ಪ್ರಚಲಿತ

ಪಾಕಿಸ್ತಾನದ ಉರಿ ಹೆಚ್ಚಿಸಿದ ‘ಅಯೋಧ್ಯೆಯ ಶ್ರೀರಾಮ ಮಂದಿರ’

ಪಾಕಿಸ್ತಾನಕ್ಕೆ ಭಾರತದ ಅಭಿವೃದ್ಧಿ, ಭಾರತ ವಿಶ್ವದಲ್ಲೇ ದೊಡ್ಡ ಮಟ್ಟದಲ್ಲಿ ನಾಯಕತ್ವ ವಹಿಸುವ ಶಕ್ತಿಯಾಗಿ ಹೊರಹೊಮ್ಮುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸುತ್ತದೆ. ಈ ಹಿನ್ನೆಲೆಯಲ್ಲಿ ತನ್ನ ಉರಿ ಗಮನಕ್ಕೆ ಭಾರತವನ್ನು ವಿಶ್ವದೆದುರು ನಿಂದಿಸುವ ಕೆಲಸವನ್ನು ಮಾಡುತ್ತಲೇ ಇರುತ್ತದೆ.

ವಿಶ್ವದ ಹಲವು ರಾಷ್ಟ್ರಗಳು ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂಬುದಾಗಿ ಇಂದು ಸಂದೇಹ ದೃಷ್ಟಿಯಲ್ಲೇ ನೋಡುತ್ತಿವೆ ಎಂದಾದರೆ, ಅದಕ್ಕೆ ಭಾರತ ಪಾಕಿಸ್ತಾನದ ನೀಚ ಕೃತ್ಯಗಳನ್ನು ಜಗತ್ತಿನ ಮುಂದೆ ಬೆತ್ತಲು ಮಾಡಿರುವುದು ಸಹ ಕಾರಣ ಎನ್ನಬಹುದು. ಜೊತೆಗೆ ಭಾರತದ ಆಡಳಿತವನ್ನು ಪ್ರಧಾನಿ ಮೋದಿ ಅವರ ಸರ್ಕಾರ ವಹಿಸಿಕೊಂಡ ಬಳಿಕ ವಿಶ್ವವೇ ಭಾರತವನ್ನು ನಾಯಕನಂತೆ ಪರಿಗಣಿಸುತ್ತಿದೆ. ಇದು ಸಹ ಪಾಕ್‌ಗೆ ‌ಮುಳ್ಳಾಗಿ ಪರಿಣಮಿಸಿದೆ.

ಹೇಗಾದರೂ ಮಾಡಿ ಭಾರತವನ್ನು ವಿಶ್ವದೆದುರು ಕುಗ್ಗಿಸಬೇಕು, ತಗ್ಗಿಸಬೇಕು ಎಂಬ ಹುನ್ನಾರವನ್ನು ಪಾಕ್ ಎಂಬ ಪರಮ ಪಾಪಿ ರಾಷ್ಟ್ರ ಮಾಡುತ್ತಲೇ ಇರುತ್ತದೆ. ಪ್ರಸ್ತುತ ಭಾರತದ ರಾಷ್ಟ್ರ ಮಂದಿರ ರಾಮ ಮಂದಿರದ ವಿಷಯದಲ್ಲಿಯೂ ಪಾಕ್ ಮೂಗು ತೂರಿಸಲು ಬಂದಿದ್ದು, ಈ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿ ತಗಾದೆ ತೆಗೆಯಲು ಪಾಕಿಸ್ತಾನ ಪ್ರಯತ್ನ ನಡೆಸಿದೆ.

ಅಯೋಧ್ಯೆಯಲ್ಲಿ ಭವ್ಯ ರಾಷ್ಟ್ರ ಮಂದಿರ ಶ್ರೀರಾಮ ಮಂದಿರದ ಲೋಕಾರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿದೆ. ಇದು ನಮ್ಮ ನೆರೆಯ ರಾಷ್ಟ್ರ, ಭಾರತದ ಆಜನ್ಮ ಶತ್ರು ರಾಷ್ಟ್ರ ಪಾಕಿಸ್ತಾನದ ನಿದ್ದೆಗೆಡಿಸಿದೆ.

ಈ ಬಗ್ಗೆ ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ನಾಗರೀಕತೆಯ ರಾಯಭಾರಿಗಳ ಒಕ್ಕೂಟ ಸಭೆಯಲ್ಲಿ ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಂ, ಭಾರತದ ಅಯೋಧ್ಯೆಯ ಶ್ರೀರಾಮ ಮಂದಿರದ ವಿಚಾರವನ್ನೆತ್ತಿ ‌ಕಿರಿಕ್ ಮಾಡಲು ಪ್ರಯತ್ನ ನಡೆಸಿದ್ದಾರೆ. ಭಾರತದಲ್ಲಿ ಮುಸಲ್ಮಾನರ ಜೀವನಕ್ಕೆ ಅಪಾಯವಿದ್ದು, ವಿಶ್ವಸಂಸ್ಥೆ ಮಧ್ಯಪ್ರವೇಶ‌ ಮಾಡಬೇಕು ಎಂದು ಹೇಳಿದ್ದಾರೆ.

ಭಾರತದ ಆಂತರಿಕ ವಿಷಯಕ್ಕೆ ಪಾಕಿಸ್ತಾನ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಕೆಣಕಿ, ಭಾರತ ಮತ್ತು ಭಾರತದ ಮಿತ್ರ ರಾಷ್ಟ್ರಗಳಿಂದ ಛೀಮಾರಿ ಹಾಕಿಸಿಕೊಂಡು ಮರ್ಯಾದೆ ಕಳೆದುಕೊಳ್ಳುವ ಮಟ್ಟಕ್ಕೆ ಬಂದಿದೆ. ಅಷ್ಟು ಮಾತ್ರವಲ್ಲದೆ ವಿಶ್ವದ ಹೆಚ್ಚಿನ ರಾಷ್ಟ್ರಗಳು ಪಾಕ್ ವಿರುದ್ಧ ಇದ್ದು ಮುಖ ಮುಚ್ಚಿಕೊಂಡು ತಿರುಗುವ ಸ್ಥಿತಿಯಲ್ಲಿ ಪಾಕಿಸ್ತಾನ ಇದೆ ಎನ್ನುವುದು ಸತ್ಯ.

ಹೀಗಿದ್ದರೂ ಮತ್ತೆ ಮತ್ತೆ ಭಾರತದ ವಿಚಾರಕ್ಕೆ ಮೂಗು ತೂರಿಸಿ, ತನ್ನ ಬೇಳೆ ಬೇಯಿಸಿಕೊಳ್ಳಲು, ಪ್ರಚಾರ ಪಡೆಯಲು ತಂತ್ರ ನಡೆಸುತ್ತಿರುವ ಪಾಕಿಸ್ತಾನಕ್ಕೆ ಕೊನೆಗಾಲ ಎಂದರೂ ತಪ್ಪಲ್ಲ. ಭಾರತದ ಮುಸಲ್ಮಾನರಿಗೆ ರಾಮ ಮಂದಿರ ಸಂತಸದ ವಿಷಯವಾಗಿದೆ. ಭಾರತದಲ್ಲಿ ಎಲ್ಲಾ ಧರ್ಮೀಯರೂ ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಹೀಗಿದ್ದರೂ ಭಾರತದ ಆಂತರಿಕ ವಿಷಯಗಳಲ್ಲಿ ‘ನಂದೆಲ್ಲಿಡ್ಲಿ’ ಎಂಬ ವರ್ತನೆ ತೋರುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯಾಗಬೇಕಿದೆ.

Tags

Related Articles

Close