ಪ್ರಚಲಿತ

ಮರಾಠಾ ಸಾಮ್ರಾಜ್ಯದ ಸುವರ್ಣ ದುರ್ಗ ಕೋಟೆಯ ಪ್ರತಿರೂಪವೊಂದು ದೂರದ ಲಂಡನ್ ನಲ್ಲಿ ತಲೆ ಎತ್ತಿ ನಿಂತು ಭವ್ಯ ಭಾರತದ ಇತಿಹಾಸವನ್ನು ಸೂರ್ಯ ಮುಳುಗದ ನಾಡಿನಲ್ಲಿ ಸಾರುತ್ತಿದೆ

ಎತ್ತಣ ಮಾಮರ, ಎತ್ತಣ ಕೋಗಿಲೆ!! ಮರಾಠಾ ಸಾಮ್ರಾಜ್ಯವೆಲ್ಲಿ? ಲಂಡನ್ ಎಲ್ಲಿ? ಛತ್ರಪತಿ ಶಿವಾಜಿ ಮಹಾರಾಜರ ಮರಾಠಾ ಸಾಮ್ರಾಜ್ಯದ ಕುರುಹಾದ ಸುವರ್ಣದುರ್ಗ ಕೋಟೆಯ ಗೌರವಾರ್ಥವಾಗಿ ದೂರದ ಲಂಡನ್ ನಲ್ಲಿ ಅದೆ ಹೆಸರಿನಿಂದ ಮಹಲು ಕಟ್ಟಿದ್ದಾರೆಂದರೆ ಆಶ್ಚರ್ಯವಾಗುತ್ತದೆ! ಮರಾಠಾ ಸಾಮ್ರಾಜ್ಯದ ಚಿನ್ನದ ಟೋಪಿಯಲ್ಲಿರುವ ಒಂದು ಗರಿಯೆಂದೆ ಭಾವಿಸಲಾಗುವ ಈ ಸುವರ್ಣ ದುರ್ಗ ಕೋಟೆ ಸಾಮ್ರಾಜ್ಯದ ಶಕ್ತಿಯ ಪ್ರತೀಕವಾಗಿತ್ತು.

ಸುತ್ತಲೂ ಅರಬ್ಬೀ ಸಮುದ್ರದಿಂದ ಅವರಿಸಲ್ಪಟ್ಟ ಸುವರ್ಣ ದುರ್ಗ ಕೋಟೆಯನ್ನು ನಿರ್ಮಾಣ ಮಾಡಿದ್ದು ಬಿಜಾಪುರದ ಆದಿಲ್ ಶಾ. ಆದರೆ ಮರಾಠಾ ಸಮ್ರಾಜ್ಯದ ಛತ್ರಪತಿಯ ಬಲಾಢ್ಯ ಸೈನ್ಯ ಈ ಕೋಟೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. ತದನಂತರ ಮರಾಠಾ ಸಾಮ್ರಾಜ್ಯದ ಅತ್ಯಂತ ಮಹತ್ವಪೂರ್ಣ ಆಯಕಟ್ಟಿನ ಪ್ರದೇಶವಾಗಿ ಸಾಮ್ರಾಜ್ಯವನ್ನು ರಕ್ಷಿಸುತ್ತದೆ ಈ ಕೋಟೆ.

ದ್ವೀಪದ ಮೇಲೆ ನಿರ್ಮಿಸಲಾದ ಈ ಕೋಟೆ ಹಡಗುಗಳ ನಿರ್ಮಾಣ ಕಾರ್ಯದಲ್ಲಿಯೂ ಉಪಯೋಗಿಸಲ್ಪಡುತ್ತಿತ್ತು. ಇದೆ ಸುವರ್ಣ ದುರ್ಗ ಕೋಟೆಯ ನೆನಪಿಗಾಗಿ ದಕ್ಷಿಣ ಲಂಡನಿನ ಶೂಟರ್ಸ್ ಬೆಟ್ಟಗಳ ಮೇಲೆ ‘ಸೆವೆಂಡ್ರೂಗ್ ಕ್ಯಾಸ್ಟಲ್’ ನಿರ್ಮಾಣ ಗೊಂಡಿದೆ. ಸೆವೆಂಡ್ರೂಗ್ ಎನ್ನುವುದು ಸುವರ್ಣ ದುರ್ಗ ಎನ್ನುವ ಪದದ ಅಪಭ್ರಂಶವಾಗಿದೆ. ಚೋಳರ ಬಳಿಕ ಬಲಿಷ್ಟ ನೌಕಾ ಪಡೆಯನ್ನು ಹೊಂದಿದ್ದ ಏಕೈಕ ಸಾಮ್ರಾಜ್ಯ ಮರಾಠರದ್ದು. ಸಾಮ್ರಾಜ್ಯದ ನೌಕಾ ಮುಖ್ಯಸ್ಥ ಖಾನೋಜಿ ಆಂಗ್ರೆ ಎಷ್ಟು ಬಲಿಷ್ಟನಾಗಿದ್ದನೆಂದರೆ ಸಂಪೂರ್ಣ ಕೊಂಕಣದಲ್ಲಿ ಆತನ ಅಣತಿ ಇಲ್ಲದೆ ಹಕ್ಕಿಯೂ ಕೂಡಾ ಗಡಿ ದಾಟುತ್ತಿರಲಿಲ್ಲ.

ಪಶ್ಚಿಮ ಸಾಗರದಲ್ಲಿ ಖಾನೋಜಿಯ ನಿಯುಕ್ತಿಯಿಂದಾಗಿ ಬ್ರಿಟಿಷರ ಕೊಂಕಣವನ್ನು ವಶಪಡಿಸುವ ಕನಸು ಕನಸಾಗಿಯೆ ಉಳಿದಿತ್ತು. ಸುವರ್ಣ ದುರ್ಗದ ಮೇಲೆ ಖಾನೋಜಿಯ ಪ್ರಾಬಲ್ಯ ಹೇಗಿತ್ತೆಂದರೆ ಬ್ರಿಟಿಷರು ಆತನನ್ನು ‘ಆಂಗ್ರಿಯಾ, ದ ಪೈರೇಟ್’, ಮತ್ತು ಕೋಟೆಯನ್ನು ‘ ಪೈರೇಟ್ಸ್ ಸ್ಟ್ರಾಂಗ್ ಹೋಲ್ಡ್’ ಎಂದು ಕರೆಯುತ್ತಿದ್ದರಂತೆ! ಖಾನೋಜಿ ಬದುಕಿರುವವರೆಗೂ ಈ ಕೋಟೆಯ ಹತ್ತಿರಕ್ಕೆ ಸುಳಿಯಲೂ ಬ್ರಿಟಿಷರಿಗೆ ಸಾಧ್ಯವಾಗಲಿಲ್ಲ. ಖಾನೋಜಿಯ ಮರಣಾನಂತರ ಈ ಕೋಟೆಯ ರಕ್ಷಣೆಯನ್ನು ಮಗ ತುಲಾಜಿ ಆಂಗ್ರೆ ತನ್ನ ಹೆಗಲ ಮೇಲೆ ಹೊತ್ತುಕೊಳ್ಳುತ್ತಾನೆ. ಆದರೆ ಆಂಗ್ರೆಯ ಮೇಲೆ ಯುದ್ದ ಸಾರುತ್ತಿದ್ದ ಪೇಶ್ವಾಗಳು ಬ್ರಿಟಿಷರ ಸಹಾಯದಿಂದ ಈ ಕೋಟೆಯನ್ನು ವಶಪಡಿಸಿಕೊಳ್ಳುತ್ತಾರೆ.

ಪೇಶ್ವಾಗಳ ಸಹಾಯದಿಂದ ಈ ಕೋಟೆಯನ್ನು ವಶಪಡಿಸಿಕೊಂಡವ ಬ್ರಿಟಿಷ್ ಕಮಾಂಡರ್ ಸರ್ ವಿಲಿಯಮ್ ಜೇಮ್ಸ್. ಪೇಶ್ವಾಗಳು ಈ ಕೋಟೆಯನ್ನು ಮರಳಿ ಬ್ರಿಟಿಷರಿಗೆ ನೀಡಿದ್ದರಿಂದ ಮುಂದೆ ಈ ಕೋಟೆಯ ಮೇಲೆ ಬ್ರಿಟಿಷರೆ ಪಾರುಪತ್ಯ ಮಾಡುತ್ತಾರೆ. ಬಡ ಪರಿವಾರದಲ್ಲಿ ಜನಿಸಿದ್ದ ವಿಲಿಯಮ್ ಸಮುದ್ರ ಸಾಹಸ ಕೈಗೊಳ್ಳುವಲ್ಲಿ ನಿಸ್ಸೀಮ ಹಾಗಾಗಿ ಆತ ಈಸ್ಟ್ ಇಂಡಿಯಾ ಕಂಪನಿಯ ನೌಕಾ ಮುಖ್ಯಸ್ಥನಾಗಿ ಆಯ್ಕೆಯಾಗುತ್ತಾನೆ ಮತ್ತು ಸುವರ್ಣ ದುರ್ಗ ಕೋಟೆಯನ್ನು ವಶಪಡಿಸಿಕೊಳ್ಳುತ್ತಾನೆ. 1759 ರಲ್ಲಿ ವಿಲಿಯಮ್ ಶ್ರೀಮಂತ ವ್ಯಕ್ತಿಯಾಗಿ ಇಂಗ್ಲೆಂಡಿಗೆ ಹಿಂದಿರುಗುತ್ತಾನೆ ಮತ್ತು ಅಲ್ಲೆ ನೆಲೆಸುತ್ತಾನೆ.

ಈಸ್ಟ್ ಇಂಡಿಯಾ ಕಂಪನಿಯ ಡೈರೆಕ್ಟರ್ ಮತ್ತು ಸಂಸತ್ತಿನ ಸದಸ್ಯನೂ ಆಗಿದ್ದ ವಿಲಿಯಮ್ಸ್ 1783ರಲ್ಲಿ ಮಗಳ ಮದುವೆಯ ಸಮಯದಲ್ಲಿ ಹೃದಯಾಘಾತದಿಂದಾಗಿ ಹಠಾತ್ತಾಗಿ ಮೃತ್ಯುವಶನಾಗುತ್ತಾನೆ. ಈತನ ಪತ್ನಿ ಈತನ ನೆನಪಿಗಾಗಿ ಶೂಟರ್ಸ್ ಬೆಟ್ಟದ ಮೇಲೆ ಅರಮನೆಯನ್ನು ಕಟ್ಟಿಸುತ್ತಾಳೆ ಮತ್ತು ಅದಕ್ಕೆ ಸೆವೆಂಡ್ರೂಗ್ ಕ್ಯಾಸಲ್( ಸುವರ್ಣ ದುರ್ಗ) ಎಂದು ಹೆಸರಿಡುತ್ತಾಳೆ. ಹೀಗೆ ಭಾರತದ ಮರಾಠಾ ಸಾಮ್ರಾಜ್ಯದ ಹೆಮ್ಮೆಯೊಂದು ಲಂಡನಿನ ಭೂಮಿಯಲ್ಲಿ ಶಾಶ್ವತವಾಗಿ ಸ್ಥಾನ ಪಡೆಯುತ್ತದೆ. 1922 ರವರೆಗೆ ವಿಲಿಯಮ್ ನ ವಂಶಸ್ಥರ ಸುಪರ್ದಿಯಲ್ಲಿದ್ದ ಈ ಕ್ಯಾಸಲ್ ಅನ್ನು ತದನಂತರ ಲಂಡನ್ ಕೌನ್ಸಿಲ್ ಖರೀದಿಸುತ್ತದೆ.

‘ಲಂಡನಿನ ಸುವರ್ಣ ದುರ್ಗ’ ಎನಿಸಿ ಕೊಂಡಿರುವ ಸೆವೆಂಡ್ರೂಸ್ ಕ್ಯಾಸಲ್ ಶತಮಾನಗಳಿಂದಲೂ ಬೆಟ್ಟದ ಮೇಲೆ ತಲೆಯೆತ್ತಿ ನಿಂತಿದೆ. ಲಂಡನ್ ಮತ್ತು ಪ್ಯಾರಿಸ್ ಮಧ್ಯ ಸ್ಥಿತವಾಗಿರುವ ಈ ಕ್ಯಾಸಲ್ ಗ್ರೀನ್ ವಿಚ್ ರೇಖೆಯ ವೀಕ್ಷಣಾಲಯವಾಗಿ, ಲಂಡನ್ ಅನ್ನು ಸರ್ವೆ ಮಾಡುವ ಕಟ್ಟಡವಾಗಿ, ವಿಮಾನಗಳನ್ನು ಹಾರಿಸುವ ಪೈಲಟ್ ಗಳಿಗೆ ನ್ಯಾವಿಗೇಷನ್ ಪಾಯಿಂಟ್ ಆಗಿ ಸಹಾಯ ಮಾಡುತ್ತಾ ಬಂದಿದೆ. ಶಿಥಿಲಾವಸ್ಥೆಯಲ್ಲಿದ್ದ ಈ ಕೋಟೆಯನ್ನು ಉಳಿಸಲು ಸ್ಥಳೀಯರು ಟ್ರಸ್ಟ್ ರಚಿಸಿ ಜೀರ್ಣೋದ್ದಾರ ಮಾಡಿದ್ದರಿಂದ ಈಗ ಈ ಕೋಟೆ ಪ್ರವಾಸಿಗರಿಗೆ ತೆರೆದಿದೆ. ಬ್ರಿಟಿಷರ ಭೂಮಿಯಲ್ಲಿ ಮರಾಠಾ ಸಾಮ್ರಾಜ್ಯದ ಕೋಟೆಯ ನೆನಪು ಶತಮಾನಗಳ ಬಳಿಕವೂ ಹಸಿರಾಗಿದೆ, ನಮ್ಮದೆ ನೆಲದಲ್ಲಿ ನೆನಪುಗಳು ಮುಕ್ಕಾಗಿವೆ…

-ಶಾರ್ವರಿ

Tags

Related Articles

Close