ಪ್ರಚಲಿತ

ಮುಂದಿನ ಐದು ವರ್ಷಗಳಿಗೆ ವಿಸ್ತರಿಸಲ್ಪಟ್ಟ ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ

ಭಾರತವನ್ನು ಬಡತನ ಮುಕ್ತ ರಾಷ್ಟ್ರವನ್ನಾಗಿಸಲು, ಈ ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೇಲೆತ್ತುವ ಸಲುವಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ಉಪಕ್ರಮಗಳನ್ನು ಜಾರಿಗೆ ತಂದಿದೆ. ಬಡ ಜನರಿಗೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿಯೂ ಹಲವಾರು ಯೋಜನೆಗಳನ್ನು ಭಾರತ ಸರ್ಕಾರ ಕಳೆದ ಒಂಬತ್ತು ವರ್ಷಗಳಲ್ಲಿ ಜಾರಿಗೊಳಿಸಿದೆ.

ಬಡವರ ಹಸಿವು ನೀಗುವ ‌ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನವನ್ನು ಮುಂದಿನ ಐದು ವರ್ಷಗಳ ವರೆಗೆ ವಿಸ್ತರಣೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಈ ಯೋಜನೆಯಲ್ಲಿ ದೇಶದ ಸುಮಾರು ಎಂಬತ್ತು ಕೋಟಿ ಬಡವರಿಗೆ ಪ್ರತಿ ತಿಂಗಳು ಐದು ಕೆಜಿ ಅಕ್ಕಿ ಅಥವಾ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ. ಈ ವರ್ಷದ ಡಿಸೆಂಬರ್ ತಿಂಗಳಿಗೆ ಈ ಯೋಜನೆ ಅಂತ್ಯ ಎಂದು ಹೇಳಲಾಗಿತ್ತು. ಆದರೆ ಈ ದೇಶದ ಬಡವರಿಗೆ ಆಹಾರಕ್ಕೆ ಯಾವುದೇ ಕೊರತೆ ಬಾರದ ಹಾಗೆ ನೋಡಿಕೊಳ್ಳುವ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳ ಕಾಲ ಈ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿರುವುದಾಗಿ ಪ್ರಧಾನಿ ಹೇಳಿದ್ದಾರೆ.

ಭಾರತದ ಜನರ ಕಲ್ಯಾಣದ ಉದ್ದೇಶವನ್ನು, ದೇಶದ ಅಭಿವೃದ್ಧಿಯ ಆಶಯವನ್ನು ಬಿಜೆಪಿ ಇಟ್ಟುಕೊಂಡಿದೆ. ಕೇಂದ್ರ ಸರ್ಕಾರದ ಆದ್ಯತೆಯೂ ದೇಶದ ಅಭಿವೃದ್ಧಿಯೇ ಆಗಿದೆ. ದೇಶದ ದೊಡ್ಡ ಜಾತಿ ಎಂದರೆ ಅದು ಬಡವರು ಎಂದು ಪ್ರಧಾನಿ ತಿಳಿಸಿದ್ದಾರೆ. ಆದರೆ ವಿರೋಧ ಪಕ್ಷಗಳು ಬಡ ಜನರಲ್ಲಿ ಜಾತಿವಾದದ ವಿಷ ಬೀಜ ಬಿತ್ತಿ ಒಗ್ಗಟ್ಟು ಮುರಿದು ತಮ್ಮ ಬೇಳೆ ಬೇಯಿಸಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ ಎಂದು ಅವರು ಕಿಡಿ ಕಾರಿದ್ದಾರೆ.

ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಆಡಳಿತ ವಹಿಸಿಕೊಳ್ಳುವುದಕ್ಕಿಂತ ಮೊದಲು ಭಾರತದಲ್ಲಿ ಬಡವರನ್ನು ಬಡವರಾಗಿಯೇ ಉಳಿಸುವ ಕಾರ್ಯವನ್ನು ಆಗಿನ ಸರ್ಕಾರ ಮಾಡಿತ್ತು. ಹಾಗೆಯೇ ಸರ್ಕಾರದ ಯಾವ ಯೋಜನೆಗಳು ಸಹ ನೇರವಾಗಿ ಅವರನ್ನು ತಲುಪುವ ವ್ಯವಸ್ಥೆ ಇರಲಿಲ್ಲ. ಅಷ್ಟು ಮಾತ್ರವಲ್ಲದೆ, ಬಡವರಿಗೆ ಸರ್ಕಾರ ನೀಡುತ್ತಿದ್ದ ಸವಲತ್ತುಗಳು, ಹಣ ಸಹ ಯಾರ್ಯಾರದ್ದೋ ಪಾಲಾಗುವ ಪರಿಸ್ಥಿತಿ ಇತ್ತು. ನಾಯಕರು ಯಾವ ಯೋಜನೆಯನ್ನು ಸಹ ಸರಿಯಾದ ರೀತಿಯಲ್ಲಿ ಜನರಿಗೆ ತಲುಪಲು ಅವಕಾಶ ಮಾಡಿಕೊಡದೆ, ತಮ್ಮ ಬೊಕ್ಕಸ ತುಂಬುವುದನ್ನೇ ‌ಪರಮ ಕಾಯಕ ಎಂಬಂತೆ ಸ್ಥಿತಿ ಇತ್ತು. ಆದರೆ ಪ್ರಧಾನಿ ಮೋದಿ ಅವರು ಭಾರತದ ಆಡಳಿತ ವಹಿಸಿಕೊಂಡ ಬಳಿಕ ಈ ಪರಿಸ್ಥಿತಿ ಬದಲಾಯಿತು. ಸರ್ಕಾರದ ಎಲ್ಲಾ ಯೋಜನೆಗಳು ಫಲಾನುಭವಿಗಳಿಗೆ ನೇರವಾಗಿ ತಲುಪಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಯಿತು. ಜೊತೆಗೆ ಹಲವಾರು ಯೋಜನೆಗಳ ಮೂಲಕ ದೇಶದ ಜನರನ್ನು ಸಬಲರನ್ನಾಗಿಸುವ ಕೆಲಸ ನಡೆಯಿತು.

ಇದೀಗ ಬಡವರ ಹಸಿವನ್ನು ನೀಗಿಸುವ ನಿಟ್ಚಿನಲ್ಲಿ ಪ್ರಸ್ತುತ ಇರುವ ಪಿ ಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಮುಂದಿನ ಐದು ವರ್ಷಗಳ ಅವಧಿಗೆ ಮುಂದುವರೆಸುವುದಾಗಿ ‌ಪ್ರಧಾನಿ ಮೋದಿ ಅವರು ತಿಳಿಸಿರುವುದು, ಬಡವರ ಮುಖದಲ್ಲಿ ಮಂದಹಾಸ ಮೂಡಿಸಿದೆ ಎಂಬುದರಲ್ಲಿ ಅಚ್ಚರಿಯಿಲ್ಲ.

Tags

Related Articles

Close