ಅಂಕಣ

ಆ ಯೋಧ ತನ್ನ ಕೈ ಮುರಿದಿರುವುದನ್ನೂ ಲೆಕ್ಕಿಸದೇ ಎದೆಯುಬ್ಬಿಸಿ ನಿಂತು ಬಂದೂಕನ್ನು ಕೈಗೆತ್ತಿಕೊಂಡು ಆ ದಿನ ಕಾಶ್ಮೀರ ಪಾಕಿಗಳ ಕೈವಶವಾಗುವುದನ್ನು ತಪ್ಪಿಸಿದ್ದ

ಅಂದು ಕಾಶ್ಮೀರ ನಮ್ಮ ಕೈವಶವಾಗಿತ್ತು!!

ಅಂದು ಕಾಶ್ಮೀರ ನಮ್ಮ ಕೈವಶವಾಗಿತ್ತು. ಭಾರತೀಯ ಸೈನಿಕರನೇಕರು ಬಲಿದಾನ ಮಾಡಿದ್ದರು. ಬಲಿದಾನಗೈದ ಸೈನಿಕರ ಸಾಲುಗಳಲ್ಲಿ ಒಂದು ದೇಹ ತೀವ್ರ ಗುಂಡೇಟುಗಳಿಂದಾಗಿ ವಿರೂಪಗೊಂಡಿತ್ತು. ಆ ಹುತಾತ್ಮನಾದ ಸೈನಿಕನ ಕಿಸೆಯಲ್ಲಿ ಭಗವದ್ಗೀತೆಯ ಹಾಳೆಗಳಿದ್ದವು. ಅವುಗಳನ್ನು ನೋಡಿದ ನಮ್ಮ ಉಳಿದ ಸೈನಿಕರಿರಗೆ ಅವರು ಯಾರೆಂದು ಅರಿವಾಗಿತ್ತು. ಅಳು ತಡೆಯಲಾಗಲಿಲ್ಲ, ಉಮ್ಮಳಿಸಿ ಅತ್ತು ಬಿಟ್ಟರು. ಆ ಯೋಧ ತನ್ನ ಕೈ ಮುರಿದಿರುವುದನ್ನೂ ಲೆಕ್ಕಿಸದೇ ಎದೆಯುಬ್ಬಿಸಿ ನಿಂತು ಬಂದೂಕನ್ನು ಕೈಗೆತ್ತಿಕೊಂಡು ಆ ದಿನ ಕಾಶ್ಮೀರ ಪಾಕಿಗಳ ಕೈವಶವಾಗುವುದನ್ನು ತಪ್ಪಿಸಿ ವೀರ ಮರಣವನ್ನು ಹೊಂದಿ , ಭಾರತದ ಪರಮೋಚ್ಛ ಪ್ರಶಸ್ತಿಯಾದ ಪರಮವೀರ ಚಕ್ರವನ್ನು ಪಡೆದ ಮೊದಲಿಗನಾದ. ಆ ವೀರಕಲಿಯ ಹೆಸರು ಸೋಮನಾಥ ಶರ್ಮಾ.

ಸ್ವಾತಂತ್ರ್ಯಾ ನಂತರ ಕಾಶ್ಮೀರದ ರಾಜ ಹರಿಸಿಂಗ್ ರು ತನ್ನ ರಾಜ್ಯವಾದ ಶ್ರೀನಗರವನ್ನು ಪಾಕಿಸ್ತಾನದ ಜೊತೆ ವಿಲೀನ ಮಾಡಬೇಕೋ ಅಥವಾ ಭಾರತದೊಂದಿಗೆ ವಿಲೀನ ಮಾಡಬೇಕೋ ಎನ್ನುವ ಗೊಂದಲದಲ್ಲಿದ್ದ. ಇದಕ್ಕೆ ತಕ್ಕಂತೆ ನೆಹರೂನ ಬೆಂಬಲ ರಾಜಾ ಹರಿಸಿಂಗರಿಗೆ ಸಿಗಲಿಲ್ಲ. ಹೀಗಾಗಿ ರಾಜಾ ಹರಿಸಿಂಗರು ಮತ್ತಷ್ಟು ಗೊಂದಲಕ್ಕೀಡಾದರು. ಪಾಪಿ ಪಾಕಿಸ್ತಾನವು ಕಾಶ್ಮೀರವನ್ನು ವಿಲೀನ ಮಾಡಿಕೊಳ್ಳುವ ಉದ್ದೇಶದಿಂದ ಕಾಶ್ಮೀರದ ಮೇಲೆ ದಾಳಿ ಮಾಡಿತು. ಇದರಿಂದ ಜಾಗೃತಗೊಂಡ ಹರಿಸಿಂಗರು ಭಾರತ ಸರ್ಕಾರದ ಸಹಾಯ ಕೋರಿ ಪತ್ರ ಬರೆದರು. ಭಾರತದ ಸೈನ್ಯ ಸಹಾಯ ಮಾಡಿದರೆ ಭಾರತದೊಂದಿಗೆ ವಿಲೀನವಾಗುತ್ತೇವೆ. ಭಾರತದ ಸೈನಿಕರನ್ನು ನಮ್ಮ ಸಹಾಯಕ್ಕೆ ಕಳುಹಿಸಿ ಎಂದು ಬರೆದರು. ಆದರೆ ನೆಹರೂ ಒಪ್ಪಬೇಕಲ್ಲ.

ನಮ್ಮದಲ್ಲದ ಪ್ರದೇಶಕ್ಕೆ ನಾವೇಕೆ ಸೇನೆಯನ್ನು ಕಳಿಸಬೇಕು ಎಂದು ಬೇಜವಾಬ್ದಾರಿಯಿಂದ ಹೇಳಿದ. ಆದರೆ ಸರ್ದಾರ್ ವಲ್ಲಾಭಾಯಿ ಪಟೇಲರು ಹಟ ಮಾಡಿ ನೆಹರೂನನ್ನು ಒಪ್ಪಿಸಿ ಭಾರತದ ಸೈನ್ಯವನ್ನು ಕಾಶ್ಮೀರಕ್ಕೆ ಕಳುಹಿಸಿ, ಕಾಶ್ಮೀರವನ್ನು ಉಳಿಸಿಕೊಂಡು ಭಾರತದೊಂದಿಗೆ ವಿಲೀನ ಮಾಡಿಕೊಂಡರು. ಅಂದು ಏನಾದರೂ ಶ್ರೀನಗರ ವಿಮಾನ ನಿಲ್ದಾಣವೇನಾದರೂ ಪಾಕಿಸ್ತಾನಿ ಸೈನಿಕರ ಕೈವಶವಾದರೆ ಅಲ್ಲಿಗೆ ಕಾಶ್ಮೀರ ಶಾಶ್ವತವಾಗಿ ಭಾರತದ ಕೈತಪ್ಪಿಹೋಗುತ್ತಿತ್ತು. ಆದರೆ ಅದಕ್ಕೆ ಅವಕಾಶ ಕೊಡದೆ ಕೈಮುರಿದ ಯೋಧನೊಬ್ಬ ತನ್ನ ಪ್ರಾಣವನ್ನು ಲೆಕ್ಕಿಸದೇ ಶ್ರೀನಗರವನ್ನು ಕಾಪಾಡಿ ತನ್ನ ಪ್ರಾಣವನ್ನು ಬಿಟ್ಟಿದ್ದ. ಆ ಯೋಧನ ಹೆಸರು ಸೋಮನಾಥ ಶರ್ಮಾ.

ಸೇನಾ ಕುಟುಂಬದ ಹಿನ್ನಲೆಯ ಸೋಮನಾಥ ಶರ್ಮಾ ಹುಟ್ಟಿದ್ದು ಜನವರಿ 31ರಂದು 1923. ಸೋಮನಾಥ ಶರ್ಮಾ ಅವರ ಅಪ್ಪ ಮೇಜರ್ ಜನರಲ್ ಅಮರ್‌ನಾಥ್ ಶರ್ಮಾ ಮಿಲಿಟರಿಯಲ್ಲಿ ವೈದ್ಯಕೀಯ ಸೇವೆಯ ಮುಖ್ಯಸ್ಥರಾಗಿ ದ್ದವರು. ಅವರ ಒಬ್ಬ ಸಹೋದರ ಲೆಫ್ಟಿನೆಂಟ್ ಜನರಲ್ ಸುರೀಂದರ್‌ನಾಥ್ ಶರ್ಮಾ ಸೇನೆಯಲ್ಲೇ ಮುಖ್ಯ ಎಂಜಿನಿಯರ್ ಆಗಿದ್ದರು. ಇನ್ನೊಬ್ಬ ವಿಶ್ವನಾಥ್ ಶರ್ಮಾ 1988ರಲ್ಲಿ ಸೇನಾಪಡೆಯ ಮುಖ್ಯಸ್ಥರಾಗಿ ನಿವೃತ್ತರಾ ದವರು. ಸಹೋದರಿ ಮೇಜರ್ ಕಮಲಾ ತಿವಾರಿ ಸೇನೆಯಲ್ಲೇ ವೈದ್ಯೆಯಾಗಿದ್ದರು. ಒಟ್ಟಿನಲ್ಲಿ ಇಡೀ ಕುಟುಂಬವೇ ಭಾರತದ ಸೇವೆಯಲ್ಲಿತ್ತು. ಅದು ಕೂಡಾ ಹೆಮ್ಮೆಯ ಸೇನೆಯಲ್ಲಿ. ಸೋಮನಾಥ ಶರ್ಮಾ ಅವರು 1934ಕ್ಕೆ ಇಂಡಿಯನ್ ಮಿಲಿಟರಿ ಅಕಾಡೆಮಿ ಸೇರಿಕೊಂಡರು. ಅಲ್ಲಿ 7 ವರ್ಷಗಳ ಕಾಲ ಓದಿ ಪಾಸ್ ಆಗಿ 1942, ಫೆಬ್ರವರಿ 22ರಂದು ಬ್ರಿಟಿಷ್ ಸೇನೆಯ ‘ಹೈದರಾಬಾದ್ ರೆಜಿಮೆಂಟ್’ ಗೆ ಸೇರ್ಪಡೆಯಾದರು.

ಅದೇ ಸಂದರ್ಭದಲ್ಲಿ ಎರಡನೇ ಜಾಗತಿಕ ಯುದ್ಧ ನಡೆದಿತ್ತು ಅದರಲ್ಲಿ ಭಾಗವಹಿಸಿದರು. ಅದಾದ ಎರಡು ವರ್ಷಗಳಲ್ಲಿ ಭಾರತ ಬ್ರಿಟಿಷರಿಂದ ಸ್ವತಂತ್ರವಾಯಿತು. ಸ್ವತಂತ್ರವೇನೋ ಸಿಕ್ಕಿತು ಆದರೆ ಭಾರತದ ಕೆಲವು ಭಾಗಗಳಲ್ಲಿ ಕೋಮುದಳ್ಳುರಿ ಶುರುವಾಗಿದ್ದವು. ಪಂಜಾಬ್ ಹೊತ್ತಿ ಉರಿಯಲು ಶುರುವಾಗಿತ್ತು. ಅದನ್ನು ಶಮನಗಳಿಸಲು ಶರ್ಮಾ ಅವರ ಬೆಟಾಲಿಯನ್ ಹೋಯ್ತು. ಆ ಕೋಮುದಳ್ಳುರಿಯನ್ನು ಶಮನ ಮಾಡಿದರು ಆದರೆ ಅಲ್ಲಿ ಅವರ ಮುರಿದುಕೊಂಡಿದ್ದರು. ನಂತರ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿದರು. ಆ ಚಿಕಿತ್ಸೆಯಲ್ಲಿ ಕೈಗೆ ಪಟ್ಟಿ ಕಟ್ಟಲಾಯಿತು.ಗುಣಮುಖರಾಗುವವರೆಗೂ ಯಾವ ಮಿಲಿಟರಿ ಕಾರ್ಯಾ ಚರಣೆಯಲ್ಲೂ ಪಾಲ್ಗೊಳ್ಳುವಂತಿರಲಿಲ್ಲ. ಅದೇ ಸಂದರ್ಭದಲ್ಲಿ ಪಾಪಿ ಪಾಕಿಗಳು ಕಾಶ್ಮೀರದ ಮೇಲೆ ದಾಳಿ ಮಾಡಿಬಿಟ್ಟರು.

ಕಾಶ್ಮೀರದ ಹಿಂದುಗಳ ಮೇಲೆ ದಾಳಿ ಮಾಡಿ ಅಲ್ಲಿಂದ ಓಡಿಹೋಗುವಂತೆ ಹೇಳಿದರು,ಕೈಗೆ ಸಿಕ್ಕವರನ್ನು ಕೊಂದರು. ಪಟೇಲರ ಹಟದಿಂದಾಗಿ ಭಾರತೀಯ ಸೇನೆ ಶ್ರೀನಗರಕ್ಕೆ ಬಂದೇಬಿಟ್ಟಿತು. ಆ ವೇಳೆಗಾಗಲೇ ಪಾಕಿಸ್ತಾನಿಯರು ಜಮ್ಮು-ಕಾಶ್ಮೀರಕ್ಕೆ ಸೇರಿದ್ದ ಮುಜಫರಾಬಾದ್ ಮೇಲೆ ಆಕ್ರಮಣ ಮಾಡಿ, ಆಸ್ತಿ-ಪಾಸ್ತಿಗೆ ಬೆಂಕಿ ಹಚ್ಚಿದರು. ಉರಿ, ಮಹುರಾಗಳನ್ನೂ ವಶಪಡಿಸಿಕೊಂಡರು. ಕೇವಲ 50 ಮೈಲು ದೂರದಲ್ಲಿದ್ದ ಶ್ರೀನಗರದ ವಿದ್ಯುತ್ ಸಂಪರ್ಕವನ್ನೇ ಕಡಿದು ಕತ್ತಲಲ್ಲಿ ಮುಳುಗಿಸಿದರು.

ಹೈದರಾಬಾದ್ ರೆಜಿಮೆಂಟಿನ ನೇತೃತ್ವ ವಹಿಸಿದ್ದ ಸೋಮನಾಥ ಶರ್ಮಾ ಅವರು ತಮ್ಮ ಮುರಿದ ಕೈನಲ್ಲೇ ಕಾಶ್ಮೀರಕ್ಕೆ ತನ್ನ ಸೈನ್ಯದೊಡನೆ ಬಂದಿದ್ದರು. ಹಾಗೆಯೇ ಅಂದಿನ ಸೇನಾಧಿಕಾರಿ ಮೇಜರ್ ಎಸ್.ಕೆ. ಸಿನ್ಹಾ. ಅವರು ಕಾಶ್ಮೀರಕ್ಕೆ ಹೋದರು.ಕೈ ಮುರಿದುಕೊಂಡಿದ್ದ ಸೋಮನಾಥ ಶರ್ಮಾ ಅವರಿಗೆ ಯಾವ ಜವಾಬ್ದಾರಿಯನ್ನೂ ನೀಡಿರಲಿಲ್ಲ. ಆದರೆ ಅವರ ಹೈದರಾಬಾದ್ ರೆಜಿಮೆಂಟನ್ನು ಯುದ್ಧಕ್ಕೆ ನಿಯೋಜಿಸಿದ್ದ ಕಾರಣ ಸೇನಾ ತುಕಡಿಯೊಂದಿಗೆ ಶ್ರೀನಗರಕ್ಕೆ ಬಂದಿದ್ದರು. ಶ್ರೀನಗರ ವಿಮಾನ ನಿಲ್ದಾಣವನ್ನು ರಕ್ಷಣೆಯನ್ನು ಹೈದರಾಬಾದ್ ರೆಜಿಮೆಂಟಿಗೆ ವಹಿಸಲಾಗಿತ್ತು. ಅದರ ನೇತೃತ್ವ ಸೋಮನಾಥ ಶರ್ಮಾ ಅವರದು.

1947 ನವೆಂಬರ್ 3ರಂದು ಪಾಕಿಸ್ತಾನಿ ಸೈನಿಕರು ಶ್ರೀನಗರದ ಸಮೀಪ ದಾಳಿ ಇಟ್ಟರು. ಒಂದು ವೇಳೆ ಶ್ರೀನಗರ ವಿಮಾನ ನಿಲ್ದಾಣವೇನಾದರೂ ಪಾಕಿಸ್ತಾನಿ ಸೈನಿಕರ ಕೈವಶವಾದರೆ ಅಲ್ಲಿಗೆ ಕಾಶ್ಮೀರ ಶಾಶ್ವತವಾಗಿ ಭಾರತದ ಕೈತಪ್ಪಿಹೋದಂತೆಯೇ ಎಂದು ಅಲೋಚಿಸಿದ ಸೋಮನಾಥ ಶರ್ಮಾ ದಾಳಿಗೆ ಸಜ್ಜಾದರು.ಅಂದು ಶ್ರೀನಗರದ ವಿಮಾನ ನಿಲ್ದಾಣ ಮುಖ್ಯವಾಗಿತ್ತೆಂದರೆ ನಮ್ಮ ಸೇನೆಗೆ ಯುದ್ಧಸಾಮಗ್ರಿಗಳನ್ನು ಪೂರೈಸುವುದಕ್ಕೇ ಅದೊಂದೆ ಮಾರ್ಗವಿತ್ತು. ಹೀಗಾಗಿ ಅದನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿತ್ತು. ಅ ವಿಮಾನ ನಿಲ್ದಾಣ ಕೈತಪ್ಪಿ ಹೋದರೆ ಕಾಶ್ಮೀರವೇ ನಮ್ಮ ಕೈ ತಪ್ಪಿ ಹೋಗುತ್ತಿತ್ತು. ಪಾಕಿಸ್ತಾನಿ ಸೈನಿಕರು ಶ್ರೀನಗರದ ಸಮೀಪ ಬರುವಲ್ಲೇ ತನ್ನ ಸೇನೆಯನ್ನು ಒಯ್ದ ಸೋಮನಾಥ ಶರ್ಮಾ ಅವರು ದಾಳಿಗೆ ತಯಾರಾದರು. ಕೈ ಮುರಿದಿರುವುದನ್ನೂ ಲೆಕ್ಕಿಸಲೇ ಇಲ್ಲ ತಾವು ಕೂಡಾ ಗನ್ ಹಿಡಿದುಕೊಂಡು ಎದೆಯುಬ್ಬಿಸಿ ನಿಂತುಬಿಟ್ಟರು. ದೊಡ್ಡ ಮಟ್ಟದ ಕಾದಾಟ ನಡೆಯಿತು. ಪಾಕಿಸ್ತಾನದ ಸೈನಿಕರು ಭಾರಿ ಪ್ರಮಾಣದಲ್ಲಿ,ಮೊದಲೇ ಯೋಜನೆ ಮಾಡಿ ದಾಳಿ ಮಾಡಿದ್ದರು. ಆದರೂ ಏನಂತೆ ನಮ್ಮ ಸೈನಿಕರ ಕ್ಷಾತ್ರತೇಜದ ಮುಂದೆ ಅವರ ಆಟ ನಡೆಯಲಿಲ್ಲ. ಸುಮಾರು 200ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರನ್ನೂ ಕೊಂದುಹಾಕಿದ ಭಾರತೀಯ ಯೋಧರು ಕೊಂದು ಹಾಕಿದರು.

ಪಾಕಿಸ್ತಾನವೇನೋ ಸೋತಿತು ಆದರೆ ಮೇಜರ್ ಸೋಮನಾಥ್ ಶರ್ಮಾ ತಮ್ಮ ಪ್ರಾಣವನ್ನು ಅರ್ಪಣೆ ಮಾಡಿದ್ದರು. ತೀವ್ರ ಗುಂಡೇಟುಗಳಿಂದಾಗಿ ವಿರೂಪಗೊಂಡಿದ್ದ ದೇಹವನ್ನು ಗುರುತು ಹಿಡಿಯುವುದಕ್ಕೆ ಒಂದು ಮುಖ್ಯ ಸಾಕ್ಷಿಯಿತ್ತು ಅದೇನೆಂದರೆ ಅವರ ಕಿಸೆಯಲ್ಲಿ ಸದಾ ಜೊತೆಯಲ್ಲಿ ಭಗವದ್ಗೀತೆಯ ಹಾಳೆಗಳು ಇರುತ್ತಿದ್ದವಂತೆ. ಹೀಗಾಗಿ ಅವರ ಎದೆಯ ಕಿಸೆಯಲ್ಲಿರುವ ಭಗವದ್ಗೀತೆಯ ಹಾಳೆಗಳನ್ನು ನೋಡಿ ಸೋಮನಾಥ ಶರ್ಮಾ ಎಂದು ಗುರುತು ಹಿಡಿದರು. ಸೋಮನಾಥ ಶರ್ಮಾ ಅವರ ಸಾಹಸಕ್ಕೆ,ಶೌರ್ಯಕ್ಕೆ ಪರಮವೀರ ಚಕ್ರವನ್ನು ನೀಡಲಾಯಿತು. ಪರಮವೀರ ಚಕ್ರ ಪಡೆದ ಮೊದಲ ಯೋಧ ಸೋಮನಾಥ ಶರ್ಮಾ.

ತಾಯಿ ಭಾರತಾಂಬೆಗಾಗಿ ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ನಮ್ಮ ಸೈನಿಕರು ಬಲಿದಾನಗೈದಿದ್ದಾರೆ. ಹೀಗಾಗಿಯೇ ಜಗತ್ತಿನಲ್ಲಿ ಅತೀ ಹೆಚ್ಚು ಯೋಧ ವಿಧವೆಯರನ್ನು ಹೊಂದಿರುವ ದೇಶ ನಮ್ಮದು. ಒಂದು ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ ಯೋಧ ವಿಧವೆಯರ ಸಂಖ್ಯೆ 25,000. ಪ್ರಥಮ(1914-1918) ಹಾಗೂ ದ್ವಿತೀಯ(1939-1942) ಜಾಗತಿಕ ಮಹಾಯುದ್ಧದಲ್ಲಿ ಮಡಿದ ಭಾರತೀಯ ಯೋಧರ ಸಂಖ್ಯೆಯೂ ಸಾಕಷ್ಟಿದೆ. ಯೋಧರು ಕೇವಲ ಯುದ್ಧ ರಂಗದಲ್ಲಿ ಮಾತ್ರವಲ್ಲ , ದೇಶದ ವಿವಿಧೆಡೆ ಭೂಕಂಪ, ಚಂಡಮಾರುತ, ಸುನಾಮಿಯಂತಹ ನೈಸರ್ಗಿಕ ವಿಕೋಪಗಳು ಬಂದೊದಗಿದಾಗ
ನೆರವಿಗಾಗುವರು ಯೋಧರೇ. ಅವರಂತೆ ಎಲ್ಲರೂ ಯೋಧರಾಗಲು ಸಾಧ್ಯವಾಗದಿರಬಹುದು. ಆದರೆ ಅವರಂತೆ ದೇಶಕ್ಕಾಗಿ ಬದುಕುವ ಪಾಠವನ್ನು ನಾವೆಲ್ಲ ಕಲಿತರೆ ಅದೇ ಈ ವೀರಯೋಧರಿಗೆ ನಾವು ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ.

ನಮಗೆ ದೇಶಕ್ಕಾಗಿ ಸಾಯುವ ಪರಿಸ್ಥಿತಿ ಒದಗಿಲ್ಲ. ಸೈನಿಕರು ನಮ್ಮ ನಾಳೆಗಾಗಿ ಗಡಿಗಳನ್ನು ಕಾಯುತ್ತಿದ್ದಾರೆ. ನಾವು ದೇಶಕ್ಕಾಗಿ ಸಾಯುವದಂತೂ ಆಗಲ್ಲ ಅದರೆ ದೇಶಕ್ಕಾಗಿ ಬದುಕುವುದು ಆಗುತ್ತೆ ತಾನೇ?

ಜೈ ಹಿಂದ್

-ಶಿವಾಂಶ

Tags

Related Articles

Close