ಪ್ರಚಲಿತ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ: ದೇಶದೆಲ್ಲೆಡೆ 5 ಲಕ್ಷ ದೇಗುಲಗಳಲ್ಲಿ ಪ್ರಾರ್ಥನೆ

ಬಹು ಕೋಟಿ ಜನರ ಆರಾಧ್ಯ ದೈವ ಪ್ರಭು ಶ್ರೀರಾಮನ ಜನ್ಮಭೂಮಿಯಲ್ಲಿ ಆತನಿಗೆ ಭವ್ಯ ರಾಷ್ಟ್ರ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮುಂದಿನ ವರ್ಷದ ಜನವರಿ ತಿಂಗಳ 22 ರಂದು ಭವ್ಯ ಮಂದಿರದಲ್ಲಿ ಪ್ರಭು ಶ್ರೀ ರಾಮಚಂದ್ರ ನೆಲೆಗೊಳ್ಳಲಿದ್ದು, ಭಕ್ತಕೋಟಿಗೆ ‌ದರ್ಶನ ನೀಡಲಿದ್ದಾನೆ.

ಪ್ರಭು ಶ್ರೀರಾಮನು ಅಯೋಧ್ಯೆಯ ರಾಮ ಮಂದಿರದಲ್ಲಿ ವಿರಾಜಮಾನನಾಗಲು ಪ್ರತಿಷ್ಠಾಪನೆಯಾಗುವ ಸಮಯದಲ್ಲಿ ದೇಶದಾದ್ಯಂತ ಇರುವ ಸುಮಾರು ಐದು ಲಕ್ಷ ದೇಗುಲಗಳಲ್ಲಿ ಏಕಕಾಲಕ್ಕೆ ಪ್ರಾರ್ಥನೆಗಳನ್ನು ನಡೆಸಲಾಗುವುದಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೂಲಗಳು ತಿಳಿಸಿವೆ.

ಈ ಮಹತ್ಕಾರ್ಯದ ಹಿನ್ನೆಲೆಯಲ್ಲಿ ನವೆಂಬರ್ 5ರಂದು ಸುಮಾರು 45 ಪ್ರಾಂತ್ಯಗಳ ಕಾರ್ಯಕರ್ತರಿಗೆ ಪೂಜಿಸಲ್ಪಟ್ಚ ಅಕ್ಷತೆ ವಿತರಣೆ ಕಾರ್ಯ ನಡೆಯಲಿದೆ. ವಿಶ್ವ‌ ಹಿಂದೂ ಪರಿಷತ್‌ನ ಸದಸ್ಯರು ಈ ಕಾರ್ಯವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಿಕೊಡಲಿರುವುದಾಗಿಯೂ ಟ್ರಸ್ಟ್‌ನ ಸದಸ್ಯರು ಮಾಹಿತಿ ನೀಡಿದ್ದಾರೆ.

ಹಲವು ಶತಕಗಳ ಬಳಿಕ ಈಗ ಶ್ರೀರಾಮ ತನ್ನ ಜನ್ಮಭೂಮಿಯಲ್ಲಿಯೇ ಮಂದಿರ ಕಟ್ಟಿಸಿಕೊಳ್ಳುತ್ತಿದ್ದಾನೆ. ಪ್ರಭು ಶ್ರೀರಾಮನ ನಗರ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಲಲ್ಲಾ ಪ್ರತಿಮೆ ಸ್ಥಾಪನೆ ನಡೆಯಲಿದೆ. ಈ ವಿಗ್ರಹದ ಪ್ರತಿಷ್ಠಾಪನೆಯನ್ನು ಆಚರಿಸಲು ರಾಮಲಲ್ಲಾ ವಿಗ್ರಹದ ಮುಂದೆ ಅಕ್ಷತೆಗೆ ಪೂಜೆ ಸಲ್ಲಿಸುವ ಕೈಂಕರ್ಯ ನಡೆಯಲಿದೆ.

ಶ್ರೀರಾಮ ಜನ್ಮಭೂಮಿಯಲ್ಲಿ ಪ್ರಭು ಶ್ರೀರಾಮನ ಪ್ರತಿಷ್ಠಾಪನೆ ಸಮಯದಲ್ಲಿ, ದೇಶದ ಐದು ಲಕ್ಷ ದೇಗುಲಗಳಲ್ಲಿ ‌ಪ್ರಾರ್ಥನೆ ನಡೆಯಲಿದೆ. ಇದಕ್ಕಾಗಿ ವಿಶ್ವ ಹಿಂದೂ ಪರಿಷತ್ ಅಕ್ಷತೆ ವಿತರಣೆ ಮಾಡಲಿದೆ. ಹೀಗೆ ಅಕ್ಷತೆ ಪಡೆದುಕೊಂಡ ಸ್ವಯಂಸೇವಕರು ಅದನ್ನು ತಮ್ಮ ಊರುಗಳಿಗೆ ತಲುಪಿಸಲು ವ್ಯವಸ್ಥೆ ಮಾಡಲಿದ್ದಾರೆ. ಆ ಮೂಲಕ ದೇಶದ ಪ್ರತಿಯೊಂದು ಭಾಗದ ಜನರಿಗೂ ರಾಮ ಮಂದಿರ ಉದ್ಘಾಟನೆಯ ಆಹ್ವಾನ ನೀಡಲಿರುವುದಾಗಿ ಮೂಲಗಳು ಮಾಹಿತಿ ನೀಡಿದೆ.

Tags

Related Articles

Close