ದೇಶರಾಜ್ಯ

ಗುಜರಾತ್ ಬೆನ್ನಲ್ಲೇ ಕರ್ನಾಟಕದತ್ತ ಕೇಂದ್ರದ ಚಿತ್ತ! ವಿಪಕ್ಷಗಳನ್ನು ಮಣಿಸಲು ಮೋದಿ-ಶಾ ತಂತ್ರ!

ಮುಂದಿನ ವರ್ಷ ಕರ್ನಾಟಕ‌ದಲ್ಲಿಯೂ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಸಂಬಂಧ ಎಲ್ಲಾ ಪಕ್ಷಗಳೂ ಈಗಾಗಲೇ ಕಾರ್ಯಪ್ರವೃತವಾಗಿವೆ. ಗೆಲುವಿನ ತಂತ್ರ ರೂಪಿಸುವಲ್ಲಿ ಬೇಕಾದ ಎಲ್ಲ ಸಿದ್ಧತೆ‌ಗಳನ್ನು ನಡೆಸುತ್ತಿವೆ. ಈ ಚುನಾವಣೆಯಲ್ಲಿ ಈಗಾಗಲೇ ಬೇರೆ ರಾಜ್ಯಗಳಲ್ಲಿ ನಡೆದಿರುವ ಚುನಾವಣೆಗಳು, ಅದರ ಫಲಿತಾಂಶ‌ಗಳು ಸಹ ಪರಿಣಾಮ ಬೀರಲಿವೆ ಎನ್ನುವುದು ನಿಜ.

ಈಗಾಗಲೇ ಗುಜರಾತ್ ಚುನಾವಣೆ ನಡೆದಿದೆ. ಈ ಚುನಾವಣೆಯ ನಂತರ ನಡೆಸಲಾದ ಸಮೀಕ್ಷೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಪಕ್ಷ ಬಹುಮತ ಸಾಬೀತುಪಡಿಸಲಿದೆ ಎಂದು ಹೇಳಿದೆ. ಯಾವ ಪಕ್ಷಕ್ಕೆ ಮತದಾರ ಒಲವು ತೋರಿದ್ದಾನೆ, ಯಾರಿಗೆ ಮತ ನೀಡಿದ್ದಾನೆ ಎಂಬುದು, ಮತ ಎಣಿಕೆ, ಫಲಿತಾಂಶ ಬಂದ ಬಳಿಕವಷ್ಟೇ ತೀರ್ಮಾನ‌ವಾಗಲಿದೆ. ಈ ಫಲಿತಾಂಶ ಮುಂಬರುವ ಕರ್ನಾಟಕ‌ದ ಚುನಾವಣೆ‌ಯ ಮೇಲೆಯೂ ಪರಿಣಾಮ ಬೀರಲಿದೆ.

ಗುಜರಾತ್ ಚುನಾವಣೆ‌ಗೆ ಸಂಬಂಧಿಸಿದಂತೆ ಕರ್ನಾಟಕ‌ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಗುಜರಾತ್ ಚುನಾವಣೆ ಕರ್ನಾಟಕ‌ಕ್ಕೆ ದಿಕ್ಸೂಚಿ ಅಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಗುಜರಾತ್‌ನ ಫಲಿತಾಂಶ‌ಕ್ಕೂ ಮುನ್ನವೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ ಎಂಬುದನ್ನು ಸಿದ್ದರಾಮಯ್ಯ ತಮ್ಮ ಅಭಿಪ್ರಾಯ‌ದ ಮೂಲಕವೇ ಜಗಜ್ಜಾಹೀರು ಮಾಡಿದ್ದಾರೆ.

2021 ರಲ್ಲಿ ಕಾಂಗ್ರೆಸ್ ಬೇರೆ ರಾಜ್ಯದಲ್ಲಿ ಗೆದ್ದಾಗ, ಕಾಂಗ್ರೆಸ್‌ನ ಈ ಗೆಲುವು ಬಿಜೆಪಿ‌ಗೆ ಎಚ್ಚರಿಕೆ, ಮುಂದಿನ ದಿಕ್ಸೂಚಿ ಎಂದಿದ್ದರು. ಅಂದರೆ ಸಿದ್ದರಾಮಯ್ಯ ಅವರ ಪ್ರಕಾರ ಕಾಂಗ್ರೆಸ್ ಗೆದ್ದರೆ ಅದು ದೇಶ ಬದಲಾವಣೆ, ಅಭಿವೃದ್ಧಿಯತ್ತ ಕೊಂಡೊಯ್ಯುವ ದಿಕ್ಸೂಚಿ ಎನ್ನುವ ಇವರು, ಕಾಂಗ್ರೆಸ್ ಸೋಲುತ್ತದೆ, ಬಿಜೆಪಿ ಗೆಲ್ಲುತ್ತದೆ ಎನ್ನುವಾಗ ಇದು ದಿಕ್ಸೂಚಿ ಆಗಲಾರದು ಎಂದು ‘ದೋಸೆ ತಿರುವಿ ಹಾಕುವ ತಂತ್ರ’ ಅನುಸರಿಸುತ್ತಿದ್ದಾರೆ.

ಕರ್ನಾಟಕ‌ದಲ್ಲಿ‌ಯೂ ಮುಂದಿನ ಚುನಾವಣೆ‌ಯಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ ಎಂಬ ಭಯ ಈಗಾಗಲೇ ಸಿದ್ದರಾಮಯ್ಯ ಅವರಲ್ಲಿ ಆವರಿಸಿದಂತಿದೆ. ಜೊತೆಗೆ ಬಿಜೆಪಿ‌ಯ ಅಭಿವೃದ್ಧಿ ಪರ ಆಡಳಿತ, ಜನಸ್ನೇಹಿ ನಿಲುವುಗಳು ಜನರನ್ನು ತಲುಪಿದ್ದು, ಇದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲುಣಿಸುತ್ತದೆ ಎಂಬುದರ ಅರಿವು ಸಹ ಕಾಂಗ್ರೆಸ್‌ನಲ್ಲಿದ್ದು, ಹೀಗಾಗಿಯೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಚಾಣಕ್ಯ ಅಮಿತ್ ಶಾ ಸಹ ರಾಜ್ಯದ ಅಭಿವೃದ್ಧಿ‌ಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ‌ದ ಈ ಅಭಿವೃದ್ಧಿ ಪರ ಅಲೆಯೂ ಮುಂದಿನ ಚುನಾವಣೆ‌ಯಲ್ಲಿ ಬಿಜೆಪಿ ಪಕ್ಷಕ್ಕೆ ಫ್ಲಸ್ ಆಗಲಿದ್ದು, ಈ ಅಂಶವೂ ಸಿದ್ದರಾಮಯ್ಯ ಅವರನ್ನು ನಿದ್ದೆಗೆಡಿಸಿದೆ ಎಂದೇ ಹೇಳಬಹುದು‌.

Tags

Related Articles

Close