ಅಂಕಣ

ಮನುಷ್ಯತ್ವ ಕಲಿಸಿದ್ದು ಈ ಮಾತೆ! ಓ ಗೋಮಾತೆ! ನಿಷ್ಕಲ್ಮಶವಾಗಿ ಪ್ರೀತಿಸುವುದನ್ನು ನಮಗೂ ಕಲಿಸು!!!

ಆಕೆ ಕೇವಲ ಸಸ್ಯಾಹಾರಿಗಳಿಗೆ ಆಶಾಕಿರಣವಲ್ಲ, ಸ್ವತಃ ಮಾಂಸಾಹಾರಿಗಳ ಬದುಕಿಗೂ. ನೆನಪಿರಲಿ ಕೇವಲ ಕೃಷಿ ಆಧಾರಿತ ಅರ್ಥವ್ಯವಸ್ಥೆಗೆ ಮಾತ್ರ ಆಕೆ ಸೀಮಿತವಾಗಿಲ್ಲ. ನಮ್ಮ ಭಾವನೆಗಳ ಭಾವವನ್ನು ಸಮರ್ಪಕವಾಗಿ ಅರ್ಥೈಸಬಲ್ಲ ಸಂಜೀವಿನಿ ಆಕೆ. ನಮಗೆ ಕಷ್ಟ ಎಂಬುದು ತಲೆದೋರಿದಾಗ ನಮ್ಮ ಬದುಕಿಗೆ ಬೆಳಕಾಗಬಲ್ಲಳು ಆಕೆ. ನಮ್ಮ ತಾಯಿ ನಮಗೆ ಹಾಲನ್ನು ಉಣಿಸುವುದನ್ನು ನಿಲ್ಲಿಸಿದಾಗ ಆಹಾರದ ಮುಂದಿನ ಹಂತ ನಮಗೆ ಪವಾಡದ ಮೂಲಕ ಲಭಿಸುವುದಲ್ಲ. ಆದೆ ಅದನ್ನು ದಯಪಾಲಿಸುವವಳು ಕರುಆಣಮೂರ್ತಿ ಗೋಮಾತೆ. ಒಂದಲ್ಲಾ ಒಂದು ಹಂತದಲ್ಲಿ ಆಕೆಯನ್ನು ಅವಲಂಬಿಸಿಯೇ ನಾವು ಬದುಕುತ್ತಿರುವುದು ಅಕ್ಷರಶಃ ಯಾರೂ ಅಲ್ಲಗಳೆಯಲಾಗದ ವಾಸ್ತವ ಸತ್ಯ. ನಮ್ಮ ಜೀವನವನ್ನು ಸಮರ್ಥವಾಗಿ ಜೀವಿಸಲು ಆಧಾರವಾಗಿ ನಿಂತಿರುವ ಗೋವು ನಮ್ಮ ಬಾಳಿನ ಬೆಳಕಾಗಿದ್ದಾಳೆ. ನಮ್ಮ ಬದುಕಿನ ಎರಡನೆಯ ತಾಯಿಯಾಗಿ ಗೋವು ಪರಿವರ್ತನೆಯಾಗಿದ್ದಾಳೆ. ಈ ನಿಟ್ಟಿನಲ್ಲಿ ಗೋವು ಪವಿತ್ರ. ನಾವು ದುಃಖದ ಸನ್ನಿವೇಶದಲ್ಲಿರುವಾಗ ತಾನೂ ದುಃಖಿಸುವ ಒಂದು ಪ್ರಾಣಿಯಿದ್ದರೆ ಅದು ಗೋವು. ಮಾನವನೊಂದಿಗೆ ಅನ್ಯೋನ್ಯವಾದ ಸಂಬಂಧವನ್ನು ಹೊಂದಿದ ಕಾರಣ ಆ ಮುಗ್ಧ ಪ್ರಾಣಿಯನ್ನು ಹತ್ಯೆ ಮಾಡಬಾರದೆಂಬುದಾಗಿ ಹೇಳುತ್ತಾರೆ ಜಗ್ಗಿ ವಾಸುದೇವ್.

ಪುರಾಣಗಳ ಉಲ್ಲೇಖಗಳು ನಮಗೆ ಪ್ರೇರಣೆಯಾಗಲಿ :

ಕೃಷ್ಣನಿಗೆ ಅತ್ಯಂತ ಪ್ರೀತಿಪಾತ್ರವಾಗಿರುವ ಗೋವು ಅಧ್ಯಾತ್ಮಿಕತೆಯ ಸಾರವನ್ನು, ಶ್ರೇಷ್ಠತೆಯನ್ನು ಸಾರುತ್ತಲೇ ಇದೆ. ಗೋವು, ಕೊಳಲು
ಮತ್ತು ನವಿಲುಗರಿಯಿಲ್ಲದೇ ಕೃಷ್ಣನ ಚಿತ್ರಗಳೂ ಅಪೂರ್ಣವೇ. ಗೋಹತ್ಯೆಯನ್ನು ಮಾಡುವ ಚಿಂತನೆ ಮಾಡುತ್ತಾರೆಂದರೆ ಶ್ರೀಕೃಷ್ಣನನ್ನು ಹತ್ಯೆ ಮಾಡುವ ಚಿಂತನೆ
ಮಾಡುತ್ತಾರೆಂದೇ ಅರ್ಥ. ರಾಮಚರಿತಮಾನದಲ್ಲಿ ವಿಷ್ಣುವನ್ನು ಸ್ತುತಿಸುವಾಗ, “ಗೋ ದ್ವಿಜ್ ಹಿತಕಾರೀ ಜೈ ಅಸುರಾರಿ ಸಿಂಧು ಸುತ ಪ್ರಿಯಕಾಂತ” ಎಂಬುದಾಗಿ ಉಲ್ಲೇಖಿಸಿದೆ. “ಭಗವಂತ ವಿಷ್ಣುವಿಗೆ ಜಯವಾಗಲಿ, ಸಂತರು ಹಾಗೂ ಗೋವನ್ನು ರಕ್ಷಿಸುವಾತ, ದುಷ್ಟ ರಾಕ್ಷಸರನ್ನು ಸಂಹರಿಸುವವ, ಸಾಗರ ಪುತ್ರಿಯಾದ ಲಕ್ಷ್ಮಿಗೆ ಬಹಳ ಪ್ರೀತಿಪಾತ್ರನಾದ ಭಗವಂತನಿಗೆ ಜಯವಾಗಲಿ”.

ವಸಿಷ್ಠರ ಆಶ್ರಮಕ್ಕೆ ರಾಜಾ ಕೌಶಿಕ ಆಗಮಿಸಿ ನಂದಿನಿ ಕಾಮಧೇನುವಿವಂತೆ ಆಹಾರವನ್ನು ಕರುಣಿಸುತ್ತಿದ್ದುನ್ನು ಕಂಡು ಬಲವಂತವಾಗಿ ಅದನ್ನು ಪಡೆಯಲು ಯತ್ನಿಸಿದ. ಆಗ ಇದೇ ನಂದಿನಿ ತನ್ನೊಡಳಿನಿಂದ ಅನೇಕ ಸೈನಿಕರನ್ನು ಸೃಷ್ಟಿಸಿ ರಾಜನ ಸೈನಿಕರನ್ನು ಯುದ್ಧದಲ್ಲಿ ಸೋಲಿಸಿತ್ತು. ಬಹುಶಃ ಈ ಘಟನೆಯಿಂದ ತಾನು ನಂಬಿದ ಯಜಮಾನನ್ನು ಕಷ್ಟಕಾಲದಲ್ಲಿ ಕೈಬಿಡುವುದಿಲ್ಲ ಅನ್ನುವುದು ಸ್ಪಷ್ಟವಾಗುತ್ತದೆ. ಈ ಘಟನೆ ಕೌಶಿಕ ರಾಜನನ್ನು ವಿಶ್ವಾಮಿತ್ರ ಮಹರ್ಷಿಯಾಗಿ ಬದಲಾವಣೆ ಮಾಡಿತ್ತು. ಈಗ ಇದು ಯಾವುದರ ಪರಿಣಾಮವೆಂದು ಭಾವಿಸೋಣ?? ಗೋವಿನ ಶಕ್ತಿಯೇ?? ಅಥವಾ ಮಹರ್ಷಿ
ವಸಿಷ್ಠರ ತಪಶ್ಶಕ್ತಿಯ ಪ್ರಭಾವವೋ?? ಎರಡೂ ವಿಚಾರಗಳೂ ಕಾರಣವೆಂಬುದಷ್ಟೇ ಸತ್ಯ.

ನಿಮಗೆಲ್ಲಾ ಅರಿವಿರಬಹುದು. ಶ್ರೀಮನ್ನಾರಾಯಣನ ದಶಾವತಾರಗಳಲ್ಲಿ ಒಂದೆಂದು ಕರೆಯಲಾಗುತ್ತಿರುವ ಕೃಷ್ಣನ ಬಾಲ್ಯದ ದಿನಗಳು ಗೋವಿನ ರಾಜ್ಯದಲ್ಲಿ ಕಳೆದದ್ದು ಎಂಬುದಾಗಿ ಹೇಳಬಹುದು. ಆತನನ್ನು ಗೋಪಾಲಕನೆಂದೇ ಕರೆಯುತ್ತದೆ ಪುರಾಣಗಳು. ಸ್ವತಃ ಶ್ರೀಕೃಷ್ಣನೇ ಹೇಳುತ್ತಾನೆ, “ನಾನು ಗೋವಿನ ಇಷ್ಟಾರ್ಥಗಳನ್ನು ಈಡೇರಿಸುವ ಸಲುವಾಗಿಯೇ ಇದ್ದೇನೆ.” ಇಂತಹ ಗೋವನ್ನು ಪ್ರೀತಿಸುವ ಮನೋಭಾವ ನಮ್ಮದಾಗಬೇಕಿದೆ ಅಷ್ಟೇ.. ಆ ಮೂಲಕ ಭಗವಂತನಿಗೆ ಹತ್ತಿರವಾಗುವ ಕಾರ್ಯವನ್ನು ನಾವು ಮಾಡಬೇಕಿದೆ.

ದೇಸೀ ಹಸುಗಳು ಅದೆಷ್ಟು ಶ್ರೇಷ್ಠ ಗೊತ್ತಾ??

ಈ ವಿಚಾರ ಅನಕರಿಗೆ ಅರಿವಿರಲಿಕ್ಕಿಲ್ಲ. 1928 ರಲ್ಲಿ ಭಾರತೀಯ ತಳಿಗಳು ನಿಶ್ಶಕ್ತವಾದುದು ಹಾಗೂ ನಿಶ್ಪ್ರಯೋಜನಕಾರಿಯೆಂದು ಸಾಧಿಸುವ ಸಲುವಾಗಿಯೇ ವಿದೇಶೀಯರು ವರದಿಯನ್ನು ತಯಾರಿಸಿದ್ದರು. ವಿದೇಶೀ ತಳಿಗಳು ಭಾರತಕ್ಕೆ ಸೇರ್ಪಡೆಗೊಳ್ಳುವುದಕ್ಕೆ ಅದುವೇ ಮುನ್ನುಡಿಯಾಯಿತೆಂಬುದೂ ಅಷ್ಟೇ ಸತ್ಯ. ಪ್ರಾಣಿಗಳ ಅನುವಂಶಿಕ ಸಂಪನ್ಮೂಲಗಳ ರಾಷ್ಟ್ರೀಯ ತಂಡದ ವಿಜ್ಞಾನಿಗಳು ನಡೆಸಿದ ಪ್ರಯೋಗಗಳಲ್ಲಿ ಕಂಡು ಬಂದಂತೆ ಭಾರತೀಯ ಹಸು ಹಾಗೂ ಎಮ್ಮೆಗಳಲ್ಲಿ ಎ2 ಅಲ್ಲೆಲ್ ಜೀನ್ ಎಂಬ ವಿಶೇಷ ಅನುವಂಶಿಕ ಧಾತುವಿದೆ. ವಿದೇಶೀ ತಳಿಗಳಿಗಿಂತ ಅನೇಕ ಪಟ್ಟು ಉತ್ತಮ ಹಾಗೂ ಆರೋಗ್ಯಪೂರ್ಣ ಹಾಲನ್ನು ದೇಶಿ ತಳಿ ಒದಗಿಸುತ್ತವೆ. 100% ಉತ್ತಮ ಗುಣಮಟ್ಟವನ್ನು ಹೊಂದಿದ ದೇಶೀ ತಳಿಗಳು ಇದ್ದರೆ, ವಿದೇಶಿ ತಳಿಗಳ ಮಟ್ಟ 60% ಎಂಬುದಾಗಿ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಒಂದು ವಿಚಾರ ಮಾತ್ರ ಸತ್ಯ. ವಿದೇಶಿ ತಳಿಗಳು ದೇಶಿ ತಳಿಗಳಿಗಿಂತಹ ಅಧಿಕ ಹಾಲನ್ನು ಕೊಡುತ್ತವೆ. ಆದರೆ ಎ1 ಅನುವಂಶಿಕ ಧಾತುವಿನ ಪರಿಣಾಮದಿಂದ ಕೆಳಮಟ್ಟದ ಹಾಲನ್ನು ಉತ್ಪಾದಿಸುವದಷ್ಟೇ ಅಲ್ಲದೇ ಆರೋಗ್ಯಕ್ಕೂ ಮಾರಕವಾಗಲಿದೆ ಅನ್ನುವ ಸಂಗತಿಯನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಆದರೆ ಕೃಷಿಗೆ ಬಳಸುವಂತಹ ಗೋವುಗಳು 94% ಗುಣಮಟ್ಟವನ್ನು ಕಾಯ್ದುಕೊಳ್ಳುತ್ತವೆ. ಒಟ್ಟಾರೆಯಾಗಿ ಗೋವಿನ ಮೂತ್ರ,
ಸೆಗಣಿ ಕೂಡ ಜನರ ಆಸ್ತಿಯನ್ನು ಅಧಿಕ ಮಾಡಬಹುದೆಂಬುದೂ ಸುಳ್ಳಲ್ಲ.

ಒಂದು ಉದಾಹರಣೆಯನ್ನು ಚಿಂತಿಸಿ ನೋಡಿ. ಅಮೇರಿಕಾ ರಾಷ್ಟ್ರ ಕೂಡ ಗೋವಿನ ಮೂತ್ರದಿಂದ ತಯಾರಿಸಲಾಗುತ್ತಿರುವ ಎಲ್ಲಾ ವಸ್ತುಗಳಿಗೂ ಪೇಟೆಂಟ್ ಬೇಕೆಂದು ಹವಣಿಸುತ್ತಿತ್ತು. ನೆನಪಿರಲಿ. ಒಂದು ಬಾರಿ ಒಂದು ವಿಚಾರಕ್ಕೆ ಪೇಟೆಂಟ್ ಪಡೆದದ್ದೇ ಆದರೆ ಮುಂದಿನ ದಿವಸಗಳಲ್ಲಿ ಬೇರೆ ಯಾರೂ ಆ ವಸ್ತುಗಳನ್ನು ತಯಾರಿಸಲು ಶಕ್ಯರಾಗುವುದಿಲ್ಲ ಅಥವಾ ಅನುಮತಿ ಸಿಗುವುದಿಲ್ಲ. ಇದು ಪ್ರಸ್ತುತ ಸನ್ನಿವೇಶದ ವಿಚಾರವಾದರೆ ವೇದಗಳು ಹೇಳುವ ಪ್ರಕಾರ, ಗೋ ಸಾಕಣೆ ಕೇವಲ ಮಾನವರ ಇಷ್ಟಾರ್ಥಗಳನ್ನು ಹಾಗೂ ಜೀವನದ ಗುರಿಯಾಗಿರುವ ಧರ್ಮ-ಅರ್ಥ-ಕಾಮ-ಮೋಕ್ಷವನ್ನು ಸಂಪಾದಿಸುವಲ್ಲಿ ಸಹಕಾರಿಯಾಗುವುದು ಮಾತ್ರವಲ್ಲದೇ ಭಗವಂತನ ಪ್ರೀತಿಯನ್ನು ಪಡೆಯುವುದಕ್ಕೂ ಸಾಧ್ಯವಿದೆ.

ಗೋವು ಸಾಕಣೆಯನ್ನು ಮಾಡುವುದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ನಮ್ಮ ರೋಗಗಳನ್ನೂ ಶಮನಮಾಡಬಹುದಾದ ಮದ್ದುಗಳನ್ನು ದಯಪಾಲಿಸಬಲ್ಲುದು ಗೋವು. ಗೋವಿನಿಂದ ಉತ್ಪಾದಿಸಲ್ಪಟ್ಟ ಹಾಲು, ಮೂತ್ರ ಹಾಗೂ ಸಗಣಿಯಿಂದ ಸಮರ್ಪಕವಾಗಿ ಬಳಸುವುದರಿಂದ ನಮ್ಮ ಆಂತರಿಕವಾಗಿ, ಬಹಿರಂಗವಾಗಿ ಹಾಗೂ ಅಧ್ಯಾತ್ಮಿಕ ಶಕ್ತಿಯನ್ನು ಸದೃಢವಾಗಿಸುವ ಚೈತನ್ಯವನ್ನು ಗೋವು ನಮಗೆ ದಯಪಾಲಿಸುತ್ತವೆ. ಅದಕ್ಕೋಸ್ಕರವೇ ಆಕೆಯನ್ನು ಮಾತೆ (ತಾಯಿ), ಕಾಮಧೇನು (ಇಷ್ಟಾರ್ಥಗಳನ್ನು ನೆರವೇರಿಸುವವಳು ), ಸುರಭಿ(ಸುಗಂಧವನ್ನು ಬೀರುವವಳು) , ಹಾಗೂ ಸುರಧೇನು (ಗೋವುಗಳ ಸ್ವರ್ಗ) ಎಂಬುದಾಗಿ ವಿವಿಧ ನಾಮಗಳಿಂದ ಕರೆಯಲಾಗುತ್ತದೆ. ಯಾರು ಗೋವನ್ನು ದಾನದ ಮೂಲಕ ಸಲ್ಲಿಸುತ್ತಾರೆ ಅವರು ಸರ್ವ ಪಾಪಗಳಿಂದ ಮುಕ್ತರಾಗುತ್ತಾರೆಂಬುದಾಗಿ ಪುರಾಣಗಳು ಉಲ್ಲೇಖಿಸುತ್ತವೆ. ನಮ್ಮಲ್ಲಿ ಸಾತ್ವಿಕ ಭಾವನೆಗಳನ್ನು ಅಳವಡಿಸುವುದರಲ್ಲಿಯೂ ಗೋವು ಬಹಳ ಪ್ರಾಮುಖ್ಯ ಪಾತ್ರವನ್ನು ವಹಿಸುತ್ತದೆ ಎನ್ನುವುದೂ ಸತ್ಯ. ಗೋವಿನಲ್ಲಿ ಮುಗ್ಧತೆಯ ಪ್ರತಿಬಿಂಬವಿದೆ, ಅಹಿಂಸೆಯನ್ನು ಪ್ರತಿಪಾದಿಸುತ್ತವೆ, ನಿಸ್ವಾರ್ಥಪ್ರೇಮವನ್ನು ಸಾಧಿಸುವ ಬಗೆಯಿದೆ, ಶಾಂತತೆಯ ಮೂರ್ತಸ್ವರೂಪವೇ ಗೋಮಾತೆ.. ಇದು ಮಾತ್ರ ನಿಸ್ಸಂಶಯವಾಗಿಯೂ ವಾಸ್ತವ.!!!

ಗೋವನ್ನು ಸಾಕಿದವರಿಗೆ ಮಾತ್ರ ಗೊತ್ತು ಗೋಮಾತೆ ಯಜಮಾನನಿಗೆ ತೋರುವ ಪ್ರೀತಿ ಎಂತಹದ್ದು ಎಂಬುದಾಗಿ. ಅದು ಅವರ್ಣನೀಯ. ನಮ್ಮ ಪ್ರೀತಿಯ ಮಾತುಗಳಿಗೆ ಅವು ಸ್ಪಂದಿಸುವ ರೀತಿ, ಅದು ಭಗವಂತನು ನಮಗೆ ತೋರಿದ ಭಾವವೆಂದೇ ಭಾಸವಾಗುತ್ತದೆ. ಗೋವಿನ ಮೇಲೆ ನಂಬಿಕೆಯಿಡುವುದೆಂದರೆ ಅದು ಭಗವಂತನ ಮೇಲೆ ಅಥವಾ ಗುರುವಿನ ಮೇಲೆ ನಂಬಿಕೆಯಿಡುವುದೆಂದೇ ಅರ್ಥ. ಆದರೆ ದುರ್ದೈವ ಯಾವ ಹಸುವನ್ನು ನಾವು ಸುರಭಿ, ಸುರಧೇನು ಎಂಬುದಾಗಿಯೆಲ್ಲಾ ಕರೆಯಲಾಗುತ್ತದೆಯೋ ಆ ಗೋವಿನ ಕತ್ತು ಹಾಗೂ ಕರುಳನ್ನು ಸೀಳಿ ಹತ್ಯೆ ಮಾಡಲಾಗುತ್ತಿದೆ. ಅದೂ ಕೇವಲ ಹೊಟ್ಟೆಯನ್ನು ತುಂಬಿಸುವುದಕ್ಕಾಗಿ. ಗೋವು ಬದುಕಿದ್ದಾಗ ಅವು ನಮಗೆ ಸಲ್ಲಿಸುವ ಆಸ್ತಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಬೇಕಾದ ಮಾನವ, ಕೃತಘ್ನನಾಗಿರುವುದು ಅದೆಷ್ಟು ಮೂಢತನ!!! ಅನೇಕ ದೇಶಿ ತಳಿಗಳು ಇವತ್ತು ನಾಶದ ಅಂಚಿನಲ್ಲಿವೆ. ಯಾಕೆ ಗೊತ್ತಾ?? ನಮ್ಮ ಮನೆಯಲ್ಲಿ ಹಾಗೂ ಮನದಲ್ಲಿ ಅವಕ್ಕೆ ಜಾಗ ನೀಡಲೇ ಇಲ್ಲ. ನಾವು ಮಹತ್ವ ಒಟ್ಟಿದ್ದು ಕೇವಲ ಭಾಷಣದಲ್ಲಿಯೇ!!!

ಓಹ್ ಗೋಮಾತೆ. ನನ್ನದೊಂದು ಕೋರಿಕೆ. ನಿನ್ನಷ್ಟು ನಿಷ್ಕಲ್ಮಶ ಭಾವನೆಗಳು ನಮಗೆ ಭಾಸವಾಗುತ್ತಿಲ್ಲ. ನಮಗೂ ಅಂತಹ ಚಿಂತನೆಗಳನ್ನು, ನಿಷ್ಕಲ್ಮಶ ಪ್ರೀತಿಯನ್ನು ತೋರಿಸುವುದನ್ನು ಕಲಿಸುವೆಯಾ??

– ವಸಿಷ್ಠ

Tags

Related Articles

Close