ಪ್ರಚಲಿತ

ಮಹಿಳೆಯರು, ಸನಾತನ ಧರ್ಮದ ರಕ್ಷಣೆಗೆ ಬಿಜೆಪಿಗೆ ಮತ ನೀಡಲು ಪಿಎಂ ಮೋದಿ ಮನವಿ

ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯ ಎಲ್ಲಾ ಪಕ್ಷಗಳಿಂದಲೂ ಭರದಿಂದ ಸಾಗುತ್ತಿದೆ. ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ.

ತಮಿಳುನಾಡಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಡಿ ಎಂ ಕೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಡಿ ಎಂ ಕೆ ಪಕ್ಷವು ಭ್ರಷ್ಟಾಚಾರದ ಮೊದಲ ಹಕ್ಕುಸ್ವಾಮ್ಯ ಹೊಂದಿದೆ. ತಮಿಳುನಾಡಿನ ಸಂಪತ್ತನ್ನು ಡಿ ಎಂ ಕೆ ಪಕ್ಷದ ಕುಟುಂಬ ಕೊಳ್ಳೆ ಹೊಡೆಯುವ ಕೆಲಸ ಮಾಡುತ್ತಿದೆ. ಡಿಎಂಕೆಯು ಕುಟುಂಬ ಕಂಪೆನಿಯಾಗಿದ್ದು, ತನ್ನ ಹಳೆಯ ಮನಸ್ಥಿತಿಯಿಂದ ರಾಜ್ಯದ ಯುವಕರು ಪ್ರಗತಿಯಾಗದ ಹಾಗೆ ಅಡ್ಡಿ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಜನರನ್ನು ಭಾಷೆ, ಜಾತಿ, ಪ್ರದೇಶ, ನಂಬಿಕೆಗಳ ಮೇಲೆ ಒಡೆಯುವ ಕೆಲಸವನ್ನು ಡಿ ಎಂ ಕೆ ಮಾಡುತ್ತಿದೆ. ಈ ಸತ್ಯ ಜನತೆಗೆ ತಿಳಿದ ಬಳಿಕ ಆ ಪಕ್ಷಕ್ಕೆ ಜನರು ಮತ ನೀಡುವುದಿಲ್ಲ. ಡಿಎಂಕೆಯ ಅಪಾಯಕಾರಿ ರಾಜಕೀಯವನ್ನು ಜನರೆದುರು ನಾನು ಬಹಿರಂಗ ಮಾಡುವುದಕ್ಕೆ ನಿರ್ಧರಿಸಿದ್ದೇನೆ. ದ್ರಾವಿಡರ ಹೃದಯದಲ್ಲಿ ಬಿಜೆಪಿ ಸ್ಥಾನ ಪಡೆಯುವ ಹಾಗೆ ಮಾಡಲು ನಾವು ಗಮನಾರ್ಹ ಕಾರ್ಯಗಳನ್ನು ಉತ್ಸಾಹದಿಂದ ಮಾಡುತ್ತೇವೆ ಎಂದು ಅವರು ನುಡಿದಿದ್ದಾರೆ.

ಶ್ರೀಲಂಕಾಗೆ ಕಾಂಗ್ರೆಸ್ ಮತ್ತು ಡಿಎಂಕೆ ಬಿಟ್ಟುಕೊಟ್ಟ ಕಚ್ಚತೀವು ದ್ವೀಪದ ವಿಚಾರವಾಗಿಯೂ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಯಾವ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಂಡರು ಮತ್ತು ಯಾರ ಲಾಭಕ್ಕಾಗಿ ಅವರು ಇಂತಹ ನಿರ್ಣಯವನ್ನು ತೆಗೆದುಕೊಂಡರು ಎಂಬುದಕ್ಕೆ ಅವರು ಇನ್ನೂ ಉತ್ತರ ನೀಡಿಲ್ಲ ಎಂದು ಟಾಂಗ್ ನೀಡಿದ್ದಾರೆ.

ಕಚ್ಚತೀವು ದ್ವೀಪ ಶ್ರೀಲಂಕಾ ಪಾಲಾದ ಬಳಿಕ ಭಾರತದ ಮೀನುಗಾರರ ದೋಣಿಗಳನ್ನು ವಶಕ್ಕೆ ತೆಗೆದುಕೊಂಡು ಅವರನ್ನು ಬಂಧಿಸಲಾಯಿತು. ಈಗ ಅಂತಹ ಸಂತ್ರಸ್ತ ಮೀನುಗಾರರ ಮೇಲೆ ನಕಲಿ ಸಿಂಪತಿ ತೋರಿಸುವ ಕೆಲಸವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ನಮ್ಮ ಎನ್‌ಡಿ‌ಎ ಸರ್ಕಾರವು ಮೀನುಗಾರರು ಅನುಭವಿಸುತ್ತಿರುವ ಈ ಸಮಸ್ಯೆಗಳಿಂದ ಶಾಶ್ವತವಾದ ಪರಿಹಾರ ಕಂಡುಹುಡುಕುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ ಎಂದಿದ್ದಾರೆ. ಹಾಗೆಯೇ, ಈ ಹಿಂದೆ ಎನ್.ಡಿ.ಎ. ಸರ್ಕಾರ ಬಂಧನಕ್ಕೆ ಒಳಗಾಗಿ, ಗಲ್ಲು ಶಿಕ್ಷೆಗೆ ಒಳಗಾಗಿದ್ದ ಮೀನುಗಾರರ ಬಿಡುಗಡೆಗಾಗಿ ಶ್ರಮಿಸಿದ ಕಾರ್ಯವನ್ನು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸಹ ವಾಗ್ದಾಳಿ ನಡೆಸಿರುವ ಅವರು, ರಾಹುಲ್ ಗಾಂಧಿ ಹಿಂದೂಗಳ ನಂಬಿಕೆಯ ಶಕ್ತಿಯನ್ನು ನಾಶ ಮಾಡುವ ಬಗ್ಗೆ ಮಾತನಾಡಿದ್ದಾರೆ. ಡಿ ಎಂ ಕೆ ಪಕ್ಷದ ಮನಸ್ಥಿತಿ ಸಹ ಇದೇ ಆಗಿದೆ. ಅವರು ಸನಾತನ ಧರ್ಮದ ಬಗ್ಗೆ ಅವಹೇಳನ ಮಾಡುತ್ತಾರೆ. ಕೆಟ್ಟದಾಗಿ ಮಾತನಾಡುತ್ತಾರೆ. ರಾಮ ಮಂದಿರವನ್ನು ಬಹಿಷ್ಕರಿಸುತ್ತಾರೆ. ಹೊಸ ಸಂಸತ್ತಿನಲ್ಲಿ ಸೈಂಗೋಲ್ ಪ್ರತಿಷ್ಠಾಪಿಸಿದ್ದನ್ನು ನಿರ್ಲಕ್ಷ್ಯ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.

ಹಾಗೆಯೇ ಇಂಡಿ ಒಕ್ಕೂಟದ ವಿರುದ್ಧ ಸಹ ಮಾತನಾಡಿರುವ ಅವರು, ಈ ಒಕ್ಕೂಟದ ನಾಯಕರು ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಜಯಲಲಿತಾ ಅವರು ಬದುಕಿದ್ದಾಗ ಅವರನ್ನು ಹೇಗೆ ನಡೆಸಿಕೊಳ್ಳಲಾಯಿತು ಎಂದು ಎಲ್ಲರಿಗೂ ತಿಳಿದಿದೆ. ಸನಾತನ ಶಕ್ತಿಯನ್ನು ಮತ್ತು ಮಹಿಳೆಯರನ್ನು ಸಂರಕ್ಷಣೆ ಮಾಡಲು ಎನ್‌ಡಿಎ ಅಭ್ಯರ್ಥಿಗಳಿಗೆ ಮತ ನೀಡುವಂತೆಯೂ ಅವರು ಮನವಿ ಮಾಡಿದ್ದಾರೆ.

Tags

Related Articles

Close