ಇತಿಹಾಸ

ಸಾವಿನಲ್ಲೂ ದೇಶದ ಸ್ವಾಭಿಮಾನವನ್ನು ಎತ್ತಿ ಹಿಡಿದ 19 ವರ್ಷದ ಕ್ರಾಂತಿಕಾರಿ, ಭಗತ್ ಸಿಂಗ್ ಗೆ ಸ್ಫೂರ್ತಿಯಾಗಿದ್ದ!

ಬ್ರಿಟಿಷರ ದಾಸ್ಯದಲ್ಲಿ ಭಾರತವನ್ನು ಬಂಧ ಮುಕ್ತಗೊಳಿಸಲು ಹೋರಾಡಿದ ಕಾಂತ್ರಿಕಾರಿ ಯುವಕ, ಭಾರತಮಾತೆಯ ಋಣ ತೀರಿಸುವ ಸಲುವಾಗಿ ಮತ್ತು ನಮ್ಮ ನಾಡಿಗೆ ಸ್ವಾತಂತ್ರ್ಯಗಳಿಸಿಕೊಡಲು ತಮ್ಮ ಜೀವವನ್ನೇ ತ್ಯಾಗಮಾಡಿದ ಅಪ್ರತಿಮ ದೇಶಭಕ್ತ ಈತ!! ಈ ಕ್ರಾಂತಿಕಾರಿ ದೇಶಭಕ್ತ ಭಾರತ ಮಾತೆಗೆ ತನ್ನ ಪ್ರಾಣವನ್ನು ಅರ್ಪಿಸಿ ಇಂದಿಗೆ 100 ವರ್ಷಗಳಾದರೂ ಕೂಡ ಈತನ ಬಗ್ಗೆ ಅದೆಷ್ಟೋ ಜನರಿಗೆ ತಿಳಿದೆಯೋ ಗೊತ್ತಿಲ್ಲ!! ಆದರೆ ಸಾವಿನ ಕೊನೇ ಕ್ಷಣದಲ್ಲೂ ಭೋಲೋ ಭಾರತ್ ಮಾತಾಕೀ, ವಂದೇ ಮಾತರಂ ಎಂದು, ದೇಶಪ್ರೇಮ ಮೆರೆದು ದೇಶದ ಮುಂದಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಆದರ್ಶಪ್ರಿಯನಾದ ಆ ಮಹಾನ್ ವೀರ ಯಾರು ಗೊತ್ತೆ??

ಅಂದು ನವೆಂಬರ್ 16, 1915 ಭಾರತ ಮಾತೆಯ ಹೆಮ್ಮೆಯ ಪುತ್ರರಲ್ಲಿ ಒಬ್ಬನಾದ ಮಹಾನ್ ಪುರುಷನೊಬ್ಬನ ಬಲಿದಾನವಾದ ದಿನ. ಇತಿಹಾಸದ ಪುಟಗಳಲ್ಲಿ ಈ ಕ್ರಾಂತಿಕಾರಿಯ ಬಗ್ಗೆ ಕೇಳಿರುವುದು ಬಲು ಅಪರೂಪ. ಸಾವಿನಲ್ಲೂ ದೇಶದ ಸ್ವಾಭಿಮಾನವನ್ನು ಎತ್ತಿ ಹಿಡಿದು, ನಾಡಿಗೆ ಸ್ವಾತಂತ್ರ್ಯಗಳಿಸಿಕೊಡಲು ತಮ್ಮ ಜೀವವನ್ನೇ ತ್ಯಾಗಮಾಡಿದ ಅಪ್ರತಿಮ ದೇಶಭಕ್ತನ ವಿಚಾರವನ್ನು ತಿಳಿದರೆ ಒಂದು ಕ್ಷಣ ಮೈ ನವಿರೇಳುತ್ತೆ!! ಆತ ಬೇರಾರು ಅಲ್ಲ… ಭಾರತಮಾತೆಯ ಋಣ ತೀರಿಸುವ ಸಲುವಾಗಿ ಮತ್ತು ನಮ್ಮ ನಾಡಿಗೆ ಸ್ವಾತಂತ್ರ್ಯಗಳಿಸಿಕೊಡಲು ತಮ್ಮ ಜೀವವನ್ನೇ ತ್ಯಾಗಮಾಡಿದ ಅಪ್ರತಿಮ ದೇಶಭಕ್ತನೇ ಕರ್ತಾರ್ ಸಿಂಗ್ ಸರಬಾ!!

ಈ ಕ್ರಾಂತಿಕಾರಿ ದೇಶಭಕ್ತ ಭಾರತ ಮಾತೆಗೆ ತನ್ನ ಪ್ರಾಣವನ್ನು ಅರ್ಪಿಸಿ ಇಂದಿಗೆ 100 ವರ್ಷಗಳಾದವು. ಆದರೆ ಈತನ ಬಗ್ಗೆ ತಿಳಿದಿರುವುದೇ ಬಹಳ ಕಡಿಮೆ!!
ಭಾರತವೆಂಬ ಸಮೃದ್ದ ದೇಶವನ್ನು ಆಂಗ್ಲರ ಕಪಿಮುಷ್ಠಿಯಿಂದ ಮುಕ್ತಗೊಳಿಸಬೇಕೆಂದು ಪಣತೊಟ್ಟಿದ್ದ ನವ ಉತ್ಸಾಹಿ ತರುಣ. ತನ್ನ ಪ್ರಾಣವನ್ನು ತಾಯಿನಾಡಿಗೆ
ಅರ್ಪಿಸಲು ಕೊರಳೊಡಿದ್ದ ಕರ್ತಾರ್ ಸಿಂಗ್ ಸರಬಾ ಹುಟ್ಟಿದ್ದು, ಮೇ 24, 1896ರ ಪಂಜಾಬಿನ ಅಮೃತಸರ ಜಿಲ್ಲೆಯ ಲುಧಿಯಾನದಲ್ಲಿ. ಈತ ಭಗತ್ ಸಿಂಗನಿಗೂ ಪ್ರೇರಣೆ ಕೊಟ್ಟಂತಾ ಹುಡುಗ, ತನ್ನ 19ನೇ ವರ್ಷಕ್ಕೆ ತನ್ನ ಪ್ರಾಣವನ್ನು ಭಾರತ ಮಾತೆಯ ಪಾದಗಳಿಗೆ ಅರ್ಪಿಸಿದ ವೀರಯೋಧ!!

ಭಗತ್ ಸಿಂಗನಿಗೂ ಪ್ರೇರಣೆ ಕೊಟ್ಟಂತಾ ಹುಡುಗನಿಗೆ ಸ್ವಾತಂತ್ರ್ಯದ ಕಿಚ್ಚು ಆರಂಭವಾಗಿದ್ದು ಹೇಗೆ ಗೊತ್ತೇ??

ಭಾರತಾಂಬೆಯ ಮಡಿಲಿನಲ್ಲಿ ಹುಟ್ಟಿದ ಕ್ರಾಂತಿಯ ಸಿಂಹ ಕರ್ತಾರ್ ಸಿಂಗ್ ಸರಾಭ. ಆತ ಬದುಕಿದ್ದು ಕೇವಲ 19 ವರ್ಷ ಮಾತ್ರ. ಆ ಜೀವಿತಾವಧಿಯಲ್ಲಿ
ಭಾರತಾಂಬೆಗಾಗಿ ಪ್ರಾಣಾರ್ಪಣೆ ಮಾಡಿ ಅನೇಕ ತರುಣ ತರುಣಿಯರಿಗೆ ಸ್ಪೂರ್ತಿಯಾಗಿ ಬದುಕಿದ ವೀರ ಪುರುಷ. ಬಾಲ್ಯದಲ್ಲೇ ತಂದೆ ತಾಯಿಯ ಪ್ರೀತಿಯನ್ನು
ಕಳೆದುಕೊಂಡ ಸರಾಭ, ತದನಂತರದಲ್ಲಿ ಆತನ ಜವಾಬ್ದಾರಿ ವಹಿಸಿಕೊಂಡಿದ್ದು ಈತನ ಅಜ್ಜ!!

ಅಜ್ಜನ ಪ್ರೀತಿಯಲ್ಲಿ ಬೆಳೆದ ಈ ತರುಣ, ತನ್ನ ಹೆಚ್ಚಿನ ವ್ಯಾಸಂಗಕ್ಕಾಗಿ ಅಮೆರಿಕಾಕ್ಕೆ ತೆರಳಿದ್ದ !! ಆದರೆ ಆತನಿಗೆ ಅಲ್ಲಿನ ಪರಿಸ್ಥಿತಿಯನ್ನು ಮನಗಂಡು, ಸ್ವಾತಂತ್ರ್ಯದ ಕಿಚ್ಚು ಆತನ ನರನಾಡಿಗಳಲ್ಲಿ ಹರಿಯಲಾರಂಭಿಸಿತು!! ಹೌದು…ಹೆಚ್ಚಿನ ವ್ಯಾಸಂಗಕ್ಕೆಂದು ಅಮೇರಿಕಾಕ್ಕೆ ಬಂದಿದ್ದ ಕರ್ತಾರ್ ಸಿಂಗ್ ಸರಬಾ, ಅಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟವನ್ನು ಗಮನಿಸಿ ತನ್ನ ದೇಶಕ್ಕೂ ಸ್ವಾತಂತ್ರ್ಯ ಗಳಿಸಿ ಕೊಡಬೇಕೆನ್ನುವ ಆಸೆ ಈತನಲ್ಲಿ ಮೊಳಕೆ ಹೊಡೆಯಲಾರಂಭಿಸಿತು. ಅಷ್ಟೇ ಅಲ್ಲದೇ, ಅಮೆರಿಕಾದಲ್ಲಿ ಗಧರ್ ಎಂಬ ಸಂಘಟನೆಯೊಂದಿಗೆ ಗುರುತಿಸಿಕೊಂಡ ಸರಬಾನಿಗೆ ಕ್ರಾಂತಿಕಾರಿ ಹೋರಾಟಕ್ಕೆ ಪ್ರೇರಣೆ ಸಿಕ್ಕಿತ್ತು!!

ಸ್ವಾತಂತ್ರ್ಯದ ಕಿಚ್ಚನ್ನು ಹೆಚ್ಚಿಸಿದ ಪತ್ರಿಕೆಯ ಮುಖಪುಟ…!!!

ಹೌದು… ಅಮೆರಿಕಾದಲ್ಲಿದ್ದ ಈ ಸಂಘಟನೆಯು ಮೊದಲು ವಾರಪತ್ರಿಕೆಯಾಗಿ ಆರು ಭಾಷೆಯಲ್ಲಿ ರೂಪುಗೊಂಡು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿತು. ಮೊದಲ
ಪತ್ರಿಕೆಯ ಪ್ರತಿಯು 1913ರ ನವೆಂಬರ್ 13ರಂದು ಪ್ರಕಟಣೆಗೊಂಡು, ಇದರ ಮೊದಲ ಸಂಚಿಕೆಯ ಮುಖಪುಟದಲ್ಲಿ ತನ್ನ ಪರಿಚಯವನ್ನು ಹೀಗೆ ಮಾಡಿಕೊಂಡಿತ್ತು :

ನಮ್ಮ ಹೆಸರು- ಬಂಡಾಯ
ನಮ್ಮ ಕೆಲಸ- ಬಂಡಾಯ
ಬಂಡಾಯ ನಡೆಯುವ ಸ್ಥಳ- ಭಾರತ
ಯಾವಾಗ- ಇನ್ನು ಕೆಲವೇ ವರ್ಷಗಳಲ್ಲಿ
ಏತಕ್ಕಾಗಿ ಬಂಡಾಯ- ಬ್ರಿಟಿಷರ ಆಡಳಿತದ ದಬ್ಬಾಳಿಕೆ ವಿರುದ್ದ
ಬೇಕಾಗಿದ್ದಾರೆ- ಭಾರತದಲ್ಲಿ ಬಂಡಾಯ ಎಬ್ಬಿಸಲು ಉತ್ಸಾಹಿ ತರುಣರು
ಸಂಬಳ- ಸಾವು
ಬಹುಮಾನ- ಹುತಾತ್ಮತೆ
ಕಾರ್ಯಕ್ಷೇತ್ರ- ಭಾರತ

ಎಂದು ತನ್ನ ಮೊದಲ ಪ್ರತಿಯಲ್ಲಿ ಬರೆಯಲಾಗಿತ್ತು!! ಈ ಪತ್ರಿಕೆಯ ಮೂಲ ಉದ್ದೇಶವೇ ವಿದೇಶದಲ್ಲಿದ್ದ ಭಾರತೀಯರನ್ನು ಸ್ವಾತಂತ್ರ್ಯ ಚಳುವಳಿಗೆ ಪ್ರೇರೆಪಣೆ
ನೀಡುವುದು!!

ಹಾಗಾಗಿ, ಪತ್ರಿಕೆಯ ಮೊದಲ ಪ್ರತಿಯನ್ನು ಓದಿ ಸ್ವಾತಂತ್ರ್ಯದ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿಕೊಂಡ ಸರಾಭ, ಸತ್ಯೇನ್ ಸೇನ್ ಮತ್ತು ವಿಷ್ಣು ಗಣೇಶ್ ಪಿಂಗ್ಲೆ ಜೊತೆ
ಕೊಲಂಬೋ ಮೂಲಕ ನವೆಂಬರ್ 1914ರಂದು ಕೊಲ್ಕತ್ತಾ ಪ್ರವೇಶಿಸಿದ. ಅಲ್ಲಿ ಜತಿನ್ ಮುಖರ್ಜಿ ಅವರು ನೀಡಿದ ಪತ್ರದ ಮೂಲಕ ರಾಸ್ ಬಿಹಾರಿ ಬೋಸ್ ಎನ್ನುವ ಕ್ರಾಂತಿಕಾರಿ ಮುಖಂಡರನ್ನು ಭೇಟಿ ಮಾಡಿದ ಸರಾಭ, ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ಬ್ರಿಟಿಷರ ವಿರುದ್ದ ಹೋರಾಡಲು ಸಜ್ಜಾಗಿದ್ದಾರೆ ಎನ್ನುವ ಹುಮ್ಮಸ್ಸಿನ ಮಾತುಗಳನ್ನು ಆಡಿದ!!

ಗಧರ್ ಸಂಘಟನೆಯ ಸ್ವಾತಂತ್ರ್ಯ ಹೋರಾಟದ ಕಿಚ್ಚು, ದಿನದಿಂದ ದಿನಕ್ಕೆ ಏರುತ್ತಿರುವುದನ್ನು ಅರಿತ ಇಂಗ್ಲಿಷರು, ಸಿಕ್ಕಸಿಕ್ಕಲ್ಲಿ ಈ ಸಂಘಟನೆಯವರನ್ನು
ಬಂಧಿಸಲಾರಂಭಿಸಿದರು. ಇದಕ್ಕೆಲ್ಲಾ ಅಂಜದ ಗಧರ್ ಪಡೆ, ಹೋರಾಟಕ್ಕೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸಲು ಶ್ರೀಮಂತರ ಮನೆಯನ್ನು ದರೋಡೆ
ಮಾಡಲಾರಂಭಿಸಿತು. ಈ ಸಮಯದಲ್ಲಿ ಗಧರ್ ಸಂಘಟನೆಯ ಪ್ರಮುಖರಿಬ್ಬರಾದ ಭಾಯ್ ರಾಮ್ ರಖಾ ಮತ್ತು ವಾರ್ಯಂ ಸಿಂಗ್ ಎನ್ನುವವರು ಬಾಂಬ್ ಸ್ಪೋಟದಲ್ಲಿ ಅಸುನೀಗಿದರು. ಆದರೆ, ಕೊಲ್ಕತ್ತಾದಿಂದ ಅಮೃತಸರಕ್ಕೆ ಜನವರಿ 1915ರಲ್ಲಿ ಬಂದ ಬೋಸ್, ಕೆಲವೊಂದು ನಗರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದು ಬಿಟ್ಟರು.

ಗಧರ್ ಪಡೆಯ ಮುಂದಿನ ಯೋಜನೆಯನ್ನು ಅರಿತ ಬ್ರಿಟಿಷರು…!!

ಆದರೆ, ಸಂಘಟನೆಯೊಳಗಿದ್ದ ಬ್ರಿಟಿಷರ ಮಾಹಿತಿದಾರನೊಬ್ಬನಿಂದ ಗಧರ್ ಪಡೆಯ ಮುಂದಿನ ಯೋಜನೆಯನ್ನು ಬ್ರಿಟಿಷರು ಅರಿತರು. ಹೀಗಾಗಿ ಸಂಘಟನೆಯ ಎಲ್ಲಾ ಯೋಜನೆಯನ್ನು ಬ್ರಿಟಿಷರು ಹತ್ತಿಕ್ಕಿದರು. ಯೋಜನೆ ವಿಫಲವಾಗುವುದರ ಜೊತೆಗೆ ಬಂಧನದಿಂದ ತಪ್ಪಿಸಿಕೊಳ್ಳಲು ಹೋರಾಟಗಾರರು ಭಾರತ ಬಿಟ್ಟು ತೊಲಗಲು ನಿರ್ಧರಿಸುತ್ತಾರೆ, ಅದರಲ್ಲಿ ಸರಬಾ ಕೂಡಾ ಒಬ್ಬನಾಗಿದ್ದ. ಅಷ್ಟೇ ಅಲ್ಲದೇ, ಮಾರ್ಚ್ 1915ರಲ್ಲಿ ದೇಶ ಬಿಟ್ಟು ಹೋಗುವ ವೇಳೆ ಇಂಗ್ಲಿಷರ ಕಣ್ಣಿಗೆ ಬೀಳುವ ಇವರನ್ನು, ಅಪಘಾನಿಸ್ಥಾನಕ್ಕೆ ಹೋಗಲು ಸೂಚಿಸಲಾಗುತ್ತದೆ. ಆದರೆ, ತನ್ನ ಅಸಂಖ್ಯಾತ ಸಹದ್ಯೋಗಿಗಳು ಬ್ರಿಟಿಷರ ಬಂಧನದಲ್ಲಿರುವಾಗ ದೇಶ ಬಿಟ್ಟು ಹೋಗುವುದು ನಾಚಿಕೆಗೇಡು ಎನ್ನುವ ನಿರ್ಧಾರಕ್ಕೆ ಬರುವ ಸರಬಾ, ತನ್ನ 63 ಸಹದ್ಯೋಗಿಗಳೊಂದಿಗೆ ಮತ್ತೆ ಬ್ರಿಟಿಷರ ಕಣ್ತಪ್ಪಿಸಿ ವಾಪಸ್ ಬರುತ್ತಾನೆ.

ಅಷ್ಟೇ ಅಲ್ಲದೇ, ಬಂಧನಕ್ಕೊಳಗಾಗಿರುವ ಮತ್ತು ಬ್ರಿಟಿಷರಿಂದ ಹಿಂಸೆಗೊಳಗಾಗುತ್ತಿರುವ ಸಂಘಟನೆಯ ಸದಸ್ಯರಿಗೆ ಭೋಲೋ ಭಾರತ್ ಮಾತಾಕೀ ಜೈ ಎಂದು
ಸ್ಪೂರ್ತಿ ನೀಡಿದ, ಸರಬಾ ಮತ್ತು ತಂಡದ ಸದಸ್ಯರನ್ನು ಬ್ರಿಟಿಷರು ಬಂಧಿಸಿ ಲಾಹೋರಿಗೆ ಕಳುಹಿಸುತ್ತಾರೆ. ತದನಂತರ ನವೆಂಬರ್ 13, 1915ಕ್ಕೆ ಲಾಹೋರ್
ನ್ಯಾಯಾಲಯ ಬಂಧನಕ್ಕೊಳಗಾಗಿರುವ ಗಧರ್ ಸಂಘಟನೆಯ ಎಲ್ಲಾ 63 ಸದಸ್ಯರಿಗೆ ಗಲ್ಲು ಶಿಕ್ಷೆ ಪ್ರಕಟಿಸುತ್ತದೆ. ಅದರಲ್ಲಿ ಹತ್ತೊಂಬತ್ತು ವರ್ಷದ ಕರ್ತಾರ್ ಸಿಂಗ್ ಸರಬಾ ಎನ್ನುವ ಯುವಶಕ್ತಿಯೂ ಒಂದು. 6 ಅಡಿ ಉದ್ದ 6 ಅಡಿ ಅಂಗುಲದ ಬಂಧೀಖಾನೆಯಲ್ಲಿ ಬಂಧಿಯಾಗಿದ್ದ ಸರಬಾ, ಸಾವಿನ ಕೊನೇ ಕ್ಷಣದಲ್ಲೂ ಭೋಲೋ ಭಾರತ್ ಮಾತಾಕೀ, ವಂದೇ ಮಾತರಂ ಎಂದು ದೇಶಪ್ರೇಮ ಮೆರೆದು ದೇಶದ ಮುಂದಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಆದರ್ಶಪ್ರಾಯನಾದ.

ಸ್ವಾತಂತ್ರ್ಯದ ಕಿಚ್ಚನ್ನು ಎಲ್ಲೆಡೆ ಪಸರಿಸಿದ ಗಧರ್ ಪಡೆಯು ಅಸಂಖ್ಯಾತ ವೀರರನ್ನು ಸೃಷ್ಟಿಸಿದ್ದು ಮಾತ್ರ ಸುಳ್ಳಲ್ಲ!!ಅಪ್ರತಿಮ ಹೋರಾಟದ ಇತಿಹಾಸ, ರಕ್ತದಿ ಬರೆದಿಹ ವೀರ ಚರಿತೆಯ ಹಿನ್ನೆಲೆ ಇರುವ ನಮ್ಮ ನಾಡು ಆಂಗ್ಲರ ದಬ್ಬಾಳಿಕೆಯಿಂದ ಭಾರತ ಮಾತೆಯನ್ನು ವಿಮುಕ್ತಿಗೊಳಿಸುವಲ್ಲಿ ಕಾರಣವಾಗಿದ್ದು ಮಾತ್ರ ಅಕ್ಷರಶಃ ನಿಜ!! ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯವು ಇಂತಹ ಅನೇಕ ವೀರ ಯೋಧರು ಹಚ್ಚಿ ಹೋದ ಸ್ವಾತಂತ್ರ್ಯ ಜ್ಯೋತಿಯಿಂದ ಎನ್ನುವುದನ್ನು ನಾವು ಯಾವತ್ತು ಮರೆಯಬಾರದು!!

-ಅಲೋಖಾ

Tags

Related Articles

Close