ಪ್ರಚಲಿತ

ಸ್ಪರ್ಧೆ, ಸವಾಲು ಜೀವನಕ್ಕೆ ಸ್ಪೂರ್ತಿ ನೀಡುತ್ತವೆ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳನ್ನು ದೇಶದ ಉತ್ತಮ ಭವಿಷ್ಯಗಳನ್ನಾಗಿ ರೂಪಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಇದರಲ್ಲಿ ಒಂದು ಪರೀಕ್ಷಾ ಪೆ ಚರ್ಚಾ. ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯವನ್ನು ಹೋಗಲಾಡಿಸಲು ಮಕ್ಕಳೊಂದಿಗೆ ಮಾತುಕತೆ ನಡೆಸಿ, ಅವರಲ್ಲಿ ಪರೀಕ್ಷೆಯ ಬಗ್ಗೆ ಆತ್ಮವಿಶ್ವಾಸ ತುಂಬಲು ಕೇಂದ್ರ ಸರ್ಕಾರ ತೆಗೆದುಕೊಂಡ ಮಹತ್ವದ ಕ್ರಮವೇ ಪರೀಕ್ಷಾ ಪೆ ಚರ್ಚಾ.

ಪಿ ಎಂ ಮೋದಿ ಅವರು ತಮ್ಮ ಏಳನೇ ಆವೃತ್ತಿಯ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಇಂದು ವಿವಿಧ ಬೋರ್ಡ್ ಪರೀಕ್ಷೆಗಳಿಗೆ ಸಿದ್ದತೆ ನಡೆಸುತ್ತಿರುವ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಭಾರತ ಮಂಟಪದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ಎಕ್ಸಿಬಿಷನ್ ಅನ್ನು ವೀಕ್ಷಿಸಿದ ಅವರು, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಂತಹ ಆಧುನಿಕ ತಂತ್ರಜ್ಞಾನದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ವಿದ್ಯಾರ್ಥಿಗಳ ವಸ್ತು ಪ್ರದರ್ಶನ ನೋಡಲು ಅವಕಾಶ ದೊರೆತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಇದು ಹೊಸ ತಲೆಮಾರಿನ ಜನರು ಏನನ್ನು ಯೋಚಿಸುತ್ತಾರೆ, ಚಿಂತಿಸುತ್ತಾರೆ ಎನ್ನುವುದಕ್ಕೆ ಸೂಚಕವಾಗಿದೆ ಎಂದು ಅವರು ತಿಳಿಸಿದ್ದಾರೆ. ಇದಕ್ಕಾಗಿ ವಿದ್ಯಾರ್ಥಿಗಳು ಮತ್ತು ಅವರಿಗೆ ಮಾರ್ಗದರ್ಶನ ನೀಡುವ ಶಿಕ್ಷಕರನ್ನು ಅಭಿನಂದಿಸುವುದಾಗಿ ಅವರು ಹೇಳಿದ್ದಾರೆ.

ಹಾಗೆಯೇ ಆರೋಗ್ಯಕರ ಜೀವನಕ್ಕೆ ಆರೋಗ್ಯಪೂರ್ಣ ಮನಸ್ಥಿತಿ ಅವಶ್ಯ. ಆರೋಗ್ಯಕರ ದೇಹಕ್ಕೆ ಸೂರ್ಯನ ಬೆಳಕು ಮತ್ತು ಆರೋಗ್ಯಕರ ಜೀವನಕ್ಕೆ ನಿದ್ರೆ ಅಗತ್ಯ.‌ ನಮ್ಮಲ್ಲಿ ಹಲವರು ಮಲಗಿಕೊಂಡು ನಿದ್ರೆ ಮಾಡುವ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತೇಲುವುದು, ರೀಲ್ಸ್ ನೋಡುವುದರಲ್ಲಿ ತಲ್ಲೀನರಾಗುತ್ತಾರೆ. ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಆರೋಗ್ಯಕರ ಜೀವನ ಕ್ರಮಕ್ಕೆ ನಿದ್ರೆ ಅತ್ಯವಶ್ಯ. ನಮ್ಮ ದಿನದ ವೇಳಾಪಟ್ಟಿಯ ನಡುವೆಯೂ ನಾವು ಸರಿಯಾದ ನಿದ್ರೆ ಮಾಡುವುದನ್ನು ಖಚಿತ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಬದುಕಿನಲ್ಲಿ ಸವಾಲುಗಳಿರಬೇಕು. ಇಲ್ಲದೇ ಹೋದಲ್ಲಿ ಜೀವನ ನಿರಾಶಾದಾಯಕ ಆಗಿರುತ್ತದೆ. ಸ್ಪರ್ಧೆ ಮತ್ತು ಸವಾಲುಗಳು ಜೀವನಕ್ಕೆ ಸ್ಪೂರ್ತಿ ತುಂಬುತ್ತದೆ ಎಂದು ಅವರು ನುಡಿದರು.

ಇದೇ ಸಂದರ್ಭದಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಅವರು ಎತ್ತಿ ತೋರಿಸಿದರು. ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡಲು, ಅದರಲ್ಲೂ ಪರೀಕ್ಷಾ ಸಮಯದ ಒತ್ತಡ ಕಡಿಮೆ ಮಾಡಲು ಶಿಕ್ಷಕರು ಸಹಕರಿಸಬೇಕು. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಸಕಾರಾತ್ಮಕ ಬಾಂಧವ್ಯ ಇರಬೇಕು. ಇದು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುತ್ತದೆ ಎಂದು ಅವರು ಕಿವಿಮಾತು ಹೇಳಿದರು.

Tags

Related Articles

Close