ಪ್ರಚಲಿತ

ಪಟೇಲರು ದೇಶಕ್ಕೆ ನೀಡಿದ ಕೊಡುಗೆಗಳಿಗೆ ನಾವು ಸದಾ ಋಣಿ: ಪ್ರಧಾನಿ ಮೋದಿ

ಭಾರತದ ಉಕ್ಕಿನ ಮನುಷ್ಯ ಎಂದೇ ಮಾನ್ಯತೆ ಪಡೆದ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜನ್ಮ ದಿನ ಇಂದು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಟೇಲರನ್ನು ಸ್ಮರಿಸಿದ್ದು, ಅವರು ದೇಶಕ್ಕೆ‌ ನೀಡಿದ ಕೊಡುಗೆಗಳಿಗೆ ಅವರಿಗೆ ದೇಶ ಸದಾ ಋಣಿ ಎಂದು ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜಯಂತಿಯಂದು, ಅವರ ಅದಮ್ಯ ಮನೋಭಾವ, ದೂರದೃಷ್ಟಿಯ ರಾಜನೀತಿ, ಭಾರತದ ಭವಿಷ್ಯವನ್ನು ರೂಪಿಸಿದ ಅಸಾಧಾರಣ ಸಮರ್ಪಣೆಯನ್ನು ನಾವು ಸ್ಮರಿಸುತ್ತೇವೆ. ರಾಷ್ಟ್ರದ ಏಕೀಕರಣಕ್ಕಾಗಿ ಅವರ ಬದ್ಧತೆ ನಮಗೆ ಮಾರ್ಗದರ್ಶನ ನೀಡುತ್ತಿದೆ. ದೇಶಕ್ಕಾಗಿ ಅವರು ನೀಡಿದ ಸೇವೆಗೆ ನಾವು ಸದಾ ಋಣಿ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಗುಜರಾತ್‌‌ನ ಕೆವಾಡಿಯಾದಲ್ಲಿ ಪ್ರಧಾನಿ ಮೋದಿ ಸರ್ಕಾರ ಈ ಹಿಂದೆ ನಿರ್ಮಾಣ ಮಾಡಿರುವ 182 ಮೀ. ಎತ್ತರದ ಪಟೇಲರ ಪ್ರತಿಮೆಗೆ ಪುಷ್ಪ ನಮನವನ್ನು ಸಲ್ಲಿಸಿದರು. ಆ ನಂತರದಲ್ಲಿ ರಾಷ್ಟ್ರೀಯ ಏಕತಾ ದಿವಸ್ ಹಿನ್ನೆಲೆಯಲ್ಲಿ ನಡೆದ ಪರೇಡ್ ವೀಕ್ಷಣೆ ಮಾಡಿದರು. ಹಾಗೆಯೇ ಇದೇ ಸಂದರ್ಭದಲ್ಲಿ ಬಿ ಎಸ್‌ ಎಫ್ ಮತ್ತು ವಿವಿಧ ರಾಜ್ಯಗಳ ಪೊಲೀಸರು ನಡೆಸಿದ ಸಾಹಸ ಪ್ರದರ್ಶನಗಳನ್ನು ನೋಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆಡಳಿತ ವಹಿಸಿಕೊಂಡ ಬಳಿಕ ಅಂದರೆ 2014 ರ ಬಳಿಕ ಪ್ರತಿ ವರ್ಷ ಅಕ್ಟೋಬರ್ 31 ರಂದು ರಾಷ್ಟ್ರೀಯ ಏಕತಾ ದಿನವನ್ನು ಭಾರತದಲ್ಲಿ ಪಟೇಲರ ಸ್ಮರಣೆಗಾಗಿ ಆಚರಿಸಲಾಗುತ್ತದೆ. ಪಟೇಲರಿಗೆ ಗೌರವ ಸಲ್ಲಿಸುವ ಸಲುವಾಗಿಯೇ ಗುಜರಾತ್‌ನ ಕೆವಾಡಿಯಾದಲ್ಲಿ ಏಕತಾ ಪ್ರತಿಮೆಯನ್ನು ಸಹ ಸ್ಥಾಪಿಸಲಾಗಿರುವುದು.

ಭಾರತದ ಗಣರಾಜ್ಯ ರಚನೆಯ ಹಿನ್ನೆಲೆಯಲ್ಲಿ ಪಟೇಲರು ಮಹತ್ವದ ಪಾತ್ರ ವಹಿಸಿದ್ದು, ದೇಶದ ಸ್ವಾತಂತ್ರ್ಯಕ್ಕೂ ಮೊದಲೇ ದೇಶದೊಳಗಿದ್ದ ರಾಜ ಪ್ರಭುತ್ವದ ಎಲ್ಲಾ ರಾಜ್ಯಗಳನ್ನು ಒಗ್ಗೂಡಿಸಿದ ಕೀರ್ತಿ ಸರ್ದಾರ್ ಪಟೇಲರದ್ದು. ಇವರ ಸವಿ ನೆನಪಿಗಾಗಿ ಅವರ‌ ಜನ್ಮದಿನದಂದು ರಾಷ್ಟ್ರೀಯ ಏಕತಾ ದಿನವನ್ನು ದೇಶದೆಲ್ಲೆಡೆ ಆಚರಣೆ ಮಾಡಲಾಗುತ್ತಿದೆ.

Tags

Related Articles

Close