ಪ್ರಚಲಿತ

ಪ್ರೀತಿಯ ಕಿಚ್ಚ..! ಬಿಗ್ ಬಾಸ್ ಆರಂಭವಾಗಿದೆ..! ಒಮ್ಮೆ ಓದಿ.. ಬೇಸರಿಸದಿರಿ.. ಜಸ್ಟ್ ಪ್ರೀತಿಯಿಂದ!!

ಆತ್ಮೀಯ ಕಿಚ್ಚ,

ನೆನ್ನೆಯಷ್ಟೇ ಬಿಗ್ ಬಾಸ್ ಎಂಬ ಅತಿ ಪ್ರಸಿದ್ಧವಾದ ರಿಯಾಲಿಟಿ ಕಾರ್ಯಕ್ರಮವೊಂದು ಪ್ರಾರಂಭವಾಗಿದೆ! ನಿಮ್ಮ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮವೊಂದನ್ನು ನೋಡಲು ಬಹುಷಃ ಅದೆಷ್ಟು ಲಕ್ಷ ಮಂದಿ ಕಾಯುತ್ತಾ ಕುಳಿತಿರುತ್ತಾರೋ! ಕರ್ನಾಟಕದ ಮೇರು ನಟನಾದ ನಿಮ್ಮ ಬಹಳಷ್ಟು ಸಿನಿಮಾಗಳಲ್ಲಿ ಸಮಾಜಕ್ಕೆ ಒಂದೊಳ್ಳೆಯ ಸಂದೇಶವನ್ನು ಸೂಕ್ಷ್ಮವಾಗಿಯೇ ಕೊಟ್ಟಿದ್ದೀರಿ! ಆದರೆ. . . ನಿಮಗೊಂದಿಷ್ಟು ಪ್ರಶ್ನೆಗಳನ್ನು ಕೇಳಲೇಬೇಕೆನಿಸಿದೆ!

ಮೊದಲನೆಯದಾಗಿ, ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದೆಯಾ?! ನಿಮ್ಮ ಮೊದಲನೇ ಸೀಸನ್ ನಲ್ಲಿ ಮೊದ ಮೊದಲು ಕುತೂಹಲಕಾರಿಯಾಗಿದ್ದ ಕಾರ್ಯಕ್ರಮ, ದಿನೇ ದಿನೇ ದಿಕ್ಕನ್ನೇ ಬದಲಿಸಿತು! ಕೊನೆಗೆ ಸಮಾಜಕ್ಕೆ ಯಾವ ಉತ್ತಮವಾದುದ್ದನ್ನೂ ನೀಡದೇ, ಅಪರೋಕ್ಷವಾಗಿ ಅವರೀರ್ವರ ಮಧ್ಯೆ ದ್ವೇಷವೊಂದನ್ನು ಬಿತ್ತಿ ಕಳುಹಿಸಿತು! ಸುಳ್ಳೇ?!

ನಿಮ್ಮ ಮೂರನೇ ಸೀಸನ್ನಿನಲ್ಲಿ ಮಾನಸಿಕವಾಗಿ ಅಸ್ವಸ್ಥನಾಗಿಲ್ಲದ (ತಾನೇ ಒಪ್ಪಿಕೊಂಡ) ಹುಚ್ಚ ವೆಂಕಟ್ ನನ್ನು ಕರೆಸಿದಿರಿ! ತನ್ನ ಬದುಕಿನಲ್ಲಿ ಆತನ ಸಾಧನೆ ಏನಿತ್ತು?! ಅಥವಾ, ಒಬ್ಬ ಅಸ್ವಸ್ಥನನ್ನು ಬಿಗ್ ಬಾಸ್ ಮನೆಯಲ್ಲಿ ಕೂರಿಸಿ ತನ್ಮೂಲಕ ಜನರನ್ನು ಅವನ ಹುಚ್ಚಾಟಗಳ ಮೂಲಕ ರಂಜಿಸುವಂತಹ ಉದ್ದೇಶವೇ?!

ಹುಚ್ಚ ವೆಂಕಟ್ ಅವರಿಗೆ ಹೊಡೆದ, ಇವರಿಗೆ ಬಡಿದ ಎಂದು ಮೂರು ನಾಲ್ಕು ದಿನಗಟ್ಟಲೇ ಸುದ್ದಿ ಮಾಡಿದವು ಮಾಧ್ಯಮಗಳು! ಅವರನ್ನು ಲೈವ್ ಆಗಿ ಕೂರಿಸಿ ಮಾತುಕಥೆ ನಡೆಸಲಾಯಿತು! ಆದರೆ, ಸಮಾಜಕ್ಕೇನು ಸಿಕ್ಕಿತು?!

ಆಶ್ಚರ್ಯವಾಗುವ ಇನ್ನೊಂದು ವಿಷಯವೇನೆಂದರೆ, ಮಾಧ್ಯಮಗಳೂ ಪರರ ಬದುಕಿನ ಕಚ್ಚಾಟಗಳಲ್ಲಿ ದೇಶದ ವಸ್ತು ಸ್ಥಿತಿಯ ಬಗ್ಗೆ ಗಮನ ಹರಿಸಲಿಕ್ಕೇ ಮರೆತು
ಬಿಡುವಂತಹ ಬೇಜವಾಬ್ದಾರಿಗೆ ಈ ತರಹದ ರಿಯಾಲಿಟಿ ಶೋ ಗಳು ಕಾರಣವಾಗುತ್ತಿದೆ ಎಂದು ನಿಮಗನ್ನಿಸುವುದಿಲ್ಲವೇ?

ಅದೂ ಬೇಡ! ನಾಲ್ಕನೇ ಸೀಸನ್ನಿನಲ್ಲಿ ಪ್ರಥಮ್ ನನ್ನು ಕರೆಸಿದಿರಿ! ಒಳ್ಳೆ ಹುಡುಗ ಅಂತ ಕರೆಸಿಕೊಳ್ಳುತ್ತಲೇ ಲಕ್ಷಗಟ್ಟಲೇ ಜನ ನೋಡುವಾಗ ಹೊರ ಬಂದ ತಕ್ಷಣ ಇನ್ನೊಬ್ಬ ಸ್ಪರ್ಧಿಗೆ ಕಚ್ಚಿದ್ದು ಯಾವ ಸಂದೇಶವನ್ನು ನೀಡುತ್ತದೆ?! ಹಾಗಾದರೆ 90 ದಿನಗಳು ಒಳಗಿದ್ದು ಕಲಿತದ್ದು ಇದೇ ಆದರ್ಶವನ್ನೇ?

ನಿಮ್ಮ ಮೊದಲನೇ ಸೀಸನ್ನಿನಲ್ಲಿ ಬ್ರಹ್ಮಾಂಡ ಗುರೂಜಿಯೆಂದೆನಿಸಿದವರನ್ನು ಕರೆ ತಂದಿರಿ! ಟಿ ಆರ್ ಪಿ ಗೋ ಏನೋ ಎರಡನೇ ಸೀಸನ್ನಿನಲ್ಲಿ ಮಂಡ್ಯದಲ್ಲೆಲ್ಲೋ ಇದ್ದ ಹುಡುಗನಿಗೆ ಖಾವಿ ತೊಡಿಸಿ ಋಷಿಕುಮಾರ ಸ್ವಾಮೀಜಿಯನ್ನಾಗಿ ಮಾಡಿ ಮಾಧ್ಯಮಗಳು ಮಾಡಿದ ಅವಮಾನವಲ್ಲವಾ?! ಇದನ್ನು ನೋಡಿ ನೀವು ಸುಮ್ಮನಿರಬಾರದಿತ್ತು!

ಅಧ್ಯಾತ್ಮದ ಪರಿಚಯ ಮಾಡಿಕೊಡಲೆಂಬ ಉದ‌್ದೇಶಕ್ಕೆ ಎನ್ನುವುದೇ ನಿಮ್ಮ ತರ್ಕವಾದರೆ, ಅಧ್ಯಾತ್ಮಿಕ ಎನ್ನುವುದು ಮಾರುಕಟ್ಟೆಯಲ್ಲಿ ಸಿಗುವ ವಸ್ತುವೇ?! ಅಥವಾ, ಅಧ್ಯಾತ್ಮಿಕವಾಗಿ ತನ್ನ ತಾ ಅರಿತವನು ಬಿಗ್ ಬಾಸ್ ಮನೆಯಲ್ಲಿ ಉಳಿಯುವಂತಹ ಮೂರ್ಖತನ ತೋರುವನೇ?! ಇದು, ಬಿಗ್ ಬಾಸ್ ಎಂಬ
ಹೆಸರಿನಲ್ಲಿ ಮತ್ತದೇ ಸೋಗಲಾಡಿತನದ ಸೆಕ್ಯುಲರ್ ಟಿಆರ್ ಪಿಗಳ ಇನ್ನೊಂದು ಮುಖ ಎನ್ನಿಸುವುದಿಲ್ಲವೇ?!

ಟಿ ಆರ್ ಪಿ ಹೆಚ್ಚಾಗಲಿಕ್ಕೆ, ಹಿಂದುತ್ವದ ಖಾವಿಯನ್ನು ಬಿಗ್ ಬಾಸಿಗೆ ಪ್ರವೇಶ ಮಾಡಿಸುವಿರಾದರೆ ಮುಲ್ಲಾಗಳು, ಪಾದ್ರಿಗಳೇನಾದರೂ ಒಳ ಹೊಕ್ಕರೆ ಇನ್ನೂ ನಿಮ್ಮ ಕಾರ್ಯಕ್ರಮದ ಟಿಆರ್ ಪಿ ಹೆಚ್ಚಾಗಬಹುದಲ್ಲವಾ?! ಯಾಕೆ ಸ್ವಾಮಿ?! ಬಿಗ್ ಬಾಸ್ ಸೆಕ್ಯುಲರ್ ಎಂದರೆ ಎಲ್ಲರಿಗೂ ಸಮಾನ ಅವಕಾಶಗಳಿರಬೇಕಲ್ಲವೇ?!

ಆ ಮಾಧ್ಯಮದ ಟಿ ಆರ್ ಪಿ ಹೆಚ್ಚಾಗಲಿಕ್ಕೋಸ್ಕರ, ವಿವಾದಗಳನ್ನು ಸೃಷ್ಟಿಸಲೇ ಬೇಕೆಂದಿದ್ದರೆ, ನಿಮ್ಹಾನ್ಸ್ ನಿಂದಲೂ ಸ್ಪರ್ಧಿಗಳನ್ನು ಕರೆತರುವ ಲಕ್ಷಣಗಳೂ ಇವೆಯಾ?!

ಇನ್ನೊಂದಿಷ್ಟು ಹೇಳುತ್ತೇನೆ ಕೇಳಿ! ಇದೇ ಇನ್ನೊಂದು ಯಾವುದೋ ಚಾನೆಲ್ಲಿನಲ್ಲಿ ಹಳ್ಳಿ ಹೈದ ಪ್ಯಾಟೆಗ್ ಬಂದ ಎಂಬ್ಯಾವುದೋ ಇದೇ ರೀತಿಯ ರಿಯಾಲಿಟಿ ಶೋಗೆ ಕಾಡಿನಲ್ಲಿರುವ ಹುಡುಗನನ್ನು ಪೇಟೆಗೆ ಕರೆಸಿ, ಅವನಿಗೆ ನಗರದಲ್ಲಿ ಹೀಗಾಗುತ್ತದೆ ಹಾಗಾಗುತ್ತದೆ ಎಂದು ಕೆಲವು ಋಣಾತ್ಮಕ ಚಿಂತನೆಗಳನ್ನು ತುಂಬಿ, ಗೆಲ್ಲಿಸಿ, ಅವನನ್ನು ಸಿನಿಮಾದಲ್ಲಿ ಹೀರೋ ಮಾಡಿ, ಕೊನೆಗೆ ಅವಕಾಶ ಸಿಗದೇ, ಅತ್ತ ಕಾಡಿಗೂ ಹೋಗಲಾರದೇ, ಇತ್ತ ಇಲ್ಲಿರಲೂ ಆಗದೇ, ಕೊನೆಗೆ ಆತ್ಮಹತ್ಯೆಗೆ ಶರಣಾದ! ತಪ್ಪು ಎಲ್ಲಾಗುತ್ತಿದೆ ಎಂಬ ಅರಿವಾಯಿತಾ?

ಆ ರಿಯಾಲಿಟಿ ಶೋ ನಿಂದ ಅವನಿಗೆ ಸಾವಿನ ಹೊರತಾಗಿ ಇನ್ನೇನು ಸಿಕ್ಕಿತು? ಜನರಿಗೇನು ಸಿಕ್ಕಿತು?! ಮಾಧ್ಯಮಗಳು ಮಾತ್ರ ಕೋಟಿಗಟ್ಟಲೇ ಹಣ
ಮಾಡಿಕೊಂಡಿತು! ಮಾಡಿದ ತಪ್ಪಿಗೂ ಪಶ್ಚಾತ್ತಾಪಿಸದೇ ಸುಮ್ಮನಾಯಿತು!

ಜೀ ಕನ್ನಡ ವಾಹಿನಿಯಲ್ಲಿ ಬ್ರಾಹ್ಮಣ ಪಂಗಡವನ್ನು ಅಣಕಿಸುವ ನಾಟಕವನ್ನು ಆ ಮಕ್ಕಳಿಂದ ಮಾಡಿಸಿ, ಅದೆಷ್ಟೋ ವಿವಾದಗಳನ್ನು ಸೃಷ್ಟಿಸಲಾಯಿತು!! ಕಾರ್ಯಕ್ರಮಕ್ಕೆ ಅದೆಷ್ಟೋ ಟಿ ಆರ್ ಪಿಗಳನ್ನು ಪಡೆದು ಕೊನೆಗೆ ನಮ್ಮಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಸುಮ್ಮನಾಯಿತು!! ಇವತ್ತಿನ ಕನ್ನಡ ವಾಹಿನಿಗಳ ಕಾಳಜಿ ಕೇವಲ ಸೆಕ್ಯುಲರ್ ಎಂಬುವುದಕ್ಕೆ ಮಾತ್ರ ಸೀಮಿತವಾಗಿದೆ ಎಂದು ಅರಿವಾಗದೇ ಇರದು!

ಇನ್ನೊಂದು ಹಾಸ್ಯಾಸ್ಪದ ಹಾಗೂ ಅನಿಷ್ಟವೆನ್ನಿಸುವಂತಹ ಈ ವಾಹಿನಿಯ ಹುಚ್ಚಾಟವನ್ನು ಹೇಳುತ್ತೇನೆ! ಸರಿಗಮಪ ಎಂಬ ರಿಯಾಲಿಟಿ ಶೋ ನಲ್ಲಿ ಬುರ್ಖಾ ಹಾಕಿದ ಸುಹಾನಾ ಶ್ರೀಕಾರನೇ ಶ್ರೀನಿವಾಸನೇ ಎಂದು ಹಾಡಿದ್ದೇ ಹಾಡಿದ್ದು! ಅದೆಷ್ಟು ವಿವಾದ?! ಅದೆಷ್ಟು ಜನ ಮುಗಿಬಿದ್ದು ನೋಡಿದರು?! ಅದೆಷ್ಟು ಆಕೆಯ ಬಗ್ಗೆ ಟ್ರೋಲ್ ಗಳಾದವು?!

Infact, ಆಕೆಯ ನಿಜ ಬದುಕಿನಲ್ಲಿ ಆಕೆ ಬಿಂದಾಸ್ ಬೆಡಗಿ! ಬುರ್ಖಾ ಹಾಕಿಯೇ ಗೊತ್ತಿಲ್ಲದ ಆ ಹುಡುಗಿಗೆ ಬುರ್ಖಾ ತೊಡಿಸಿದರಲ್ಲ ಈ ವಾಹಿನಿಗಳು?!  ಆಕೆಯ ಇನ್ಸ್ಟಾಗ್ರಾಮ್ ನ ಖಾತೆಗೆ ಹೋಗಿ ನೋಡಿದರೆ ಇವತ್ತಿನ ಆಧುನಿಕ ಉಡುಗೆಯಲ್ಲಿರುವ ಅದೆಷ್ಟೋ ಫೋಟೋಗಳು ನಿಮ್ಮನ್ನು ಅಚ್ಚರಿಪಡಿಸುತ್ತವೆ! ಈಗ ಪ್ರತಿಭೆಗಳ ಜನಪ್ರಿಯತೆಗಳನ್ನು ಬಳಸಿ ಕರ್ನಾಟಕ ಸುತ್ತುತ್ತಿರುವ ಆ ಮಾಧ್ಯಮವು, Open Show ಗಳಲ್ಲೆಲ್ಲೂ ಆಕೆಗೆ ಬುರ್ಖಾ ತೊಡಿಸುತ್ತಿಲ್ಲ!

ನೀವು ಹೇಳಬಹುದು! ನೋಡಲಿಕ್ಕಾಗದಿದ್ದರೆ ಚಾನೆಲ್ ಗಳ ಬದಲು ಮಾಡಿ ಎಂದು! ಆದರೆ ಏನು ಮಾಡುವುದು ಸ್ವಾಮಿ?! ಯಾವ ಚಾನೆಲ್ ಹಾಕಿದರೂ ಬಿಗ್ ಬಾಸ್ ದೇ ಸುದ್ದಿ! ದೇಶ ಹೊತ್ತಿ ಉರಿದರೂ ತಲೆ ಕೆಡಿಸಿಕೊಳ್ಳದಿದ್ದಷ್ಟು ಕನ್ನಡ ವಾಹಿನಿಗಳು ಬಿಗ್ ಬಾಸ್ ಮನೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿರತರಾಗಿದ್ದಾಗ ಅನಿವಾರ್ಯವಾಗಿ ಬೇರೆ ಭಾಷೆಯ ಚಾನೆಲ್ಲುಗಳನ್ನು ನೋಡಲೇ ಬೇಕಾಗುತ್ತದೆ! ಆಗ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ ಎನ್ನುವುದಕ್ಕೆ ಅರ್ಥವಾದರೂ ಎಲ್ಲಿಂದ ಬಂದೀತು?!

ಆತ್ಮೀಯ ಸುದೀಪ್ ರವರೇ! ನಾನು ಹೇಳ ಬಯಸುತ್ತಿರುವುದಿಷ್ಟೇ! ನಿಮ್ಮಂತಹ ಮೇರು ನಟರು ಇಂತಹದ್ದನ್ನೆಲ್ಲ ಬೆಂಬಲಿಸುವುದು ಎಷ್ಟು ಸರಿ?! ಬಿಗ್ ಬಾಸ್ ನಲ್ಲಿ ನಿಜವಾಗಲೂ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹವರನ್ನು ಇನ್ನಾದರೂ ಆಯ್ಕೆ ಮಾಡಿ ತನ್ಮೂಲಕ ಸಮಾಜಕ್ಕೇನಾದರೂ ಉತ್ತಮ ಸಂದೇಶವನ್ನು ನೀಡಿದರೆ, ಅದಕ್ಕಿಂತ ಸಾರ್ಥಕ್ಯತೆ ಬೇರೇನಿರಬಹುದು?!

ಪ್ರೀತಿಯ ಕಿಚ್ಚ, ನಿಮ್ಮ ಬಿಗ್ ಬಾಸ್ ಎಂಬ ಕಾರ್ಯಕ್ರಮ ಅನರ್ಥವಾಗುವ ಬದಲು ಅರ್ಥಪೂರ್ಣವಾಗಿದ್ದರೆ ಬಹುಷಃ ವ್ಯವಸ್ಥಿತವಾದ ಸಮಾಜವೂ ನಿರ್ಮಾಣವಾಗಬಹುದೆಂಬುದು ನನ್ನ ಆಶಯ! ಅಷ್ಟೇ!

– ಜ್ಯೋತಿ ಡಿಕುನ್ಹಾ

Tags

Related Articles

Close