ಪ್ರಚಲಿತ

ಮಧ್ಯಪ್ರದೇಶ ಚುನಾವಣೆಯಲ್ಲಿ ಹಿಂದೂ ಮತಕ್ಕಾಗಿ ಕಾಂಗ್ರೆಸ್‌ನಿಂದ ರಾಮ ನಾಮ ಜಪ

ರಾಜಕೀಯ, ರಾಜಕಾರಣ ಎಂದರೆ ಹಾಗೆಯೇ. ಚುನಾವಣೆ ಬಂದಾಗ ಒಂದಿಲ್ಲೊಂದು ವೇಷ ಧರಿಸಿ, ಬೇಕು ಬೇಕಾದ ಸುಳ್ಳನ್ನೆಲ್ಲಾ ಪೋಣಿಸಿ ಮತದಾರರನ್ನು ಮರಳು ಮಾಡುವ ಕಾಯಕಕ್ಕೆ ರಾಜಕೀಯ ಧುರೀಣರು ಧುಮುಕಿ ಬಿಡುತ್ತಾರೆ.

ಕಾಂಗ್ರೆಸ್ ಪಕ್ಷಕ್ಕೆ ಉಳಿದ ಸಂದರ್ಭದಲ್ಲಿ ಹಿಂದುತ್ವ ಎಂದರೆ ಮೈಯೆಲ್ಲಾ ಉರಿ. ಆದರೆ ಚುನಾವಣೆ ಬಂತೆಂದರೆ ಸಾಕು, ಹಿಂದೂಗಳ ಓಲೈಕೆಗೆ ಬೇಕಾದ ಹಾಗೆ ಬಣ್ಣ ಹಚ್ಚಿ ನಾಟಕ ಮಾಡಲು ಕಾಂಗ್ರೆಸ್ ಪಕ್ಷ ಸಿದ್ಧ. ಇದು ಕೇವಲ ಕರ್ನಾಟಕ ಕಾಂಗ್ರೆಸ್‌‌ಗೆ ಮಾತ್ರ ಸಂಬಂಧಿಸಿದ್ದಲ್ಲ. ಬದಲಾಗಿ ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ಬಹುಕೃತ ವೇಷ ಇದಾಗಿದೆ.

ಆ ವರೆಗೆ ಹಿಂದೂಗಳ ವಿರುದ್ಧ ಕೆಲಸ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಬಂದಾಗ ಹಿಂದೂಗಳ ಮೇಲೆ ಪ್ರೀತಿ ಉಕ್ಕಿ ಹರಿಯ ತೊಡಗುತ್ತದೆ. ಆ ವರೆಗೆ ಹಿಂದೂ ವಿರೋಧಿ ಚಟುವಟಿಕೆಗಳ ಮೂಲಕ ಹಿಂದೂಗಳಿಗೆ ಅನ್ಯಾಯ ಎಸಗುವ ಕೈ ನಾಯಕರು ಮತದಾನದ ವಿಚಾರಕ್ಕೆ ಹಿಂದೂಗಳನ್ನು ತಮ್ಮತ್ತ ‌ಸೆಳೆಯಲು ಕಸರತ್ತು ಆರಂಭ ಮಾಡಿ ಬಿಡುತ್ತಾರೆ. ಇದು ಪ್ರತಿ ಚುನಾವಣೆಯ ಸಂದರ್ಭದಲ್ಲಿಯೂ ನಮ್ಮ ದೇಶದೆಲ್ಲೆಡೆ ಕಂಡು ಬರುವ ಕೈ ನಾಯಕರ ನಡವಳಿಕೆಯ ಚಿತ್ರಣ ಎನ್ನುವುದು ಸ್ಪಷ್ಟ.

ಇನ್ನೇನು ಕೆಲವೇ ದಿನಗಳಲ್ಲಿ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಹಿಂದೂಗಳ ಕಿವಿಗೆ ಹೂ ಇಡುವ ಕೆಲಸಕ್ಕೆ ಅಲ್ಲಿಯೂ ಕಾಂಗ್ರೆಸ್ ಶುರುವಿಟ್ಟುಕೊಂಡಿದೆ. ಶ್ರೀರಾಮನೇ ಸುಳ್ಳು ಎನ್ನುತ್ತಿದ್ದ ‌ಕಾಂಗ್ರೆಸ್‌ ಸದ್ಯ ಮಧ್ಯ ಪ್ರದೇಶದಲ್ಲಿ ಶ್ರೀರಾಮನ ಜಪ ಮಾಡಿ ಹಿಂದೂಗಳ ಓಟು ಪಡೆಯಲು ಮುಂದಾಗಿದೆ. ಹಾಗೆಯೇ ಕಾಂಗ್ರೆಸ್ ಸನಾತನ ಧರ್ಮವನ್ನು ಅನುಸರಿಸುತ್ತದೆ ಎನ್ನುವ ಹಾಸ್ಯಾಸ್ಪದ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ನಾನೊಬ್ಬ ಉತ್ತಮ ಹಿಂದೂ ಎನ್ನುವ ಮೂಲಕ ಮತದಾರರನ್ನು ಮರುಳು ಮಾಡಲು ಮುಂದಾಗಿದ್ದು, ಕಾಂಗ್ರೆಸ್ ನಾಯಕನ ಈ ನಡೆಯನ್ನು ಸಾರ್ವಜನಿಕರು ವಿರೋಧಿಸಿದ್ದಾರೆ.

ಕೆಲ ಸಮಯದ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿ ಪುತ್ರ ಉದಯ ನಿಧಿ ಸ್ಟ್ಯಾಲಿನ್ ಸನಾತನ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಂದರ್ಭದಲ್ಲಿ ಆತನನ್ನು ವಿರೋಧಿಸದ ಕಾಂಗ್ರೆಸ್ ಮೌನಕ್ಕೆ ಜಾರಿತ್ತು. ಅಲ್ಲದೆ ಕೆಲ ವರ್ಷಗಳ ಹಿಂದೆ ಮುಂಬೈ ದಾಳಿಯ ಹಿಂದಿರುವುದು ಸನಾತನ ಧರ್ಮ ಮತ್ತು ಆರ್‌ಎಸ್‌ಎಸ್ ಎಂದು ಸಮಾರಂಭವೊಂದರಲ್ಲಿ ಉದ್ದುದ್ದ ನಾಲಿಗೆ ಹರಿಯ ಬಿಟ್ಟಿದ್ದ ದಿಗ್ವಿಜಯ್ ‌ಸಿಂಗ್, ಈಗ ಚುನಾವಣೆ ಗೆಲುವಿಗಾಗಿ ತಾನೊಬ್ಬ ಸನಾತನಿ ಎಂದು ಹೇಳಿಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ತುತ್ತಾಗಿದೆ.

ತಾನು ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದೇನೆ. ಮಧ್ಯ ಪ್ರದೇಶದ ಮುಖ್ಯಮಂತ್ರಿ ಸಹ ಶ್ರೀರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ ಎಂದಿದ್ದಾರೆ. ಒಟ್ಟಿನಲ್ಲಿ ಹಿಂದೂಗಳನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ಚುನಾವಣೆಯ ಬಳಿಕ ಹಿಂದೂಗಳನ್ನು ಕಸದಂತೆ ಭಾವಿಸುತ್ತದೆ ಎನ್ನುವುದಕ್ಕೆ ಕರ್ನಾಟಕದ ಪರಿಸ್ಥಿತಿಯೇ ಉತ್ತಮ ನಿದರ್ಶನ.

ಕಾಂಗ್ರೆಸ್‌ನ ಇಂತಹ ಅಪಾಯಕಾರಿ ಮನಸ್ಥಿತಿಗೆ ಮಧ್ಯಪ್ರದೇಶದ ಜನರು ಮದ್ದರೆಯಲಿ ಎನ್ನುವ ಆಶಯ ಹಿಂದೂಗಳದ್ದು. ಕಾಂಗ್ರೆಸ್ ಇದ್ದಲ್ಲಿ ಹಿಂದೂ ಧರ್ಮಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಕಾಂಗ್ರೆಸ್ ಎಂಬ ನರಿ ಬುದ್ಧಿಯ ಬಗ್ಗೆ ಜನರು ಎಚ್ಚರ ವಹಿಸಲಿ ಎಂಬ ಆಶಯ ನಮ್ಮದು.

Tags

Related Articles

Close