ಜೀವವನ್ನೇ ಪಣಕ್ಕಿಟ್ಟು, ರಕ್ತ ಹರಿಸಿ ಸ್ವಾತಂತ್ರ್ಯದ ಕಹಳೆಯನ್ನು ಮೊಳಗಿಸಿದ್ದರು.

ಹೀಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮ ಬ್ರಿಟಿಷರಲ್ಲಿ ನಡುಕ ಹುಟ್ಟಿಸುತ್ತಿದ್ದಾಗಲೇ, ಭಾರತದ ಭಾಗ ಎಂದೆನಿಸಿಕೊಂಡು ಬ್ರಿಟಿಷರ ಪಾಲಾಗಿದ್ದ ಅಂಡಮಾನ್
ನಿಕೋಬಾರ್ ದ್ವೀಪಗಳು ಭಾರತದ ವಶಕ್ಕೆ ಬಂದಾಗಿತ್ತು. ಅದೂ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಸುಮಾರು ಮುಂಚೆಯೇ ಅಂಡಮಾನ್ ಬ್ರಿಟಿಷರಿಂದ ಮುಕ್ತವಾಗಿತ್ತು. ಸ್ವತಂತ್ರ್ಯ ಭಾರತದ ಮೊದಲ ಧ್ವಜ ಮೊಳಗಿದ್ದೇ ಅದೇ ಅಂಡಮಾನ್‍ನಲ್ಲಿ.

ಈ ಒಂದು ಮಹಾ ಸಂಭ್ರಮಕ್ಕೆ ಕಾರಣಕ್ಕೆ ಕಾರಣವಾಗಿದ್ದು ನೇತಾಜಿ ಸುಭಾಶ್ ಚಂದ್ರ ಬೋಸರ ಸ್ವಾತಂತ್ರ್ಯ ಹೋರಾಟದ ಕಿಚ್ಚು. ಅವರೊಬ್ಬ ಅಸಾಮಾನ್ಯ ಪುರುಷ. ಅವರೊಬ್ಬ ಸ್ವಾತಂತ್ರ್ಯ ಹೋರಾಟದ ಕ್ಷಾತ್ರತೇಜ ಎಂಬುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ತನ್ನ 50000 ಸೈನಿಕರ ಪಡೆಯನ್ನು ಕಟ್ಟಿಕೊಂಡು ಭಾರತದಲ್ಲಿದ್ದ ಬ್ರಿಟಿಷರ ಮೇಲೆ ದಂಡೆತ್ತಿ ಬಂದು, ಭಾರತವನ್ನು ಸ್ವಾತಂತ್ರ್ಯಗೊಳಿಸಲು ತನ್ನ ಜೀವವನ್ನೇ ಭಾರತ ಮಾತೆಯ ದಾಸ್ಯ ಮುಕ್ತಿಗಾಗಿ ಹೋರಾಡಿದ ಪುಣ್ಯಾತ್ಮ ಆತ.

ನೇತಾಜಿ ಬೋಸರು 2ನೇ ವಿಶ್ವ ಯುದ್ಧ ಮುಗಿದ ನಂತರ ಜರ್ಮನಿಯಿಂದ ಸಿಂಗಾಪುರಕ್ಕೆ ಬರುತ್ತಾರೆ. ಹೀಗೆ ಸಿಂಗಾಪುರಕ್ಕೆ ಬಂದ ನೇತಾಜಿ ಬೋಸರು ಅಲ್ಲಿರುವ ಭಾರತೀಯ ವಾಸಿಗಳಿಗೆ ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಸಂಘಟಿಸಿ ಅವರಿಗೆ 1943ರ ಹೊತ್ತಿಗೆ ಅಂಡಮಾನ್‍ನ್ನು ಸಂಪೂರ್ಣ
ಸ್ವಾತಂತ್ರ್ಯಗೊಳಿಸುವ ಬಗ್ಗೆ ಭರವಸೆಯನ್ನು ನೀಡುತ್ತಾರೆ. ಅಂಡಮಾನ್ ಭಾರತದ ನೆಲ. ಅಲ್ಲಿ ಭಾರತದ ಧ್ವಜ ಹಾರಾಡಿಸಿಯೇ ಸಿದ್ಧ ಎಂದು ಶಪಥಗೈಯ್ಯುತ್ತಾರೆ.

ಇತ್ತ ಹೋರಾಟ ನಡೆಯುತ್ತಿದ್ದಂತೆ, ಅತ್ತ ಅಂಡಮಾನ್ ನಿಕೋಬಾರ್ ದ್ವೀಪಗಳನ್ನು ಜಪಾನಿ ನೌಕಾ ಪಡೆ ಬ್ರಿಟಿಷರಿಂದ ತನ್ನ ವಶಕ್ಕೆ ಪಡೆದುಕೊಳ್ಳುತ್ತದೆ. ಹೀಗೆ
ವಶಪಡಿಸಿಕೊಂಡ ನಂತರ ಅಲ್ಲಿ ಕಾಲಾಪಾನಿಯಂತಹ ಕ್ರೂರ ಶಿಕ್ಷೆಗೆ ಒಳಗಾಗಿದ್ದ ಅನೇಕ ಯುದ್ಧ ಕೈದಿಗಳನ್ನು ಬಂಧಮುಕ್ತಗೊಳಿಸುತ್ತಾರೆ. ಮತ್ತು ಅಲ್ಲಿದ್ದ ಬ್ರಿಟಿಷ್
ಅಧಿಕಾರಿಗಳನ್ನು ಬರ್ಮಾಕ್ಕೆ ಕಳಿಸುತ್ತಾರೆ.

ಅಂಡಮಾನ್ ನಿಕೋಬಾರ್ ಇರುವ ಪ್ರದೇಶ ಮತ್ತು ನಾವು ವಾಸಿಸುವ ಪ್ರದೇಶಕ್ಕೂ ಬಹಳ ದೂರದ ವ್ಯತ್ಯಾಸಗಳಿವೆ. ಈ ಅಂಡಮಾನ್ ನಿಕೋಬಾರ್ ದ್ವೀಪಗಳು ಮಲೇಷಿಯಾ, ಥೈಲಾಂಡ್, ಸುಮತ್ರಾ, ಮಯನ್ಮರ್ ದೇಶಗಳ ಸಮೀಪವಿದೆ. ಈ 4 ದೇಶಗಳಿಗೆ ಈ ದ್ವೀಪವು ಅತಿ ಸಮೀಪವನ್ನು ಹೊಂದಿದೆ. ಆದರೂ ಇದು ಸ್ವತಂತ್ರ್ಯ ಭಾರತದ ಪ್ರದೇಶವಾಗಿದೆ. ಮತ್ತು ಭಾರತದ ಹೆಮ್ಮೆಯ ಪ್ರತೀಕವಾಗಿದೆ.

ಅಂಡಮಾನ್ ನಿಕೋಬಾರ್ ಪ್ರದೇಶವನ್ನು ಬ್ರಿಟಿಷರಿಂದ ಜಪಾನಿ ನೌಕಾಪಡೆಯವರು ವಶಪಡಿಸಿಕೊಂಡ ನಂತರ ನೇತಾಜಿ ಸುಭಾಶ್‍ಚಂದ್ರ ಬೋಸರು ಆ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಸಿಂಗಾಪರದಲ್ಲಿ ಭಾರತೀಯರಿಗೆ ಭರವಸೆ ನೀಡಿದಂತೆ ಅಂಡಮಾನ್ ನಿಕೋಬಾರ್ ಪ್ರದೇಶವನ್ನು ನಮ್ಮ ಸುಪರ್ದಿಗೆ ಒಪ್ಪಿಸಬೇಕೆಂದು ನೇತಾಜಿ ಬೋಸ್ ನೇತೃತ್ವದ ಅಝಾದ್ ಹಿಂದ್ ಪೌಝ್ ಬೇಡಿಕೆ ಇಡುತ್ತದೆ. ಜಪಾನಿ ನೌಕಾ ಪಡೆಯೊಂದಿಗಿನ ನೇತಾಜಿ ಬೋಸರ ಸುಧೀರ್ಘ ಮಾತುಕತೆಯ ನಂತರ ಅಂಡಮಾನ್ ನಿಕೋಬಾರ್ ದ್ವೀಪಗಳನ್ನು ಬೋಸ್ ನೇತೃತ್ವದ ಅಜಾದ್ ಹಿಂದ್ ಪೌಝ್ ಗೆ ಬಿಟ್ಟು ಕೊಡಲು ಜಪಾನಿ ಪಡೆ ಒಪ್ಪಿಗೆ ಸೂಚಿಸುತ್ತದೆ.

ಹೀಗೆ ಯಾವುದೇ ಯುದ್ಧಗಳು, ಪ್ರಾಣ ಹಾನಿಗಳಿಲ್ಲದೆ, ಕೇವಲ ಮಾತುಕತೆಯಿಂದ ಅಂಡಮಾನ್ ನಿಕೋಬಾರ್ ಎಂಬ ದ್ವೀಪಗಳನ್ನು ತಮ್ಮ ಸುಪರ್ಧಿಗೆ ಪಡೆದು
ಸಿಂಗಾಪುರದ ಭಾರತೀಯರಿಗೆ ನೀಡಿದ್ದ ಭರವಸೆಯನ್ನು ಪೂರ್ಣಗೊಳಿಸುತ್ತಾರೆ. ನಂತರ 1943ರಲ್ಲಿ ನೇತಾಜಿ ಬೋಸರು ಪೋರ್ಟ್‍ಬೇರ್ ಏರೋಡ್ರಮ್ ಗೆ
ಆಗಮಿಸಿ, ಅಲ್ಲಿದ್ದ ಜಪಾನಿ ಮಿಲಿಟರಿ ಕಮಾಂಡರ್‍ರೊಂದಿಗೆ ಮಾತುಕತೆಯನ್ನು ನಡೆಸುತ್ತಾರೆ. ಜಪಾನಿ ಕಮಾಂಡರ್ ನೇತಾಜಿಯವರ ಮಾತುಗಳಿಗೆ ಸಂಪೂರ್ಣ ಒಪ್ಪಿಗೆಯನ್ನು ಸೂಚಿಸುತ್ತಾರೆ.

ನಂತರ ಕೋಟಿ ಕೋಟಿ ಭಾರತೀಯ ದೇಶಭಕ್ತರ ಆಶಯದಂತೆ 1943 ಡಿಸೆಂಬರ್ 30ರಂದು ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಭಾರತದ ಸ್ವತಂತ್ರ್ಯ ತ್ರಿವರ್ಣ ಧ್ವಜವನ್ನು ಹಾರಿಸಿ, ಆವರೆಗೆ ಇದ್ದಂತಹ ಭಾರತದ ದಾಸ್ಯದ ಮಸಿಯನ್ನು ಅಂದು ಮುಕ್ತಗೊಳಿಸಲಾಯಿತು.

ಹೀಗೆ ಬಂಧಮುಕ್ತಗೊಂಡು ಬೋಸ್ ನೇತೃತ್ವದ ತಂಡಕ್ಕೆ ದಕ್ಕಿದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಭಾರತದ ಸ್ವಾತಂತ್ರ್ಯದ ಕಿಚ್ಚಿನಂತೆ
ಹೆಸರಿಡಲಾಯಿತು. ಅಂಡಮಾನ್ ದ್ವೀಪಕ್ಕೆ “ಶಹೀದ್” ಎಂದೂ ನಿಕೋಬಾರ್ ದ್ವೀಪಕ್ಕೆ “ಸ್ವರಾಜ್” ಎಂದೂ ಹೆಸರಿಡುವ ಮೂಲಕ ಭಾರತಕ್ಕೆ ಮೊದಲ ಸ್ವಾತಂತ್ರ್ಯವನ್ನು ತಂದು ಕೊಡಲಾಗಿತ್ತು. ಅಲ್ಲಿ ಅಜಾದ್ ಹಿಂದ್ ಪೌಝ್ ಸರ್ಕಾರವು ತಮ್ಮ ಆಶಯದಂತೆ ಆ ಪ್ರದೇಶವನ್ನು ಆಳಲು ಆರಂಭಿಸಿತು. ನಂತರ ಬ್ರಿಟಿಷರ ಯಾವ ನಿಯಮಗಳೂ ಅಲ್ಲಿ ನಡೆಯದೆ ಸಂಪೂರ್ಣ ಭಾರತಮಯವಾಗಿತ್ತು.

ಅಲ್ಲಿಗೆ ಹಲವಾರು ವರ್ಷಗಳಿಂದ ದಾಸ್ಯದ ಕಪ್ಪುಚುಕ್ಕೆಯಿಂದ ಬಳಲುತ್ತಿದ್ದ ಭಾರತದ ಅತಿ ಸುಂದರ ದ್ವೀಪಗಳನ್ನು ನೇತಾಜಿ ಬೋಸರ ಕಠಿಣ ಶ್ರಮ ಹಾಗೂ ಅವಿರತ ಹೋರಾಟದಿಂದ ಮತ್ತೆ ಭಾರತ ಮಾತೆಯ ಮಡಿಲಿಗೆ ಬೀಳುವಂತಾಯಿತು. ಅದೆಷ್ಟೋ ಭಾರತೀಯರ ಆಶಯಗಳು ಈಡೇರಿಸಿತು.

ಅಂಡಮಾನ್ ನಿಕೋಬಾರ್ ದ್ವೀಗಳು ಭಾರತದೊಂದಿಗೆ ವಿಶೇಷ ಬಂಧವನ್ನು ಹೊಂದಿದ್ದು ಹೇಗೆ ಗೊತ್ತಾ..?

ಅಂಡಮಾನ್‍ನಲ್ಲಿರುವ ತಮ್ಮ ವಶದಲ್ಲಿದ್ದ ಸೆಲ್ಯುಲರ್ ಜೈಲನ್ನು ಭಾರತದಲ್ಲಿದ್ದ ರಾಜಕೀಯ ಖೈದಿಗಳನ್ನು ಬಂಧಿಸಿ ಇರಿಸಲು ಬಳಸುತ್ತಿದ್ದರು. ಭಾರತದಲ್ಲಿ ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿದವರನ್ನು, ಅದರಲ್ಲೂ ತೀವ್ರ ಕ್ರಾಂತಿಕಾರಿಯಾಗಿದ್ದವರನ್ನು ಬಂಧಿಸಿ ಈ ಭಾರತದ ಪ್ರಮುಖ ಪ್ರದೇಶದಿಂದ ಗಡಿಪಾರು ಮಾಡಿ ಸೆಲ್ಯುಲರ್ ಜೈಲಲ್ಲಿ ಕೂಡಿ ಹಾಕಿ ಹಿಂಸಿಸುತ್ತಿದ್ದರು.

ಅಂಡಮಾನ್‍ನ ಸೆಲ್ಯುಲರ್ ಜೈಲು ವಿಶ್ವಪ್ರಸಿದ್ಧವಾಗಿದೆ. ದೇಶ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಅಪ್ರತಿಮ ದೇಶಭಕ್ತ, ಮೃತ್ಯುಂಜಯ ವೀರ
ಸಾವರ್ಕರ್‍ರನ್ನು ಇದೇ ಸೆಲ್ಯುಲರ್ ಜೈಲಿಗೆ ಹಾಕಲಾಗಿತ್ತು. ಇಲ್ಲಿ ಕಾಲಾಪಾನಿ ಶಿಕ್ಷೆ ಬಹಳ ಕಠೋರ ಶಿಕ್ಷೆಯಾಗಿದೆ. ವೀರ ಸಾವರ್ಕರ್‍ಗೆ ಬ್ರಿಟಿಷರು ನೀಡಿದ್ದ ಕರಿ ನೀರಿನ ಶಿಕ್ಷೆ ಅತ್ಯಂತ ಘೋರ ಹಾಗೂ ಹಿಂಸಾತ್ಮಕವಾಗಿತ್ತು. ವೀರ ಸಾವರ್ಕರರಿಗೆ ಈ ಶಿಕ್ಷೆ ನೀಡಿ ಆ ಪ್ರದೇಶ ಹಾಗೂ ಸೆಲ್ಯೂಲರ್ ಜೈಲನ್ನು ಶಾಶ್ವತವಾಗಿ ದೇಶವಾಸಿಗಳ ಮನದಲ್ಲಿ ಉಳಿಯುವಂತೆ ಮಾಡಿದ್ದರು ಬ್ರಿಟಿಷರು.

ಅಂಡಮಾನ್‍ನಲ್ಲಿರುವ ಸೆಲ್ಯುಲರ್ ಜೈಲಿನಲ್ಲಿ ವೀರ ಸಾವರ್ಕರ್ ಮಾತ್ರವಲ್ಲದೆ, ಸ್ವಾತಂತ್ರ್ಯ ಹೋರಾಟಗಾರರಾದ ಬಾತುಕೇಶ್ವರ್ ದತ್ತ್, ದಿವಾನ್ ಸಿಂಗ್ ಕಾಲ್ಪಾನಿ, ಫಝಲ್-ಎ-ಹಕ್ ಖೈರಬಾದಿ, ಯೋಗೇಂದ್ರ ಶುಕ್ಲಾ, ಮೌಲಾನ ಅಹ್ಮದ್ದುಲ್ಲಾ, ಬಾಬಾರಾವ್ ಸಾವರ್ಕರ್, ಭಾಯಿ ಫರ್ಮಾನಂದ್, ಶದಾನ್ ಚಂದ್ರ ಚಟರ್ಜಿ, ಸೊಹಾನ್ ಸಿಂಗ್, ವಾಮನ್ ರಾವ್ ಜೋಷಿ, ನಂದ ಗೋಪಾಲ್ ಸಹಿತ ಅನೇಕ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರು ಈ ಜೈಲಿನಲ್ಲಿ ತಮ್ಮ ಜೀವನವನ್ನೇ ಕಳೆದಿದ್ದಾರೆ.

ಆಂಗ್ಲೋ ಇಂಡಿಯನ್ ಮತ್ತು ಆಂಗ್ಲೋ ಬರ್ಮನ್ನರನ್ನು ಮರುಬಳಕೆ ಮಾಡಿ, ಅಂಡಮಾನ್ ಮತ್ತ ನಿಕೋಬಾರ್ ನಲ್ಲಿ ಪ್ರತ್ಯೇಕ ರಾಷ್ಟ್ರವನ್ನಾಗಿಸುವ ಯೋಜನೆ
ಬ್ರಿಟಿಷರದ್ದಾಗಿತ್ತು. ಆದರೆ ಅಂಡಮಾನ್ ನಿಕೋಬರ್‍ಗಳನ್ನು ಪ್ರತ್ಯೇಕ ರಾಷ್ಟ್ರವನ್ನಾಗಿಸುವ ಬ್ರಿಟಿಷರ ಯೋಜನೆ ಹಾಗೂ ಯೋಚನೆಗಳು ಸಫಲಗೊಳ್ಳಲೇ ಇಲ್ಲ.
ಮತ್ತೊಂದು ಕುತೂಹಲಕಾರಿಯಾದ ಸಂಗತಿಯೇನೆಂದರೆ, ಈ ದ್ವೀಪಗಳನ್ನು ಚೋಳರು ಮತ್ತು ಮರಾಠರು ತಮ್ಮ ಆಡಳಿತಾವಧಿಯಲ್ಲಿ ನೌಕಾ ನಲೆಗಳನ್ನಾಗಿ
ಬಳಸುತ್ತಿದ್ದರು. ಹೀಗೆ ಹಿಂದಿನ ಕಾಲದಿಂದಲೂ ಇದು ಭಾರತದ ಪ್ರದೇಶವಾಗಿಯೇ ಉಳಿದಿತ್ತು.

1943ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರಿಂದ ಪಡೆದಿದ್ದ ಸ್ವಾತಂತ್ರ್ಯವನ್ನು 1944ರಲ್ಲಿ ಮತ್ತೆ ಬ್ರಟಿಷರು ಕಸಿದುಕೊಂಡರು. ಭಾರತದಲ್ಲಿ ಪ್ರಮುಖವಾಗಿ
ಸ್ವಾತಂತ್ರ್ಯ ಹೋರಾಟವನ್ನು ಮಾಡುತ್ತಿದ್ದ ಶಾಂತಿ ದೂತರ ನಿರ್ಲಕ್ಷ್ಯದಿಂದ ಅಂಡಮಾನ್ ನಿಕೋಬರ್ ಕೈ ತಪ್ಪಿತ್ತು.

ನಂತರ ಸತತ ಪ್ರಯತ್ನದ ನಂತರ 1950ರಲ್ಲಿ ಈ ದ್ವೀಪಗಳು ಭಾರತದ ಭಾಗವಾಯಿತು ಮತ್ತು 1956 ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡಿತು.

ಪ್ರಾಚೀನ ಕಾಲದಿಂದಲೂ ಈ ದ್ವೀಪಗಳ ಮೇಲೆ ಭಾರತೀಯರು ನಿಯಂತ್ರಣ ಹೊಂದಿದ್ದರು..!!!

ಅಂಡಮಾನ್ ನಿಕೋಬಾರ್ ಕೇವಲ ಭಾರತದ ಭಾಗವಾಗಿ ಮಾತ್ರವಲ್ಲದೆ, ಅದು ಭಾವನಾತ್ಮಕವಾಗಿಯೂ ಭಾರತದ ಸಂಬಂಧವನ್ನು ಬೆಸೆದಿದೆ. ಈ ಹಿಂದೆ ಅಂದರೆ ಪ್ರಾಚೀನ ಕಾಲದಲ್ಲಿ ಚೋಳ ಸಾಮ್ರಾಜ್ಯದ ಒಡೆಯ ರಾಜೇಂದ್ರ ಚೋಳನು ಈ ದ್ವೀಪಗಳನ್ನು ತನ್ನದೇ ಆಡಳಿತದ ಶೈಲಿಯಲ್ಲಿ ಬಳಸಿಕೊಂಡಿದ್ದನು. ಮಾತ್ರವಲ್ಲದೆ ಇಂಡೊನೇಷ್ಯಾ ಹಾಗೂ ಶ್ರೀವಿಜಯ ಸಾಮ್ರಾಜ್ಯದ ನಡುವಿನ ದಂಡಯಾತ್ರೆಗೆ ಇಲ್ಲಿನ ನೌಕಾನೆಲೆಯನ್ನು ಉಪಯೋಗಿಸುತ್ತಿದ್ದರು ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಅಂಡಮಾನ್ ನಿಕೋಬಾರ್ ದ್ವೀಪಗಳು ಮಲೇಷಿಯಾ, ಥೈಲಾಂಡ್, ಸುಮತ್ರಾ, ಮಯನ್ಮಾರ್ ರಾಷ್ಟ್ರಗಳ ಪಕ್ಕದಲ್ಲಿದ್ದರೂ ಭಾರತದ ಭಾಗವಾಗಿದ್ದು ಹೇಗೆ..?

ಹಿಂದೆ ಯುರೋಪಿಯನ್ ಆಡಳಿತಗಾರರು ಈ ಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದರಾದರೂ ಭಾರತಕ್ಕೆ ಅತಿ ಪ್ರಮುಖ ಭಾಗವಾಗಿತ್ತು. ಡೆನ್ಮಾರ್ಕ್, ಆಸ್ಟ್ರೀಯಾ
ಹಾಗೂ ಬ್ರಿಟಿಷ್ ಹೀಗೆ ಎಲ್ಲರ ವಸಾಹತುಗಳಲ್ಲೂ ಇದು ಒಳಗೊಂಡಿತ್ತು. 1868ರಲ್ಲಿ ಡ್ಯಾನಿಶ್ ಆಳ್ವಿಕೆಯಲ್ಲಿತ್ತು. 1869ರಲ್ಲಿ ಇದನ್ನು ಬ್ರಿಟಿಷರು ಖರೀದಿಸಿದ್ದು ನಂತರ ಬ್ರಿಟಿಷರಿಂದ ಭಾರತೀಯರ ಪಾಲಾಯಿತು. ಈ ಎಲ್ಲಾ ಕಾರಣಗಳಿಂದ ಅಂಡಮಾನ್ ನಿಕೋಬಾರ್ ಭಾರತದ ಭಾಗವಾಗಿ ಇಂದು ಜಗತ್ತಿನ ಪ್ರೇಕ್ಷಣೀಯ ಸ್ಥಳವಾಗಿಯೂ, ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ನೆನಪನ್ನು ಅಚ್ಚಳಿಯದೆ ಉಳಿಯುವಂತೆ ಮಾಡುವ ಭಾವನಾತ್ಮಕ ಸ್ಥಳವಾಗಿದೆ.

-ಸುನಿಲ್

Tags

Related Articles

Close